ಮಮತಾಮಯಿ...

7

ಮಮತಾಮಯಿ...

Published:
Updated:
ಮಮತಾಮಯಿ...

ಅಮ್ಮ... ಎಂದೊಡನೆ ನೆನಪಾಗುವುದು ತಲೆತುಂಬ ಸೆರಗು ಹೊತ್ತ, ಬೆಳ್ಳಿಕೂದಲುಗಳ ತೀಡಿ ಬಂಧಿಸಿದ, ವಯಸ್ಸಾಗಿರುವುದಕ್ಕೆ ಗುರುತಾದ ಚಾಳೀಸಿನ ಹಿಂದಿನ ನಯನಗಳಲಿ ನೂರಾರು ಕನಸುಗಳ ಹೊತ್ತ, ನಲವತ್ತಕ್ಕೆ ಐವತ್ತರಂತೆ ಕಾಣುವ ನನ್ನಮ್ಮ. ಹೌದು ಅವಳು ಮನುಷ್ಯಳಲ್ಲ! ದೇವರು ಕಳಿಸಿದ ದೈವಕೆ ಮನುಷ್ಯತ್ವದ ಹಂಗೇಕೆ?

ಕೂಡುಕುಟುಂಬದಲ್ಲಿ, ಹಳ್ಳಿಯಲ್ಲಿ ಬೆಳೆದ ' ಅವ್ವ' ಮಗನನ್ನು ಮಡಿಲಲಿ ಹೊತ್ತು, ಗಂಡ ಕೆಲಸ ಮಾಡುತ್ತಿದ್ದ ಊರಿಗೆ ಬಂದಾಗ ಹೊಸಲೋಕಕ್ಕೆ ಬಂದಂತಿತ್ತು. ಮೂವರು ತಮ್ಮಂದಿರು, ಇಬ್ಬರು ಮಕ್ಕಳು, ಮತ್ತಿಬ್ಬರು ಭಾವನ ಮಕ್ಕಳ ತುಂಬು ಸಂಸಾರದ ಬಂಡಿಯ ಹೊತ್ತ ಜೋಡೆತ್ತುಗಳಲ್ಲಿ ಒಬ್ಬಳು ಅವಳು. ಅಮ್ಮನ ಕನಸೆಂದರೆ ಮನೆ ಮಕ್ಕಳು ಮಾತ್ರ. ಒಂಭತ್ತು ಜನರಿದ್ದ ಸಂಸಾರದ ದೋಣಿ ಸಾಗಿಸಲು, 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬ ಮಾತಿನ ಪಾಲನೆ ಆಗಲೆಬೇಕಿತ್ತು. ಮಕ್ಕಳಿಗುಣಿಸಿ ಹಸಿವಿಲ್ಲವೆಂದು ನೀರು ಕುಡಿದಳೆಷ್ಟು ಸಲವೊ. ಮಕ್ಕಳ ನಗು, ಓದು, ಅಭಿವೃದ್ಧಿಯೆದುರು ತನ್ನಾಸೆಗಳೆಲ್ಲವನ್ನು ಒಲೆಸಂದಿಯಲ್ಲಿಟ್ಟಳು. ನಾವು ಉಂಡರೆ ಅಮ್ಮನ ಹೊಟ್ಟೆ ತುಂಬುತಿತ್ತು, ನಮ್ಮ ನಗು ಅವಳ ಮೊಗದಿ ಪ್ರತಿಫಲಿಸುತಿತ್ತು. ಪಕ್ಕದ ಮನೆಯವರು ಕೊಂಡ ಸೀರೆ, ಎದುರು ಮನೆಯವರ ಕೊರಳಹಾರ ಅಮ್ಮನನ್ನು ಸೆಳೆಯಲೆ ಇಲ್ಲ‌. ತನಗೆ ಅವುಗಳ ಮೇಲೆ ಅಪೇಕ್ಷೆಯೇ ಇಲ್ಲವೆಂಬ ಸುಳ್ಳಿನ ಮೇಲೆ ನಮ್ಮ ಭವಿಷ್ಯದ ಬುನಾದಿ ಹಾಕಿದ ಅಮ್ಮನಿಗೆ ಯಾರು ಸಾಟಿಯಾಗಬಲ್ಲರು?

ಸ್ವಾಭಿಮಾನದಿ ನಡೆಯುವ ದಾರಿ ತೋರಿದವಳು. ಇದ್ದುದರಲ್ಲಿ ಬದುಕುತ್ತಾ... ಪ್ರಯತ್ನದಿಂದ ಮುಂದೆ ಬರಬೇಕೆಂಬ ಪಾಠ ಕಲಿತದ್ದು ಶಾಲೆ ಕಲಿಯದ ಅಮ್ಮನಿಂದ. ಪ್ರತಿ ಖರೀದಿಯಲ್ಲೂ ಅವಶ್ಯಕತೆಯ ಮಾನದಂಡ ವಿಧಿಸಿದ್ದಳು. ಪ್ರತಿ ರೂಪಾಯಿಯನ್ನು ಯಾವುದೋ ಡಬ್ಬಿಯಲ್ಲಿಟ್ಟು ಕಾಯ್ದಿದ್ದು ಅಪ್ಪನ ಎಷ್ಟೊ ಕಷ್ಟಗಳಲ್ಲಿ ಕೈಹಿಡಿದಿತ್ತು. ಹರಿದ ಚಪ್ಪಲಿಯಲ್ಲಿ ಬಂದು ಹೊಸಚಪ್ಪಲಿ ಕೊಡಿಸಿದ್ದು ಅಪ್ಪನಾದರೆ, ಸೀರೆಯ ಉಡಿಯಲ್ಲಿ ಬೆಚ್ಚಗೆ ತೂಗಿ ಕೈತುತ್ತು ನೀಡಿದವಳು ಅಮ್ಮ. ಆದರೂ ಅಮ್ಮನ ದೈವತ್ವ ಹೆಚ್ಚು ಆಪ್ತವಾದದ್ದು ನಾನು ಅಮ್ಮನಾದ ಮೇಲೆಯೆ. ತನ್ನ ಬಾಲ್ಯವ ನೆನಪು ಮಾಡಿಕೊಳ್ಳುತ್ತಾ ಕಷ್ಟ ಸುಖಗಳ ಜೀವನಪಾಠ ಅರಹುವ ಅವಳ ಮಡಿಲ ಅನುಪಸ್ಥಿತಿ ಕಾಡುತ್ತಲೇ ಇರುತ್ತದೆ, ಅದೆಷ್ಟು ಸಲ ಫೋನಿನಲ್ಲಿ ಮಾತನಾಡಿದರು. 'ಸಾರಿಗೆ ಉಪ್ಪೆಷ್ಟು ಹಾಕಬೇಕು, ಉಪ್ಪಿನಕಾಯಿಗೆ ಬೆಲ್ಲವೆಷ್ಟು, ಯಾವ ಬಣ್ಣದ ಸೀರೆ ಕೊಳ್ಳಲಿ' ಹೀಗೆ ಅಮ್ಮನೆ ಉತ್ತರ ಎಲ್ಲದ್ದಕ್ಕೂ. ಬಾಹ್ಯಸೌಂದರ್ಯಕ್ಕಿಂತ ಮನುಷ್ಯನ ವ್ಯಕ್ತಿತ್ವ, ಒಳ್ಳೆಯ ಗುಣಗಳು ಬದುಕಿಗೆ ಮುಖ್ಯ ಎಂಬ ಬದುಕಿನ ಸಂದೇಶ ನನ್ನಮ್ಮನ ಮುಖಾಂತರವೇ ನನಗೆ ತಲುಪಿದ್ದು.

ಅಮ್ಮ ಎಂದೊಡನೆ ನೆನಪಾಗುವ ಕನ್ನಡಾಂಬೆ, ಭಾರತಮಾತೆಯಂತೆ ನನ್ನಮ್ಮ ಸಹ. ಅಮ್ಮನ ಜೀವನವೇ ನನಗೆ ಒಂದೊಳ್ಳೆ ಪುಸ್ತಕ. ಅವಳ ಹಾರೈಕೆ ನಮ್ಮನು ಕಾಯುವ ಶ್ರೀರಕ್ಷೆ ಇಂದಿಗೂ ಎಂದೆಂದಿಗೂ. ಜೀವದ ಜೊತೆಗೆ ಜೀವನ ನೀಡಿದ ಅಮ್ಮನು ಬುದ್ಧನ ನಗುವಂತೆ ಚಿರಸ್ಥಾಯಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry