ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂತನಹಳ್ಳಿ: ಆನೆ ದಾಳಿಗೆ ಬೆಳೆ ನಾಶ

Last Updated 29 ಮಾರ್ಚ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವಲಯದಲ್ಲಿ ಕಾಡಾನೆಯೊಂದು ರೈತರ ಹೊಲಕ್ಕೆ ಮುಂಜಾನೆ ನುಗ್ಗಿ ಬೆಳೆಗಳಿಗೆ ಹಾನಿಯುಂಟು ಮಾಡಿದೆ.

ಬೂತನಹಳ್ಳಿಯ ಶಿವಣ್ಣ, ವೆಂಕಟೇಶ ಹಾಗೂ ರವೀಶ ಗೌಡ ಅವರಿಗೆ ಸೇರಿದ ಹೊಲಗಳಿಗೆ ನುಗ್ಗಿದ ಆನೆ, ರಾಗಿ ಮತ್ತು ಪಡವಲಕಾಯಿ ಬೆಳೆಗಳನ್ನು ನಾಶಪಡಿಸಿದೆ. ಕೆಲವು ತೆಂಗಿನ ಮರಗಳಿಗೂ ಹಾನಿ ಎಸಗಿದೆ.

‘ಆನೆ ನಮ್ಮ ಹೊಲಕ್ಕೆ ನುಗ್ಗಿ ಹಸಿವು ನೀಗಿಸಿಕೊಂಡರೆ ಚಿಂತೆ ಇಲ್ಲ. ಆದರೆ, ಅವುಗಳು ಶೇ 10ರಷ್ಟು ಬೆಳೆಯನ್ನು ತಿಂದು, ಶೇ 90ರಷ್ಟನ್ನು ಹಾನಿ ಮಾಡುತ್ತವೆ. ಒಂದು ವಾರದಿಂದೀಚೆಗೆ ಒಂಟಿ ಸಲಗವೊಂದು ಗ್ರಾಮದಲ್ಲಿ ಓಡಾಡುತ್ತಿದೆ’ ಎಂದು ರವೀಶ ಗೌಡ ತಿಳಿಸಿದರು.

‘ಕಾಡು ಪ್ರದೇಶದ ಸುತ್ತಲೂ ಅರಣ್ಯ ಇಲಾಖೆ ಬೇಲಿ ಹಾಕಿದೆ. ಆದರೆ, ಕೆಲವು ಕಡೆ ಬೇಲಿ ಇಲ್ಲ. ಅಲ್ಲಿಂದಲೇ ಕಾಡಾನೆಗಳು ಹಳ್ಳಿಗಳಿಗೆ ನುಗ್ಗುತ್ತವೆ. ಈ ಹಿಂದೆಯೂ ಅನೇಕ ಬಾರಿ ಆನೆಗಳು ಊರಿನ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡಿದ್ದವು’ ಎಂದರು.

‘ಕಾಡಿನ ಅಂಚಿನಲ್ಲಿ ಬೇಲಿ ಇಲ್ಲದಿರುವ ಕಡೆ, ತಡೆ ಬೇಲಿ ನಿರ್ಮಿಸುವ ಬಗ್ಗೆ ಇಗಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ವಿ.ಗಣೇಶ್‌ ತಿಳಿಸಿದರು.

‘ಸಫಾರಿ ಆನೆಗಳು ರಾತ್ರಿ ವೇಳೆ ಕಾಡಾನೆಗಳ ಸಂಪರ್ಕಕ್ಕೆ ಬರುತ್ತವೆ. ಅವುಗಳನ್ನು ಬೆಳಿಗ್ಗೆ ಮತ್ತೆ ಸಫಾರಿಗೆ ಕರೆ ತರಲಾಗುತ್ತದೆ. ಸಾಕಾನೆಗಳು ಅಡ್ಡಾಡಲು ಅನುಕೂಲ ಕಲ್ಪಿಸುವ ಸಲುವಾಗಿ ಜೈವಿಕ ಉದ್ಯಾನದ ಕೆಲವು ಕಡೆ ಬೇಲಿ ಹಾಕಿಲ್ಲ’ ಎಂದರು.

ಬನ್ನೇರುಘಟ್ಟ ಜೈವಿಕ ಉದ್ಯಾನದ (ಬಿಬಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಗೋಕುಲ್‌, ‘ದೋಣಿವಿಹಾರಕ್ಕೆ ಅವಕಾಶ ಕಲ್ಪಿಸಿರುವ  ಪ್ರದೇಶ ಹಾಗೂ ಸಸ್ಯಾಹಾರಿ ಪ್ರಾಣಿಗಳ ಸಫಾರಿ ಇರುವ ಜಾಗವು ಕಾಡಾನೆಗಳು ತಿರುಗಾಡುವ ದಾರಿ. ಅಲ್ಲಿ ಬೇಲಿ ಅಳವಡಿಸುವುದು ಸೂಕ್ತವಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾಡಾನೆಗಳ ಸಹಜ ಓಡಾಟಕ್ಕೆ ಅಡ್ಡಿ ಆಗದಿರಲಿ ಎಂಬ ಉದ್ದೇಶದಿಂದಲೇ ಉದ್ಯಾನದ ಕೆಲವು ಕಡೆ ಬೇಲಿ ಹಾಕದೇ ಬಿಡಲಾಗಿದೆ. ಇಲ್ಲೂ ಬೇಲಿ ನಿರ್ಮಿಸಿದರೆ, ಕಾಡಾನೆಗಳು ಇನ್ನೊಂದು ದಾರಿಯನ್ನು ಕಂಡುಕೊಳ್ಳುತ್ತವೆ. ಬೇರೆ ಅರಣ್ಯ ಪ್ರದೇಶಕ್ಕೆ ನುಗ್ಗುತ್ತವೆ. ಅವು ರೈಲ್ವೆ ಕಂಬಿಗಳಿಂದ ಮಾಡಿರುವ ಬೇಲಿಯನ್ನು ಹಾಗೂ ಆವರಣ ಗೋಟೆಗಳನ್ನೂ ಹಾನಿ ಮಾಡುವ ಅಪಾಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT