ಯೋಜನೆ ಅಪೂರ್ಣ: ಕುಡಿವ ನೀರಿಗೆ ತತ್ವಾರ

7
ಅಧಿಕಾರಿಗಳ ನಿರ್ಲಕ್ಷ್ಯ: ವಜೀರ್‌ಗಾಂವ್‌ ಗ್ರಾಮಸ್ಥರ ಆರೋಪ

ಯೋಜನೆ ಅಪೂರ್ಣ: ಕುಡಿವ ನೀರಿಗೆ ತತ್ವಾರ

Published:
Updated:

ಚಿಂಚೋಳಿ: ತಾಲ್ಲೂಕಿನ ವಜೀರ್‌ಗಾಂವ್‌ ಗ್ರಾಮದಲ್ಲಿ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಗ್ರಾಮಕ್ಕೆ ಕುಡಿವ ನೀರು ಪೂರೈಸಲು ಇರುವ ಎರಡು ಕಿರು ನೀರು ಪೂರೈಕೆ ಯೋಜನೆಗಳು ನಿಷ್ಕ್ರಿಯವಾಗಿದ್ದು, ಜನರು ಪರದಾಡುವಂತಾಗಿದೆ.ಇದರಿಂದ ಜನರು, ಬೈಕ್‌, ಅಟೊ, ಎತ್ತಿನ ಗಾಡಿ ಮತ್ತು 9 ಗೇಣಿನ ನೊಗ ಎತ್ತುಗಳಿಗೆ ಹೇರಿ ಮಧ್ಯದಲ್ಲಿ 8 ಕೊಡಗಳಿಂದ ದೂರ ಪ್ರದೇಶಗಳಿಂದ ನೀರು ತರುತ್ತಿದ್ದಾರೆ.‘ಚಿಂಚೋಳಿ ರಸ್ತೆಯ ತೆರೆದ ಬಾವಿಯಿಂದ ಮತ್ತು ಊರ ಹೊರ ವಲಯದಲ್ಲಿರುವ ರುದ್ರಭೂಮಿಯ ಜಾಗದಲ್ಲಿನ ತೆರೆದ ಬಾವಿಯಿಂದ ಮತ್ತೊಂದು ಹೀಗೆ ಎರಡು ಜಲ ಮೂಲ( ತೆರೆದ ಬಾವಿ)ಗಳಿಂದ ಕಿರು ನೀರು ಪೂರೈಕೆ ಯೋಜನೆ ಮೂಲಕ ನೀರು ಪೂರೈಕೆಗೆ ವ್ಯವಸ್ಥೆಯಿದೆ.ಆದರೆ ಚಿಂಚೋಳಿ ರಸ್ತೆಯಲ್ಲಿರುವ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ ಕೊಳವೆ ದುರಸ್ತಿ ಇಲ್ಲದೇ 8 ತಿಂಗಳಿನಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ’ ಎಂಬುದು ಗ್ರಾಮಸ್ಥರ ಆರೋಪ.‘ಇನ್ನೊಂದು ಬಾವಿಯ ಅಂತರ್ಜಲ ಕುಸಿದಿದೆ. ಇದರಿಂದ ಜನರು ನೀರಿಲ್ಲದೇ ತೊಂದರೆ ಪಡುವಂತಾಗಿದೆ.

ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ಬಳಸುವ ಒಂದು ತೆರೆದ ಬಾವಿಯಿದ್ದು, ಅದರ ಗಿರಕಿಗಳು ಮುರಿದು ಹೋಗಿವೆ.ಅವುಗಳ ಒಳಗಡೆಯ ಕಬ್ಬಿಣದ ಗೋಲಿ(ಚರ್ರಾ) ಇಲ್ಲದ ಕಾರಣ ಗಿರಕಿಗಳು ಸರಳವಾಗಿ ತಿರುತ್ತಿಲ್ಲ. ಇದರಿಂದ ತುಂಬಿದ ಕೊಡ ಬಾವಿಯಿಂದ ಮೇಲೆ ಸೇದುವಾಗ ಕೈ ಚರ್ಮ ಕಿತ್ತು ಬರುತ್ತಿದೆ’ ಎಂದು ನಾಗೇಶ ಬಡಿಗೇರ್‌ ಆರೋಪಿಸುತ್ತಾರೆ.ಗ್ರಾಮದಲ್ಲಿ ಮೇಲ್ವರ್ಗದವರು ಬಳಸುವ ಇನ್ನೊಂದು ಬಾವಿಯಿದ್ದು, ಅದರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಗ್ರಾಮದ ಕೊನೆಯ ಮನೆಯವರು ನೀರು ತರಬೇಕಾದರೆ ಒಂದು ಕಿ.ಮೀ ಕ್ರಮಿಸುವಂತಾಗಿದೆ.‘ಗ್ರಾಮದಲ್ಲಿ ಮೂರು ಕೊಳವೆ ಬಾವಿಗಳಿವೆ. ಇವುಗಳಲ್ಲಿ ನೀರಿದೆ. ಆದರೆ ಇವು ಹಾಳಾಗಿವೆ. 2 ವರ್ಷಗಳಿಂದ ಇವುಗಳ ದುರಸ್ತಿಗೆ ಯಾರು ಗಮನ ಹರಿಸಿಲ್ಲ’ ಎಂದು ಧನರಾಜ ನಾಟಿಕಾರ್‌, ಖತಲಪ್ಪ ಮಾಳಗೆ ದೂರುತ್ತಾರೆ.

‘ಗ್ರಾಮದಲ್ಲಿ ಅಲ್ಲಲ್ಲಿ ಕುಡಿವ ನೀರು ಪೂರೈಕೆಗೆ ಗುಮ್ಮಿಗಳಿವೆ. ಆದರೆ ಅವುಗಳು ನೀರಿಲ್ಲ. ಕೆಲವು ಗುಮ್ಮಿಗಳಲ್ಲಿ ನೀರು ನಿಲ್ಲುವಂತಿಲ್ಲ.ನಲ್ಲಿಗಾಗಿ ಕೊರೆದ ರಂದ್ರದಲ್ಲಿ ಕೈಗಳು ಹೋಗು ವಂತಾಗಿದ್ದು ಗುಮ್ಮಿಯಲ್ಲಿ ಬಂದ ನೀರು ಕ್ಷಣದಲ್ಲಿಯೇ ಪೋಲಾಗುತ್ತದೆ’ ಎಂದು ಅವರು ತಿಳಿಸಿದರು.‘ಗ್ರಾಮ ಪಂಚಾಯಿತಿ ಸದಸ್ಯರ ಮಾತುಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಳುವುದಿಲ್ಲ. 14ನೇ ಹಣಕಾಸು ಯೋಜನೆಯ ಹಣ ದುರುಪ ಯೋಗವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ. ಅಧಿಕಾರಿಗಳಿಗೆ ಒಂದು ವಾರದ ಕಾಲಾವಕಾಶ ನೀಡುತ್ತೇವೆ ಅಲ್ಲಿವರೆಗೆ ವಜೀರ್‌ಗಾಂವ್‌ ಗ್ರಾಮದ ಕುಡಿವ ನೀರಿನ ಸಮಸ್ಯೆ ಪರಿಹರಿಸದೇ ಹೋದರೆ ಹೊಸಳ್ಳಿ ಕ್ರಾಸ್‌ನಲ್ಲಿ ರಸ್ತೆತಡೆ ಚಳವಳಿ ಮತ್ತು ಖಾಲಿ ಕೊಡಗಳ ಪ್ರದರ್ಶನ ನಡೆಸುತ್ತೇವೆ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಗೋಪಾಲ ಎಚ್ಚರಿಸಿದ್ದಾರೆ.

4 ದಿನಗಳಲ್ಲಿ ಸಮಸ್ಯೆಗೆ ಪರಿಹಾರ

‘ಗ್ರಾಮದಲ್ಲಿ ಉಂಟಾದ ನೀರಿನ ತತ್ವಾರ ಗಮನಕ್ಕೆ ಬಂದಿದೆ. ಸದ್ಯ ಮತಗಟ್ಟೆಗಳಲ್ಲಿ ಕುಡಿವ ನೀರು, ವಿದ್ಯುತ್‌, ಶೌಚಾಲಯ ವ್ಯವಸ್ಥೆ ಕಡೆಗೆ ಗಮನ ಹರಿಸಿದ್ದರಿಂದ ಜನರಿಗೆ ಸ್ವಲ್ಪ ತೊಂದರೆ ಯಾಗಿದೆ.ಕೊಳವೆ ಮಾರ್ಗ ದುರಸ್ತಿ ಕೈಗೊಂಡು ಹೊಸದಾಗಿ 4 ಕೊಳವೆಗಳು ಅಳವಡಿಸ ಬೇಕಿದ್ದು, ತೆರೆದ ಬಾವಿಗಳಿಗೆ ಗಿರಕಿ ಅಳವಡಿಸುವುದು ಮತ್ತು ಇತರ ಚಿಕ್ಕಪುಟ್ಟ ಕೆಲಸಗಳನ್ನು ಶೀಘ್ರ ಕೈಗೊಳ್ಳುತ್ತೇನೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಡಪ್ಪ ಧನ್ನಿ ತಿಳಿಸಿದರು.

**

ನಮ್ಮ ಊರಿಗೆ ನೀರಿನ ಬರವಿಲ್ಲ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ದಾಹ ನೀಗಿಸಿಕೊಳ್ಳಲು ಪರದಾಡುವಂತಾಗಿದೆ – ನವರತ್ನ ಬಡಿಗೇರ್‌,ಗ್ರಾಮಸ್ಥ.

**

–ಜಗನ್ನಾಥ ಡಿ. ಶೇರಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry