ಮಹಾವೀರರ ವಿಜೃಂಭಣೆಯ ಜನ್ಮ ಕಲ್ಯಾಣ ಮಹೋತ್ಸವ

7

ಮಹಾವೀರರ ವಿಜೃಂಭಣೆಯ ಜನ್ಮ ಕಲ್ಯಾಣ ಮಹೋತ್ಸವ

Published:
Updated:
ಮಹಾವೀರರ ವಿಜೃಂಭಣೆಯ ಜನ್ಮ ಕಲ್ಯಾಣ ಮಹೋತ್ಸವ

ಬೆಂಗಳೂರು: ನಗರದಲ್ಲಿ ಜೈನ ಸಮುದಾಯದವರು ಭಗವಾನ್‌ ಮಹಾವೀರರ 2617ನೇ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಗರದ ವಿವಿಧೆಡೆ ಇರುವ ಜಿನ ಮಂದಿರಗಳಲ್ಲಿ ಮಹಾವೀರರ ಮೂರ್ತಿಗೆ ಬೆಳಿಗ್ಗೆಯಿಂದಲೇ ಜಲ, ಕ್ಷೀರಾಭಿಷೇಕ ನಡೆಯಿತು.

ಸಮಸ್ತ ಜೈನ್‌ ಸಮಾಜ ಮತ್ತು ಜೈನ್‌ ಯುವ ಸಂಘಟನೆಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಘಟನೆಯ ಪದಾಧಿಕಾರಿಗಳು ಮಹಾವೀರರ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ವೇದಿಕೆಗೆ ಮೆರವಣಿಗೆ

ಯಲ್ಲಿ ತಂದು, ಯತಿಗಳ ಸಮ್ಮುಖದಲ್ಲಿ ಅಭಿಷೇಕ ಮಾಡಿದರು.

ಇದಕ್ಕೂ ಮೊದಲು ಜೈನ ಸಮುದಾಯದವರು ವಿಶ್ವ ಶಾಂತಿ ಸಾರಲು ಪುರಭವನ ವೃತ್ತದಿಂದ ಜಾಥಾ ನಡೆಸಿದರು. ನಗರ್ತಪೇಟೆ, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಅವೆನ್ಯೂ ರಸ್ತೆ, ಮೈಸೂರು ಬ್ಯಾಂಕ್‌ ಸರ್ಕಲ್‌, ಅರಮನೆ ರಸ್ತೆ, ವೈ.ರಾಮಚಂದ್ರ ರಸ್ತೆ, ಕಾಳಿದಾಸ ಮಾರ್ಗದಲ್ಲಿ ಜಾಥಾ ಸಾಗಿತು. ಜೈನ ಯುವತಿಯರು, ಮಹಿಳೆಯರು ಹಾಗೂ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಹೊಸಕೋಟೆಯಲ್ಲಿ ಮಹಾವೀರ ಜಯಂತಿ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್ ನಾರಾಯಣ ವಿಠಲ್ ಕಾರ್ಯಕ್ರಮ ಉದ್ಘಾಟಿಸಿದರು.

ಇದಕ್ಕೂ ಮೊದಲು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೈನ ಸಮುದಾಯದವರು ಮೆರವಣಿಗೆ ನಡೆಸಿದರು. ಮೆರವಣಿಗೆ ವೇಳೆ ಘೋಷವಾಕ್ಯಗಳು ಮೊಳಗಿದವು.

‘ಗೋಹತ್ಯೆ ನಿಷೇಧ ಸಂಕಲ್ಪ’

‘ರಾಜ್ಯದಲ್ಲಿ ಕೂಡ ಉ.ಪ್ರದೇಶ ಮಾದರಿಯಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರುವ ಸಂಕಲ್ಪ ಮಾಡಿದ್ದೇವೆ’ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಭಗವಾನ್‌ ಮಹಾವೀರರ 2617ನೇ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ದುಶ್ಚಟಗಳು ಮತ್ತು ಅಕ್ರಮ ಚಟುವಟಿಕೆಗಳಿಗೆ ಯೋಗಿ ಆದಿತ್ಯನಾಥ ಅವರು ಕಡಿವಾಣ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಅದೇ ಮಾದರಿ ಅಳವಡಿಸಿಕೊಳ್ಳುತ್ತೇವೆ’ ಎಂದರು.

‘ಜಗತ್ತಿಗೆ ಅಹಿಂಸೆಯ ತತ್ವ ಸಾರಿದ ಜೈನ ಸಮುದಾಯವು ಮಹಾವೀರರ ಆಶಯದಂತೆ ಆಡಳಿತ ನಡೆಸುವ ಪಕ್ಷ ಬೆಂಬಲಿಸಬೇಕು. ನಾವು ಸಂತರು, ಮುನಿಗಳ ಆಶಯದಂತೆ ಅಹಿಂಸಾ ತತ್ವ ಪಾಲಿಸುತ್ತೇವೆ’ ಎಂದರು.

ಸಾಧ್ವಿ ಶಾಸನಶ್ರೀ ಕಂಚನ್‌ ಪ್ರಭಾಜಿ ಮಾತನಾಡಿ, ‘ವಿಶ್ವ ಶಾಂತಿಗೆ ಸವಾಲಾಗಿರುವ ಭಯೋತ್ಪಾದನೆಯ ನಿರ್ಮೂಲನೆಗೆ, ಪರಿಸರಕ್ಕೆ ಕಂಟಕವಾಗಿರುವ ಸಮಸ್ಯೆಗಳಿಗೆ ಮಹಾವೀರರು ಸಾರಿದ ಸಂದೇಶಗಳಲ್ಲಿ ಪರಿಹಾರ ಮಾರ್ಗಗಳಿವೆ. ಮನುಷ್ಯ ಅಹಿಂಸಾ ಮಾರ್ಗದಲ್ಲಿ ನಡೆದರೆ ಪ್ರತಿ ಜೀವಿಯೂ ನಡೆದರೆ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ‘ಒಂದು ಪಕ್ಷ ಅಥವಾ ವ್ಯಕ್ತಿಯಿಂದ ಇಡೀ ದೇಶ ಅಭಿವೃದ್ಧಿಯಾಗುವುದಿಲ್ಲ. ಪ್ರತಿಯೊಬ್ಬರ ಕೊಡುಗೆಯೂ ಬೇಕು. ಜೈನ ಸಮುದಾಯ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಬಾರದು. ಎಲ್ಲ ರಾಜಕೀಯ ಪಕ್ಷಗಳ ಜತೆಗೂ ಗುರುತಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜೈನ್‌ ಯುವ ಸಂಘಟನೆ ಅಧ್ಯಕ್ಷ ಜೈನ್‌ ವಿನೋದ್‌ ನಂದಾವತ್‌, ‘ಸಂಘಟನೆಯು ಪಂಥಾತೀತವಾಗಿ ಸೇವೆ ಸಲ್ಲಿಸಲು ಭಗವಾನ್‌ ಮಹಾವೀರ್‌ ಜೈನ್‌ ಲ್ಯಾಬ್ಸ್‌, ಆಚಾರ್ಯ ತುಳಸಿ ಡಯಾಗ್ನಸ್ಟಿಕ್‌ ಸೆಂಟರ್‌ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry