ಬಿಒಐಗೆ ₹15.84 ಕೋಟಿ ವಂಚನೆ ಬೆಂಗಳೂರಿನ ಕಂಪನಿಯಲ್ಲಿ ಸಿಬಿಐ ತನಿಖೆ

7

ಬಿಒಐಗೆ ₹15.84 ಕೋಟಿ ವಂಚನೆ ಬೆಂಗಳೂರಿನ ಕಂಪನಿಯಲ್ಲಿ ಸಿಬಿಐ ತನಿಖೆ

Published:
Updated:

ನವದೆಹಲಿ: ಬ್ಯಾಂಕ್ ಆಫ್ ಇಂಡಿಯಾ‌ (ಬಿಒಐಗೆ) ಕ್ಕೆ ₹15.84 ಕೋಟಿ ವಂಚಿಸಿರುವ ಪ್ರಕರಣ ಸಂಬಂಧ ಬೆಂಗಳೂರಿನ ಸನ್‌ಮಾಸ್‌ ಮೆಷೀನ್‌ ಟೂಲ್ಸ್ ಪ್ರೈ. ಲಿ. ಹಾಗೂ ಇನ್ನೆರಡು ಕಂಪನಿಗಳಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ.

ಬೆಂಗಳೂರಿನ ಸನ್‌ಮಾಸ್‌ ಮೆಷೀನ್‌ ಟೂಲ್ಸ್ ಪ್ರೈ. ಲಿ. ಜತೆಗೆ ಜೆಮ್‌ಷೆಡ್‌ಪುರದ ಫೆಮಿಕಾ ಪ್ರೆಸ್ ಇಂಡಸ್ಟ್ರೀಸ್‌ ಪ್ರೈ.ಲಿ, ಅದರ ನಿರ್ದೇಶಕರಾದ ಜೈರಾಮ್ ಸಿಂಗ್ ಹಾಗೂ ರಾಕೇಶ್ ಸಿಂಗ್, ಕೋಲ್ಕತ್ತದ ಪ್ರಥಮ್ ಡೀಲ್ ಮಾರ್ಕ್ ಪ್ರೈ. ಲಿ. ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಈ ಮೂರು ಕಂಪನಿಗಳು ಸೇರಿ 2013ರಿಂದ 2015ರ ಅವಧಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಜೆಮ್‌ಷೆಡ್‌ಪುರ ಟೆಲ್ಕೊ ಶಾಖೆಗೆ ವಂಚನೆ ಎಸಗಿವೆ ಎಂದು ಸಿಬಿಐ ಹೇಳಿದೆ.

ಸಾಲದ ಮೊತ್ತ: ಈ ಕಂಪನಿಗಳು ‘₹15.84 ಕೋಟಿ ಸಾಲ ಪಡೆದಿದ್ದವು. ಅದರ ಪೈಕಿ ₹6.90 ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಸಿವೆ. ಈ ಸಾಲ ಮರು ಪಾವತಿ ಆಗಿಯೇ ಇಲ್ಲ’ ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಉಲ್ಲೇಖಿಸಿದೆ.

ಟಾಟಾ ಮೋಟರ್ಸ್‌ ಲಿ. ಹಾಗೂ ಟಿಎಂಎಲ್‌ ಡ್ರೈವ್ ಲೈನ್ ಲಿ. ಗೆ ಬಿಡಿಭಾಗಗಳನ್ನು ಸರಬರಾಜು ಮಾಡುವ ಫೆಮಿಕಾ ಪ್ರೆಸ್ ಇಂಡಸ್ಟ್ರೀಸ್‌ಗೆ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು.

ಫೆಮಿಕಾ ಪ್ರೆಸ್‌ ಇಂಡಸ್ಟ್ರೀಸ್ ₹4.90 ಕೋಟಿ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಸನ್‌ಮಾಸ್‌ ಕಂಪನಿಗೆ ನೀಡಿತು ಹಾಗೂ ₹2 ಕೋಟಿಯನ್ನು ಪ್ರಥಮ್ ಡೀಲ್ ಮಾರ್ಕ್ ಕಂಪನಿಗೆ ನೀಡಿತು. ಮೂರೂವರೆ ವರ್ಷಕ್ಕೂ ಹೆಚ್ಚು ಸಮಯವಾದರೂ ಈ ಎರಡೂ ಕಂಪನಿಗಳು ಬಿಡಿಭಾಗಗಳನ್ನು ಸರಬರಾಜು ಮಾಡಿಲ್ಲ ಅಥವಾ ಹಣವನ್ನೂ ಹಿಂದಿರುಗಿಸಿಲ್ಲ.

ಪ್ರಥಮ್ ಡೀಲ್‌ ಮಾರ್ಕ್ ಯಂತ್ರಗಳನ್ನು ಉತ್ಪಾದಿಸುವ ಕಂಪನಿಯೇ ಅಲ್ಲ. ಅದು ರಿಯಲ್ ಎಸ್ಟೇಟ್ ಉದ್ದಿಮೆ ನಡೆಸುತ್ತಿದೆ ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ. ಬ್ಯಾಂಕ್‌ನಿಂದ ಸಾಲ ಪಡೆದ ಫೆಮಿಕಾ ಪ್ರೆಸ್‌ ಇಂಡಸ್ಟ್ರೀಸ್‌ ವಂಚಿಸುವ ಉದ್ದೇಶ ಹೊಂದಿತ್ತು ಎನ್ನುವುದು ಇದರಿಂದಲೇ ತಿಳಿಯುತ್ತದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

‘ಬೆಂಗಳೂರಿನ ಸನ್‌ಮಾಸ್‌ ಮೆಷೀನ್‌ ಟೂಲ್ಸ್‌ ಸಹ ಮೊದಲನೇ ಸರಬರಾಜು ಕಂಪನಿ ನೀಡಿದ ದಿನಾಂಕದಲ್ಲಿಯೇ ಯಂತ್ರಗಳ ಸರಬರಾಜಿನ ಅಂದಾಜು ವೆಚ್ಚ ನೀಡಿದೆ. ಈ ಕಂಪನಿ ಸಹ ಯಂತ್ರಗಳನ್ನು ಸರಬರಾಜು ಮಾಡಿಲ್ಲ. ಸಾಲ ಪಡೆದವರು ಹಾಗೂ ಸರಬರಾಜು ಕಂಪನಿಗಳು ಒಟ್ಟಾಗಿ ಬ್ಯಾಂಕ್‌ಗೆ ಮೋಸ ಮಾಡಿದ್ದು, ಸಾಲದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿವೆ’ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry