4
ಹಲವು ಪ್ರಶಸ್ತಿ ಮುಡಿಗೇರಿಸಕೊಂಡ ರಮೇಶ್‌

‘ಬಾಡಿ ಬಿಲ್ಡಿಂಗ್‌ನತ್ತ ಒಲವು ಬೆಳೆಸಿಕೊಂಡ ಗ್ರಾಮೀಣ ಪ್ರತಿಭೆ’

Published:
Updated:
‘ಬಾಡಿ ಬಿಲ್ಡಿಂಗ್‌ನತ್ತ ಒಲವು ಬೆಳೆಸಿಕೊಂಡ ಗ್ರಾಮೀಣ ಪ್ರತಿಭೆ’

ಶನಿವಾರಸಂತೆ: ಗ್ರಾಮೀಣ ಪ್ರದೇಶದಲ್ಲಿ ಶೂಟಿಂಗ್, ಜಿಮ್ನಾಸ್ಟಿಕ್, ವೆಯ್ಟ್‌ಲಿಪ್ಟಿಂಗ್, ಬಾಡಿಬಿಲ್ಡಿಂಗ್‌ನಂತಹ ಆಟಗಳು ಅತ್ಯಂತ ವಿರಳವೆನ್ನಬಹುದು. ಕಾರಣ, ಅವುಗಳ ತರಬೇತಿಗೆ ಕೋಚ್‌ಗಳ ಸಹಕಾರ ಬೇಕಾಗುತ್ತದೆ. ಮಾರ್ಗದರ್ಶನದ ಕೊರತೆಯ ನಡುವೆಯೂ ಗ್ರಾಮೀಣ ಪ್ರತಿಭೆಯೊಂದು ಬಾಡಿ ಬಿಲ್ಡಿಂಗ್‌ನತ್ತ ಒಲವು ಮೂಡಿಸಿಕೊಂಡು ವಿಶೇಷ ಸಾಧನೆ ಮಾಡುತ್ತಿದೆ.

ಶನಿವಾರಸಂತೆ ಸಮೀಪದ ಕೌಕೋಡಿ ಗ್ರಾಮದ ರಘು ಮತ್ತು ಸರೋಜಾ ದಂಪತಿಯ ಪುತ್ರ ಕೆ.ಆರ್.ರಮೇಶ್ ಅಂತಹ ಅಪರೂಪದ ಪ್ರತಿಭೆಯಾಗಿದ್ದಾರೆ. 8 ವರ್ಷಗಳಿಂದ ‘ಬಾಡಿ ಬಿಲ್ಡಿಂಗ್’ (ದೇಹದಾರ್ಡ್ಯ) ಸ್ಪರ್ಧೆಯಲ್ಲಿ ತೊಡಗಿಕೊಂಡಿದ್ದು ಹಲವಾರು ಬಾರಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜಿಮ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹುಟ್ಟಿಕೊಂಡ ಆಸಕ್ತಿಯು ಇಂದು ಅವರನ್ನು ‘ಮಿಸ್ಟರ್’ ಪಟ್ಟಕ್ಕೇರಿಸಿದೆ.

ಬೆಳಿಗ್ಗೆ 5ರಿಂದ 8ಗಂಟೆವರೆಗೆ ಮತ್ತು ಸಂಜೆ 4ರಿಂದ 6ರವರೆಗೆ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡು ದೇಹವನ್ನು ದಂಡಿಸಿದ್ದಾರೆ. ಸಸ್ಯಾಹಾರ ಮತ್ತು ಮಾಂಸಹಾರ ಎರಡನ್ನು ಡಯಟಿಂಗ್ ಆಹಾರ ಕ್ರಮದಲ್ಲಿ ಸೇವಿಸುತ್ತಾರೆ. ಗಿರೀಶ್ ಮತ್ತು ಕಿಶೋರ್ ಎಂಬುವವರು ಮಾರ್ಗದರ್ಶನ ನೀಡುತ್ತಿರುವುದಾಗಿ ರಮೇಶ್ ತಿಳಿಸುತ್ತಾರೆ.ಅವರು 2008ರಲ್ಲಿ ಮಂಗಳೂರು ದಸರಾ ಕ್ರೀಡಾಕೂಟದಲ್ಲಿ ದ್ವೀತಿಯ ಸ್ಥಾನ, 2009ರಲ್ಲಿ ತೃತೀಯ ಸ್ಥಾನ, 2010ರ ದಸರಾ ಕ್ರೀಡಾಕೂಟದಲ್ಲಿ 65 ಕೆ.ಜಿ ವಿಭಾಗದಲ್ಲಿ ಪ್ರಥಮ ಹಾಗೂ 2012ರ ಸತೀಶ್ ಸಾಗರ್ ಕ್ಲಾಸಿಕ್ ಪ್ರಯೋಜಕತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

2013ರ ರೋಟರಿ ಫಿಟ್‌ನೆಸ್ ಕ್ಲಾಸಿಕ್‌ನ 70 ಕೆ.ಜಿ ವಿಭಾಗದಲ್ಲಿ ಪ್ರಥಮ, 2014ರಲ್ಲಿ ಜಯಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 70 ಕೆ.ಜಿ ವಿಭಾಗದಲ್ಲಿ ಪ್ರಥಮ, 2015ರಲ್ಲಿ ಕುಮುಟಾದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ರಮೇಶ್ ಹಲವಾರು ಬಾರಿ ‘ಮಿಸ್ಟರ್ ದಕ್ಷಿಣ ಕನ್ನಡ’, ‘ಮಿಸ್ಟರ್ ಕುಂದಾಪುರ’ ಹಾಗೂ ‘ಮಿಸ್ಟರ್ ಕರಾವಳಿ’ ಪ್ರಶಸ್ತಿ ಗಳಿಸಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 30ಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದ್ದಾರೆ.ಮಿಸ್ಟರ್ ಇಂಡಿಯಾ ಆಗುವ ಕನಸಿನೊಂದಿಗೆ ನಿರಂತರ ಅಭ್ಯಾಸ ನಡೆಸುತ್ತಿರುವ ರಮೇಶ್ ಅವರ ಶ್ರಮದಲ್ಲಿ ಅವರ ತಂದೆ– ತಾಯಿ ಹಾಗೂ ಸ್ನೇಹಿತರ ಪಾತ್ರವೂ ಮುಖ್ಯವಾಗಿದೆ.

ಶ.ಗ.ನಯನತಾರಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry