ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದನೆಯು ಕಾಯಕದ ಪ್ರತಿಫಲವಾಗಿರಲಿ

ಶರಣ ಸಮ್ಮೇಳನ– ಗುರುವಂದನೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಸಲಹೆ
Last Updated 30 ಮಾರ್ಚ್ 2018, 7:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅರ್ಥರೇಖೆ ಎಲ್ಲರಿಗೂ ಬೇಕು. ಆದರೆ, ಆಯುಷ್ಯ ರೇಖೆಯನ್ನು ಕಳೆದುಕೊಳ್ಳುವಂತೆ ಇರಬಾರದು ಎಂದು ಸಾಣೆಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿಕಾಸನಗರದ ಬಡಾವಣೆಯ ಬಸವೇಶ್ವರ ಮಾರ್ಗದ ಬದಿಯ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಶರಣ ಸಮ್ಮೇಳನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈಗ ಸಂಪತ್ತು ಇದೆ. ಆದರೆ, ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಿಕರ ಬಳಿ ಹೆಚ್ಚು ಹಣ ಇರಲಿಲ್ಲ. ಆದರೆ, ಅವರು ತುಂಬಾ ಆರೋಗ್ಯವಾಗಿದ್ದರು, ದೀರ್ಘಕಾಲ ಬಾಳುತ್ತಿದ್ದರು. ಮೋಸ ಮಾಡಿ ಸಂಪಾದನೆ ಮಾಡಬಾರದು. ಸಂಪಾದನೆಯು ಕಾಯಕದ ಪ್ರತಿಫಲ ಆಗಿರಬೇಕು. ಆಗ ಆರೋಗ್ಯವು ವೃದ್ಧಿಸುತ್ತದೆ, ಆಯುಷ್ಯವೂ ಹೆಚ್ಚಾಗುತ್ತದೆ’ ಎಂದು ಹೇಳಿದರು.

‘ಅಕ್ರಮವಾಗಿ ಸಂಪತ್ತು ಗಳಿಸಿದಾಗ ದುಡಿಯುವ ಮನಸ್ಥಿತಿ ಇರುವುದಿಲ್ಲ. ದುಶ್ಚಟಗಳು ಆವರಿಸಿಕೊಳ್ಳುತ್ತವೆ. ದುಶ್ಚಟಗಳಿಂದ ಆರೋಗ್ಯ ಹದಗೆಡುತ್ತದೆ. ಬೇಗನೇ ಲೋಕದಿಂದಲೇ ಪಲಾಯನ ಮಾಡುತ್ತೇವೆ’ ಎಂದರು.‘ಪ್ರತಿಯೊಬ್ಬರೂ ಕಾಯಕ ಮಾಡಿಯೇ ಸಂಪಾದನೆ ಮಾಡಬೇಕು ಎಂದು ಶರಣರು ಹೇಳಿದ್ದಾರೆ. ಶರಣರ ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಆಚರಣೆಗೆ ತಂದಿದ್ದರೆ ಇಡೀ ಜಗತ್ತಿನ ಕಲ್ಯಾಣ ಆಗುತ್ತಿತ್ತು. ಶರಣರ ಆಶಯಗಳನ್ನು ಹೇಳುತ್ತೇವೆ. ಆದರೆ, ಆ ಆಶಯಗಳಿಗೆ ಅನುಗುಣವಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡದಿರುವುದು ದುರಂತ. ಎಲ್ಲರಿಗೂ ಸಂಪತ್ತು ಬೇಕಾಗಿದೆ, ಸನ್ಮಾರ್ಗದಲ್ಲಿ ಅದನ್ನು ಪಡೆಯಬೇಕು ಎಂಬ ಭಾವನೆ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.ಹೇಗಾದರೂ ಸರಿ ದೋಚಿಕೊಳ್ಳಬೇಕು ಎಂಬ ಮನಸ್ಥಿತಿ ಹೆಚ್ಚಾಗಿದೆ. ಇದರಿಂದ ಸಾಮಾಜಿಕ ಸ್ಥಿತಿ ಅಸ್ತವ್ಯಸ್ತವಾಗುತ್ತದೆ. ದುಶ್ಚಟಗಳು ಹೆಚ್ಚುತ್ತವೆ. ಸಮಾಜ ದಿಕ್ಕುತಪ್ಪುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದರು.

‘ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು. ನಡೆನುಡಿ ಒಂದಾಗಿರುವವರೇ ಶರಣರು. ಗುಡಿಗುಂಡಾರಗಳಿಗೆ ನಾವೆಲ್ಲರೂ ದಾಸರಾಗಿದ್ದೇವೆ. ‘ಎನ್ನ ಕಾಲೇ ಕಂಬ, ದೇಹವೇ ದೇಗುಲ...’ ಎಂದು ಬಸವಣ್ಣ ಹೇಳಿದ್ದಾರೆ. ಈ ವಚನವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬುದ್ಧ, ಬಸವಣ್ಣ, ಏಸುಕ್ರಿಸ್ತ, ಗಾಂಧೀಜಿಯವರಂಥ ಮಹನೀಯರೆಲ್ಲರೂ ಲೋಕ ಕಲ್ಯಾಣಕ್ಕಾಗಿ ಬದುಕಿದವರು. ಸಕಲರಿಗೆ ಲೇಸು ಬಯಸಿದವರು. ಲೋಕಕಲ್ಯಾಣಕ್ಕಾಗಿ ಬದುಕಿದವರನ್ನು ಜನರು ಸ್ಮರಿಸುತ್ತಾರ’ ಎಂದರು.

‘ನನ್ನ ಭವಿಷ್ಯದ ಶಿಲ್ಪಿ ನಾನೇ’ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಬಾಲ್ಯದಿಂದಲೇ ಸರಿಯಾದ ಸಂಸ್ಕಾರಗಳನ್ನು ಮೈಗೂಡಿಸಬೇಕು. ಅಂತರಂಗದ ವಿಕಾಸವಾಗಬೇಕು. ಆಗ ದಿಕ್ಕುತಪ್ಪಲು ಸಾಧ್ಯ ಇಲ್ಲ ಎಂದರು.ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೂನಿವರ್ಸಲ್‌ ಕಾಫಿ ಫೌಂಡೇಷನ್‌ 9.9.9 ಸಂಸ್ಥಾಪಕರಾದ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಎಚ್‌.ಹರೀಶ್‌,ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT