ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಕ್ಷಾಮ: ಲಂಗರು ಹಾಕಿದ ದೋಣಿಗಳು

ಬೈತಖೋಲ್, ತದಡಿ: ಇದೇ ಮೊದಲ ಬಾರಿ ಮಾರ್ಚ್‌ನಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತ
Last Updated 30 ಮಾರ್ಚ್ 2018, 11:39 IST
ಅಕ್ಷರ ಗಾತ್ರ

ಕಾರವಾರ:  ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಾದ ಇಲ್ಲಿನ ಬೈತಖೋಲ್ ಹಾಗೂ ಗೋಕರ್ಣ ಸಮೀಪದ ತದಡಿಯಲ್ಲಿ ಒಂದು ತಿಂಗಳಿನಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಮೀನುಗಾರರಿಗೆ ಮಾರ್ಚ್ ತಿಂಗಳಿನಲ್ಲಿ ಉತ್ತಮ ಆದಾಯ ತಂದುಕೊಡುತ್ತಿದ್ದ 200ಕ್ಕೂ ಅಧಿಕ ದೋಣಿಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿದೆ.

‘ನಾನು 30 ವರ್ಷಗಳಿಂದ ಆಳಸಮುದ್ರ ಮೀನುಗಾರಿಕೆಗೆ ಹೋಗುತ್ತಿದ್ದೇನೆ. ಮಾರ್ಚ್ ತಿಂಗಳಲ್ಲಿ ಕೆಲಸ ಇಲ್ಲದಿರುವುದು ಇದೇ ಮೊದಲು. ಪ್ರತಿವರ್ಷ ಈ ತಿಂಗಳಲ್ಲಿ ಲೆಪ್ಪೆ ಮೀನುಗಳು ಹಾಗೂ ಸೀಗಡಿ ಹೇರಳವಾಗಿ ಸಿಗುತ್ತವೆ. ಈ ಬಾರಿ ಖಾಲಿ ಕೈಯಲ್ಲಿ ವಾಪಸಾಗಿದ್ದೇವೆ’ ಎನ್ನುತ್ತಾರೆ ಮೀನುಗಾರ ನರೇಶ್ ತಾಂಡೇಲ್.ನಗರಸಭೆ ಸದಸ್ಯ ಪ್ರಶಾಂತ ಹರಿಕಂತ್ರ ಹಾಗೂ ಮೀನುಗಾರರ ಮುಖಂಡ ವಿನಾಯಕ ಹರಿಕಂತ್ರ ಇದಕ್ಕೆ ದನಿಗೂಡಿಸುತ್ತಾರೆ.

‘ಜನವರಿ ತಿಂಗಳಲ್ಲಿ ಮೀನುಗಾರಿಕೆ ಆರಂಭವಾದರೆ ಸಾಮಾನ್ಯವಾಗಿ ಮೇ ಅಂತ್ಯದವರೆಗೂ ನಡೆಯುತ್ತದೆ. ನಮ್ಮ ನಿರೀಕ್ಷೆಯಂತೆ ಸೀಗಡಿ ಮರಿಗಳು ಈಗಾಗಲೇ ಬೆಳೆದಿರಬೇಕಿತ್ತು. ಆದರೆ, ಪರ್ಸೀನ್ ದೋಣಿಗಳ ಬಲೆಗಳಿಗೆ ಸಣ್ಣ ಮರಿಗಳೇ ಬೀಳುತ್ತಿವೆ. ಸಾಂಪ್ರದಾಯಿಕ ದೋಣಿಗಳ ಬಲೆಗೆ ಅವೂ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಬೈತಖೋಲ್ ಸುತ್ತಮುತ್ತ ಸುಮಾರು 1,500 ಕುಟುಂಬಗಳು ಮೀನುಗಾರಿಕೆಯನ್ನು ಅವಲಂಬಿಸಿವೆ. ದೋಣಿಗಳ ಮೇಲೆ ಬಂಡವಾಳ ಹೂಡಿದವರು ಜಾರ್ಖಂಡ್, ಒಡಿಶಾ ರಾಜ್ಯಗಳಿಂದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಮೀನುಗಾರಿಕೆ ಇರಲಿ, ಇಲ್ಲದಿರಲಿ ಅವರಿಗೆ ವೇತನ ಪಾವತಿ ಮಾಡಲೇಬೇಕಾಗಿದೆ. ಪರ್ಸೀನ್ ದೋಣಿ ಒಮ್ಮೆ ಸಮುದ್ರಕ್ಕೆ ಹೋದರೆ ಕನಿಷ್ಠ ₹ 10 ಸಾವಿರ ಖರ್ಚು ಇದೆ. ಆದರೆ, ಈಗ ಕೇವಲ ಎರಡು ಕೆ.ಜಿಯಷ್ಟು ಲೆಪ್ಪೆ ಮೀನುಗಳು ಸಿಗುತ್ತಿವೆ. ಇದರಿಂದ ಆದಾಯಕ್ಕಿಂತ ಖರ್ಚೇ ಅಧಿಕವಾಗಿದ್ದು, ಮೀನುಗಾರಿಕೆಗೆ ಯಾರೂ ಹೋಗುತ್ತಿಲ್ಲ’ ಎಂದು ವಿನಾಯಕ ಹರಿಕಂತ್ರ ಲೆಕ್ಕಾಚಾರ ಮುಂದಿಟ್ಟರು.

ತದಡಿಯಲ್ಲೂ ಇದೇ ಸಮಸ್ಯೆ: ಗೋಕರ್ಣ ಸಮೀಪದ ತದಡಿ ಮೀನುಗಾರಿಕಾ ಬಂದರಿನಲ್ಲೂ ಸುಮಾರು 150 ಸಾಂಪ್ರದಾಯಿಕ ದೋಣಿಗಳು ಲಂಗರು ಹಾಕಿವೆ.‘ಲೈಟ್ ಫಿಶಿಂಗ್ ಮಾಡಿದ್ದರಿಂದಲೇ ಈ ಸಮಸ್ಯೆ ಉಂಟಾಗಿದೆ. ಸಣ್ಣ ದೋಣಿಗಳ ಬಲೆಗಳಿಗೆ ಮೀನುಗಳು ಸಿಗುತ್ತಿಲ್ಲ. ದೊಡ್ಡದೊಡ್ಡ ಬಲೆಗಳಿರುವ ಕೆಲವು ದೋಣಿಗಳಲ್ಲಿ ಅಲ್ಪಸ್ವಲ್ಪ ಮೀನುಗಳು ಕಾಣಿಸುತ್ತಿವೆ’ ಎಂದು ಸ್ಥಳೀಯ ಮೀನುಗಾರರ ಮುಖಂಡ ಉಮಾಕಾಂತ ಹೊಸಕಟ್ಟಾ ಅಳಲು ತೋಡಿಕೊಳ್ಳುತ್ತಾರೆ.

ಪರಿಹಾರಕ್ಕೆ ಆಗ್ರಹ: ಈಚೆಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದಾಗ ಕೂಡ ಮೂರು ನಾಲ್ಕು ದಿನ ದೋಣಿಗಳು ಸಮುದ್ರಕ್ಕೆ ಇಳಿದಿರಲಿಲ್ಲ. ಈಗ ಮೀನಿನ ಕೊರತೆಯಿಂದ ಆದಾಯವಿಲ್ಲ. ಇದರಿಂದ ಮೀನುಗಾರ ಕುಟುಂಬಗಳಿಗೆ ತೊಂದರೆಯಾಗಿದ್ದು, ಸರ್ಕಾರ ಪರಿಹಾರ ಕೊಡುವ ಬಗ್ಗೆ ಯೋಚನೆ ಮಾಡಬೇಕು ಎಂಬುದು ಮೀನುಗಾರರ ಒತ್ತಾಯವಾಗಿದೆ.

ಹೂಳು ಸುರಿದದ್ದೇ ಕಾರಣವೇ?

ಬೈತಖೋಲ್ ಬಂದರು ವ್ಯಾಪ್ತಿಹೂಳನ್ನು ಆಳ ಸಮುದ್ರದಲ್ಲಿ ಸುರಿದ ಕಾರಣ ಮೀನಿನ ಮರಿಗಳಿಗೆ ಆಹಾರದ ಕೊರತೆಯಾಯಿತು ಎಂಬುದು ಮೀನುಗಾರರ ವಾದವಾಗಿದೆ.‘ನಾವು ವಿಜ್ಞಾನ ಕೇಂದ್ರದ ಅಧಿಕಾರಿಗಳನ್ನು ಕೇಳಿದಾಗ ಅವರು ಇದೇ ಕಾರಣ ಮುಂದಿ ಟ್ಟಿದ್ದಾರೆ. ಸಮುದ್ರ ಮಧ್ಯದಲ್ಲಿ ಸುರಿದ ಹೂಳು  ಜಲಚರಗಳಿಗೆ ಸಿಗಬೇಕಾದ ಆಹಾರವನ್ನು ಆವರಿಸಿದೆ. ಇದರಿಂದ ಆಹಾರ ಅರಸಿ ಬೇರೆಡೆಗೆ ಹೋಗಿರಬಹುದು ಅಥವಾ ಸತ್ತಿರಬಹುದು. ವ್ಯಾಪಕವಾಗಿ ಲೈಟ್‌ಫಿಶಿಂಗ್ ಮಾಡಿದ್ದರ ಪರಿಣಾಮವೂ ಕ್ಷಾಮಕ್ಕೆ ಕಾರಣವಾಗಿದೆ’ ಎಂದು ವಿನಾಯಕ ಹರಿಕಂತ್ರ.

**

ಕೇರಳ, ತಮಿಳುನಾಡು ಭಾಗದ ಮೀನುಗಾರರೂ ನಮ್ಮ ಜಿಲ್ಲೆಯ ಕರಾವಳಿಗೆ ಬಂದು ಮೀನುಗಾರಿಕೆ ಮಾಡುತ್ತಿದ್ದರು. ಆದರೆ, ಈ ಬಾರಿ ನಮ್ಮವರಿಗೇ ಬೇಟೆಯಿಲ್ಲ–ವಿನಾಯಕ ಹರಿಕಂತ್ರ, ಮೀನುಗಾರರ ಮುಖಂಡ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT