ವಿಡಿಯೊಕಾನ್‌ ಹಗರಣ: ‘ಸೆಬಿ’ ನಿಗಾ

7
ಹಿತಾಸಕ್ತಿ ಸಂಘರ್ಷ ವಿವಾದದಲ್ಲಿ ಐಸಿಐಸಿಐ ಬ್ಯಾಂಕ್‌ನ ಸಿಇಒ

ವಿಡಿಯೊಕಾನ್‌ ಹಗರಣ: ‘ಸೆಬಿ’ ನಿಗಾ

Published:
Updated:
ವಿಡಿಯೊಕಾನ್‌ ಹಗರಣ: ‘ಸೆಬಿ’ ನಿಗಾ

ನವದೆಹಲಿ: ವಿಡಿಯೊಕಾನ್‌ಗೆ ಸಾಲ ನೀಡಿಕೆಯಲ್ಲಿ ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಅವರು ಹಿತಾಸಕ್ತಿ ಸಂಘರ್ಷದ ವಿವಾದದಲ್ಲಿ ಸಿಲುಕಿಕೊಂಡಿರುವುದರ ಬಗ್ಗೆ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಗಮನ ಹರಿಸಿದೆ.

ಈ ಪ್ರಕರಣದಲ್ಲಿ ಕಾರ್ಪೊರೇಟ್‌ ಆಡಳಿತಕ್ಕೆ ಸಂಬಂಧಿಸಿದ ವೈಫಲ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ‘ಸೆಬಿ’ ನಿರ್ಧರಿಸಿದೆ. ಜತೆಗೆ, ವಿಡಿಯೊಕಾನ್‌ ಇಂಡಸ್ಟ್ರೀಸ್‌ಗೆ ಸಾಲ ನೀಡಿಕೆಯಲ್ಲಿ ಅದರ ಪ್ರವರ್ತಕರು ಮತ್ತು ಕೊಚ್ಚರ್ ಕುಟುಂಬದ ಸದಸ್ಯರು ಪರಸ್ಪರ ಸಹಕರಿಸಲು ಮುಂದಾಗಿದ್ದರು ಎನ್ನುವುದನ್ನೂ ಪರಿಶೀಲಿಸಲಿದೆ.

ಕೆಲ ವರ್ಷಗಳಿಂದೀಚೆಗೆ ಬ್ಯಾಂಕ್‌, ಈ ಸಾಲದ ಬಗ್ಗೆ ನೀಡಿದ ವಿವಿಧ ಮಾಹಿತಿಗಳ ಬಗ್ಗೆ  ಪ್ರಾಥಮಿಕ ವಿಚಾರಣೆ ನಡೆಸಲೂ ‘ಸೆಬಿ’ ಮುಂದಾಗಿದೆ. 2012ರಲ್ಲಿ ನಡೆದಿರುವ ಈ ಸಾಲ ಮಂಜೂರಾತಿ ಕುರಿತು ಹೆಚ್ಚುವರಿ ವಿವರಣೆ ಪಡೆಯಲು ನಿರ್ಧರಿಸಿದೆ.

‘ವಿಡಿಯೊ ಕಾನ್‌ಗೆ ಸಾಲ ಮಂಜೂರಾತಿ ಮಾಡಿರುವ ಕುರಿತು ಯಾವುದೇ ಬಗೆಯಲ್ಲಿ ಹಿತಾಸಕ್ತಿ ಸಂಘರ್ಷ ಕಂಡುಬಂದಿಲ್ಲ. 2016ರಲ್ಲಿಯೇ ಈ ಸಂಬಂಧ ತೃಪ್ತಿದಾಯಕ ಉತ್ತರ ನೀಡಲಾಗಿದೆ. ನಿಯಂತ್ರಣ ಸಂಸ್ಥೆಗಳು ಕೇಳಿದ ಪ್ರಶ್ನೆಗಳಿಗೆ  ನಾವು   ಸೂಕ್ತ ಸಮಜಾಯಿಷಿ ನೀಡುತ್ತಲೇ ಬಂದಿದ್ದೇವೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ. ಕೆ. ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಆದರೆ, ಯಾವ ನಿಯಂತ್ರಣ ಸಂಸ್ಥೆಗಳು ಎನ್ನುವ ಮಾಹಿತಿ ಕೇಳಿದ್ದವು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

‘ಬ್ಯಾಂಕ್‌ಗಳ ಒಕ್ಕೂಟದಲ್ಲಿ ನಾವು ಮುಂಚೂಣಿಯಲ್ಲಿ ಇಲ್ಲ. ಒಕ್ಕೂಟವು ಮಂಜೂರು ಮಾಡಲಿದ್ದ ಒಟ್ಟು ಸಾಲದ ಶೇ 10ಕ್ಕಿಂತ ಕಡಿಮೆ ಪ್ರಮಾಣದ

₹ 3,250 ಕೋಟಿ ಸಾಲವನ್ನು 2012ರ ಏಪ್ರಿಲ್‌ನಲ್ಲಿ ನೀಡಲಾಗಿದೆ’ ಎಂದೂ ಶರ್ಮಾ ಹೇಳಿದ್ದಾರೆ.

ಕೇಳಿ ಬಂದಿರುವ ಆರೋಪ: ಪರಸ್ಪರ ನೆರವು ಪಡೆಯುವ ಉದ್ದೇಶದಿಂದ ವಿಡಿಯೊಕಾನ್‌ಗೆ ಸಾಲ ನೀಡಿಕೆಯಲ್ಲಿ ಕೊಚ್ಚರ್‌ ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ವಿಡಿಯೊಕಾನ್‌ ಮತ್ತು ಚಂದಾ ಅವರ ಪತಿ ದೀಪಕ್‌ ಕೊಚ್ಚರ್‌ ಅವರಿಗೆ ಸೇರಿದ ಎನ್‌ಯುಪವರ್‌ ರಿನಿವೇಬಲ್ಸ್‌ ಸಂಸ್ಥೆ ನಡುವಣ ಅನುಮಾನಾಸ್ಪದ ವಹಿವಾಟಿನ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.  

ಕೊಚ್ಚರ್‌ ಬೆಂಬಲಕ್ಕೆ ಮಂಡಳಿ: ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ಚಂದಾ ಕೊಚ್ಚರ್‌ ಅವರ ಬೆಂಬಲಕ್ಕೆ ನಿಂತಿದ್ದು, ಅವರಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ಈ ಸಾಲ ಮಂಜೂರಾತಿಯಲ್ಲಿ,

ಪರಸ್ಪರ ನೆರವಾಗಲು ಎರಡು ಸಂಸ್ಥೆಗಳು ಒಳ ಒಪ್ಪಂದಕ್ಕೆ ಬಂದಿರುವ ಅಥವಾ ಸಹಕರಿಸಿರುವ, ಸ್ವಜನಪಕ್ಷಪಾತ ಎಸಗಿದ ಮತ್ತು ಹಿತಾಸಕ್ತಿ ಸಂಘರ್ಷದ ಪ್ರಶ್ನೆಯೇ ಉದ್ಭವಿಸದು ಎಂದು ಮಂಡಳಿಯು ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry