ಬಿರುಸಾದ ರಾಜಕೀಯ; ಕಾರ್ಯಕರ್ತರಲ್ಲಿ ಉತ್ಸಾಹ

7
ರಾಹುಲ್‌ ಗಾಂಧಿ ನಂತರ ಅಮಿತ್‌ ಶಾ, ಏ. 3ಕ್ಕೆ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಭೇಟಿ

ಬಿರುಸಾದ ರಾಜಕೀಯ; ಕಾರ್ಯಕರ್ತರಲ್ಲಿ ಉತ್ಸಾಹ

Published:
Updated:
ಬಿರುಸಾದ ರಾಜಕೀಯ; ಕಾರ್ಯಕರ್ತರಲ್ಲಿ ಉತ್ಸಾಹ

ಚಾಮರಾಜನಗರ: ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಕಾವು ಪಡೆಯಲಾರಂಭಿಸಿದೆ.ಬೇಸಿಗೆಯ ಬಿಸಿಲಿನ ಝಳ ಒಂದೆಡೆ ಯಾದರೆ, ನಗರದಲ್ಲಿ ಎಲ್ಲೆಡೆ ಅಗೆದು ಬಿಟ್ಟಿರುವ ರಸ್ತೆಗ ಳಿಂದ ಹೊಮ್ಮುವ ದೂಳು ಮತ್ತೊಂದೆಡೆ. ಇವೆರಡರ ನಡುವೆ ರಾಜಕೀಯ ದಿನದಿಂದ ದಿನಕ್ಕೆ ರಂಗು ಪಡೆಯಲಾರಂಭಿಸಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶ ನಡೆಸಿದ ಆರೇ ದಿನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಿಲ್ಲೆಗೆ ಬರುತ್ತಿದ್ದಾರೆ. ಅಮಿತ್‌ ಶಾ ಬಂದ ಮೂರೇ ದಿನಕ್ಕೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ರಾಹುಲ್‌ ಗಾಂಧಿ ನಡೆಸಿದ ಸಮಾವೇಶ ಹಾಗೂ ರೋಡ್‌ ಶೊನಿಂದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ಚಾಮ ರಾಜನಗರ, ಹನೂರು ಹಾಗೂ ಗುಂಡ್ಲು ಪೇಟೆಯಲ್ಲಿ ಅಭ್ಯರ್ಥಿ ಬಹುತೇಕ ಗೆಲುವು ನಿಶ್ಚಿತ ಎನ್ನುವ ಪರಿಸ್ಥಿತಿ ಕಾಂಗ್ರೆಸ್ ಪಾಳೇಯದಲ್ಲಿದೆ. ಹೀಗಾಗಿ, ರಾಹುಲ್ ನಡೆಸಿದ ಚುನಾವಣಾ ಪ್ರಚಾರ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.

ರಾಹುಲ್ ಗಾಂಧಿ ಅವರ ಚಾಮರಾಜನಗರ ಜಿಲ್ಲೆ ಪ್ರವಾಸ ನಿಗದಿಯಾಗುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ನಾಯಕರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಜಿಲ್ಲೆಗೆ ಕರೆಸುವ ಯೋಜನೆ ರೂಪಿಸಿದರು. ಅದರಂತೆ ರಾಹುಲ್ ತೆರಳಿದ ಆರೇ ದಿನಕ್ಕೆ ಅಮಿತ್‌ ಶಾ ಪ್ರವಾಸವನ್ನು ಆಯೋಜಿಸಲಾಗಿದೆ. ವಿವಿಧ ಬಣಗಳಾಗಿ ಹರಿದು ಹೋಗಿರುವ ಬಿಜೆಪಿಯಲ್ಲಿ ಯಾವುದೇ ಕ್ಷೇತ್ರದಲ್ಲೂ ಟಿಕೆಟ್ ನಿಶ್ಚಿತವಾಗಿಲ್ಲ. ಆಕಾಂಕ್ಷಿಗಳು ಇನ್ನೂ ಲಾಭಿ ನಡೆಸುವ ಪ್ರಯತ್ನದಲ್ಲೇ ಇದ್ದಾರೆ. ಒಡೆದ ಮನೆಯಾಗಿರುವ ಪಕ್ಷವನ್ನು ಅಮಿತ್‌ ಶಾ ಭೇಟಿ ಒಂದುಗೂಡಿಸಬಲ್ಲದೇ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ.

ಅಮಿತ್‌ ಶಾ ಕೊಳ್ಳೇಗಾಲದಲ್ಲಿ ಕೆಲವು ಆಯ್ದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮಾತ್ರ ರಹಸ್ಯ ಮಾತುಕತೆ ನಡೆಸಲಿರುವುದರಿಂದ ಈ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ. ಪರಿಶಿಷ್ಟ ಪಂಗಡದ ಸಮಾವೇಶ ನಡೆಸುವ ಮೂಲಕ ದಲಿತ ಸಮುದಾಯದ ವಿಶ್ವಾಸ ಗೆಲ್ಲುವ ತಂತ್ರಗಾರಿಕೆಯೂ ಇದರಲ್ಲಿ ಅಡಗಿದೆ ಎಂಬ ಲೆಕ್ಕಾಚಾರಗಳೂ ನಡೆಯುತ್ತಿವೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಬೆಳವಣಿಗೆ ಗಮನಿಸಿದ ಜೆಡಿಎಸ್‌ ಸಹ ಸುಮ್ಮನೆ ಕುಳಿತಿಲ್ಲ. ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡು ಕೊಳ್ಳೇಗಾಲದಲ್ಲಿ ಅದೃಷ್ಟ ಪಣಕೊಡ್ಡುವ ಚಿಂತನೆ ನಡೆಸಿರುವ ಜೆಡಿಎಸ್‌, ಹನೂರು ಕ್ಷೇತ್ರವನ್ನೂ ಪಡೆಯಲು ಗಂಭೀರ ಯತ್ನ ನಡೆಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಏ.3ರಂದು ಕೊಳ್ಳೇಗಾಲದಲ್ಲಿ ಸಮಾವೇಶ ನಡೆಸಲಿದ್ದಾರೆ. ಜತೆಗೆ, ರೋಡ್ ಷೋ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ.

ಗಡಿ ಜಿಲ್ಲೆಯಲ್ಲಿ ರಾಜಕೀಯ ಸಂಚಲನ

ಗಡಿ ಜಿಲ್ಲೆಯಾದ ಚಾಮರಾಜನಗರಕ್ಕೆ ಇದುವರೆಗೂ ಅಷ್ಟಾಗಿ  ರಾಷ್ಟ್ರೀಯಮಟ್ಟದ ಉನ್ನತ ನಾಯಕರು ಬರುತ್ತಿರಲಿಲ್ಲ. ರಾಜ್ಯಮಟ್ಟದ ನಾಯಕರೂ ಹೆಚ್ಚಾಗಿ ಬರುತ್ತಿರಲಿಲ್ಲ.ಆದರೆ, ಈ ಬಾರಿ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಬರುತ್ತಿರುವುದು ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ರಾಹುಲ್ ರೋಡ್‌ ಷೋ ಹೊಸದೊಂದು ಗುಂಗನ್ನು ಹಿಡಿಸಿದ್ದರೆ, ಅಮಿತ್‌ ಶಾ ಅವರ ಸಮಾವೇಶ ಮತ್ತೊಂದು ಬಗೆಯ ಗುಂಗು ಹಿಡಿಸುವುದಂದೂ ದಿಟ ಎನಿಸಿದೆ. ಈಗ ಜಿಲ್ಲೆಯಲ್ಲಿ ಎಲ್ಲಿಗೆ ಹೋದರೂ ಈ ಬೆಳವಣಿಗೆಯತ್ತಲೇ ಜನರು ಚರ್ಚೆ ನಡೆಸುತ್ತಿದ್ದಾರೆ.

ಕೆ.ಎಸ್.ಗಿರೀಶ / ಎಸ್‌.ಪ್ರತಾಪ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry