ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಭಿನ್ನ ಸಂಸ್ಕೃತಿ, ಏಕ ಆರೋಗ್ಯ ನೀತಿ!?

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೇಲ್ಜಾತಿಯ ಮನೆ: ‘ಯಾಕೆ ಎರಡು ದಿನದಿಂದ ಶಾಲೆಗೆ ಬರಲಿಲ್ಲ?’ ಗೆಳತಿಯ ಕಾಳಜಿಗೆ ಮನಸ್ಸು ಅರಳಿದರೂ ನೊಂದ ಮನಸ್ಸಿನ ಮಾತುಗಳು ಆಚೆ ಬಂದವು, ‘ನಿನಗೆ ಗೊತ್ತಲ್ಲ, ನಮ್ಮ ಮನೆ ಸಂಪ್ರದಾಯ. ನಾನು ಎಷ್ಟೇ ಹೋರಾಟ ಮಾಡಿದರೂ ಮುಟ್ಟಾದ ದಿನಗಳಲ್ಲಿ ನನ್ನನ್ನು ಶಾಲೆಗೆ ಕಳಿಸಲ್ಲ’.

ಬಿಹಾರ ಅಥವಾ ಜಾರ್ಖಂಡ್‌ನ ಬೆಟ್ಟಗಾಡಿನ ನಡುವಿನ ಹಳ್ಳಿ, ಆದಿವಾಸಿ ಹಾಡಿಯ ಶಾಲೆ: ‘ಓ! ಇವತ್ತು ನೆನಪಾಯಿತಾ ಶಾಲೆ? ಎಲ್ಲಿಗೆ ಹೋಗಿದ್ದೆ ಮೂರು ದಿನದಿಂದ?’ ಮೇಷ್ಟ್ರು ಬೈಯ್ಯುತ್ತಿದ್ದಾರೆ. ಆದರೆ ಆಕೆ ಹೇಗೆ ಹೇಳಿಯಾಳು? ಮುಟ್ಟಾದ ದಿನಗಳಲ್ಲಿ ಆಕೆಯನ್ನು ಮನೆಯಿಂದಾಚೆ ಕೊಟ್ಟಿಗೆಗೆ ದೂಡುತ್ತಾರೆ. ಮುಟ್ಟಿನ ರಕ್ತಸ್ರಾವವನ್ನು ನಿಭಾಯಿಸಲು ಆಕೆಗೆ ಹಳೆ ಬಟ್ಟೆಯೂ ಕೆಲವೊಮ್ಮೆ ಸಿಗದು. ಒಣ ಹುಲ್ಲನ್ನು ಕೆಲವೊಮ್ಮೆ, ಮಣ್ಣು ಮತ್ತು ಇದ್ದಿಲಿನ ಪುಡಿಯನ್ನು ಕೆಲವೊಮ್ಮೆ ಉಪಯೋಗಿಸುತ್ತಾಳೆ. ಶಾಲೆಗೆ ಕಳಿಸಲು ಮನೆಯಲ್ಲಿ ಈಗ ಒಪ್ಪಿಕೊಂಡಿದ್ದರೂ ಮುಟ್ಟಾದಾಗ ರಕ್ತಸ್ರಾವ
ವನ್ನು ನಿಭಾಯಿಸಲಾಗದೆ ಅಷ್ಟು ದಿನಗಳು ಶಾಲೆಗೆ ಗೈರುಹಾಜರಾಗುವುದು ಅನಿವಾರ್ಯವಾಗಿದೆ.

ಇತ್ತ ಕರ್ನಾಟಕದ ಕಾಡುಗೊಲ್ಲರ ಹಾಡಿ: ಮುಟ್ಟಾದ ಹೆಣ್ಣು ಹಾಡಿಯಿಂದ ಆಚೆ ಇದ್ದಾಳೆ. ಒಂದು ಮನೆಯಲ್ಲಿ ಈಗ ತಾನೆ ಹೆರಿಗೆಯಾಗಿದೆ. ಆದರೆ ಇಲ್ಲಿ ಹುಟ್ಟನ್ನು ಸಂಭ್ರಮಿಸುವಂತಿಲ್ಲ! ತಾಯಿ ಮತ್ತು ಮಗುವನ್ನು ತಕ್ಷಣವೇ ಮನೆಯಿಂದ ಹೊರಗೆ ಹರಕಲು ಗೂಡಿಗೆ ಹಾಕಿದ್ದಾರೆ. ಮಳೆ– ಗಾಳಿಯಿಂದ ಅದು ರಕ್ಷಣೆ ಕೊಡದು. ತಾಯಿ ಬೇಯಿಸಿದ ಆಹಾರ ತಿನ್ನುವಂತಿಲ್ಲ. ಮಗುವಿಗೆ ಮತ್ತು ಅವಳಿಗೆ ಸ್ನಾನವಿಲ್ಲ.

ಆಹಾರ ಮತ್ತು ನೀರು ಈಕೆಯಿಂದ ಮಲಿನವಾಗುವುದಲ್ಲವೇ? ನವಜಾತ ಶಿಶುವಿಗೆ, ತಾಯಿಗೆ ಶುಚಿತ್ವವಿಲ್ಲ. ವಿದ್ಯಾವಂತ ಕಾಡುಗೊಲ್ಲರೂ ಹೀಗೆಯೇ ಹೆಣ್ಣನ್ನು ನೋಡುತ್ತಾರೆ. ತಾಯಿ– ಮಗುವಿಗೆ ಅಗತ್ಯ ವೈದ್ಯಕೀಯ ನೆರವು ದೂರದ ಮಾತು. ಸರ್ಕಾರದ ಯಾವ ಆರೋಗ್ಯ ಯೋಜನೆಯೂ ಇವರ ಸಂಪ್ರದಾಯವನ್ನು ಮಟ್ಟ ಹಾಕುವ ಸ್ವರೂಪ ಹೊಂದಿಲ್ಲ.

ಗುಜರಾತಿನ ಒಂದು ಹಳ್ಳಿ. ಸುಡು ಬೇಸಿಗೆ. ನೀರು ಬರುವುದು ವಾರಕೊಮ್ಮೆ. ಇವತ್ತು ನಲ್ಲಿಯಲ್ಲಿ ನೀರು ಬಂದಿದೆ. ದಲಿತ ಮಹಿಳೆಯರು ಬಿಂದಿಗೆ ಹಿಡಿದು ಕಾಯುತ್ತಲೇ ಇದ್ದಾರೆ. ಅಲ್ಲಿ ಸೇರಿರುವ ಮೇಲ್ಜಾತಿಯ ಎಲ್ಲಾ ಮಹಿಳೆಯರು ನೀರು ಹಿಡಿದ ನಂತರವಷ್ಟೇ ಅಸ್ಪೃಶ್ಯರ ಸರದಿ. ಇಲ್ಲವಾದರೆ ನೀರು ಮಲಿನವಾಗುವುದು! ಇವರ ಸರದಿ ಬರುವಷ್ಟರಲ್ಲಿ ಕೆಲವೊಮ್ಮೆ ನೀರು ನಿಂತೇ ಹೋಗಿರುತ್ತದೆ. ಇತ್ತ ಬಾವಿಗೆ ಹೋಗೋಣವೆಂದರೆ ಅಲ್ಲೂ ಆಗಲೇ ಬಾವಿಯ ಒಂದು ಭಾಗವನ್ನು ಇವರಿಗಷ್ಟೇ ಗುರುತು ಮಾಡಲಾಗಿದೆ. ಕುಡಿಯಲು ನೀರಿಲ್ಲ, ಶುಚಿತ್ವಕ್ಕೆ ನೀರಿಲ್ಲ. ಇವರ ಕುಟುಂಬಗಳು ರೋಗರುಜಿನಗಳ ಆಗರವಾಗಿವೆ.

ರಾಜಸ್ಥಾನದ ಸರ್ಕಾರಿ ಆಸ್ಪತ್ರೆ. ಆರೋಗ್ಯ ತಪಾಸಣೆಗೆ ಆದಿವಾಸಿ ಗರ್ಭಿಣಿ ಬಂದಿದ್ದಾಳೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳು ಈ ಆದಿವಾಸಿ ಸಮುದಾಯವಿರುವ ಹಾಡಿಗಳಿಗೆ ಭೇಟಿ ಕೊಡದೆ ಹಲವು ವರ್ಷಗಳಿಂದ ನಿರ್ಲಕ್ಷಿಸಿದ್ದಾರೆ. ಆಕೆಗೆ ಸರ್ಕಾರದ ಈ ಉಚಿತ ಆರೋಗ್ಯ ಸೇವೆಯಿರುವುದು ಹೇಗೋ ತಿಳಿದದ್ದೇ ತಡವಾಗಿ. ಬಂದಿದ್ದಾಳೆ. ಆದರೆ ಆಕೆಯನ್ನು ತಪಾಸಣೆ ಮಾಡಲು ಆರೋಗ್ಯಾಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ’ಇದಾಗಲೇ ಮೂರನೇ ಬಾರಿ ಆಕೆ ಬಂದಿರುವುದು’ ಎಂದು ಆಕೆಯ ತಾಯಿ ಗೋಗರೆಯುತ್ತಾಳೆ.

ಆಕೆಯನ್ನು ಹೇಗೋ ಹಾಗೆ ತಪಾಸಣೆ ನಡೆಸಿ ಮುಂದೆ ಕಳಿಸುತ್ತಾರೆ. ಕಾಳಜಿಯಿಲ್ಲ, ಮುತುವರ್ಜಿಯಿಲ್ಲ. ಉಚಿತವಾಗಿ ಸಿಗುವ ಐರನ್ ಮತ್ತು ವಿಟಮಿನ್ ಮಾತ್ರೆಗಳನ್ನು ಆಕೆಯ ಕೈಗಳಿಗೆ ಮೇಲಿನಿಂದ ಬೀಳಿಸುತ್ತಾರೆ. ಆಕೆ ಬೆಟ್ಟಗಾಡಿನ ನಡುವೆ ಅಲ್ಪ ಜೀವನ ಸವೆಸುತ್ತಿರುವ ಆದಿವಾಸಿ ಹೆಣ್ಣಲ್ಲವೇ? ಬಿಡಿ, ಆದಿವಾಸಿ ಗರ್ಭಿಣಿ ಮತ್ತು ಆಕೆಗೆ ಹುಟ್ಟುವ ಮಗುವಿನ ಕಾಳಜಿ ಮಾಡಿ ಏನಾಗಬೇಕಿದೆ?

ಲಂಬಾಣಿ ತಾಂಡ, ಕಲಬುರ್ಗಿ: ಆಕೆಗೆ ಹೊಟ್ಟೆ ನೋವು ಕಾಣಿಸಿದೆ. ಖಾಸಗಿ ಆಸ್ಪತ್ರೆಯೊಂದು ಆಕೆಯ ಗರ್ಭಕೋಶವನ್ನೇ ಕಿತ್ತೊಗೆದಿದೆ. ಆಕೆಯ ಇತರ ದಲಿತ ಗೆಳತಿಯರದೂ ಇದೇ ಕತೆಯಾಗಿದೆ. ಯಾಕೆ ದಲಿತ ಮತ್ತು ಲಂಬಾಣಿ ಮಹಿಳೆಯರು ಮಾತ್ರ ಮೋಸ ಹೋದರು? ತಪ್ಪಿತಸ್ಥ ಆಸ್ಪತ್ರೆಗಳು ಇನ್ನೂ ಹೇಗೆ ಕಾರ್ಯ ನಿರ್ವಹಿಸುತ್ತಿವೆ?

ಶಾಲೆಯ  ಮಧ್ಯಾಹ್ನದ ಉಚಿತ ಊಟದ ಯೋಜನೆಯಡಿಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಸೇರೋಣವೆಂಬ ಆಲೋಚನೆ ದಲಿತ ಮಹಿಳೆಗೆ ಬಂದಿದೆ. ತಲೆಮಾರುಗಳಿಂದ ಮಲ ಸ್ವಚ್ಛಗೊಳಿಸಿ ಸಾಕಾಗಿದೆ. ಈಗಲಾದರೂ ತನ್ನ ಕೆಲಸವನ್ನು ಬದಲಿಸೋಣ ಎಂದೆನಿಸಿದೆ. ’ಅಡುಗೆ ಚೆನ್ನಾಗಿ ಮಾಡುವೆ ಮಕ್ಕಳಿಗೆ’ ಎಂದು ಆಕೆ ಖುಷಿಯಿಂದ ಹೇಳಿಕೊಳ್ಳುತ್ತಾಳೆ. ‘ಓಹೋ! ಇರಬಹುದು. ಆದರೆ ನಿನಗೆ ಅಡುಗೆ ಕೆಲಸ ಕೊಡಲಾಗದು’ ಎಂಬ ಉತ್ತರ. ‘ಅಯ್ಯೊ! ಹಾಗನ್ನಬೇಡಿ. ಅಡುಗೆ ಸಹಾಯಕಿಯಾಗಿಯಾದರೂ ಕೆಲಸ ಕೊಡಿ’. ‘ನಿನಗೆ ಹೇಗೆ ಕೊಡೋದು? ತಲೆತಲಾಂತರದಿಂದ ಮಲ, ಮುಸುರೆ, ಚರಂಡಿ ಕೆಲಸ ಮಾಡೊ ಜಾತಿ ನಿನ್ನದು. ನೀವು ಮಲಿನರು. ನಿನ್ನನ್ನು ಅಡುಗೆ ಕೆಲಸಕ್ಕೆ ಇರಲಿ ಆ ಜಾಗಕ್ಕೆ ಬಿಟ್ಕೊಂಡು
ಅಶುದ್ಧ ಮಾಡ್ಕೋಳೊಕಾಗತ್ತಾ? ಮುಂದೆ ನಡೆ...’

ಸರ್ಕಾರಿ ದಿನಸಿ ಅಂಗಡಿಯಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ, ಕೃಷಿ ಕೆಲಸ ಮಾಡೋ ಹೊಲದಲ್ಲಿ... ಎಲ್ಲಾ ಕಡೆ ಅಸ್ಪೃಶ್ಯತೆಯ ಸ್ಪರ್ಶದ ಜೊತೆಗೆ ಅತ್ಯಾಚಾರದ ಶೋಷಣೆ ಆಕೆಗೆ ತಾಗುತ್ತಲೇ ಇದೆ. ಆಕೆ ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಪಟ್ಟರೂ ಅದು ಆಕೆಯನ್ನು ತನ್ನೊಳಗೆ ಮತ್ತೆ ಮತ್ತೆ ಬಂಧಿಸುತ್ತಿದೆ. ಕೆಳ ಜಾತಿಯಲ್ಲಿ ಹುಟ್ಟಿರುವ ಜೊತೆಗೆ ಹೆಣ್ಣಾಗಿ ಹುಟ್ಟಿರುವ ದುರದೃಷ್ಟ ಈ ದೇಶದ ದಲಿತ ಹೆಣ್ಣು ಮಕ್ಕಳದು.

ವಿಭಿನ್ನ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಮ್ಮ ದೇಶದ ಮಹಿಳೆಯರು ಮೇಲ್ಜಾತಿ ಮತ್ತು ಕೆಳಜಾತಿಗಳೆರಡರಲ್ಲೂ ಆಯಾ ಜಾತಿಗಳ ಗಂಡಿಗಿಂತ ಆರೋಗ್ಯ ಸೂಚಕಗಳಲ್ಲಿ ಕೆಳಗಿದ್ದಾರೆ. ಆದರೆ ಮಹಿಳೆ, ಮೇಲ್ಜಾತಿಯಲ್ಲಿ ಹುಟ್ಟಿದ್ದರೆ ಆಕೆಯ ಎಲ್ಲಾ ಆರೋಗ್ಯ ಸೂಚ್ಯಂಕಗಳು ಆದಿವಾಸಿ, ದಲಿತ-ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗಿಂತ ದಿಢೀರನೆ ಸುಧಾರಣೆಯಾಗುತ್ತವೆ (ಭಾರತದ ಲಿಂಗ ಮತ್ತು ಜಾತಿ ಆಧಾರಿತ ಆರೋಗ್ಯ ಅಸಮಾನತೆ- ಅಧ್ಯಯನಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್). ಹೊರನೋಟಕ್ಕೆ ನಿಲುಕದ ಒಳಕಣ್ಣಿಗಷ್ಟೇ ಕಾಣುವ  ದಾಳಗಳು  ಇಲ್ಲಿ ಹಾಸುಹೊಕ್ಕಾಗಿವೆ. ಕೆಲವೊಮ್ಮೆ ಏಕೆ, ಹಲವು ಬಾರಿ ಇವು ಕಣ್ಣಿಗೆ ರಾಚುತ್ತಿದ್ದರೂ ಕಡಿವಾಣವೆಲ್ಲಿದೆ? ಅವು ವಿಜೃಂಭಿಸುವುದಕ್ಕೆ ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯಗಳೆಂಬ ಗೋಮುಖ ವ್ಯಾಘ್ರಗಳು ಇದ್ದೇ ಇವೆಯಲ್ಲ!

ಸರ್ಕಾರಗಳ ಏಕರೂಪ ಆರೋಗ್ಯ ನೀತಿಗಳಿಗೂ ನಮ್ಮ ದೇಶದ ಬಹುಸಂಸ್ಕೃತಿಯ ಈ ವಾಸ್ತವಕ್ಕೂ ಏನಾದರೂ ಸಾಮ್ಯವಿದೆಯೇ? ಆಯಾ ಜಾತಿ, ಸಂಸ್ಕೃತಿಗಳ ಅಪಾಯಗಳಿಂದ ಮಹಿಳೆಯ ಆರೋಗ್ಯವನ್ನು ಕಾಪಾಡುವ ಯೋಜನೆಗಳನ್ನು ರೂಪಿಸುವುದು ಆಯಾ ರಾಜ್ಯದ ಸ್ವಾಮ್ಯಕ್ಕೆ ಬರುವುದು ಸೂಕ್ತವೆನಿಸುತ್ತದೆ. ಆಯಾ ಸಂಸ್ಕೃತಿಗನುಗುಣವಾಗಿ ನೀತಿಗಳ ರೂಪುರೇಷೆಗಳನ್ನು ನಿರ್ಧರಿಸುವ ಮತ್ತು ಅವನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ ಆಯಾ ರಾಜ್ಯ ಸರ್ಕಾರಕ್ಕೆ ಸಿಗಬೇಕು.

ಸಹಾಯಕ ಪ್ರಾಧ್ಯಾಪಕಿ, ಒಕ್ಕಲಿಗರ ಸಂಘ ದಂತ ವೈದ್ಯಕೀಯ ಕಾಲೇಜು ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT