ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌

5

ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌

Published:
Updated:
ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌

ಬೆಂಗಳೂರು: ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಬೇಕೇ? ಅದು ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ, ಆ ಜಾಗ ಸರ್ಕಾರಕ್ಕೇ ಸೇರಿದ್ದೇ,  ಗೋಮಾಳವೇ, ಅದು ಒತ್ತುವರಿ ಜಾಗವೇ ಎಂಬ ವಿವರಗಳನ್ನು ತಿಳಿದುಕೊಳ್ಳಬೇಕೇ?

ಕಂದಾಯ ಇಲಾಖೆ ಪರಿಚಯಿಸಿರುವ ‘ದಿಶಾಂಕ್‌’ ಆ್ಯಪ್‌ ನಿಮ್ಮ ನೆರವಿಗೆ ಬರಲಿದೆ. ಇದನ್ನು ಬಳಸಿ ರಾಜ್ಯದಾದ್ಯಂತದ ಆಸ್ತಿಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಈ ಆ್ಯಪ್‌ ಬೆಂಗಳೂರಿನ ನಿವಾಸಿಗಳ ಪಾಲಿಗಂತೂ ಅತ್ಯಂತ ಪ್ರಯೋಜನಕಾರಿಯಾಗಿದೆ.

ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದರ ಹಿಂದೆ ಮೂರು ವರ್ಷಗಳ ಪರಿಶ್ರಮ ಅಡಗಿದೆ. ಇಷ್ಟೆಲ್ಲ ಅನುಕೂಲ ಕಲ್ಪಿಸುವ ಈ ಆ್ಯಪ್‌ ಅನ್ನು ಸರ್ಕಾರ ಇಲಾಖೆಗಳಾಗಲೀ, ಬಿಲ್ಡರ್‌ಗಳಾಗಲೀ ಅಷ್ಟಾಗಿ ಬಳಸಿಕೊಳ್ಳುತ್ತಿಲ್ಲ.

1960ರಲ್ಲಿ ಭೌಗೋಳಿಕ ಪರಿಸ್ಥಿತಿ ಹೇಗಿತ್ತು ಎಂಬ ವಿವರವನ್ನು ಇದು ಒದಗಿಸುತ್ತದೆ. ಈ ಆ್ಯಪ್‌ನಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದು. ಆಸ್ತಿಯು ರಾಜಕಾಲುವೆಗಳ, ಕೆರೆ ಕುಂಟೆಗಳ ಆಸುಪಾಸಿನಲ್ಲಿ ಆಸ್ತಿಯನ್ನು ಹೊಂದಿರುವವರು, ಅದು ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ಕಂಡುಕೊಳ್ಳಬಹುದು. ಒತ್ತುವರಿಯನ್ನೂ ಪತ್ತೆಹಚ್ಚಬಹುದು ಎಂದು ಭೂದಾಖಲೆ ಮತ್ತು ಸರ್ವೆ ಇಲಾಖೆಯ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಇದು ಒದಗಿಸುವ ಮಾಹಿತಿಯನ್ನು ಕಾನೂನುಬದ್ಧ ದಾಖಲೆ ಎಂದು ಪರಿಗಣಿಸಲು ಬರುವುದಿಲ್ಲ. ಇದರಲ್ಲಿ ಕಾಣಿಸುವ ನಕಾಶೆ ಸಾಂಕೇತಿಕವಾದುದು. ಪ್ರತಿ ಸರ್ವೆ ನಂಬರ್‌ನ ಗಡಿರೇಖೆಗಳನ್ನು ಇದು ತೋರಿಸುತ್ತದೆ. ಇಲಾಖೆಯು 70 ಲಕ್ಷದಷ್ಟು ಸರ್ವೆನಂಬರ್‌ಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿ ಲಭ್ಯ. ಇನ್ನಷ್ಟು ವಿವರವನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ಮೊಬೈಲ್‌ ಫೋನ್‌ಗಳಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿ, ಸ್ಥಳದ (ಲೊಕೇಷನ್‌) ವಿವರವನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ಆ ಸ್ಥಳವು ಯಾವ ಸರ್ವೆನಂಬರ್‌ನಲ್ಲಿದೆ ಎಂಬುದನ್ನು ಆ್ಯಪ್‌ ತಿಳಿಸುತ್ತದೆ. ಸರ್ವೆ ನಂಬರ್‌ ನಮೂದಿಸುವ ಮೂಲಕವು ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಆ ಜಾಗದಲ್ಲಿ ರಸ್ತೆ ಇದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದು ಎಂದು ಅವರು ವಿವರಿಸಿದರು.

ಆಸ್ತಿ ಖರೀದಿಸಲು ಮುಂದಾಗುವವರು ವ್ಯವಹಾರ ಕುದುರಿಸುವ ಮುನ್ನ ಅದರ ಕುರಿತ ವಿವರಗಳನ್ನು ಈ ಆ್ಯಪ್‌ ಮೂಲಕ ತಿಳಿದುಕೊಳ್ಳಬಹುದು. ಖಾತಾದಲ್ಲಿ ನಮೂದಿಸಿರುವ ಸರ್ವೆ ನಂಬರ್‌ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದು ಎಂದು ಮೌದ್ಗಿಲ್‌ ತಿಳಿಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಹಾಗೂ ಇತರ ಸರ್ಕಾರಿ ಇಲಾಖೆಗಳು ಬಳಸುತ್ತಿರುವ ಆ್ಯಪ್‌ಗಿಂತ ‘ದಿಶಾಂಕ್‌’ ವಿಭಿನ್ನವಾಗಿದೆ. ಅವುಗಳ ಆ್ಯಪ್‌ಗಳು ನಿವೇಶನಗಳ ಮೂಲ ಭೌಗೋಳಿಕ ವಿವರಗಳನ್ನು ಒದಗಿಸುವುದಿಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಎಂಆರ್‌ಡಿಎ, ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಆ್ಯಪ್‌ ಅನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲು ಇಲಾಖೆ ಚಿಂತನೆ ನಡೆಸಿದೆ. ಈ ಸಂಸ್ಥೆಗಳ ದತ್ತಾಂಶವನ್ನೂ ಈ ಆ್ಯಪ್‌ನಲ್ಲಿ ಅಳವಡಿಸಿ ಜನರಿಗೆ ಒಂದೇ ಆ್ಯಪ್‌ನಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲ ಸೇವೆ ಸಿಗುವಂತೆ ಮಾಡುವುದು ಇಲಾಖೆಯ ಉದ್ದೇಶ.

ಮುಂದಿನ ಹಂತದಲ್ಲಿ, ಈ ಆ್ಯಪ್‌ನಲ್ಲಿ ಆಸ್ತಿ ಮಾಲೀಕರಿಗೆ ಸಂಬಂಧಿಸಿದ ವಿವರಗಳನ್ನೂ ಜೋಡಿಸುವ ಮೂಲಕ ಇದನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿ ರೂಪಿಸಲು ಇಲಾಖೆ ಮುಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry