ಬೇಸಿಗೆಗೆ ತಂಪು ಬಸಳೆಸೊಪ್ಪು...

7

ಬೇಸಿಗೆಗೆ ತಂಪು ಬಸಳೆಸೊಪ್ಪು...

Published:
Updated:
ಬೇಸಿಗೆಗೆ ತಂಪು ಬಸಳೆಸೊಪ್ಪು...

ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಮನೆಯ ಹಿಂದಿನ ತೋಟದಲ್ಲೋ, ಎದುರಿನ ತೋಟದಲ್ಲೋ ಬಸಳೆಚಪ್ಪರ ಕಾಣ ಸಿಗುವುದು ಸಾಮಾನ್ಯ ಸಂಗತಿ. ಬೇಸಿಗೆಯಲ್ಲಿ ಹೆಚ್ಚಾಗಿ ಬೆಳೆಯುವ ಈ ಸೊಪ್ಪು ದೇಹಕ್ಕೆ ತಂಪು ನೀಡುವುದಲ್ಲದೇ ಹೇರಳ ಪೌಷ್ಟಿಕಾಂಶವನ್ನೂ ಹೊಂದಿದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ ಇದು ತುಂಬಾ ಒಳ್ಳೆಯದು. ಬಸಳೆಯಿಂದ ರುಚಿಯಾದ ಬಗೆಬಗೆ ಅಡುಗೆಯನ್ನು ತಯಾರಿಸಬಹುದು. 

ಬಸಳೆ ಬೆಂದಿ

ಬೇಕಾಗುವ ಸಾಮಗ್ರಿಗಳು: ಬಸಳೆದಂಟು-ಸೊಪ್ಪು – 8ಕಪ್, ಈರುಳ್ಳಿ – 1, ಕಾಯಿತುರಿ – 2ಕಪ್, ತೊಗರಿಬೇಳೆ – 1/2ಕಪ್, ಕೊತ್ತಂಬರಿ – 2ಚಮಚ, ಸಾಸಿವೆ – 1ಚಮಚ, ಉದ್ದಿನಬೇಳೆ – 1ಚಮಚ, ಜೀರಿಗೆ –  1/2ಚಮಚ, ಅರಿಸಿನ – ಚಿಟಿಕೆ, ಕೆಂಪುಮೆಣಸು – 7, ಕೆಂಪುಮೆಣಸಿನಪುಡಿ – 1ಚಮಚ, ಹುಣಸೆಹಣ್ಣು – ಸಣ್ಣತುಂಡು, ಉಪ್ಪು –  ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ಎಣ್ಣೆ – 2ಚಮಚ, ಬೆಳ್ಳುಳ್ಳಿ – 4ಎಸಳು, ಒಣಮೆಣಸು – 1, ಸಾಸಿವೆ – 1ಚಮಚ

ತಯಾರಿಸುವ ವಿಧಾನ: ಬಸಳೆಸೊಪ್ಪನ್ನು ಸಣ್ಣಗೆ ಕತ್ತರಿಸಿ. ಅದರ ದಂಟನ್ನು ಮೂರು ಇಂಚು ಉದ್ದಕ್ಕೆ ಕತ್ತರಿಸಿ. ದಂಟು ಮತ್ತು ತೊಗರಿಬೇಳೆಯನ್ನು ಪ್ರತ್ಯೇಕವಾಗಿ ಬೇಯಿಸಿ. ಆಮೇಲೆ ಸೊಪ್ಪು, ಬೆಂದ ದಂಟು, ಈರುಳ್ಳಿ, ಕೆಂಪುಮೆಣಸಿನಪುಡಿ, ಹುಣಸೆಹಣ್ಣು, ಉಪ್ಪು ಎಲ್ಲವನ್ನೂ ಸೇರಿಸಿ ಬೇಯಿಸಿ. ಬಾಣಲೆಗೆ ಕೊತ್ತಂಬರಿ, ಉದ್ದಿನಬೇಳೆ, ಜೀರಿಗೆ, ಸಾಸಿವೆ, ಕೆಂಪುಮೆಣಸಿನಕಾಯಿ, ಎಣ್ಣೆ ಹಾಕಿ ಕೆಂಪಗೆ ಹುರಿದು ಕಾಯಿತುರಿಗೆ ಸೇರಿಸಿ. ಇದಕ್ಕೆ ಅರಿಸಿನಪುಡಿ ಸೇರಿಸಿ ನೀರು ಹಾಕಿ ರುಬ್ಬಿ. ಬೆಂದ ಬಸಳೆಗೆ ರುಬ್ಬಿದ ಮಿಶ್ರಣ, ತೊಗರಿಬೇಳೆ ಸೇರಿಸಿ ಬೇಕಾದಷ್ಟು ನೀರು ಹಾಕಿ ಕುದಿಸಿ. ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ. ಈಗ ಬಸಳೆ ಬೆಂದಿ ತಯಾರಾಯಿತು. ಈ ಬೆಂದಿ ಅನ್ನ, ಇಡ್ಲಿ, ದೋಸೆಯೊಂದಿಗೆ ತಿನ್ನಲು ಬಹಳ ಚೆನ್ನಾಗಿರುತ್ತದೆ.

**

ಬಸಳೆ ದೋಸೆ

ಬೇಕಾಗುವ ಸಾಮಗ್ರಿಗಳು: ಬೆಳ್ತಿಗೆ ಅಕ್ಕಿ – 2ಕಪ್, ಸಣ್ಣಗೆ ಹೆಚ್ಚಿದ ಬಸಳೆಸೊಪ್ಪು – 2ಕಪ್, ಕಾಯಿತುರಿ – 1/4ಕಪ್, ಈರುಳ್ಳಿ – 1, ಅರಿಸಿನ – 1/4ಚಮಚ, ಕೊತ್ತಂಬರಿ – 1ಚಮಚ, ಒಣಮೆಣಸು – 3, ಹುಳಿ – ಕಡಲೆಗಾತ್ರದ್ದು, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಯನ್ನು 2-3 ಗಂಟೆ ನೆನೆಸಿ ತೊಳೆದು ಕೊತ್ತಂಬರಿ, ಹುಳಿ, ಕಾಯಿತುರಿಯನ್ನು ಹಾಕಿ ನುಣ್ಣಗೆ ರುಬ್ಬಿ. ಸಣ್ಣಗೆ ಹೆಚ್ಚಿದ ಬಸಳೆ ಸೊಪ್ಪು, ಈರುಳ್ಳಿ ಚೂರು, ಅರಿಸಿನ, ಉಪ್ಪು ಸೇರಿಸಿ ಕಲೆಸಿ. ಕಾವಲಿ ಒಲೆಯ ಮೇಲಿಟ್ಟು ಬಿಸಿಯಾದಾಗ ಎಣ್ಣೆ ಹಚ್ಚಿ ಒಂದು ಸೌಟು ಹಿಟ್ಟು ಹಾಕಿ ಹರಡಿ ಮುಚ್ಚಿಡಿ. ನಂತರ ತುಪ್ಪ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ದೋಸೆಯನ್ನು ಕಾಯಿಚಟ್ನಿ, ಬೆಣ್ಣೆಯೊಂದಿಗೆ ಸವಿಯಿರಿ.

**

ಬಸಳೆ ತಂಬುಳಿ

ಬೇಕಾಗುವ ಸಾಮಗ್ರಿಗಳು: ಬಸಳೆಸೊಪ್ಪು – 1ಕಪ್, ಕಾಯಿತುರಿ – 1/2ಕಪ್, ಸಿಹಿಮಜ್ಜಿಗೆ – 1ಕಪ್, ತುಪ್ಪ – 1ಚಮಚ, ಜೀರಿಗೆ – 1/2ಚಮಚ, ಕಾಳುಮೆಣಸು – 6, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬಸಳೆಸೊಪ್ಪನ್ನು ಹೆಚ್ಚಿ ತುಪ್ಪದಲ್ಲಿ ಸ್ವಲ್ಪ ಹುರಿಯಿರಿ. ಕಾಳುಮೆಣಸು ಮತ್ತು ಜೀರಿಗೆಯನ್ನು ಹುರಿದು ಎಲ್ಲವನ್ನೂ ಕಾಯಿತುರಿಯೊಂದಿಗೆ ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಮಜ್ಜಿಗೆ ಬೆರೆಸಿ ತೆಳ್ಳಗೆ ಮಾಡಿ ಊಟದಲ್ಲಿ ಬಳಸಿ. ಈ ತಂಬುಳಿ ರಕ್ತಹೀನತೆಯಿಂದ ಬಳಲುವವರಿಗೆ ಒಳ್ಳೆಯದು.

**

ಬಸಳೆ ಪಲ್ಯ

ಬೇಕಾಗುವ ಸಾಮಗ್ರಿಗಳು: ಬಸಳೆಸೊಪ್ಪು – 30, ಆಲೂಗಡ್ಡೆ – 1, ಹಸಿಮೆಣಸು – 2, ಅಚ್ಚ ಖಾರದಪುಡಿ – 1/4ಚಮಚ, ಕಾಯಿತುರಿ – 1ಚಮಚ, ಸಾಸಿವೆ – 1ಚಮಚ, ಉದ್ದಿನಬೇಳೆ – 1ಚಮಚ, ಎಣ್ಣೆ – 3ಚಮಚ, ಒಣಮೆಣಸು – 1, ಈರುಳ್ಳಿ – 1, ಕೊತ್ತಂಬರಿಸೊಪ್ಪು – 2ಚಮಚ, ಬೆಲ್ಲ – ಕಡಲೆಗಾತ್ರ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬಸಳೆಸೊಪ್ಪು ಮತ್ತು ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನ ಚೂರು ಹಾಕಿ ಒಗ್ಗರಣೆ ಸಿಡಿಸಿ, ಕತ್ತರಿಸಿದ ಈರುಳ್ಳಿ, ಹಸಿಮೆಣಸು ಹಾಕಿ, ಹೆಚ್ಚಿದ ಆಲೂಗಡ್ಡೆ, ಬಸಳೆಸೊಪ್ಪು ಹಾಕಿ ಚಿನ್ನಾಗಿ ಕೆದಕಿ. ಸ್ವಲ್ಪ ನೀರು ಸೇರಿಸಿ ಅಚ್ಚ ಖಾರದ ಪುಡಿ, ಬೆಲ್ಲ, ಉಪ್ಪು ಹಾಕಿ ಮುಚ್ಚಿಡಿ. ಆಗಾಗ ಮುಚ್ಚಳ ತೆಗೆದು ಸೌಟಿನಿಂದ ಮಗುಚಿ. ಹೋಳು ಬೆಂದಾಗ ಕಾಯಿತುರಿಯನ್ನು ಹಾಕಿ ಇಳಿಸಿ, ಕೊತ್ತಂಬರಿಸೊಪ್ಪನ್ನು ಸೇರಿಸಿ ಮಗುಚಿ. ಅನ್ನ, ಚಪಾತಿ, ಪೂರಿಯ ಜೊತೆ ತಿನ್ನಲು ಇದು ಚೆನ್ನಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry