7
ಲಕ್ಷ್ಮೇಶ್ವರ ಪಟ್ಟಣದಲ್ಲಿ ತಂಪು ಪಾನೀಯಗಳಿಗೆ ಭಾರಿ ಬೇಡಿಕೆ

ಏರುತಿದೆ ಬಿಸಿಲು, ಹರಿಯುತಿದೆ ಬೆವರು

Published:
Updated:

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸೂರ್ಯನ ಶಾಖ ಜೋರಾಗಿಯೇ ತಟ್ಟುತ್ತಿದೆ. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಬಿಸಿಲಿನ ತಾಪ ಹೆಚ್ಚಿರುತ್ತದೆ. ಒಂದು ವಾರದಿಂದ ಸರಾಸರಿ 36 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಪ್ರತಿ ಬೇಸಿಗೆಯಲ್ಲೂ ನೀರಿನ ಕೊರತೆ ಸಹಜ. ಈ ಬಾರಿಯೂ ತಾಲ್ಲೂಕಿನಲ್ಲಿ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಕೆಲ ಗ್ರಾಮಗಳಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ ಜನರು ಟೈಫಾಯಿಡ್‌ ಮತ್ತು ವಾಂತಿ–ಭೇದಿಯಿಂದ ನರಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಟೈಫಾಯಿಡ್‌ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ.

ತಂಪು ಪಾನೀಯಗಳಿಗೆ ಮೊರೆ: ಬಿಸಿಲಿನ ಝಳದಿಂದ ಪಾರಾಗಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.ಮಧ್ಯಾಹ್ನದ ಹೊತ್ತಿಗೆ ಪಟ್ಟಣದ ತಂಪು ಪಾನೀಯ ಅಂಗಡಿಗಳತ್ತ ಜನರು ಬರುವ ದೃಶ್ಯ ಸಾಮಾನ್ಯವಾಗಿದೆ.‘ಅಂಗಡಿಗೆ ಬರುವ ಜನ ಹೆಚ್ಚಾಗಿ ಲಿಂಬು ಶರಬತ್‌ ಹಾಗೂ ಲಿಂಬು ಸೋಡಾ ಕುಡೀತಾರ‍್ರೀ’ ಎನ್ನುತ್ತಾರೆ ತಂಪು ಪಾನೀಯ ಅಂಗಡಿಯ ವ್ಯಾಪಾರಿ ಮಂಜುನಾಥ ಬದಿ.

ಸ್ಥಳೀಯ ಜಯದೇವ ವೃತ್ತದ ಸಮೀಪದ ಹತ್ತಿರ ಕಲ್ಲಂಗಡಿ ಹಣ್ಣಿನ ಮಾರಾಟದ ಭರಾಟೆ ಜೋರಾಗಿದೆ. ಮಧ್ಯಮ ಗಾತ್ರದ ಹಣ್ಣಿನ ಬೆಲೆ ₹80 ಇತ್ತು. ದೊಡ್ಡ ಗಾತ್ರದ ಹಣ್ಣು ಇನ್ನೂ ತುಟ್ಟಿಯಾಗಿತ್ತು. ತಳ್ಳುವ ಗಾಡಿ ವ್ಯಾಪಾರಿ ಗಳು ಒಂದು ಕಲ್ಲಂಗಡಿ ಹಣ್ಣಿನ ಪೀಸ್‌ಗೆ ₹10 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.ಕಬ್ಬಿನ ಹಾಲಿಗೂ ಬೇಡಿಕೆ ಹೆಚ್ಚಾಗಿದೆ. ಝಳವನ್ನು ತಾಳಲಾರದೆ ಕೆಲವರು ಎಳನೀರಿನತ್ತ ಮುಖ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಎಳನೀರಿಗೆ ₹25 ಬೆಲೆ ಇದೆ.

ಬಡವರ ಫ್ರಿಜ್‌ ಎಂದೆ ಕರೆಯಲಾಗುವ ಮಡಕೆ ಮಾರಾಟ ಜೋರಾಗಿದೆ. ‘ಬ್ಯಾಸಿಗಿ ಬಂದಾಗಷ್ಟ ಕೆಲವರು ಬಿಂದಿಗಿ, ಹರವಿ ಖರೀದಿ ಮಾಡ್ತಾರ್ರೀ’ ಎನ್ನುತ್ತಾರೆ ಹನಮಂತಪ್ಪ ಕುಂಬಾರ.

–ನಾಗರಾಜ ಎಸ್‌. ಹಣಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry