7

ಗುಣಧಾರಕರಾಗಿ

Published:
Updated:
ಗುಣಧಾರಕರಾಗಿ

ಸುತ್ತಾಡಲು ಹೂದೋಟಕ್ಕೆ ಹೋದಾಗ ಹೂಗಳ ಕಡೆ ನಮ್ಮ ಚಿತ್ತ ಹರಿಯುವುದು. ಆಗ ಅಲ್ಲಿರುವ ಮುಳ್ಳಾಗಲಿ, ಕಸಕಡ್ಡಿಯಾಗಲಿ ಗಮನಕ್ಕೆ ಬರುವುದಿಲ್ಲ. ಕೇವಲ ಕುಸುಮಗಳ ಸೌಂದರ್ಯ ಮಾತ್ರ ಕಣ್ತುಂಬುವುದು, ಪರಿಮಳ ಮೂಗನ್ನು ಆವರಿಸುವುದು. ಇದೇ ರೀತಿ ಜೀವನವೆಂಬ ಹೂದೋಟದಲ್ಲಿ ಸುತ್ತಾಡುತ್ತಾ ಅಲ್ಲಿರುವ ಗುಣ ಕುಸುಮಗಳನ್ನು ಕಾಣಬೇಕು, ಗುಣವಂತರ ವ್ಯಕ್ತಿತ್ವ ಪರಿಮಳವನ್ನು ಆಘ್ರಾಣಿಸಬೇಕು. ಆಗ ಮಾತ್ರ ನಮ್ಮ ಜೀವನದಲ್ಲಿ ಗುಣಾತ್ಮಕ ಪರಿವರ್ತನೆತರಲು ಸಾಧ್ಯವಾಗುವುದು.

ಒಳ್ಳೆಯದನ್ನು ಮನಸ್ಸು ಬಯಸಿದರೆ, ನಾವು ಒಳ್ಳೆಯದನ್ನು ನೋಡಲು ಪ್ರಾರಂಭಿಸಬೇಕು. ಮನಸ್ಸಿನಲ್ಲಿ ಎಂಥ ಭಾವವೋ, ಎಂಥ ಯೋಚನೆಯೋ, ಎಂಥ ದೃಷ್ಟಿಯೋ ಅಂಥದೇ ಸೃಷ್ಟಿ ಆಗುವುದು. ಮನಸ್ಸು ಕೆಟ್ಟದ್ದನ್ನು ಚಿಂತಿಸಿದರೆ ಜೀವನದಲ್ಲಿ ಕೆಟ್ಟದ್ದೇ ತುಂಬಿಕೊಳ್ಳುವುದು. ಆದ್ದರಿಂದ ನಾವು ಯಾವಾಗಲು ಬದುಕಿನಲ್ಲಿ (ದೋಷವನ್ನು ಬಿಟ್ಟು) ಕೇವಲ ಗುಣವನ್ನು ಕಾಣಬೇಕು, ಗುಣಗ್ರಾಹಿಗಳಾಗಬೇಕು.

ಯಾವನು ಎಲ್ಲ ಕೆಟ್ಟದ್ದನ್ನು ದೂರಮಾಡಿರುವನೋ ಅವನೇ ಭಗವಂತ. ಆತನನ್ನು ಬಿಟ್ಟು ಜಗತ್ತಿನ ಎಲ್ಲರಲ್ಲೂ ಒಂದಿಲ್ಲೊಂದು ಕೆಟ್ಟದ್ದು ಇದ್ದೇ ಇರುವುದು. ಅದೇ ಪ್ರಕಾರ ಅತಿಕೆಟ್ಟ ಮನುಷ್ಯನಲ್ಲೂ ಒಂದಿಲ್ಲೊಂದು ಒಳ್ಳೆಯದು ಇದ್ದೇ ಇರುವುದು. ನಾವು ಅದನ್ನು ಗುರುತಿಸಬೇಕು. ಅದನ್ನು ಇಚ್ಛಿಸುವ ಗುಣಗ್ರಾಹಿ ದೃಷ್ಟಿ ಇಟ್ಟುಕೊಳ್ಳಬೇಕು. ನಮ್ಮ ದೃಷ್ಟಿ ಗುಣದ ಮೇಲಲ್ಲದೆ, ದೋಷದ ಮೇಲೆ ಹೋಗುತ್ತಿದ್ದರೆ, ನಾವು ದೋಷಗ್ರಾಹಿ ಆಗಿದ್ದೇವೆ ಅಂತ ಅರ್ಥ.

ದೋಷಗ್ರಾಹಿ ದೃಷ್ಟಿ ನಮ್ಮ ಜೀವನದಲ್ಲಿರುವ ಬಹು ದೊಡ್ಡ ದೋಷ. ಇದು ನಕಾರಾತ್ಮಕ ದೃಷ್ಟಿ. ಇದರಿಂದ ನಮ್ಮ ವ್ಯವಹಾರ ನೀರಸ

ಹಾಗೂ ರೂಕ್ಷವಾಗುವುದು. ಇತರರ ತಪ್ಪನ್ನು ಕೆದಕಿ-ಬೆದಕಿ ಗಮನಿಸುತ್ತೇವೆ, ಆದರೆ ನಮ್ಮ ಒಳಗಿನ ತಪ್ಪನ್ನು ಇಣಿಕಿಯೂ ನೋಡುವುದಿಲ್ಲ. ನಮ್ಮ ಒಳಗಿನ ಕೊಳೆಯನ್ನು ಅಲ್ಲಲ್ಲೇ ತೊಳೆದು ಕೊಳ್ಳುತ್ತಿದ್ದರೆ ನಾವು ನಿಜವಾದ ಗುಣಗ್ರಾಹಿಗಳಾಗುತ್ತೇವೆ. ಗುಣಗ್ರಾಹಿ ಆದ ಮೇಲೆ ನಾವು ಗುಣ ಗಾಯಕರು ಆಗಬೇಕು. ಇನ್ನೊಬ್ಬರಲ್ಲಿರುವ ಉತ್ತಮ ಗುಣಗಳನ್ನು ಕಂಡು, ಅದನ್ನು ಪ್ರಶಂಸಿಸಬೇಕು. ಸಂಕೋಚ ಪಡಬಾರದು.

ಪ್ರಶಂಸಿಸುವುದರಿಂದ ಸಂಬಂಧ ಗಟ್ಟಿಯಾಗುತ್ತೆ. ನಮ್ಮ ಅಹಂಕಾರ ತಗ್ಗುತ್ತದೆ. ಇತರರ ಪ್ರಶಂಸೆಯನ್ನು ಆಲಿಸುವುದರಿಂದ ನಮ್ಮಲ್ಲಿರುವ ಈರ್ಷೆ ಸೊನ್ನೆಯಾಗುತ್ತೆ. ಗುಣಗಾಯಕರಾದ ಮೇಲೆ ಗುಣವಾಹಕರಾಗಬೇಕು. ಅಂದರೆ ಗುಣವನ್ನು ಒಂದುಕಡೆಯಿಂದ ಇನ್ನೊಂದು ಕಡೆಗೆ ಪ್ರಸಾರಮಾಡಬೇಕು. ನಾವು ಕಂಡ, ಕೇಳಿದ ಒಳ್ಳೆಯದನ್ನು ನಾಲ್ಕು ಜನರಿಗಾದರೂ ತಲುಪಿಸ ಬೇಕು. ಆಗ ಕೆಟ್ಟದ್ದು ಹಿಂದೆ ಸರಿಯುತ್ತೆ. ಈ ಮೂರು ಗುಣಗಳನ್ನು ಮೇಳೈಸಿಕೊಂಡವನು ಗುಣಧಾರಕನಾಗುತ್ತಾನೆ. ಆತನೇ ಮಹಾವೀರ.

ಆದ್ದರಿಂದಲೇ ಮಂತ್ರ ಸದೃಶ ಸಂತವಾಣಿ ಹೀಗಿದೆ- ಮೊದಲು ಗುಣಗ್ರಾಹಕನಾಗು ಅನಂತರ ಗುಣಗಾಯಕನಾಗು ತದನಂತರ ಗುಣವಾಹಕನಾಗು ಆಗ ನೀನಾಗುವೆ ಮಹಾವೀರನಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry