ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ನೆರವಿನ ಕರೆಗೆ ವಲಸಿಗರೇ ಉತ್ತರ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಸರಪಣಿ ವಲಸೆ’ ಎಂದು ಟೀಕಾಕಾರರು ಕರೆಯುವ ಈ ವ್ಯವಸ‍್ಥೆಯ ಬದಲಾವಣೆಯಿಂದ ಅಮೆರಿಕದ ಸಮಾಜದ ಮೇಲಾಗಬಹುದಾದ ಪರಿಣಾಮಗಳೇನು...?

ಇತ್ತೀಚಿನ ಒಂದು ದಿನ, ಸಂಜೆಯ ವೇಳೆ, ಕೊಠಡಿ ಸಂಖ್ಯೆ 413ರಲ್ಲಿರುವ 92ರ ವೃದ್ಧೆಯ ಮೈಗೆ ಇರ್ಮಾ ಮಂಗಾಯನ್‍ ಅವರು ಸೋಪು ಹಚ್ಚಿ ತೊಳೆಯುತ್ತಿದ್ದಾಗ ಪಕ್ಕದ ಕೊಠಡಿಯಿಂದ ಸಂದೇಶ ಬಂತು. ‘ಮಲಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲದ ಆ ವ್ಯಕ್ತಿ ಗಲೀಜು ಮಾಡಿಕೊಂಡಿದ್ದಾರೆ’ ಎಂಬುದು ಸಂದೇಶ. ಅಲ್ಲಿಗೆ ಹೋಗಿ ಇರ್ಮಾ ಅದನ್ನು ಸ್ವಚ್ಛ ಮಾಡಬೇಕು.

‘ಬೆಲ್‍ಮಾಂಟ್‍ ವಿಲೇಜ್‌’ ವೃದ್ಧಾಶ್ರಮದಲ್ಲಿನ ಈ ಕೆಲಸದ ಪಾಳಿ ಮುಗಿಯುವ ಮುನ್ನ ಇನ್ನೂ ಹತ್ತಾರು ಕೆಲಸಗಳನ್ನು ಮಾಡಬೇಕಿದೆ- ಗಂಡಸರು, ಹೆಂಗಸರನ್ನು ಅವರವರ ಗಾಲಿಕುರ್ಚಿಗಳಲ್ಲಿ ಕುಳ್ಳಿರಿಸಬೇಕು. ಊರುಗೋಲು, ವಾಕರ್‌ಗಳನ್ನು ಬಳಸಿ ನಡೆಯುವವರನ್ನು ಕೆಳಗಿನ ಮಹಡಿಯಲ್ಲಿರುವ ಊಟದ ಮನೆಗೆ ಕರೆತರಬೇಕು ಮತ್ತು ಒಂದು ಕಾಲದಲ್ಲಿ ಅವರವರೇ ಮಾಡಿಕೊಳ್ಳುತ್ತಿದ್ದ ಅಸಂಖ್ಯ ಕೆಲಸಗಳಲ್ಲಿ ಈ ವೃದ್ಧಾಶ್ರಮದ ನಿವಾಸಿಗಳಿಗೆ ನೆರವಾಗಬೇಕು.

ಇರ್ಮಾ, ಅಸಹಾಯಕರಿಗೆ ಆರೈಕೆ ಒದಗಿಸುವ ಕೆಲಸಗಾರ್ತಿ. ಅತ್ಯಂತ ತ್ರಾಸದಾಯಕವಾಗಿದ್ದರೂ ಬಹಳ ಕಡಿಮೆ ಸಂಬಳದ ವೃತ್ತಿ ಇದು. ಇಂತಹ ವೃತ್ತಿಪರರ ಅಗತ್ಯ ಅಮೆರಿಕದಲ್ಲಿ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಇರ್ಮಾಳಂತಹ ವಿದೇಶಿಯರು ಮತ್ತು ಕಡಿಮೆ ಕೌಶಲ ಹೊಂದಿರುವ ವ್ಯಕ್ತಿಗಳು ವೃತ್ತಿಯಲ್ಲಿ ತುಂಬಿಹೋಗಿದ್ದಾರೆ. ಇದೇ ವಿಚಾರ ಈಗ ವಲಸೆಯ ಬಗ್ಗೆ ರಾಷ್ಟ್ರೀಯ ಮಟ್ಟದ ಚರ್ಚೆಗೂ ಕಾರಣವಾಗಿದೆ.

ಅಮೆರಿಕದಲ್ಲಿ ಈಗ ಜಾರಿಯಲ್ಲಿರುವ ‘ಕುಟುಂಬದ ಸಂಬಂಧಿಕರಿಗೆ ವೀಸಾ’ ನೀಡುವ ವ್ಯವಸ್ಥೆಯನ್ನು ರದ್ದುಪಡಿಸುವ ಪ್ರಸ್ತಾವವನ್ನು ರಿಪಬ್ಲಿಕ್‍ ಪಕ್ಷದ ಸಂಸದರು ಬೆಂಬಲಿಸುತ್ತಿದ್ದಾರೆ. ‘ಸರಪಣಿ ವಲಸೆ’ ಎಂದು ಟೀಕಾಕಾರರು ಕರೆಯುವ ಈ ವ್ಯವಸ‍್ಥೆಯನ್ನು ಬದಲಾಯಿಸಲು ಟ್ರಂಪ್‍ ನೇತೃತ್ವದ ಸರ್ಕಾರ ಸಿದ್ಧವಾಗಿದೆ. ಒಟ್ಟು ವಲಸೆಯನ್ನು ಕಡಿಮೆ ಮಾಡುವುದು ಮತ್ತು ಕುಶಲಕರ್ಮಿಗಳಾದ ವಲಸಿಗರಿಗಷ್ಟೇ ಅವಕಾಶ ಕೊಡುವುದು ಹೊಸ ನೀತಿಯ ಉದ್ದೇಶ. ಡೆಮಾಕ್ರಟರು ಈ ಯೋಜನೆಗೆ ಅಡ್ಡಿಯಾಗಿ ನಿಂತಿದ್ದಾರೆ. ಆದರೆ, ಅನಧಿಕೃತವಾಗಿ ನೆಲೆಸಿರುವ ಯುವ ಜನರಿಗೆ ಅಧಿಕೃತ ಮಾನ್ಯತೆ ನೀಡಬೇಕಿದ್ದರೆ ಅವರು ಕುಶಲಕರ್ಮಿಗಳಾಗಿರಬೇಕು ಎಂದು ರಿಪಬ್ಲಿಕನ್ನರು ಹೇಳುತ್ತಿದ್ದಾರೆ.

‘ಡ್ರೀಮರ್ಸ್‍’ ಎಂದು ಕರೆಯಲಾಗುವ ಈ ಗುಂಪುಗಳಿಗೆ ಈವರೆಗೆ ಗಡಿಪಾರಿನಿಂದ ಇದ್ದ ರಕ್ಷಣೆ ಶೀಘ್ರವೇ ಮರೆಯಾಗಲಿದೆ. ಈ ವಿಚಾರದಲ್ಲಿ ಒಪ್ಪಂದವೊಂದಕ್ಕೆ ಬರುವ ಹಲವು ಪ್ರಯತ್ನಗಳು ವಿಫಲವಾಗಿವೆ. ಬಜೆಟ್‍ ಮಸೂದೆಯನ್ನು ಸಂಸತ್ತು ಅಂಗೀಕರಿಸಿದಾಗಲೂ ವಲಸೆ ಸುಧಾರಣೆಯ ಭಿನ್ನಾಭಿಪ್ರಾಯ ಶಮನ ಸಾಧ್ಯವಾಗಲಿಲ್ಲ.

‘ಪ್ರತಿಭೆ ಆಧರಿತವಾದ ವಲಸೆ ವ್ಯವಸ‍್ಥೆ ರೂಪಿಸುವುದಕ್ಕೆ ಇದು ಸಕಾಲ. ಆಧುನಿಕ ಅರ್ಥ ವ್ಯವಸ್ಥೆಗೆ ಅದುವೇ ಅರ್ಥಪೂರ್ಣ’ ಎಂಬ ಹೇಳಿಕೆಯನ್ನು ಶ್ವೇತಭವನವು ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ‘ಆರ್ಥಿಕವಾಗಿ ತಮ್ಮನ್ನು ಪೊರೆಯುವ ಸಾಮರ್ಥ್ಯ ಇರುವವರು ಮತ್ತು ಅಮೆರಿಕದ ಸಮಾಜಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡಬಲ್ಲವರಿಗಷ್ಟೇ ಅಮೆರಿಕಕ್ಕೆ ಬರುವುದಕ್ಕೆ ಅವಕಾಶ ಕೊಡಬೇಕು’ ಎಂದೂ ಈ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಈ ವಾದವನ್ನು ಅರ್ಥಶಾಸ್ತ್ರಜ್ಞರು ಒಪ್ಪಬೇಕೆಂದಿಲ್ಲ. ಕುಟುಂಬ ಆಧರಿತವಾದ ವಲಸೆ ವ್ಯವಸ್ಥೆಯನ್ನು ನಿರ್ಬಂಧಿಸುವುದರ ಹಿಂದಿನ ವಿವೇಕವನ್ನೇ ವಲಸೆ ಮತ್ತು ಶ್ರಮ ವಿನ್ಯಾಸದ ಬಗ್ಗೆ ಅಧ್ಯಯನ ಮಾಡಿರುವವರು ಪ್ರಶ್ನಿಸುತ್ತಿದ್ದಾರೆ. ಈ ವ್ಯವಸ್ಥೆಯಿಂದಲೇ ಕಡಿಮೆ ಕೌಶಲದ ಕಾರ್ಮಿಕರು ಪೂರೈಕೆಯಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮೆಕ್ಸಿಕೊ ಮತ್ತು ಫಿಲಿಪ್ಪೀನ್ಸ್‌ನಂತಹ ದೇಶಗಳಿಂದ ಬರುತ್ತಾರೆ. 47 ವರ್ಷದ ಇರ್ಮಾ ಕೂಡ ಹೀಗೆಯೇ ಬಂದವರು.

‘ಭವಿಷ್ಯದ ಯಾವುದೇ ಚಿತ್ರಣವನ್ನಾದರೂ ತೆಗೆದುಕೊಳ್ಳಿ, ಉನ್ನತ ಕೌಶಲದ ವ್ಯಕ್ತಿಗಳಿಗಿಂತ ಕಡಿಮೆ ಕೌಶಲದ ವ್ಯಕ್ತಿಗಳ ಅಗತ್ಯವೇ ಅಮೆರಿಕಕ್ಕೆ ಹೆಚ್ಚು’ ಎಂದು ವಾಷಿಂಗ್ಟನ್‍ನ ಸೆಂಟರ್ ಫಾರ್ ಗ್ಲೋಬಲ್‍ ಡೆವಲಪ್‍ಮೆಂಟ್‍ನ ಅರ್ಥಶಾಸ್ತ್ರಜ್ಞ ಮೈಕೆಲ್ ‍ಕ್ಲೆಮೆನ್ಸ್ ‍ಹೇಳುತ್ತಾರೆ. ‘ಕಡಿಮೆ ಕೌಶಲದ ಕಾರ್ಮಿಕರ ಅಗತ್ಯದ ಪ್ರಮಾಣ ಎಷ್ಟು ದೊಡ್ಡದಾಗಿದೆ ಎಂದರೆ ಸ್ಥಳೀಯ ಕಾರ್ಮಿಕರು ಮನಸು ಮಾಡಿದರೂ ಅದನ್ನು ಪೂರೈಸಲು ಸಾಧ್ಯವಿಲ್ಲ’ ಎಂಬುದು ಕ್ಲೆಮೆನ್ಸ್ ಅಭಿಪ್ರಾಯ.

ಅಮೆರಿಕದ ಕಾರ್ಮಿಕ ಅಂಕಿ ಅಂಶ ಘಟಕವು ಇತ್ತೀಚೆಗೆ ವಿಶ್ಲೇಷಣೆಯೊಂದನ್ನು ನಡೆಸಿತ್ತು. ಅದರ ಪ್ರಕಾರ, 2026ರ ಹೊತ್ತಿಗೆ ಅತ್ಯಂತ ಹೆಚ್ಚು ಬೇಡಿಕೆ ಇರುವ 10 ವೃತ್ತಿಗಳಲ್ಲಿ ಮೂರಕ್ಕೆ ಮಾತ್ರ ಕಾಲೇಜು ವಿದ್ಯಾಭ್ಯಾಸ ಅಥವಾ ಪದವಿಯ ಅಗತ್ಯ ಇದೆ. ಡಿಜಿಟಲ್‍ ಅಥವಾ ದತ್ತಾಂಶ ಆಧರಿತ ವೃತ್ತಿಗಳು, ಸಾಫ್ಟ್‌ವೇರ್‌ ಅಭಿವೃದ‍್ಧಿಪಡಿಸುವಿಕೆ, ಅಂಕಿಅಂಶ ಮತ್ತು ಗಣಿತಶಾಸ್ತ್ರ ಸಂಬಂಧಿ ವೃತ್ತಿಗಳು ಈ ಮೂರು ವೃತ್ತಿಗಳಲ್ಲಿ ಸೇರುತ್ತವೆ.

ವೈಯಕ್ತಿಕ ಆರೈಕೆ ಮತ್ತು ಮನೆಯಲ್ಲಿ ಆರೈಕೆ ಒದಗಿಸುವಿಕೆ ಅತಿಹೆಚ್ಚು ಬೇಡಿಕೆ ಇರುವ ಹೊಸ ವೃತ್ತಿ ವರ್ಗಗಳಾಗಿವೆ. ಈ ಎರಡು ವೃತ್ತಿಗಳಿಗೆ 12 ಲಕ್ಷ ಕಾರ್ಮಿಕರು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರತಿದಿನ ಸುಮಾರು 10 ಸಾವಿರ ಬೇಬಿ ಬೂಮರ್‌ಗಳು (ಬೇಬಿ ಬೂಮರ್ ಎಂದರೆ ಎರಡನೇ ಜಾಗತಿಕ ಮಹಾಯುದ್ಧದ ನಂತರದ ದಿನಗಳಲ್ಲಿ ಜನನ ಪ್ರಮಾಣ ಏರಿಕೆಯಾಗಿದ್ದ ಕಾಲದಲ್ಲಿ ಹುಟ್ಟಿದವರು.

1946ರಿಂದ 1964ರ ನಡುವಣ ಅವಧಿ ಇದು) 65 ವರ್ಷ ದಾಟುತ್ತಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನವರ್ಗಕ್ಕೆ ದೀರ್ಘಾವಧಿ ಆರೈಕೆ ಅಗತ್ಯ ಇದೆ ಎಂದು ಫ್ಯೂ ಸಮೀಕ್ಷೆ ಹೇಳಿದೆ. ಆದರೆ, ಮನೆಯಲ್ಲಿ ಆರೈಕೆ ಒದಗಿಸುವ ಮತ್ತು ವೃದ್ಧರಿಗೆ ಆರೈಕೆ ಒದಗಿಸುವ ಸಂಸ್ಥೆಗಳಿಗೆ ಕೆಲಸಕ್ಕೆ ಈಗಲೇ ಜನ ಸಿಗುತ್ತಿಲ್ಲ.

‘ನಮ್ಮ ಕೆಲಸಗಾರರಲ್ಲಿ ಒಬ್ಬರಿಗೆ ಅನಾರೋಗ್ಯವಾದರೆ ಅಥವಾ ತುರ್ತು ಅಗತ್ಯ ಏರ್ಪಟ್ಟರೆ ಬದಲಿ ವ್ಯವಸ್ಥೆ ಮಾಡುವುದು ನಮಗೆ ಸಾಧ್ಯವೇ ಇಲ್ಲದ ಸ್ಥಿತಿ ಇದೆ’ ಎಂದು ಬಾಸ್ಟನ್‍ ಪ್ರದೇಶದಲ್ಲಿರುವ ಬೆಸ್ಟ್ ಆಫ್ ಕೇರ್ ಸಂಸ್ಥೆಯ ಮುಖ್ಯಸ್ಥ ಕೆವಿನ್‍ ಸ್ಮಿತ್‍ ಹೇಳುತ್ತಾರೆ. ಮೆಸಾಚುಸೆಟ್ಸ್‌ನಲ್ಲಿರುವ ಹೈಟಿ ಮತ್ತು ಬ್ರೆಜಿಲ್‍ನ ವಲಸೆ ಕಾರ್ಮಿಕರನ್ನೇ ಮುಖ್ಯವಾಗಿ ಅವರು ನೇಮಿಸಿಕೊಳ್ಳುತ್ತಿದ್ದಾರೆ.

2017ರಲ್ಲಿ ವೈಯಕ್ತಿಕ ಆರೈಕೆ ಒದಗಿಸುವವರು ಮತ್ತು ಮನೆ ಆರೋಗ್ಯ ಸಹಾಯಕರಲ್ಲಿ ಶೇ 26ರಷ್ಟು ಮಂದಿ ವಿದೇಶಿಯರು ಎಂದು ಕಾನ್ಫರೆನ್ಸ್ ಬೋರ್ಡ್‍ನ ಹಿರಿಯ ಅರ್ಥಶಾಸ್ತ್ರಜ್ಞ ಬ್ರಿಯಾನ್‍ ಶೈಟ್ಕಿನ್‍ ಹೇಳುತ್ತಾರೆ. ನ್ಯೂಯಾರ್ಕ್‌ನಲ್ಲಿ ಇಂತಹ ಸೇವೆ ಒದಗಿಸುವ ಶೇ 62ರಷ್ಟು ಮಂದಿ ವಿದೇಶಿಯರು. ಕ್ಯಾಲಿಫೋರ್ನಿಯಾ, ಮೆಸಾಚುಸೆಟ್ಸ್ ಮತ್ತು ನ್ಯೂಜೆರ್ಸಿಯಲ್ಲಿ ಈ ಆರೈಕೆ ಒದಗಿಸುವ ಕಾರ್ಮಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಿದೇಶಿಯರೇ ಇದ್ದಾರೆ.

ಮೆಕ್ಸಿಕೊದಿಂದ ವಲಸೆ ಬಂದಿರುವ ಲ್ಯೂಪ್‍ ಮರ್ಕಾಡೊ ಅವರು 24 ಹವರ್ ಹೋಮ್‍ ಕೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಬುದ್ಧಿಮಾಂದ್ಯರ ಜತೆ ಕೆಲಸ ಮಾಡಿ ಅವರ ಅಕ್ಕರೆಯನ್ನು ಸಂಪಾದಿಸಿಕೊಂಡ ಮಮತೆಯ ಕೆಲಸಗಾರ್ತಿ ಲ್ಯೂಪ್‍. ಆರಂಭದಲ್ಲಿ ತಮ್ಮತ್ತ ಅವರು ಆಹಾರವವನ್ನು ಎಸೆಯುತ್ತಿದ್ದರು ಮತ್ತು ಬಯ್ಯುತ್ತಿದ್ದರು. ಆದರೆ ಈ ಚಿತ್ರಣ ಬದಲಾಯಿತು ಎಂದು ಲ್ಯೂಪ್‍ ಹೇಳುತ್ತಾರೆ. ತಮ್ಮ ಮೊಬೈಲ್‍ನಲ್ಲಿ ಮಹಿಳೆಯೊಬ್ಬರ ಚಿತ್ರ ತೋರಿಸುತ್ತಾ ‘ಇವರು ಇತ್ತೀಚೆಗೆ ನನ್ನ ಕೈಹಿಡಿದೇ ಪ್ರಾಣ ಬಿಟ್ಟರು’ ಎಂದು ಹನಿಗಣ್ಣಾದರು.

ಇತ್ತೀಚಿನ ಒಂದು ಸಂಜೆ, 92ರ ಆಲಿವ್‍ ತನಕಾರನ್ನು ಲ್ಯೂಪ್‍ ಆರೈಕೆ ಮಾಡುತ್ತಿದ್ದರು. ‘ನನ್ನನ್ನು ಅತಿಯಾಗಿ ನೋಡಿಕೊಂಡು ಹಾಳು ಮಾಡಿದ್ದು ಇವಳೇ’ ಎಂದು ತನಕಾ ಪ್ರೀತಿಯಿಂದ ಗದರಿಸಿದರು. ತಮ್ಮ ಯೌವನದಲ್ಲಿ ಡಾನ್ಸರ್ ಆಗಿದ್ದ ತನಕಾ ಈಗ ವಿಧವೆ. ಅವರಿಗೆ ಈಗ ದಿನದ 24 ಗಂಟೆಯೂ ನಿಗಾ ಬೇಕು.

ಅಮೆರಿಕಕ್ಕೆ ಲ್ಯೂಪ್‍ ಅಕ್ರಮವಾಗಿಯೇ ಬಂದವರು. ಅಧ್ಯಕ್ಷ ರೊನಾಲ್ಡ್ ರೇಗನ್‍ 1986ರಲ್ಲಿ ಹೊರಡಿಸಿದ ಕ್ಷಮಾದಾನ ಆದೇಶ ಲ್ಯೂಪ್ ‍ಕೈಹಿಡಿಯಿತು. ಗ್ರೀನ್‍ ಕಾರ್ಡ್ ಪಡೆದುಕೊಂಡ ಅವರಿಗೆ ಕ್ರಮೇಣ ಪೌರತ್ವವೂ ಸಿಕ್ಕಿತು.

‘ಬಹಳ ದುಡ್ಡೇನೂ ಸಿಗುವುದಿಲ್ಲ. ಆದರೆ ಈ ಕೆಲಸ ನನಗೆ ಇಷ್ಟ’ ಎಂದು ಲ್ಯೂಪ್‍ ಹೇಳುತ್ತಾರೆ. ಒಂದು ತಾಸಿನ ಕೆಲಸಕ್ಕೆ ಅವರಿಗೆ ಸಿಗುವುದು 12 ಡಾಲರ್ (ಸುಮಾರು ₹ 780). ರಜಾದಿನಗಳಲ್ಲಿಯೂ ಕೆಲಸ ಮಾಡಿ ಹೆಚ್ಚುವರಿ ಖರ್ಚನ್ನು ಅವರು ಸರಿದೂಗಿಸಿಕೊಳ್ಳುತ್ತಾರೆ.

ಲ್ಯೂಪ್‍ ಕೆಲಸ ಮಾಡುವ ಕ್ಷೇತ್ರದಲ್ಲಿ ಮತ್ತು ನಿರ್ಮಾಣ, ಕೃಷಿ ಹಾಗೂ ಹೋಟೆಲುಗಳ ಅಡುಗೆ ಮನೆಗಳಲ್ಲಿ ವಲಸೆ ಕಾರ್ಮಿಕರೇ ಹೆಚ್ಚಾಗಿ ಇದ್ದಾರೆ; ಅಮೆರಿಕನ್ನರ ಕೆಲಸಗಳನ್ನು ಅವರು ಕಸಿದುಕೊಂಡಿದ್ದಾರೆ ಎಂಬ ಭಾವನೆ ಇದೆ. ಈ ವೃತ್ತಿಗಳಿಗೆ ನೀಡುವ ಸಂಬಳ ಬಹಳ ಕಡಿಮೆ ಎಂಬ ಕಾರಣಕ್ಕಾಗಿಯೇ ಅಮೆರಿಕನ್ನರು ಈ ಕೆಲಸಗಳಿಗೆ ಸೇರುವುದಿಲ್ಲ ಎಂದು ವಲಸೆಗೆ ನಿರ್ಬಂಧ ಹೇರಬೇಕು ಎಂಬುದರ ಪ್ರತಿಪಾದಕರು ಹೇಳುತ್ತಿದ್ದಾರೆ.

ಬೇರೆ ಕೆಲವು ಕ್ಷೇತ್ರಗಳಲ್ಲಿಯೂ ಕಾರ್ಮಿಕರ ತೀವ್ರ ಕೊರತೆ ಇದೆ. ಇಟ್ಟಿಗೆ ಗೂಡು, ಚಾವಣಿ ದುರಸ್ತಿ, ಎಲೆಕ್ಟ್ರಿಷಿಯನ್‍ ಕೆಲಸಗಳನ್ನು ಮಾಡುವ ಶೇ 70ರಷ್ಟು ಕಂಪನಿಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ ಎಂದು ಅಸೋಸಿಯೇಟೆಡ್‍ ಜನರಲ್‍ ಕಾಂಟ್ರಾಕ್ಟರ್ಸ್‍ ಆಫ್‍ ಅಮೆರಿಕ ಸಂಸ್ಥೆಯು ಕಳೆದ ಸೆಪ್ಟೆಂಬರ್‌ನಲ್ಲಿ ನಡೆಸಿದ ಸಮೀಕ್ಷೆ ಹೇಳಿದೆ. ಕಾರ್ಮಿಕರ ಅಂಕಿಅಂಶ ಘಟಕದ ಪ್ರಕಾರ, ಕಳೆದ ಆಗಸ್ಟ್‌ನಲ್ಲಿ ಹೋಟೆಲ್‍ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಖಾಲಿ ಇದ್ದ ಕೆಲಸಗಳ ಸಂಖ್ಯೆ 7.42 ಲಕ್ಷ. ಇದು ಈವರೆಗಿನ ಗರಿಷ್ಠ ಮಟ್ಟ.

ಕಡಿಮೆ ಕೌಶಲದ ವಲಸೆ ಕಾರ್ಮಿಕರು ಲಭ್ಯವಾಗದಂತೆ ಮಾಡಿದರೆ ಉದ್ಯೋಗದಾತರು ಸಂಬಳ ಹೆಚ್ಚು ಮಾಡದೆ ಬೇರೆ ದಾರಿ ಇರುವುದಿಲ್ಲ. ದೀರ್ಘ ಕಾಲದಿಂದ ನಿರುದ್ಯೋಗಿಗಳಾಗಿರುವ ಅಮೆರಿಕನ್ನರು ಹೆಚ್ಚಿನ ಸಂಬಳದ ಈ ಕೆಲಸಕ್ಕೆ ಹೋಗಬಹುದು. ಎಲ್ಲ ನಿರುದ್ಯೋಗಿಗಳು ಅಥವಾ ನಿರುದ್ಯೋಗಿಗಳ ಒಂದು ಭಾಗ ಕಾರ್ಮಿಕರಾಗಿ ಪರಿವರ್ತನೆಯಾಗಬಹುದು ಎಂದು ವಲಸೆ ಅಧ್ಯಯನ ಕೇಂದ್ರದ ಸಂಶೋಧನಾ ವಿಭಾಗದ ನಿರ್ದೇಶಕ ಸ್ಟೀವನ್‍ ಕ್ಯಾಮರಟ್‌ ಹೇಳುತ್ತಾರೆ.

ವಲಸೆಯ ಮೇಲೆ ನಿರ್ಬಂಧ ಹೇರುವುದನ್ನು ಈ ಸಂಸ್ಥೆ ಬೆಂಬಲಿಸುತ್ತದೆ. ಈಗ ಕೆಲಸ ಮಾಡದಿರುವ ಹಲವು ಮಂದಿ, ಸಂಬಳ ಹೆಚ್ಚಾದರೆ ಕಡಿಮೆ ಕೌಶಲವಷ್ಟೇ ಬೇಕಿರುವ ಈ ಕೆಲಸಗಳನ್ನು ಮಾಡಬಹುದು. ಆದರೆ ಇದೂ ಬೇಡಿಕೆಯನ್ನು ಪೂರೈಸಲು ಸಾಕಾಗದು ಎಂದು ಇನ್ನೊಬ್ಬ ಅರ್ಥಶಾಸ್ತ್ರಜ್ಞ ಕ್ರಿಸ್‍ ಟಿಲಿ ಅಭಿಪ್ರಾಯಪಡುತ್ತಾರೆ.

ಸಂಬಳ ಒಂದೇ ಇಲ್ಲಿ ಇರುವ ಮುಖ್ಯ ವಿಚಾರ ಅಲ್ಲ. ಸಾಮಾಜಿಕ ಸ್ಥಾನ ಮತ್ತು ನಿರೀಕ್ಷೆಗಳೂ ಇವೆ. ಬೇರೊಬ್ಬರನ್ನು ಸ್ಪರ್ಶಿಸಿ ಮಾಡುವ ಕೆಲಸವನ್ನು ಎಲ್ಲರೂ ಬಯಸುವುದಿಲ್ಲ; ಕೊಳಕು ಕೆಲಸಗಳನ್ನು ಮಾಡಲು ಬಯಸದ ಬಹಳಷ್ಟು ಮಂದಿ ಇದ್ದಾರೆ ಎಂದೂ ಅವರು ಹೇಳುತ್ತಾರೆ.

ಯಾರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕು ಎಂಬುದರಲ್ಲಿ ದೇಶವೊಂದು ಬಹಳ ಜಾಗರೂಕವಾಗಿರಬೇಕು ಎಂಬ ಅಭಿಪ್ರಾಯದೊಂದಿಗೆ ವಲಸೆಯನ್ನು ನಿರ್ಬಂಧಿಸುವುದನ್ನು ಬೆಂಬಲಿಸುವವರು ಇತರ ಕಾರಣಗಳನ್ನೂ ನೀಡುತ್ತಾರೆ. ಟ್ರಂಪ್‍ ನೇತೃತ್ವದ ಸರ್ಕಾರವು ವಲಸೆಯನ್ನು ಒಂದು ರಾಷ್ಟ್ರೀಯ ಭದ್ರತಾ ವಿಷಯವನ್ನಾಗಿ ಪರಿವರ್ತಿಸಿದೆ. ಕುಟುಂಬ ಸಂಬಂಧಗಳ ಮೂಲಕ ಅಮೆರಿಕಕ್ಕೆ ಬಂದ ಹಲವು ವ್ಯಕ್ತಿಗಳು ಭಯೋತ್ಪಾದನಾ ಕೃತ್ಯಗಳಲ್ಲಿ ಶಂಕಿತರಾಗಿದ್ದಾರೆ ಎಂಬ ವಾದವನ್ನು ಸರ್ಕಾರ ಮುಂದಿಡುತ್ತಿದೆ.

ಅಮೆರಿಕ ಸರ್ಕಾರ ನೀಡುವ ಸಮಾಜ ಕಲ್ಯಾಣ ಸೌಲಭ್ಯಗಳೆಲ್ಲ ಅಮೆರಿಕದ ಪೌರರ ಬದಲು ವಲಸಿಗರ ಪಾಲಾಗಬಹುದು ಎಂಬುದು ಇನ್ನೊಂದು ಆತಂಕ. ಅಮೆರಿಕಕ್ಕೆ ಬರುವ ಹೊತ್ತಿಗೆ ಈ ವಲಸಿಗರ ಕೌಶಲ ಮಟ್ಟ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಈ ಸಾಧ್ಯತೆ ಹೆಚ್ಚು ಎಂದು ವಲಸೆ ಅಧ್ಯಯನ ಕೇಂದ್ರ ಹೇಳುತ್ತದೆ. ಈ ವಾದಕ್ಕೆ ಪೂರಕವಾಗಿ ಜನಗಣತಿ ದತ್ತಾಂಶವನ್ನೂ ಮುಂದಿಡುತ್ತಿದೆ.

ರಿಪಬ್ಲಿಕನ್‍ ಸಂಸದ ಬಾಬ್‍ ಗೂಡ್ಲಾಟ್‍ ಅಮೆರಿಕದ ಸಂಸತ್ತಿನಲ್ಲಿ ಮಂಡಿಸಿದ ಮಸೂದೆ ಪ್ರಕಾರ, ಪೌರರು, ಕಾಯಂ ನಿವಾಸಿಗಳು ಅಥವಾ ಗ್ರೀನ್‍ ಕಾರ್ಡ್‌ದಾರರು ತಮ್ಮ ಸಂಗಾತಿ ಮತ್ತು 18 ವರ್ಷದೊಳಗಿನ ಮಕ್ಕಳನ್ನು ಅಮೆರಿಕಕ್ಕೆ ಕರೆತರಬಹುದು. ಆದರೆ, ಹೆತ್ತವರು, 18ಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮತ್ತು ಸಂಬಂಧಿಗಳನ್ನು ಅಮೆರಿಕಕ್ಕೆ ಕರೆತರಲು ಅವಕಾಶ ಇಲ್ಲ.

ವಲಸಿಗರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಅಂಕ ವ್ಯವಸ್ಥೆಯೊಂದನ್ನು ರೂಪಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿ ಇದೆ. ಶಿಕ್ಷಣ ಮಟ್ಟ, ಇಂಗ್ಲಿಷ್‍ ಭಾಷಾ ಕೌಶಲ ಮತ್ತು ಅಮೆರಿಕದಲ್ಲಿ ಕೆಲಸದ ಅವಕಾಶಗಳ ಆಧಾರದಲ್ಲಿ ಈ ಅಂಕ ವ್ಯವಸ್ಥೆ ಕೆಲಸ ಮಾಡಲಿದೆ. ಹಾಗೆಯೇ ವಾರ್ಷಿಕ ಗ್ರೀನ್‍ ಕಾರ್ಡ್ ನೀಡಿಕೆ ಪ್ರಮಾಣವನ್ನು ಅರ್ಧಕ್ಕೆ ಇಳಿಸಿ 5 ಲಕ್ಷಕ್ಕೆ ನಿಗದಿ ಮಾಡುವುದು ಇನ್ನೊಂದು ಪ್ರಸ್ತಾವ.

ವಲಸೆ ಕಾರ್ಮಿಕರನ್ನೇ ಅವಲಂಬಿತರಾಗಿರುವ ಕಂಪನಿಗಳು ಮುಂದೇನಾಗಬಹುದು ಎಂಬ ಆತಂಕದಲ್ಲಿವೆ. ಬಹಳ ವರ್ಷಗಳಿಂದ ಕೆಲಸ ಮಾಡುತ್ತಿರುವ ಹಲವು ಕಂಪನಿಗಳು ವೈದ್ಯಕೀಯ ನೆರವು ಮತ್ತು ಆರೈಕೆ ಸೇವೆ ನೀಡುವುದನ್ನೇ ನೆಚ್ಚಿಕೊಂಡಿವೆ. ಹಾಗಾಗಿ ಸ್ಥಳೀಯರಿಗೆ ಈ ಕೆಲಸಗಳು ಆಕರ್ಷಕವಾಗಿ ಕಾಣಿಸುವಷ್ಟರ ಮಟ್ಟದಲ್ಲಿ ಸಂಬಳ ಏರಿಕೆ ಸಾಧ್ಯವಿಲ್ಲ ಎಂಬ ಕಳವಳದಲ್ಲಿ ಈ ಕಂಪನಿಗಳಿವೆ.

ಅಮೆರಿಕದಲ್ಲಿ ನೆಲೆಯಾದವರ ಸಂಬಂಧಿಕರು ವಲಸೆ ಬರುವುದು ಕಷ್ಟವಾದರೆ, ಇಷ್ಟೆಲ್ಲ ಕಾರ್ಮಿಕರನ್ನು ಎಲ್ಲಿಂದ ತರುವುದು ಎಂದು ಬೆಲ್‍ಮಾಂಟ್‍ ವಿಲೇಜ್‍ನ ಸ್ಥಾಪಕಿ ಪ್ಯಾಟ್ರೀಷಿಯಾ ವಿಲ್‍ ಪ್ರಶ್ನಿಸುತ್ತಾರೆ. ಹಲವು ರಾಜ್ಯಗಳಲ್ಲಿ ಕೆಲಸ ಮಾಡುವ ಈ ಸಂಸ್ಥೆಯಲ್ಲಿ ನಾಲ್ಕು ಸಾವಿರ ಉದ್ಯೋಗಿಗಳಿದ್ದಾರೆ.

ಇರ್ಮಾ ಅವರ ವಾರ್ಷಿಕ ಆದಾಯ 29 ಸಾವಿರ ಡಾಲರ್ (ಸುಮಾರು ₹19 ಲಕ್ಷ). ಬರ್‌ಬ್ಯಾಂಕ್‌ನ ಬೆಲ್‍ಮಾಂಟ್‍ ವಿಲೇಜ್‍ನಲ್ಲಿ ಅವರಿಗೆ ಕೆಲಸ ಇದೆ. ಅಮೆರಿಕ ಪೌರನೊಬ್ಬನನ್ನು ಮದುವೆಯಾದ ಇರ್ಮಾ 1997ರಲ್ಲಿ ಅಮೆರಿಕಕ್ಕೆ ವಲಸೆ ಬಂದವರು. ಆಕೆಯೂ ಅಮೆರಿಕದ ಪೌರತ್ವ ಪಡೆದಿದ್ದಾರೆ. ಪ್ರಸ್ತಾವಿತ ನಿಯಮಗಳ ಪ್ರಕಾರ ಇರ್ಮಾ ಅಮೆರಿಕದಲ್ಲಿ ಉಳಿಯುವುದು ಸಾಧ್ಯವಾಗುತ್ತದೆ. ಆದರೆ ಇರ್ಮಾ ಜತೆ ಕೆಲಸ ಮಾಡುವ ಹಲವರಿಗೆ ಅದು ಸಾಧ್ಯವಾಗುವುದಿಲ್ಲ.

ಇರ್ಮಾ ಮತ್ತು ವಿಮಾನ ನಿಲ್ದಾಣದಲ್ಲಿ ಗ್ರಾಹಕ ಸೇವಾ ಪ್ರತಿನಿಧಿಯಾಗಿರುವ ಆಕೆಯ ಗಂಡನ ಆದಾಯ ಸೇರಿದರೆ ಖರ್ಚಿಗೆ ಸಮಸ್ಯೆಯೇನೂ ಆಗುವುದಿಲ್ಲ. ತಿಂಗಳಿಗೆ 1200 ಡಾಲರ್ (ಸುಮಾರು ₹78 ಸಾವಿರ) ಬಾಡಿಗೆಯ ಮನೆ, 23 ವರ್ಷದ ಮಗನ ಕಾಲೇಜು ಫೀಸು ಮತ್ತು ಫಿಲಿಪ್ಪೀನ್ಸ್‌ಗೆ ಯಾವಾಗಲಾದರೊಮ್ಮೆ ಭೇಟಿ ಅವರಿಗೆ ದೊಡ್ಡ ಹೊರೆ ಅನಿಸುವುದಿಲ್ಲ. ವಿರಾಮದ ಸಮಯದಲ್ಲಿ ಕೂದಲು ಕತ್ತರಿಸುವ ಕೆಲಸದ ಮೂಲಕ ಇರ್ಮಾ ಹೆಚ್ಚುವರಿ ಆದಾಯವನ್ನೂ ಗಳಿಸುತ್ತಿದ್ದಾರೆ.

‘ಸಣ್ಣದಾದರೂ ಸ್ವಂತದ್ದೊಂದು ಮನೆ ಇರಬೇಕಿತ್ತು’ ಎಂದು 14 ವರ್ಷದ ಒಬ್ಬ ಮಗಳೂ ಇರುವ ಇರ್ಮಾ ಒಮ್ಮೆ ಹೇಳಿದ್ದರು. ಸಂಜೆ ಮೂರರಿಂದ ರಾತ್ರಿ 11ರ ವರೆಗಿನ ಪಾಳಿಯ ಕೆಲಸಕ್ಕೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಈ ಮಾತು ಅವರ ಬಾಯಿಯಿಂದ ಬಂದಿತ್ತು. ಅಷ್ಟೊತ್ತಿಗಾಗಲೇ ಕೋಣೆಯಿಂದ ಕೋಣೆಗೆ ಅವರ ಓಡಾಟ ಆರಂಭ ಆಗಿತ್ತು.

411ನೇ ಸಂಖ್ಯೆಯ ಕೊಠಡಿಯಲ್ಲಿರುವ 89ರ ಬರ್ನಾರ್ಡ್‌ ಬ್ರಾಗ್‍ ಜತೆಗೆ ಸಂವಹನ ಮಾಡಲು ಬೇಕಾದ ಸಂಜ್ಞಾಭಾಷೆಯನ್ನು ಇರ್ಮಾ ಈಗ ಇನ್ನಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಮೂಕಾಭಿನಯ ಚತುರನಾಗಿದ್ದ ಬ್ರಾಗ್‌ ದಶಕಗಳ ಹಿಂದೆ ಬಹಳ ಪ್ರಸಿದ್ಧಿ ಪಡೆದಿದ್ದರು.

‘ಏನನಿಸುತ್ತದೆ ಇರ್ಮಾ ಬಗ್ಗೆ’ ಎಂದು ಆಕೆಯತ್ತ ಕೈತೋರಿ ಪ್ರಶ್ನಿಸಿದರೆ, ಹೃದಯದ ಮೇಲೆ ಕೈಯಿಟ್ಟು ಮುಖದ ತುಂಬಾ ಪ್ರೀತಿಯ ನಗೆ ಹರಡಿಕೊಂಡರು ಬ್ರಾಗ್‍. ಹಕ್ಕಿಯ ರೆಕ್ಕೆಗಳಂತೆ ಕೈಗಳನ್ನು ತೋರಿ ಆಕೆ ದೇವತೆ ಎಂದೂ ಸೂಚಿಸಿದರು. ಗಂಡ ಸತ್ತ ಬಳಿಕ ಜೀವಿಸುವ ಇಚ್ಛೆ ಮೂಡಿಸಿದ್ದು, ನಡೆಯುವ ಶಕ್ತಿ ತುಂಬಿದ್ದು ಎಲ್ಲವೂ ಇರ್ಮಾ ಎಂದವರು 406ನೇ ಕೊಠಡಿಯಲ್ಲಿರುವ ವೆಲ್ಮಾ ವಿನ್ಸೆಂಟ್‍.

‘ನಾನು ಬಹುತೇಕ ಸತ್ತೇ ಹೋಗಿದ್ದೆ’ ಎಂದು ಪ್ರಖರ ಕೆಂಪು ಬಣ್ಣದ ಅಂಗಿ, ಬಿಳಿಯ ಲಂಗ ತೊಟ್ಟು ಅಂಗಿಗೆ ಹೊಂದಾಣಿಕೆ ಆಗುವಂತಹ ಕೆಂಪು ನೆಕ್ಲೇಸ್‌, ಕಿವಿಯ ರಿಂಗ್‌ ಮತ್ತು ಉಗುರಿಗೂ ಅದೇ ಬಣ್ಣ ಹಚ್ಚಿಕೊಂಡಿದ್ದ ವೆಲ್ಮಾ ಹೇಳಿದರು.

‘ಇರ್ಮಾ ನನಗೆ ಉತ್ತೇಜನ ಕೊಟ್ಟಳು’ ಎಂದರು. ಗಾಲಿಕುರ್ಚಿಯಿಂದ ಎದ್ದೇಳುವಂತೆ ಇರ್ಮಾ ಒತ್ತಾಯಿಸಿದ್ದರು. ಕೈಹಿಡಿದು ಪುಟ್ಟ ಪುಟ್ಟ ಹೆಜ್ಜೆ ಇಡಿಸಿದ್ದರು. ಪ್ರತಿ ಬಾರಿಯೂ ಇನ್ನೊಂದಷ್ಟು ದೂರಕ್ಕೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ವೆಲ್ಮಾ ಸ್ವತಂತ್ರವಾಗಿ ನಡೆಯಲಾರಂಭಿಸಿದ್ದರು. ವಾಕರ್‌ ಹಿಡಿದು ಚರ್ಚ್‌ಗೆ ಹೋಗಲಾರಂಭಿಸಿದ್ದರು. ಬೆಲ್‌ಮಾಂಟ್‌ನ ಬ್ಯೂಟಿಪಾರ್ಲರ್‌ಗೂ ಹೋಗುತ್ತಿದ್ದರು.

‘ನನ್ನ ಕುಟುಂಬ ಸದಾ ಋಣಿಯಾಗಿರುತ್ತದೆ’ ಎಂದು ಆಕೆಯ ಮಗ ಬಾಬ್‌ ವಿನ್ಸೆಂಟ್‌ ಕೃತಜ್ಞತೆ ಸೂಚಿಸಿದರು.

‘ಫಿಲಿಪ್ಪೀನ್ಸ್‌ನಿಂದ ಅಮೆರಿಕಕ್ಕೆ ವಲಸೆ ಬಂದ ಇರ್ಮಾರಿಂದಾಗಿ ನನ್ನ ತಾಯಿಗೆ ಗುಣಮಟ್ಟದ ಬದುಕು ಸಾಧ್ಯವಾಯಿತು. ಇರ್ಮಾ ಇಲ್ಲದಿರುತ್ತಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ’ ಎಂಬು ಬಾಬ್‌ ಹೇಳಿದರು.

ಲೇಖಕಿ: ವಲಸೆ ಹಾಗೂ ನಿರಾತ್ರಿತರನ್ನು ಕುರಿತ ವಿಶೇಷ ವರದಿಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT