ಚುನಾವಣೆ ಕರ್ತವ್ಯ, ಅಧಿಕಾರಿಗಳ ಸಭೆ

4

ಚುನಾವಣೆ ಕರ್ತವ್ಯ, ಅಧಿಕಾರಿಗಳ ಸಭೆ

Published:
Updated:

ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಏಳು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ಅಕ್ರಮ ತಡೆಯುವಲ್ಲಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ತಹಶೀಲ್ದಾರ್ ಕೆ.ಆರ್.ನಾಗರಾಜು ಸೂಚಿಸಿದರು. ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಚುನಾವಣಾ ಕರ್ತವ್ಯದ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಚಳ್ಳಕೆರೆ ವಿಧಾನಸಭೆ ಕ್ಷೇತ್ರದಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ತಾಲ್ಲೂಕಿನ ತುರುವನೂರು, ನಾಗಗೊಂಡನಹಳ್ಳಿ, ದೊಡ್ಡಚೆಲ್ಲೂರು, ನಗರದ ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಪಾವಗಡ ರಸ್ತೆ ಮತ್ತು ಚಿತ್ರದುರ್ಗ ರಸ್ತೆಯಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರಕ್ಕೆ ಆಗಮಿಸುವ ಮತ್ತು ತೆರಳುವ ಪ್ರತಿಯೊಂದು ದ್ವಿಚಕ್ರವಾಹನ, ಕಾರು, ಟೆಂಪೋ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಚುನಾವಣೆಯಲ್ಲಿ ಅಕ್ರಮ ತಡೆಯಲು ದಾಖಲೆ ರಹಿತ ಹಣ, ಮಾರಕಾಸ್ತ್ರ ಮತ್ತು ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸುವ ಪೇಪರ್, ಬಂಟಿಂಗ್ಸ್, ಫ್ಲೆಕ್ಸ್, ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳ ಚಿತ್ರಗಳಿರುವ ಯಾವುದೇ ಉಡುಗೊರೆಗಳು ಕಂಡುಬಂದಲ್ಲಿ ವಶಕ್ಕೆ ಪಡೆಯಲಾಗುತ್ತದೆ. ಈ ಬಗ್ಗೆ ಚುನಾವಣೆ ಕರ್ತವ್ಯದಲ್ಲಿರುವ ಅಧಿಕಾರಿಗಳು ಅತ್ಯಂತ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಚುನಾವಣೆ ಶಾಖೆ ಅಧಿಕಾರಿ ಮಂಜುನಾಥ್, ಕಂದಾಯ ನಿರೀಕ್ಷಕ ಪ್ರಕಾಶ್, ಎಎಸ್‌ಐ ಕಾಂತರೆಡ್ಡಿ, ಸಹಾಯಕರಾದ ನಾಗರಾಜ, ಓಬಳೇಶ್, ರಾಜೇಶ್, ಹನುಮಂತರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry