ನನ್ನ ಬದುಕಿನ ದೀವಿಗೆ ಅಮ್ಮ

7

ನನ್ನ ಬದುಕಿನ ದೀವಿಗೆ ಅಮ್ಮ

Published:
Updated:
ನನ್ನ ಬದುಕಿನ ದೀವಿಗೆ ಅಮ್ಮ

‘ಅಮ್ಮ’ – ಈ ಎರಡಕ್ಷರದಲ್ಲಿ ಅದೆಂಥ ಅನುಬಂಧ ಅಡಗಿದೆ. ಅಮ್ಮಾ... ಎನ್ನುವ ಭಾವನೆಯೇ ಅದ್ಭುತ ಅನುಭವ, ಚೈತನ್ಯ ಕೂಡ. ದೇವರು ಪ್ರತ್ಯಕ್ಷವಾಗಿ ಕಾಣದಿದ್ದರೂ ಅಮ್ಮನನ್ನು ಸೃಷ್ಟಿಸಿ ಆ ಕೊರತೆಯನ್ನು ನಿವಾರಿಸಿದ್ದಾನೆನ್ನುತ್ತಾರೆ.

ಅಮ್ಮನ ಬಗ್ಗೆ ಬರೆದಷ್ಟೂ ಇದೆ. ಕೊಹಿನೂರು ವಜ್ರ ನನ್ನಮ್ಮ. ಶ್ರೀಮಂತ ಕುಟುಂಬದಿಂದ ತನ್ನ ಹದಿನಾರನೇ ವಯಸ್ಸಿಗೆ ಮದುವೆಯಾಗಿ ಗಂಡನ ಮನೆಗೆ ಬಂದ ನನ್ನಮ್ಮ ಸಹನೆಯ ಸಾಕಾರ ಮೂರ್ತಿ. ಬದುಕಿನ ಕಷ್ಟಗಳೇನೆಂಬುದನ್ನು ಇನ್ನೊಬ್ಬರಿಂದ ತಿಳಿದುಕೊಳ್ಳುವ ಅವಶ್ಯಕತೆ ಅಮ್ಮನಿಗಿರಲಿಲ್ಲ. ಅವಳೆಂದೂ ಯಜಮಾನಿಕೆಯನ್ನು ಬಯಸಿದವಳಲ್ಲ. ಹಿರಿಯರ ಆಜ್ಞಾನುವರ್ತಿಯಾಗಿ ಬದುಕು ಸವೆಸಿದವಳು. ವೈಚಾರಿಕತೆಗಿಂತ ವಿಧೇಯತೆಗೆ, ವಾದಕ್ಕಿಂತ ಹೆಚ್ಚಾಗಿ ಮೌನಕ್ಕೆ ತನ್ನನ್ನು ತಾನು ಬಗ್ಗಿಸಿಕೊಂಡು ಬಾಳಿದವಳು. ನನಗೆ ನೆನಪಿದ್ದಂತೆ ಅಮ್ಮ ಯಾರಿಗೂ ಬೈದವಳಲ್ಲ, ಯಾರೊಂದಿಗೂ ಜಗಳ ಮಾಡಿದವಳಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವಳು ಅಜಾತಶತ್ರು. ಉಬ್ಬಸದ ತೊಂದರೆಯಿಂದಾಗಿ ಅಪ್ಪ ತೀರಿಕೊಂಡಾಗ ಅಮ್ಮನ ವಯಸ್ಸು ನಲವತೈದು ದಾಟಿರಲಿಲ್ಲ. ಆಗ ನನಗೆ ಆರು ವರ್ಷ. ಆದರೂ ಅಮ್ಮ ತನ್ನ ದುಃಖವನ್ನು ತೋರ್ಪಡಿಸಲಿಲ್ಲ. ಪರಿಸ್ಥಿತಿಗೆ ನಲುಗಲಿಲ್ಲ. ತಾನು ನಾಲ್ಕನೆಯ ತರಗತಿಯವರೆಗೆ ಮಾತ್ರ ಓದಿದ್ದರೂ ಮಕ್ಕಳನ್ನು ಓದಿಸಬೇಕು, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸದಾ ಹಂಬಲಿಸುತ್ತಿದ್ದಳು. ಹೆಣ್ಣುಮಕ್ಕಳು ಹೆಚ್ಚಾಗಿ ಕಾಲೇಜು ಮೆಟ್ಟಿಲು ಹತ್ತದ ಆ ದಿನಗಳಲ್ಲಿಯೂ ಅಮ್ಮ ನನ್ನ ಪರ ನಿಂತು ಅಣ್ಣನನ್ನು ಒಪ್ಪಿಸಿ ನನ್ನನ್ನು ಡಿಗ್ರಿಯವರೆಗೂ ಓದಿಸಿದ್ದಳು. ನಗುನಗುತ್ತಲೇ ತನ್ನ ಮಕ್ಕಳ ಏಳಿಗೆಗಾಗಿ ಶ್ರಮಿಸಿ, ಅಪ್ಪನಿಲ್ಲದ ಕೊರತೆಯನ್ನು ನೀಗಿಸಿದ ನನ್ನಮ್ಮನಿಗಿಂತ ಶ್ರೇಷ್ಠರು ಯಾರೂ ಇಲ್ಲ. ತನ್ನ ಸರ್ವಸ್ವವನ್ನೇ ಸಮರ್ಪಿಸಿ ಬದುಕಿನುದ್ದಕ್ಕೂ ಎಲೆಮರೆ ಕಾಯಿಯಂತೆ ದುಡಿದವಳು ಅವಳು.

‘ನೂಲಿನಂತೆ ಸೀರೆ, ತಾಯಿಯಂತೆ ಮಗಳು’ ಎನ್ನುವ ಗಾದೆಯೊಂದಿದೆ. ನಿಜ, ಅಮ್ಮನ ವ್ಯಕ್ತಿತ್ವವೇ ಮಗಳಲ್ಲಿ ರೂಪುಗೊಳ್ಳುತ್ತದೆ. ನನ್ನ ಜೀವನದ ಪ್ರತಿ ಹೆಜ್ಜೆಯ ಬಣ್ಣದಗೆಜ್ಜೆ ನನ್ನ ತಾಯಿ. ಹೌದು, ನನಗೆ ಜನ್ಮ ಕೊಟ್ಟವಳು ಅವಳು, ನನ್ನ ಶಕ್ತಿ ಅವಳು, ಬೆಲೆಕಟ್ಟಲಾಗದ ಪ್ರೀತಿ ಅವಳು, ಜೀವನಕ್ಕೆ ಸ್ಫೂರ್ತಿ ಅವಳು, ಮಾತು ಕಲಿಸಿದವಳು ಅವಳು, ನೀತಿ ಕಲಿಸಿದವಳು ಅವಳು, ನಡೆ-ನುಡಿ, ನಯ-ವಿನಯ, ಮನದ ಮಿಡಿತವನ್ನು ಕಲಿಸಿದವಳು ಅವಳೇ. ನನ್ನ ವ್ಯಕ್ತಿತ್ವದೊಂದಿಗೆ ಭವಿಷ್ಯವನ್ನೂ ರೂಪಿಸಿದ ಶಿಲ್ಪಿ ಅವಳು. ಕೂಡುಕುಟುಂಬದಲ್ಲಿ ಬೆಳೆದ ನನಗೆ ಜವಾಬ್ದಾರಿ ಏನೆಂಬುದೇ ತಿಳಿದಿರಲಿಲ್ಲ. ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗ ಜವಾಬ್ದಾರಿಯನ್ನು ಸಂಭಾಳಿಸಲು ಕಷ್ಟವಾದಾಗ ನನ್ನ ನೆರವಿಗೆ ಬಂದದ್ದು ಅಮ್ಮನ ಪತ್ರಗಳು. ಅಮ್ಮನ ಪ್ರೀತಿ ಪತ್ರಗಳ ಮೂಲಕ ಹರಿದು ಬರುತ್ತಿತ್ತು. ಕಾಗದದ ಒಂದಿಂಚೂ ಜಾಗವನ್ನು ವ್ಯರ್ಥ ಮಾಡದೇ ಪತ್ರ ಬರೆದು ಮಾರ್ಗದರ್ಶನ ನೀಡುತ್ತಿದ್ದಳು. ಅತ್ತೆಯ ಮನೆಯಲ್ಲಿ ಹೇಗಿರಬೇಕು? ಹೇಗೆ ನಡೆದುಕೊಳ್ಳಬೇಕು? ಯಾವ ರೀತಿ ವ್ಯವಹರಿಸಬೇಕು? ಹಣ ಉಳಿಸುವುದು ಹೇಗೆ? ಜಾಣತನದಿಂದ ಸಂಸಾರ ನಿಭಾಯಿಸುವುದು ಹೇಗೆ? – ಹೀಗೆ ಬದುಕಿನ ಪ್ರತಿಯೊಂದು ಘಟ್ಟಗಳಲ್ಲಿ ಬದುಕನ್ನು ನಡೆಸುವ ಬಗೆಯನ್ನು ಹೇಗೆಂಬುದನ್ನು ಹೇಳಿಕೊಟ್ಟ ಅಮ್ಮನ ಪಾಠಗಳೇ ನನಗೆ ಇಂದು ಸಹಾಯಕ್ಕೆ ಬರುತ್ತಿವೆ.

ಪ್ರಪಂಚದಲ್ಲಿ ಅಮ್ಮನಿಗೆ ಬದಲಾಗಿ ಸಿಗಬಹುದಾದ ಬೇರೊಂದು ವಸ್ತುವಿಲ್ಲ. ಅಮೃತವೂ ಅಮ್ಮನಿಗೆ ಸರಿ ತೂಗುವುದಿಲ್ಲ. ಜೀವನದ ಪ್ರತಿ ಘಟ್ಟದಲ್ಲಿಯೂ ಸಹಕರಿಸಿದವಳು ಅಮ್ಮ. ಬಾಲ್ಯದಲ್ಲಿ ಶಿಸ್ತಿನ ಸಿಪಾಯಿ ಅವಳು. ತಪ್ಪು ಹೆಜ್ಜೆಯನ್ನು ಇಟ್ಟಾಗ ಕೈಹಿಡಿದು ಸರಿದಾರಿಯಲಿ ನಡೆಸಿದ ಶಿಕ್ಷಕಿ ಅವಳು. ಅಮ್ಮನ ಕಟ್ಟುನಿಟ್ಟಿನ ಜೀವನ ಆಗ ಬೇಸರ ತಂದರೂ ಇಂದಿನ ನನ್ನ ಶಿಸ್ತಿನ ಜೀವನಕ್ಕೆ ಅದೇ ಅಡಿಪಾಯ. ಭಾವನೆಗಳ ಬುತ್ತಿಯಿಂದ ಪ್ರೀತಿಯ ಕೈತುತ್ತು ತಿನ್ನಿಸಿದವಳು ಅವಳು. ಹರೆಯದ ಆಪ್ತ ಗೆಳತಿಯೂ ಅವಳು. ಮಧ್ಯವಯಸ್ಸಿನ ಮಾರ್ಗದರ್ಶಿಯೂ ಅವಳು. ದಣಿದಾಗ ನೆರಳಾಗಿ ಕಾದವಳು ಅವಳು, ಸೋತು ದಿಕ್ಕೆಟ್ಟು ಕುಳಿತಾಗ ಸಾಂತ್ವನದ ಸಲಹೆ ನೀಡಿ ಬೆಳೆಸಿರುವಳು ನನ್ನಲ್ಲಿ ಆತ್ಮವಿಶ್ವಾಸ. ಒಟ್ಟಾರೆ ಹೇಳುವುದಾದರೆ ನನ್ನ ಬದುಕಿಗೆ ಕುಂಚವಾದವಳು ಅಮ್ಮ. ಅವಳೊಂದಿಗೆ ಕಳೆದ ಪ್ರತಿಕ್ಷಣವೂ ಅವಿಸ್ಮರಣೀಯವೇ. ಈಗಲೂ ಅಮ್ಮ ಎಂದಾಕ್ಷಣ... ಎದೆಯಾಳದಲ್ಲಿ ಸುರಿಸುವ ಬೆಚ್ಚಗಿನ ಭಾವ ಅವರ್ಣೀಯ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry