ಜೆಡಿಎಸ್‌–ಬಿಎಸ್ಪಿ ಮೈತ್ರಿಯಿಂದ ಆನೆ ಬಲ

7
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ

ಜೆಡಿಎಸ್‌–ಬಿಎಸ್ಪಿ ಮೈತ್ರಿಯಿಂದ ಆನೆ ಬಲ

Published:
Updated:
ಜೆಡಿಎಸ್‌–ಬಿಎಸ್ಪಿ ಮೈತ್ರಿಯಿಂದ ಆನೆ ಬಲ

ಗುರುಮಠಕಲ್: ‘ರಾಷ್ಟ್ರಮಟ್ಟದಿಂದ ಸ್ಥಳೀಯ ಮಟ್ಟದವರೆಗೂ ಜೆಡಿಎಸ್ ಹಾಗೂ ಬಿಎಸ್ಪಿ ಜೊತೆಯಾಗಿ ಚುನಾವಣೆ ಎದುರಿಸುವ ಮೈತ್ರಿಯನ್ನು ಹೊಂದಿವೆ. ಇದು ಕೇವಲ ಚುನಾವಣಾ ಮೈತ್ರಿಯಾಗಿರದೆ ಎರಡೂ ಪಕ್ಷಗಳು ದೇಶದ ಬಡ, ದೀನ, ದಲಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾಗಿವೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ಹೇಳಿದರು.

ಪಟ್ಟಣದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಜೆಡಿಎಸ್–ಬಿಎಸ್ಪಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಎರಡೂ ಪಕ್ಷಗಳು ಒಂದೇ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿದ್ದು, ವಿಧಾನಸಭಾ ಚುನಾವಣೆ ಮಾತ್ರವಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿಯು ಮುಂದುವರೆಯಲಿದೆ. ಅಲ್ಲದೇ ಮಾಯಾವತಿಯವರನ್ನು ಪ್ರಧಾನಿಯಾಗಿ ಮಾಡುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

’ರಾಜ್ಯದ 224 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಎಸ್ಪಿಗೆ ಜೆಡಿಎಸ್ ಬೆಂಬಲ ಸೂಚಿಸಿದ್ದರೆ, 204 ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಲಾಗಿದೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿಯು ಬಿಎಸ್ಪಿ ಬೆಂಬಲ ದೊರಕಿರುವುದು ತೆನೆ ಹೊತ್ತ ಮಹಿಳೆಗೆ ಆನೆ ಬಲ ಜೊತೆಗೂಡಿದಂತಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ನಿಜಾಮ ಆಡಳಿತದ ಗುಲಾಮಗಿರಿ ಮುಗಿದರೂ ಸಹ ಕ್ಷೇತ್ರದಲ್ಲಿ ಕಾಂಗ್ರೆಸ್ ನಮ್ಮನ್ನು ಗುಲಾಮಗಿರಿಗೆ ದೂಡಿದೆ. ಪ್ರತಿ ಬಾರಿಯು ಹೊರಗಿನವರನ್ನು ಈ ಕ್ಷೇತ್ರದ ಶಾಸಕರಾಗಿ ಮಾಡುವ ಮೂಲಕ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

132 ವರ್ಷ ಇತಿಹಾಸದ ಕಾಂಗ್ರೆಸ್‌ ಈಗ ವಯೋಸಹಜ ಎನ್ನುವಂತೆ ದೇಶದೆಲ್ಲೆಡೆ ಅಧಿಕಾರ ಕಳೆದುಕೊಂಡಿದೆ. ಈಗ ಕ್ಷೇತ್ರದ ಮತದಾರರು ಬದಲಾವಣೆ ಬಯಸುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಉತ್ಸುಕರಾಗಿದ್ದಾರೆ’ ಎಂದರು.

‘ಪ್ರಸ್ತುತ ಬಿಜೆಪಿ ಎಂದರೆ ಕೇವಲ ನರೇಂದ್ರ ಮೋದಿ. ಮೋದಿ ಇಲ್ಲದೆ ಬಿಜೆಪಿ ಶೂನ್ಯ. ಅಲ್ಲಿ ಸಾಮೂಹಿಕ ನಾಯಕತ್ವದ ಕೊರತೆಯಿದೆ. ಮೋದಿ ಬರೀ ಮಾತಿನಲ್ಲಿಯೇ ಅಭಿವೃದ್ಧಿ ತೋರಿಸುವ ಸುಳ್ಳುಗಾರ. ಅಧಿಕಾರಕ್ಕೆ ಬಂದ ನೂರೂ ದಿನದಲ್ಲಿ ಕಪ್ಪು ಹಣ ತರುವುದಾಗಿ ಭರವಸೆ ಇನ್ನೂ ಹಾಗೆಯೇ ಉಳಿದಿದೆ. ಬಡವರ ಖಾತೆಗೆ ₹15 ಲಕ್ಷ ಹಣ ಹಾಕಲಿಲ್ಲ ಬದಲಾಗಿ ನೋಟ್ ಬ್ಯಾನ್‌ನಿಂದಾಗಿ ಬಡವರು ಪ್ರಾಣ ಕಳೆದುಕೊಂಡರು’ ಎಂದು ಆರೋಪಿಸಿದರು.

ಜಿ.ತಮ್ಮಣ್ಣ, ಭೀಮಶಪ್ಪ ಗಾಡದಾನ, ಮಸಿಯೂದ್ದೀನ್ ಆಸೀಂ, ಶರಣು ಆವಂಟಿ, ಭೀಮಶಪ್ಪ ಗುಡ್ಸೆ, ಸುನೀಲ್ ಆಶಿರ್ವಾದ, ಮಲ್ಲಿಕಾರ್ಜುನ ಅರುಣಿ, ನಾಗೇಶ ಚಂಡ್ರಿಕಿ, ಲಕ್ಷ್ಮಣ ನಕ್ಕಾ, ರಮೇಶ, ಅಶೋಕ ಹಾಜರಿದ್ದರು.

**

ಬಿಜೆಪಿ ಕಾಂಗ್ರೆಸ್ಸಿನ ಕೂಸು!

‘ಬಿಜೆಪಿಯು ಕಾಂಗ್ರೆಸ್ಸಿನ ಕೂಸು. ಎರಡೂ ಪಕ್ಷಗಳಿಂದ ಹಿಂದುಳಿದವರ ಮೇಲೆ ನಿರಂತರ ದಬ್ಬಾಳಿಕೆ ಹಾಗೂ ವಂಚನೆ ರಾಜಕೀಯದ ಮೂಲಕ ಅಧಿಕಾರಕ್ಕೆ ಬರುವುದು ಮಾತ್ರ ಅವರ ಲೆಕ್ಕಾಚಾರವಾಗಿದೆ’ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ವಾಸು ಆರೋಪಿಸಿದರು.

‘ಹಿಂದೆ ಕಾಂಗ್ರೆಸ್‌ ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿದೆ. ಈಗ ಬಿಜೆಪಿಗರು ಅಂಬೇಡ್ಕರ್‌ ರಚಿಸಲ್ಪಟ್ಟ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ. ಇವರಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಬ್ಬರೂ ಒಂದು ನಾಣ್ಯದ ಎರಡು ಮುಖಗಳೇ ಹೊರತು ನಮ್ಮ ಕುರಿತು ಚಿಂತಿಸುವ ಜನಪರ ಪಕ್ಷಗಳಲ್ಲ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry