ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜು, ರೇವಣ್ಣ ಹಿಡಿತದಲ್ಲಿ ಅಧಿಕಾರಿಗಳು: ಆರೋಪ

ಬಿಜೆಪಿ ಪರಿಶಿಷ್ಟ ಜಾತಿಯ ಮುಖಂಡರ ಸಭೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಯೋಗಾರಮೇಶ್‌ ಆಕ್ರೋಶ
Last Updated 30 ಮಾರ್ಚ್ 2018, 10:50 IST
ಅಕ್ಷರ ಗಾತ್ರ

ಅರಕಲಗೂಡು: ‘ಜಿಲ್ಲೆಯ ಕೆಲವು ಅಧಿಕಾರಿಗಳು ಸಚಿವ ಎ.ಮಂಜು ಮತ್ತು ಶಾಸಕ ಎಚ್.ಡಿ.ರೇವಣ್ಣ ಅವರ ಹಿಡಿತದಲ್ಲಿದ್ದು, ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನವಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಯೋಗಾರಮೇಶ್ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಪರಿಶಿಷ್ಟ ಜಾತಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.‘ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪ್ರಾಮಾಣಿಕರನ್ನು ನಿಯೋಜಿಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಾದರಿ ನೀತಿ ಸಂಹಿತೆ ಜಾರಿಯಾದರೂ ಕೆಲವು ಅಧಿಕಾರಿಗಳು ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಪಶು ಭಾಗ್ಯ ಯೋಜನೆ ಫಲ ದೊರಕಿಸಿಕೊಡುವ ಕುರಿತು ಮತದಾರರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಕೆಲ ಗುತ್ತಿಗೆದಾರರ ಮೂಲಕ ಅರೆಬರೆ ಕಾಮಗಾರಿ ನಡೆಸಿ ಆಮಿಷ ಒಡ್ಡಲಾಗುತ್ತಿದೆ’ ಎಂದು ದೂರಿದರು.

‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದುಳಿದ, ದಲಿತರಿಗೆ ಸರ್ಕಾರ ಹಾಗೂ ಪಕ್ಷದ ಮಟ್ಟದಲ್ಲಿ ಉನ್ನತ ಹುದ್ದೆ ನೀಡದೇ ಕಡೆಗಣಿಸಲಾಗಿದೆ. ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ವರ್ಗಾಯಿಸಿ ಅನ್ಯಾಯ ಎಸಗಿದೆ’ ಎಂದು ಟೀಕಿಸಿದರು.‘ಎರಡು ವರ್ಷಗಳ ಹಿಂದಿನ ಮುಂಗಡ ಪತ್ರದಲ್ಲೇ ತಾಲ್ಲೂಕಿನಲ್ಲಿ ಪಶು ಆಹಾರ ಘಟಕ ತೆರೆಯುವುದಾಗಿ ಘೋಷಿಸಲಾಗಿತ್ತು. ಆದರೆ ಸಚಿವರು ವಿಧಾನಸಭಾ ಚುನಾವಣೆ ದಿನಾಂಕ ನಿಗದಿ ಘೋಷಣೆಗೆ ವಾರದ ಹಿಂದೆ ಅದರ ಉದ್ಘಾಟನೆ ನೆರವೇರಿಸಿರುವುದು ಖಂಡನೀಯ’ ಎಂದರು.

‘ಸಹಕಾರ ತತ್ವಗಳನ್ನು ಗಾಳಿಗೆ ತೂರಿ ಬೇನಾಮಿ ಕಂಪನಿ ಹೆಸರಿನಲ್ಲಿ ₹ 80 ಕೋಟಿ ವೆಚ್ಚದಲ್ಲಿ ಪಶು ಆಹಾರ ಘಟಕ ಸ್ಥಾಪಿಸಲು ಮುಂದಾಗಿರುವುದರ ಹಿಂದೆ ಅಕ್ರಮ ನಡೆದಿರುವ ಶಂಕೆಯಿದೆ. ಘಟಕ ಸ್ಥಾಪಿಸಿದ ನಂತರ ಸಚಿವರು ಅದನ್ನು ಕುಟುಂಬದ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಖಾಸಗಿ ಕಂಪನಿಗೆ ವಹಿಸಿದರೆ ರೈತರಿಗೆ ತೊಂದರೆಯಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದನ್ನು ರದ್ದು ಪಡಿಸಿ ಸಹಕಾರ ತತ್ವದಡಿ ನಿರ್ಮಿಸಲು ಕ್ರಮ ಕೈಗೊಳ್ಳ ಲಾಗುವುದು’ ಎಂದು ಹೇಳಿದರು.

ತಾಲ್ಲೂಕಿನ ಕಟ್ಟೇಪುರ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ₹ 150 ಕೋಟಿ ಅನುದಾನ ನೀಡಿತ್ತು. ಕಾಮಗಾರಿ ಕಳಪೆಯಾಗಿ ನಾಲೆಗಳು ಹಾಳಾಗುತ್ತಿವೆ. ಎಡದಂಡೆ ಹಳೆಯ ನಾಲೆ ಜಾಗದಲ್ಲಿ ಕಿರು ವಿದ್ಯುತ್ ಘಟಕ ಸ್ಥಾಪಿಸಿ ನಾಲೆಗೆ ನೀರು ಬರದಂತೆ ಮಾಡಲಾಗಿದೆ.

ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿರುವ ಮಂಜು ಅವರ ಆಡಳಿತ ಕಾರ್ಯವೈಖರಿ ಜನತೆಗೆ ಬೇಸರ ತರಿಸಿದೆ. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು 15 ವರ್ಷಗಳ ಕಾಲ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಯಾವ ಅಭಿವೃದ್ಧಿ ಕೆಲಸಗಳೂ ಕಣ್ಣಿಗೆ ಬೀಳುತ್ತಿಲ್ಲ. ಸ್ವಾರ್ಥ ಸಾಧನೆಗಾಗಿ ರಾಜಕೀಯ ದೊಂಬರಾಟದಲ್ಲಿ ತೊಡಗಿರುವ ಹಾಲಿ, ಮಾಜಿ ಶಾಸಕರನ್ನು ಮತದಾರರು ಮನೆಗೆ ಕಳುಹಿಸಲಿದ್ದಾರೆ’ ಎಂದು ಅಭಿಪ್ರಾಯಪಟ್ಟರು.‘ಡಾ.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿದ ಕಾಂಗ್ರೆಸ್ ದೇಶದಲ್ಲಿ ಕಳೆದ 60 ವರ್ಷಗಳಿಂದ ಮತ ಬ್ಯಾಂಕ್ ಆಗಿ ಮಾಡಿಕೊಂಡಿದ್ದ ದಲಿತ ಸಮುದಾಯದವರ ಏಳಿಗೆಗೆ ಕಿಂಚಿತ್ತೂ ಕೊಡುಗೆ ನೀಡಿಲ್ಲ’ ಎಂದರು.

‘ಕಳೆದ ಬಾರಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ದಲಿತರನ್ನು ನಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಚುನಾವಣೆಯಲ್ಲಿ ಅವರನ್ನು ಸೋಲಿಸಿ ವಂಚಿಸಿತು. ಸಜ್ಜನ ರಾಜಕಾರಣಿ ಶ್ರೀನಿವಾಸ್ ಪ್ರಸಾದ್‌ ಅವರಿಗೂ ಕಿರುಕುಳ ನೀಡಿ ಅಧಿಕಾರ ಕಿತ್ತುಕೊಂಡು ಪಕ್ಷದಿಂದ ಹೊರ ಹಾಕಲಾಯಿತು. ಕಾಂಗ್ರೆಸ್ ಎಂದಿಗೂ ದಲಿತರ ಪರ ಅಲ್ಲ ಎಂಬುದನ್ನು ಮನಗಾಣಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ಐದು ಪಂಚ ತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವರಿಗೆ ವಿಶ್ವವ್ಯಾಪಿ ಗೌರವ ಹೆಚ್ಚಲು ಕಾರಣರಾಗಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ಸಿ.ರಾಜೇಶ್, ಪಕ್ಷದ ತಾಲ್ಲೂಕು ಘಟಕದ ಎಸ್‌ಸಿ– ಎಸ್‌ಟಿ ಮೋರ್ಚಾ ಅಧ್ಯಕ್ಷ ವೀರೇಶ್, ಜಿ,ಪಂ ಮಾಜಿ ಸದಸ್ಯ ರಾಜಣ್ಣ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ವಿಶ್ವನಾಥ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಿವಲಿಂಗಶಾಸ್ತ್ರಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT