ಒತ್ತಡಕ್ಕಿದೆ ಆಯುರ್ವೇದದಲ್ಲಿ ಪರಿಹಾರ

7

ಒತ್ತಡಕ್ಕಿದೆ ಆಯುರ್ವೇದದಲ್ಲಿ ಪರಿಹಾರ

Published:
Updated:
ಒತ್ತಡಕ್ಕಿದೆ ಆಯುರ್ವೇದದಲ್ಲಿ ಪರಿಹಾರ

ಇದು ವೇಗದ ಯುಗ. ಇಲ್ಲಿ ಯುಗದಲ್ಲಿ ದೊಡ್ಡವರು–ಚಿಕ್ಕವರು ಎನ್ನದೇ ಎಲ್ಲರೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ನಗರವಾಸಿಗಳಲ್ಲಿ ಒತ್ತಡದ ಪ್ರಮಾಣ ಇನ್ನೂ ಹೆಚ್ಚು. ಒತ್ತಡಕ್ಕೆ ಮಕ್ಕಳು ಕೂಡ ಹೊರತಾಗಿಲ್ಲ. ಈ ರೀತಿಯ ಒತ್ತಡದ ಜೀವನಶೈಲಿಯು ನಮ್ಮ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುವುದಲ್ಲದೇ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಆದರೆ ಈ ಒತ್ತಡ ನಿವಾರಣೆಗೆ ಆಯುರ್ವೇದ ಪರಿಹಾರವಿದೆ. ಉತ್ತಮ ಆಹಾರ, ವಿಚಾರ ಹಾಗೂ ಪಂಚಕರ್ಮ ಚಿಕಿತ್ಸೆಗಳ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದಾಗಿದೆ.

ಆಯುರ್ವೇದ ಪರಿಹಾರ

ನಾವು ರಜಾಕಾಲದಲ್ಲಿ ಅರಣ್ಯಗಳಿಗೆ, ಪರ್ವತಪ್ರದೇಶಗಳಿಗೆ, ಸಮುದ್ರತೀರಗಳಿಗೆ ಪ್ರವಾಸ ಹೋಗಲು ಬಯಸುತ್ತೇವೆ. ಇದೆಲ್ಲಾ ನಮ್ಮ ದೈನಂದಿನ ಬದುಕಿನ ಒತ್ತಡದಿಂದ ತಪ್ಪಿಸಿಕೊಳ್ಳುವ ಉಪಾಯಗಳಾಗಿರುತ್ತವೆ. ಈ ರೀತಿಯ ಪ್ರವಾಸಗಳನ್ನು ಯಾವಾಗಲೂ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಒತ್ತಡ ನಿವಾರಣೆಗೆ ಇದು ಉತ್ತಮ ಪರಿಹಾರವೂ ಅಲ್ಲ. ಸುಲಭ ಮತ್ತು ಪರಿಣಾಮಕಾರಿ ಉಪಾಯವೆಂದರೆ ನಮ್ಮ ಜೀವನಶೈಲಿಯನ್ನೇ ಬದಲಾವಣೆ ಮಾಡಿಕೊಳ್ಳುವುದು. ಬೆಳಗಿನ ಜಾವ ಬೇಗ ಏಳುವುದು, ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದು, ಅನಂತರ ಅಭ್ಯಂಜನ ಸ್ನಾನ ಮಾಡುವುದು, ಆರೋಗ್ಯಕರವಾದ ಆಹಾರಸೇವನೆ – ಇಂಥವುಗಳಿಂದ  ಒತ್ತಡದ ನಿವಾರಣೆ ಸಾಧ್ಯ.

1. ಬ್ರಾಹ್ಮೀ ಮುಹೂರ್ತ ಉತ್ತಿಷ್ಠ: ಬ್ರಾಹ್ಮೀ ಮುಹೂರ್ತ ಅಥವಾ ಬೆಳಗಿನ ಜಾವದಲ್ಲಿ ಏಳುವುದು ಒಂದು ಉತ್ತಮ ಅಭ್ಯಾಸವಾಗಿದೆ. ಬೆಳಗಿನ ಜಾವ 3ರಿಂದ 6 ಗಂಟೆಯ ಸಮಯವನ್ನು ‘ಬ್ರಾಹ್ಮೀ ಮುಹೂರ್ತ’ ಎಂದು ಕರೆಯುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಅಧ್ಯಯನದಲ್ಲಿ ತೊಡಗಿದರೆ ‘ಜ್ಞಾನ’ ಅಥವಾ ‘ ಬ್ರಹ್ಮ’ವನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ. ಬೆಳಗಿನ ಜಾವದ ಹವಾಮಾನ ಹಿತವಾಗಿದ್ದು ಅದು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ಒತ್ತಡರಹಿತ ಅಧ್ಯಯನ ಸಾಧ್ಯವಾಗುತ್ತದೆ.

2. ಯೋಗ: ಯೋಗಾಭ್ಯಾಸ ಒತ್ತಡ ನಿವಾರಣೆಗೆ ಸಹಾಯಕ. ಯೋಗ ಮನಸ್ಸನ್ನು ಶಾಂತಗೊಳಿಸುತ್ತದೆ. ಮನಸ್ಸಿನ ಗ್ರಹಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೈನಂದಿನ ಚಟುವಟಿಕೆಗಳನ್ನು ಶಾಂತಚಿತ್ತದಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಎದುರಾಗುವ ಸಮಸ್ಯೆಗಳ ಸುಲಭ ಪರಿಹಾರವೂ ಸಾಧ್ಯವಾಗುತ್ತದೆ. ಯೋಗವು ದೇಹವನ್ನು ಸುಸ್ಥಿತಿಯಲ್ಲಿರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿಸುವುದು ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಸಹಾಯಕವಾಗುತ್ತದೆ.

3. ಪ್ರಾಣಾಯಾಮ: ಕ್ರಮಬದ್ಧ ಉಸಿರಾಟದ ಅಭ್ಯಾಸವೇ ಪ್ರಾಣಾಯಾಮ. ದಿನನಿತ್ಯ ಪ್ರಾಣಾಯಾಮ ಮಾಡುವುದರಿಂದ ಒತ್ತಡವನ್ನು ತಹಬಂದಿಗೆ ಬರುತ್ತದೆ. ಆತಂಕಭಾವ ದೂರವಾಗುತ್ತದೆ. ಪ್ರಾಣಾಯಾಮ ಎಂದರೆ ಉಸಿರು ತೆಗೆದುಕೊಂಡು ಅದನ್ನು ವಿಸ್ತರಿಸಿಕೊಳ್ಳುವುದು.  ಉಸಿರಾಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದಾಗ ಯೋಚನಾಕಲ್ಮಷಗಳೂ ದೂರವಾಗುತ್ತವೆ.

ಪ್ರಾಣಾಯಾಮದಲ್ಲಿ ವಿವಿಧ ರೀತಿಗಳಿವೆ.

4. ಅಭ್ಯಂಜನ: ಮೈಗೆ ತೈಲವನ್ನು ಲೇಪಿಸಿಕೊಂಡು ಸ್ವತಃ ದೇಹವನ್ನು ಒತ್ತಿಕೊಳ್ಳುವುದು ಒತ್ತಡದ ನಿವಾರಣೆಗಿರುವ ಉತ್ತಮ ಉಪಾಯ. ತೈಲ ಲೇಪನ ಮನಸ್ಸು ಮತ್ತು ದೇಹವನ್ನು ಹಗುರಗೊಳಿಸುತ್ತದೆ. ನಿತ್ಯ ಅಭ್ಯಂಜನ ಅಭ್ಯಾಸ ಒಳ್ಳೆಯದು. ಇದರಿಂದ ಮುಪ್ಪು ಮುಂದೂಡಲ್ಪಡುತ್ತದೆ. ದೃಷ್ಟಿದೋಷ ನಿವಾರಣೆಯಾಗುತ್ತದೆ. ಸುಖನಿದ್ರೆಗೆ ಸಹಾಯಕವಾಗುತ್ತದೆ. ಮಕ್ಕಳಿಗೆ ಅಭ್ಯಂಜನ ಮಾಡಿಸಲು ತಂದೆ ತಾಯಿ, ಅಜ್ಜ–ಅಜ್ಜಿ ಸಹಾಯ ಮಾಡಬಹುದು. ಬೆಳೆದ ಮಕ್ಕಳು, ಹದಿಹರೆಯದವರು ಸ್ವತಃ ಅಭ್ಯಂಜನ ಮಾಡಿಕೊಳ್ಳಬಹುದು.

5. ಪಾದಾಭ್ಯಂಗ: ಕಾಲು ಮತ್ತು ಪಾದಗಳಿಗೆ ಎಣ್ಣೆ ಸವರಿ, ಅವನ್ನು ಒತ್ತುವುದು ಪಾದಾಭ್ಯಂಗ. ಇದನ್ನು ಸ್ವಯಂ ಮಾಡಿಕೊಳ್ಳಬಹುದು. ಇದರಿಂದ ಆಯಾಸ ಪರಿಹಾರವಾಗಿ ಉತ್ಸಾಹ ಮತ್ತೆ ಪ್ರಾಪ್ತವಾಗುತ್ತದೆ. ಇದನ್ನು ಮಕ್ಕಳಿಗೆ ತಂದೆ–ತಾಯಿ ಮಾಡಬಹುದು. ಬೆಳೆದ ಮಕ್ಕಳು ತಾವೇ ಮಾಡಿಕೊಳ್ಳಬಹುದು. ರಾತ್ರಿ ವೇಳೆ ಪಾದಾಭ್ಯಂಗಕ್ಕೆ ಉತ್ತಮ.

6. ಸ್ನಾನ: ಸ್ನಾನ ತ್ವರಿತ ಆಯಾಸ ಪರಿಹಾರಕ. ಶರೀರ ಮತ್ತು ಮನಸ್ಸಿಗೆ ಉಲ್ಲಾಸದಾಯಕ. ನಿತ್ಯ ಬೆಳಗು ಮತ್ತು ಸಂಜೆಯ ಸ್ನಾನ ದೇಹವನ್ನು ಹಗುರಗೊಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.

ಮೂಲಿಕೆಗಳು

ಆಯುರ್ವೇದ ಚಿಕಿತ್ಸೆಯಲ್ಲಿ ಹಲವಾರು ಮೂಲಿಕೆಗಳು ಮತ್ತು ಕಷಾಯಗಳನ್ನು ಬಳಸುತ್ತಾರೆ. ಬ್ರಾಹ್ಮೀ, ಮಂಡೂಕಪರ್ಣಿ, ಯಷ್ಟಿಮಧು, ಶಂಖಪುಷ್ಠಿಗಳನ್ನು ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಬಳಸುತ್ತಾರೆ. ಮಕ್ಕಳಿಗಾಗಿ ಇವು ಕಷಾಯರೂಪದಲ್ಲೂ ದೊರಕುತ್ತವೆ.

ಆಹಾರ ಪದ್ಧತಿ

ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವಲ್ಲಿ ಆಹಾರದ ಪಾತ್ರ ಮುಖ್ಯವಾದದ್ದು. ಹಾಲು, ತುಪ್ಪ, ಮಜ್ಜಿಗೆ, ಹಣ್ಣು, ತರಕಾರಿ, ಸೊಪ್ಪು – ಇಂಥವುಗಳ ಸೇವನೆ ಒಳ್ಳೆಯದು. ತಾಮಸಿಕ ಆಹಾರದಿಂದ ದೂರವಿರುವುದು ಮನಸ್ಸಿನ ತೇಜಸ್ಸನ್ನು ಉತ್ತುಂಗ ಮಾಡಲು ಸಹಾಯಕವಾಗಿದೆ. ತಾಮಸಿಕ ಆಹಾರವೆಂದರೆ ‘ರೆಡಿ ಟು ಈಟ್’ ಆಹಾರ, ರಾತ್ರಿ ತಯಾರಿಸಿ ಬೆಳಿಗ್ಗೆ ಸೇವಿಸುವುದು, ಹಳಸಿದ ತಿಂಡಿ, ಫ್ರಿಜ್‌ನಲ್ಲಿ ಇರಿಸಿದ ಆಹಾರ ಮುಂತಾದವು. ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಹಣ್ಣು–ತರಕಾರಿಗಳು ಎಂದರೆ ಎಲೆಕೋಸು, ಹೂಕೋಸು, ಬ್ರೊಕೋಲಿ, ಟೊಮೆಟೊ, ಕ್ಯಾರೆಟ್, ಮೂಸಂಬಿ, ಕಿತ್ತಳೆ, ಕಿವಿ, ಸ್ಟ್ರಾಬೆರಿ ಮುಂತಾದವುಗಳ ಸೇವನೆ  ಒಳ್ಳೆಯದು.

ಒಂದೆಲಗದ ಮಹತ್ವ ಯಾರಿಗೆ ಗೊತ್ತಿಲ್ಲ? ಒಂದೆಲಗದಿಂದ ತಯಾರಿಸಿದ ಚಟ್ನಿ, ತಂಬುಳಿ, ತಂಪಾದ ಪಾನೀಯ, ಸಲಾಡ್‌ಗಳನ್ನು ಸೇವಿಸಬಹುದು. ಗಸಗಸೆಯಿಂದ ತಯಾರಿಸಿದ ಪಾಯಸ ಮತ್ತು ಇತರ ಸಿಹಿ ಪದಾರ್ಥಗಳು ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡಲು ಉಪಯುಕ್ತವಾಗಿದೆ. ಉತ್ತಮ ಆಹಾರದ ಜೊತೆಗೆ ಸಾಕಷ್ಟು ನಿದ್ದೆಯೂ ಅಗತ್ಯ. ಸಾಕಷ್ಟು ವಿಶ್ರಾಂತಿ ಮಾರನೆ ದಿನದ ಚಟುವಟಿಕೆಗಳಿಗೆ ಶಕ್ತಿಯನ್ನು ತುಂಬುತ್ತದೆ.

ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬಹುದು. 

***

ಒತ್ತಡ ನಿವಾರಣೆಗೆ ಆಯುರ್ವೇದ ಚಿಕಿತ್ಸಾ ವಿಧಾನಗಳು

ಆಯುರ್ವೇದದಲ್ಲಿ ಹಿರಿಯರು ಮತ್ತು ಮಕ್ಕಳ ಒತ್ತಡ ನಿವಾರಣೆಗೆ ವಿವಿಧ ಚಿಕಿತ್ಸಾಕ್ರಮಗಳಿವೆ. ಅದರಲ್ಲಿ ಅಭ್ಯಂಗ ಶಿರೋಬಸ್ತಿ, ಶಿರೋಧಾರ, ಪಿಚು, ನ್ಯಸ್ಯ ಮುಖ್ಯವಾದವು.

ಶಿರೋಬಸ್ತಿ, ಶಿರೋಧಾರ ಚಿಕಿತ್ಸಾ ವಿಧಾನಗಳಿಂದ ಆಯಾಸ ಪರಿಹಾರವಾಗುತ್ತದೆ. ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಶಿರೋಪಿಚು ಸಹ ಇದೇ ರೀತಿಯ ಉಪಯೋಗಗಳನ್ನು ಹೊಂದಿದೆ. ಈ ಚಿಕಿತ್ಸಾ ವಿಧಾನಗಳಿಂದ ಕತ್ತಿನ ಸೆಳೆತ, ತಲೆನೋವು ನಿವಾರಣೆಯಾಗುತ್ತದೆ. ನೆನಪಿನ ಶಕ್ತಿ ಮತ್ತು ಏಕಾಗ್ರತೆಗಳು ಹೆಚ್ಚುತ್ತವೆ.

ನಾಸಿಕದ ಮೂಲಕ ಔಷಧ ಪ್ರಯೋಗವೇ ನಸ್ಯ. ಆಯುರ್ವೇದದಲ್ಲಿ ‘ನಾಸೋಹಿ ಶಿರಸಾ ದ್ವಾರಮ್’ ಎಂದು ಹೇಳಿದೆ. ಅಂದರೆ ಮೂಗು ಮೆದುಳಿಗೆ ದಾರಿ ಎಂದು ಅರ್ಥ. ಈ ಚಿಕಿತ್ಸಾ ವಿಧಾನವನ್ನು ಮಾನಸಿಕ ಸಮಸ್ಯೆಗಳ ಚಿಕಿತ್ಸೆಗಾಗಿ ಬಳಸಬಹುದು. ಸಾಮಾನ್ಯ ಶೀತಬಾಧೆಗೂ ಬಳಸಬಹುದು. ಮಕ್ಕಳ ಶೀತಸಮಸ್ಯೆಗೆ ಇದು ಸುಲಭ ಪರಿಹಾರ. ಇದರಿಂದ ಮೂಗು ‘ತೆರೆದು’ ಉಸಿರಾಟ ಸರಳವಾಗುತ್ತದೆ. ದಿನನಿತ್ಯ ಕ್ರಮವಾದ ನಸ್ಯಚಿಕಿತ್ಸೆ ಆಯಾಸ ಪರಿಹಾರಕ ಮತ್ತು ಒತ್ತಡ ನಿವಾರಕ. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಆದರೆ ನಸ್ಯ ಚಿಕಿತ್ಸಾ ಕ್ರಮವನ್ನು ಆಯುರ್ವೇದ ವೈದ್ಯರಿಂದಲೇ ಕಲಿಯಬೇಕು. ಏಳು ವರ್ಷದ ಕೆಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಎಂಬತ್ತು ವರ್ಷದ ಮೇಲಿನ ವೃದ್ಧರಿಗೆ ಈ ಚಿಕಿತ್ಸಾಕ್ರಮ ಸೂಕ್ತವಲ್ಲ. ಮೇಲೆ ಹೇಳಿರುವ ಚಿಕಿತ್ಸಾಕ್ರಮಗಳನ್ನು ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲೇ ಪಡೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry