7
ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಕೋದಂಡರಾಮ್ ಅಭಿಮತ

ಉತ್ತಮ ನಾಯಕನ ಆಯ್ಕೆಯಿಂದ ಅಭಿವೃದ್ಧಿ

Published:
Updated:

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡದಿದ್ದರೆ ದಲಿತ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಕೋದಂಡರಾಮ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಸಾಲಗಾಮೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಯುವಸೇನೆ ಆಶ್ರಯದಲ್ಲಿ ಏರ್ಪಡಿಸಿದ್ದ ದಲಿತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ 4,830 ಜನರಿಗೆ ಮತ ಚಲಾಯಿಸುವ ಹಕ್ಕು ಕೊಡಲಾಗಿತ್ತು. ನಂತರದಲ್ಲಿ ಬಿ.ಆರ್.ಅಂಬೇಡ್ಕರ್ ಹೋರಾಟ ಹಾಗೂ ಸಂವಿಧಾನದ ಫಲವಾಗಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಯಿತು. ನಾಯಕನನ್ನು ಆಯ್ಕೆ ಮಾಡಬೇಕಾದರೆ ಆತ ತಳ ಸಮುದಾಯದ ಹಿನ್ನೆಲೆ ಕುರಿತು ಅರಿವು ಹೊಂದಿದ್ದಾರೆಯೇ ಎಂಬುದನ್ನು ಯೋಚಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಗಳು ದಲಿತ ಸಮುದಾಯ ಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿವೆ. ಆದರೆ, ಅದನ್ನು ತಲುಪಿಸುವ ಕೆಲಸವನ್ನು ದಲಿತ ಯುವ ಸಂಘಟನೆಗಳು ಮಾಡಬೇಕು. ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟಿತರಾಗು ವುದು ಮುಖ್ಯ. ಬಂಡವಾಳಶಾಹಿಗಳು ಜನಪ್ರತಿನಿಧಿಗಳಾಗಿ ಆಯ್ಕೆಗೊಂಡಾಗ ಇಂತಹ ಸಮುದಾಯಗಳು ಶೋಷಣೆಗೆ ಒಳಗಾಗುತ್ತವೆ. ಪ್ರತಿಯೊಬ್ಬರೂ ಮತದಾನ ಮಾಡಿ. ಆದರೆ, ಉತ್ತಮ ನಾಯಕನನ್ನು ಆಯ್ಕೆ ಮಾಡಿದಾಗ ಮಾತ್ರ ಅಂಬೇಡ್ಕರ್ ಆಶಯಗಳ ಕನಸು ನನಸು ಮಾಡಲು ಸಾಧ್ಯ ಎಂದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿ ಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ತಾಲ್ಲೂಕಿನ ಸಾಲಗಾಮೆ ವರೆಗೂ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ದಲಿತ ಮುಖಂಡ ಕೇಶವಯ್ಯ, ಕೆ.ವೈ.ಡಿ.ಎಸ್. ಜಿಲ್ಲಾ ಘಟಕ ಅಧ್ಯಕ್ಷ ಕ್ರಾಂತಿ ಪ್ರಸಾದ್ ತ್ಯಾಗಿ, ಅಂಬೇಡ್ಕರ್ ಯುವಸೇನೆ ಗೌರವಾಧ್ಯಕ್ಷ ಜಿ.ಒ. ಮಹಾಂತಪ್ಪ, ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ, ಸಮತಾ ಸೈನಿಕ ದಳ ಅಧ್ಯಕ್ಷ ಆರ್.ಪಿ.ಐ. ಸತೀಶ್, ದಲಿತ ಮಾನವ ಹಕ್ಕುಗಳ ರಾಜ್ಯ ಸಂಚಾಲಕ ಮರಿಜೋಸೆಫ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry