ಎರಡು ಗಂಟೆಗಳ ನಿಯೋಜಿತ ನಾಟಕ

7

ಎರಡು ಗಂಟೆಗಳ ನಿಯೋಜಿತ ನಾಟಕ

Published:
Updated:
ಎರಡು ಗಂಟೆಗಳ ನಿಯೋಜಿತ ನಾಟಕ

ಸಿನಿಮಾ: ಹೀಗೊಂದು ದಿನ

ನಿರ್ಮಾಪಕ: ಚಂದ್ರಶೇಖರ್‌

ನಿರ್ದೇಶಕ: ವಿಕ್ರಮ್‌ ಯೋಗಾನಂದ

ತಾರಾಗಣ: ಸಿಂಧೂ ಲೋಕನಾಥ್‌, ಪ್ರವೀಣ್‌ ತೇಜ್‌, ಗುರುಪ್ರಸಾದ್‌, ಪದ್ಮಜಾ ರಾವ್‌, ನಾಗೇಂದ್ರ ಶಾ, ಶೋಭರಾಜ್‌, ಗಿರಿಜಾ ಲೋಕೇಶ್‌

ಮನೆಯಿಂದ ಅವಳು ತಲುಪಬೇಕಾದ ಸ್ಥಳಕ್ಕೆ ಹತ್ತು ನಿಮಿಷಗಳ ದಾರಿ. ಆದರೆ, ಅದಕ್ಕೆ ಅವಳು ತೆಗೆದುಕೊಂಡ ಅವಧಿ ಎರಡು ಗಂಟೆ!

ಇದು ‘ಹೀಗೊಂದು ದಿನ’ ಸಿನಿಮಾದ ಕಥೆಯ ಎಳೆ. ಈ ಮೇಲಿನ ಸಾಲನ್ನು ಬರೀ ಕಥಾನಾಯಕಿಗಷ್ಟೇ ಅಲ್ಲ, ನಿರ್ದೇಶಕರಿಗೂ ಅನ್ವಯಿಸಬಹುದು. ಚಿತ್ರ ನೋಡಿ ಮುಗಿಸಿದ ಮೇಲೆ ‘ಹತ್ತು ನಿಮಿಷದಲ್ಲಿ ಮುಗಿಸಬಹುದಾದ ದಾರಿಯನ್ನು ಎಷ್ಟೆಲ್ಲ ಪ್ರಯಾಸಪಟ್ಟು ಎರಡು ಗಂಟೆ ಸವೆಸಿದ್ದಾರಲ್ಲಾ’ ಎಂದೂ ಅನಿಸುತ್ತದೆ. ಇಷ್ಟೆಲ್ಲ ಆಗಿ ಕೊನೆಗೂ ನೆನಪಿನಲ್ಲುಳಿಯುವುದು ಚಿತ್ರದ ಕೊನೆಯ ಹತ್ತು ನಿಮಿಷಗಳು ಮಾತ್ರ.

ಹೆಗಲ ಬಳಸಿ ಸುತ್ತಿ ಸುಳಿಯುವ ಮಾಮೂಲಿ ಪ್ರೇಮಕಥೆ, ಕ್ಷಣಾರ್ಧದಲ್ಲಿ ಅಸಂಖ್ಯ ರೌಡಿಗಳನ್ನು ಹೊಡೆದು ಕೆಡವುವ ನಾಯಕನ ವಿಜೃಂಭಣೆ, ಹೆಣ್ಣಿನ ಅಂಗಸಿರಿ ಪ್ರದರ್ಶನವನ್ನೇ ಪ್ರಧಾನವಾಗಿರಿಸಿಕೊಂಡಿರುವ ಜನಪ್ರಿಯ ಮಾದರಿಯನ್ನು ಬಿಟ್ಟು ಭಿನ್ನವಾದ ಕಥೆಯ ಎಳೆಯನ್ನು ಆಯ್ದುಕೊಂಡಿರುವ ನಿರ್ದೇಶಕರ ಪ್ರಯತ್ನ ಮೆಚ್ಚಬೇಕು. ಹೆಣ್ಣಿಗೆ ವೃತ್ತಿಬದುಕು (ಮದುವೆಯಾದರೆ ನಾಯಕ ನಟಿಯ ವೃತ್ತಿಜೀವನ ಮುಗಿಯಿತು ಎಂಬ ಗಾಂಧಿನಗರದಲ್ಲಿನ ನಂಬಿಕೆಯನ್ನು ನೆನಪಿಸಿಕೊಳ್ಳಿ) ಮತ್ತು ವೈವಾಹಿಕ ಬದುಕು ಇವೆರಡೂ ವಿರುದ್ಧ ಆಯ್ಕೆ ಅಲ್ಲ, ಎರಡೂ ಪರಸ್ಪರ ಪೂರಕವೂ ಆಗಬಹುದು ಎಂಬುದನ್ನು ಹೇಳುವ ಸೂಕ್ಷ್ಮ ಸಂವೇದನೆಯೂ ಅವರಿಗಿದೆ. ಆದರೆ, ಆ ಭಿನ್ನತೆಯೊಂದೇ ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸಲಾರದು. ಕೊನೆಗೂ ಸಿನಿಮಾ ಮಾಧ್ಯಮದ ಭಾಷೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎನ್ನುವುದೇ ಅದರ ಗುಣಮಟ್ಟ ಮತ್ತು ಗೆಲುವನ್ನು ನಿರ್ಧರಿಸುತ್ತದೆ.

ಕಥಾನಾಯಕಿಗೆ ಸಿನಿಮಾ ನಾಯಕಿಯಾಗಬೇಕು ಎನ್ನುವ ಕನಸು. ಆದರೆ, ಅಮ್ಮ ಅದಕ್ಕೆ ಪರಮ ವಿರೋಧ. ಮಗಳಿಗೆ ಗಂಡು ಹುಡುಕಿ ಮದುವೆ ಮಾಡುವ ಅವಸರ ಅವರದ್ದು. ‘ಹೀಗೊಂದು ದಿನ’ ನಾಯಕಿಗೆ ಆಡಿಷನ್‌ ಇದೆ. ಅಂದೇ ಮನೆಗೆ ಹೆಣ್ಣು ನೋಡಲು ಬರುವ ಕಾರ್ಯಕ್ರಮವೂ ಇದೆ. ಕನಸಿನ ಬೆನ್ನು ಹತ್ತಬೇಕಾ; ಮನೆಯವರ ಒತ್ತಾಯಕ್ಕೆ ಮಣಿದು ಅಮ್ಮನಂತೆ ಇನ್ನೊಂದು ಗೃಹಿಣಿಯಾಗಿ ಬದುಕು ಸವೆಸಬೇಕಾ? ಅವಳು ಕನಸಿನ ಬೆನ್ನು ಹತ್ತಿ ಮನೆಯಲ್ಲಿ ಸುಳ್ಳು ಹೇಳಿ ಆಡಿಷನ್‌ಗೆ ಹೋಗುತ್ತಾಳೆ. ಅವಳ ಗುರಿಯ ದಾರಿಯ ಪಯಣವೇ ಈ ಸಿನಿಮಾದ ಕಥೆ.

ದಾರಿಯಲ್ಲಿ ನಾಯಕಿಗೆ ಎದುರಾಗುವ ಸಂಕಷ್ಟಗಳೆಲ್ಲ ಸಿನಿಮಾದ ಪರಿಧಿಯೊಳಗೂ ಸಹಜವಾಗಿರದೆ ‘ನಿಯೋಜಿತ ನಾಟಕ’ವೆನಿಸುತ್ತದೆ. ಒಂದಾದ ಮೇಲೊಂದರಂತೆ ಎದುರಾಗಿ ಅಷ್ಟೇ ಬೇಗ ಮರೆಯಾಗಿಬಿಡುವ ಯಾವ ಪಾತ್ರಗಳೂ ಮನಸಲ್ಲಿ ಉಳಿಯುವುದಿಲ್ಲ. ದಾರಿಯನ್ನು ರೂಪಕವಾಗಿರಿಸಿಕೊಂಡು ಬದುಕನ್ನು ಅರಿಯುವಂಥ ಕಥೆಯ ಕಟ್ಟುವ ನಿರ್ದೇಶಕರ ಪ್ರಯತ್ನಕ್ಕೆ ಅತಿಯಾದ ಪಾತ್ರಸೃಷ್ಟಿಯೇ ಮೊದಲ ಶತ್ರುವಾಗಿದೆ. ನಾಯಕಿ ಒಂದಾದ ಮೇಲೊಂದರಂತೆ ಗಾಡಿ ಬದಲಾಯಿಸುತ್ತ ಹೋಗುವುದು ಬೋರ್‌ ಹೊಡೆಸುತ್ತದೆ. ನಿರೂಪಣೆಯನ್ನು ಇನ್ನಷ್ಟು ತೀವ್ರಗೊಳಿಸುವ, ಹಲವು ಸಾಧ್ಯತೆಗಳನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ.

ಆಡಿಷನ್‌ನಲ್ಲಿರುವ ಗೆಳತಿ ಆಗಾಗ ಕಾಲ್‌ ಮಾಡಿ ‘ಇನ್ನೂ ಎಷ್ಟೊತ್ತಾಗತ್ತೆ? ಬೇಗ ಬಾ’ ಎನ್ನುತ್ತಳೇ ಇರುತ್ತಾಳೆ. ದ್ವಿತೀಯಾರ್ಧದ ಹೊತ್ತಿಗೆ ಅವಳ ಒತ್ತಾಯ ಪ್ರೇಕ್ಷಕರ ಮನಸ್ಸಿನ ಇಂಗಿತವೂ ಆಗಿ ಬದಲಾಗುತ್ತದೆ. ಕೊನೆಯಲ್ಲಿ  ಬರುವ ಪ್ರವೀಣ್‌ ತೇಜ್‌ ಮತ್ತು ಗುರುಪ್ರಸಾದ್‌ ಸಿನಿಮಾಕ್ಕೆ ಸಹನೀಯ ಅಂತ್ಯ ಕೊಟ್ಟಿದ್ದಾರೆ. ಸಿನಿಮಾದೊಳಗಿನ ನಿರ್ದೇಶಕರನ್ನು ಇಂಪ್ರೆಸ್‌ ಮಾಡಿದ ಹಾಗೆ ಸಿಂಧೂ, ಪ್ರೇಕ್ಷಕನನ್ನು ಇಂಪ್ರೆಸ್‌ ಮಾಡುವುದಿಲ್ಲ. ಅನ್‌ಕಟ್‌ ಸಿನಿಮಾ ಮಾಡುವ ಪರದಾಟದಲ್ಲಿ ಛಾಯಾಗ್ರಹಣ ಸೊರಗಿದೆ. ಹಿನ್ನೆಲೆ ಸಂಗೀತ ಹಲವು ಕಡೆಗಳಲ್ಲಿ ಕಿರಿಕಿರಿ ಹುಟ್ಟಿಸುತ್ತದೆ. ‘ಏನೋ ಏನೇನೋ...’ ಎಂಬ ಒಂದು ಹಾಡು ಇಷ್ಟವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry