ಆಹಾ ನನ್ನ ಮಲ್ಲಿಗೆ

7

ಆಹಾ ನನ್ನ ಮಲ್ಲಿಗೆ

Published:
Updated:
ಆಹಾ ನನ್ನ ಮಲ್ಲಿಗೆ

ನಮ್ಮ ಮನೆಯ ಮುಂಬಾಗಿಲಿನ ಪಕ್ಕ ಇಟ್ಟಿರುವ ಕುಂಡದಲ್ಲಿ ಪುಟ್ಟ ಮಲ್ಲಿಗೆ ಗಿಡವಿದೆ. ಮೊನ್ನೆಯಷ್ಟೇ ಈ ಗಿಡದಲ್ಲಿ ಈ ಋತುಮಾನದ ಮೊದಲ ಮೊಗ್ಗುಗಳು ಕಾಣಿಸಿದವು. ಅದನ್ನು ಕಂಡ ನನ್ನ ಮನಸಿಗೆ ಬದುಕಿನ ಮೂಲ ತತ್ವವೇ ಹೊಳೆಯಿತು.

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಬಾಡಿಗೆಮನೆಯಲ್ಲಿ ವಾಸವಾಗಿದ್ದೆವು. ಆಗ ನಮ್ಮ ಪಕ್ಕದ ಮನೆಯಲ್ಲೇ ಇದ್ದ ನನ್ನ ಗೆಳತಿಯ ಮನೆಯ ದುಂಡು ಮಲ್ಲಿಗೆ ಗಿಡದಲ್ಲಿ ರಾಶಿರಾಶಿ ಹೂ ಅರಳುತ್ತಿತ್ತು. ನನಗೆ ಮಲ್ಲಿಗೆ ಹೂವೆಂದರೆ ಬಹಳ ಇಷ್ಟ ಎಂದು ಗೊತ್ತಿದ್ದ ನನ್ನ ಗೆಳತಿ ಆಗ ತಾನೇ ಅರಳುತ್ತಿರುವ ಮೊಗ್ಗನ್ನು ಕಟ್ಟಿ ಸಂಜೆಯ ವೇಳೆಗೆ ಮುಡಿಯಲು ನೀಡುತ್ತಿದ್ದಳು.

ಮುಂದೆ ನಾವು ಸ್ವಂತ ಮನೆಗೆ ಹೋದಾಗ ಮಲ್ಲಿಗೆಯ ಗಿಡ ಬೆಳೆಸಬೇಕು ಎನ್ನುವ ಕನಸು ಕಂಡಿದ್ದೆ. ಮುಂದೆ ಸ್ವಂತ ಮನೆಗೆ ಶಿಫ್ಟ್ ಆದೆವು. ಅಲ್ಲಿ ಹಿಂದೆ ಬಾಡಿಗೆಗೆ ಇದ್ದವರು ಬೆಳೆಸಿದ್ದ ಹಲವು ಗಿಡಗಳನ್ನು ನೋಡಿ ಬಹಳ ಖುಷಿಯಾಯಿತು. ಅದರಲ್ಲಿ ನಾಲ್ಕೇ ನಾಲ್ಕು ಎಲೆಗಳನ್ನು ಹೊಂದಿದ್ದ ಒಂದು ಗುಂಡು ಮಲ್ಲಿಗೆ ಗಿಡವೂ ಇತ್ತು. ನಾನು ಶ್ರದ್ಧೆಯಿಂದ ಆರೈಕೆ ಮಾಡಿದೆ. ಗಿಡ ದೊಡ್ಡದಾಯಿತು. ಮನೆಯ ಸಜ್ಜದ ಮೇಲೆ ಹಬ್ಬಿಸಿದೆ. ಇನ್ನೂ ದೊಡ್ಡದಾದಾಗ ಮಹಡಿಗೆ ಹಬ್ಬಿಸಿದೆ.

ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ಗಿಡವನ್ನು ಅಲ್ಲಲ್ಲಿ ಕತ್ತರಿಸಿ ನೀರಿನಲ್ಲಿ ನೆನೆಸಿದ ಕಡಲೆ ಹಿಂಡಿಯನ್ನು ಗಿಡದ ಬುಡಕ್ಕೆ ಹಾಕುತ್ತಿದ್ದೆ.  ಗಿಡದ ತುಂಬಾ ಅರಳುತ್ತಿದ್ದ ಹೂವನ್ನು ಬಿಡಿಸಿ, ದಾರದಲ್ಲಿ ಕಟ್ಟಿ ಅಕ್ಕಪಕ್ಕದ ಮನೆಯವರಿಗೆ ಹಾಗೂ ಕಚೇರಿಯಲ್ಲಿನ ನನ್ನ ಗೆಳತಿಯರಿಗೆ ನೀಡುತ್ತಿದ್ದೆ. ಹಲವು ವರ್ಷ ಇದೇ ರೀತಿ ಹೂ ಮುಡಿದು ಸಂತೋಷ ಪಡುವುದರ ಜೊತೆಗೆ ಎಲ್ಲರಿಗೂ ಹಂಚಿ ಸಂಭ್ರಮಿಸಿದ್ದೆ.

ಕಾಲ ಒಂದೇ ಸಮ ಇರುವುದಿಲ್ಲ. ಒಂದು ವರ್ಷ ಇದ್ದಕ್ಕಿದ್ದಂತೆ ಮಲ್ಲಿಗೆ ಗಿಡಕ್ಕೆ ಗೆದ್ದಲು ಹಿಡಿದದ್ದು ಕಂಡುಬಂತು. ಮನೆಯ ಪಾಯಕ್ಕೆ ಅಂಟಿದಂತೆಯೇ ಗಿಡ ಇತ್ತು. ಗೆದ್ದಲಿನಿಂದ ಮನೆಗೆ ಅಪಾಯವಾಗಬಹುದು ಎಂದು ನನ್ನ ತಾಯಿಗೆ ಎನಿಸಿತು. ಅವರು ಗಿಡವನ್ನು ಬುಡ ಸಮೇತ ತೆಗೆಸಲು ನಿರ್ಧರಿಸಿದರು. ಗಿಡ ಕೀಳುವಾಗ ನನ್ನ ಮನಸ್ಸಿಗೆ ಬೇಸರವಾಗಿ ರೂಮಿನಲ್ಲಿ ಅಳುತ್ತಾ ಮಲಗಿದ್ದೆ. ಹೇಗಾದರೂ ಮಾಡಿ ಗಿಡವನ್ನು ಉಳಿಸಿಕೊಳ್ಳಲೇಬೇಕು ಎಂದು ಗಟ್ಟಿ ಸಂಕಲ್ಪ ಮಾಡಿಕೊಂಡೆ.

ಕಿತ್ತು ಹಾಕಿದ್ದ ಮಲ್ಲಿಗೆ ಬಳ್ಳಿಯ ಕೆಲ ಗೆಲ್ಲುಗಳನ್ನು ಕತ್ತರಿಸಿ ಕುಂಡವೊಂದರಲ್ಲಿ ನೆಟ್ಟೆ. ನೋಡನೋಡತ್ತಿದ್ದಂತೆ ಒಂದು ಗೆಲ್ಲು ಚಿಗುರತೊಡಗಿತು. ಅದೇ ಇದು. ನಮ್ಮ ಮನೆ ಮುಂಬಾಗಿಲಿನ ಬಳಿ ಕುಂಡದಲ್ಲಿ ನಗುತ್ತಿರುವ ಪುಟ್ಟ ಮಲ್ಲಿಗೆಯ ಗಿಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry