ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮನ್‌ವೆಲ್ತ್‌ನಲ್ಲಿ ಪದಕ ಗೆಲ್ಲುವ ಕನಸು’

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಕನಸಿದೆ. ದೀಪಾ ಕರ್ಮಾಕರ್ ಅವರ ಸಾಧನೆಯನ್ನು ಮರುಕಳಿಸುವ ವಿಶ್ವಾಸದಲ್ಲಿದ್ದೇನೆ’ ಎಂದು ಭಾರತದ ಜಿಮ್ನಾಸ್ಟಿಕ್ಸ್‌ ಸ್ಪರ್ಧಿ ಪ್ರಣತಿ ನಾಯಕ್ ಹೇಳಿದ್ದಾರೆ.

ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ ದೀಪಾ ಕರ್ಮಾಕರ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಬಾರಿ ಅರುಣಾ ರೆಡ್ಡಿ ಮುಂದಾಳತ್ವದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ತಂಡದಲ್ಲಿ ಮೂವರು ಸ್ಪರ್ಧಿಗಳು ಇದ್ದಾರೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ದೀಪಾ ಈ ಬಾರಿಯ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ.

‘ದೀಪಾ ಅವರೊಂದಿಗೆ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದೇನೆ. ಕಠಿಣ ಪರಿಶ್ರಮದಿಂದ ಅವರು ಅಭ್ಯಾಸ ಮಾಡುವ ರೀತಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಅವರಂತೆ ಸ್ಪರ್ಧೆ ಒಡ್ಡುವ ವಿಶ್ವಾಸ ನನಗಿದೆ’ ಎಂದು 23 ವರ್ಷದ ಪ್ರಣತಿ ಹೇಳಿದ್ದಾರೆ.

‘ದೀಪಾ ಅವರ ಸಾಧನೆಯಿಂದ ನಮ್ಮ ಮೇಲಿನ ವಿಶ್ವಾಸ ಹೆಚ್ಚಿದೆ. ಆದರೆ ಒತ್ತಡ ಇಲ್ಲ. ಫೈನಲ್‌ನಲ್ಲಿ ಸ್ಥಾನ ಪಡೆಯುವುದು ನಮ್ಮ ಮೊದಲ ಗುರಿ’ ಎಂದು ಹೇಳಿದ್ದಾರೆ.

ಪ್ರಣತಿ ಅವರು ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ನ ವಾಲ್ಟ್‌ ವಿಭಾಗ ದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

‘ಕೆನಡಾ ಹಾಗೂ ಬೆಲ್ಜಿಯಂ ಸ್ಪರ್ಧಿಗಳು ನಮಗೆ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ. ಯೂ ಟ್ಯೂಬ್‌ನಲ್ಲಿ ಸಿಗುವ ವಿಡಿಯೋಗಳನ್ನು ನೋಡಿದ್ದೇನೆ. ಇನ್ನೂ ಒಂದು ವಾರ ಸಮಯ ಇದೆ. ಹೊಸ ತಂತ್ರಗಳನ್ನು ಬಳಸುವ ಮೊದಲು ನನ್ನಲ್ಲಿರುವ ವಿಶ್ವಾಸ ಹಾಗೂ ಸಾಮರ್ಥ್ಯ ಮಟ್ಟವನ್ನು ಮೊದಲು ಅರಿತುಕೊಳ್ಳಲಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಪ್ರಣತಿ ಅವರು ಪಶ್ಚಿಮ ಬಂಗಾಳದ ಮೆಡಿನಿಪುರ ಗ್ರಾಮದವರು. ಅವರ ತಂದೆ ಖಾಸಗಿ ಬಸ್ ಡ್ರೈವರ್‌. ಅವರಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. 8 ವರ್ಷದವರಿದ್ದಾಗಲೇ ಪ್ರಣತಿ ಮನೆಯನ್ನು ತೊರೆದಿದ್ದರು. ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಆ ಬಳಿಕ ಕೋಚ್ ಸಹಾಯದಿಂದ 2003ರಲ್ಲಿ ಕೋಲ್ಕತ್ತದ ಸಾಯ್‌ ಕೇಂದ್ರಕ್ಕೆ ಸೇರಿಕೊಂಡರು.

‘ಸಣ್ಣ ವಯಸ್ಸಿನಲ್ಲಿಯೇ ಕ್ರೀಡಾ ಹಾಸ್ಟೆಲ್‌ ಸೇರಿಕೊಂಡೆ. ಆನಂತರ ತಂದೆ, ತಾಯಿ ಬಂದು ನನ್ನನ್ನು ನೋಡಿಕೊಂಡು ಹೋಗುತ್ತಿದ್ದರು’ ಎಂದು ಪ್ರಣತಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳಿದ್ದಾರೆ.

‘ಬಾಲ್ಯದಲ್ಲಿ ಕಷ್ಟದ ದಿನಗಳನ್ನು ಕಳೆದಿದ್ದೇನೆ. 2015ರಲ್ಲಿ ಕೇರಳದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೂರು ಬೆಳ್ಳಿ ಹಾಗೂ ಒಂದು ಕಂಚು ಗೆದ್ದುಕೊಂಡೆ. ಅಲ್ಲಿಂದ ನನ್ನ ಕ್ರೀಡಾ ಭವಿಷ್ಯದಲ್ಲಿ ಪ್ರಗತಿ ಕಂಡುಕೊಂಡೆ. ₹12ಲಕ್ಷ ಬಹುಮಾನ ಮೊತ್ತ ಸಿಕ್ಕಿತ್ತು. ಈ ಹಣವನ್ನು ಮನೆ ಕಟ್ಟಲು ತಂದೆಗೆ ಕೊಟ್ಟಿದ್ದೆ’ ಎಂದು ಅವರು ಹೇಳಿದ್ದಾರೆ.

ಕಶ್ಯಪ್‌ಗೆ ಎರಡನೇ ಚಿನ್ನದ ನಿರೀಕ್ಷೆ: ನಾಲ್ಕು ವರ್ಷದ ಹಿಂದೆ ನಡೆದ ಕಾಮನ್‌ವೆಲ್ತ್ ಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪರುಪಳ್ಳಿ ಕಶ್ಯಪ್‌ ಚಿನ್ನ ಗೆದ್ದುಕೊಂಡಾಗ 32 ವರ್ಷದ ಇತಿಹಾಸದ ನೆನಪು ಮರುಕಳಿಸಿತ್ತು.

1978ರಲ್ಲಿ ಪ್ರಕಾಶ್ ಪಡುಕೋಣೆ ಹಾಗೂ 1982ರಲ್ಲಿ ಸೈಯದ್ ಮೋದಿ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಆನಂತರ ಕಶ್ಯಪ್ ಭಾರತಕ್ಕೆ ಮೂರನೇ ಚಿನ್ನದ ಪದಕ ತಂದುಕೊಟ್ಟಿದ್ದರು.

ಕಶ್ಯಪ್‌ ತಮ್ಮ ವೃತ್ತಿಜೀವನದ ಆರಂ ಭದಲ್ಲಿ ಮಿಂಚಿದ್ದರು. ಆದರೆ ಆಬಳಿಕ ಅವರು ಗಾಯದ ಸಮಸ್ಯೆಯಿಂದಾಗಿ ಫಾರ್ಮ್‌ ಕಳೆದುಕೊಂಡಿದ್ದರು.

‘ನನಗೆ ಮತ್ತೊಮ್ಮೆ ಇಲ್ಲಿ ಪದಕ ಗೆಲ್ಲುವ ಕನಸಿದೆ. ಪ್ರಣಯ್ ಹಾಗೂ ಶ್ರೀಕಾಂತ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ’ ಎಂದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಕಶ್ಯಪ್ ಹೇಳಿದ್ದಾರೆ.

‘ನಮ್ಮ ತಂಡ ಅತ್ಯುತ್ತಮವಾಗಿದೆ. ಆಡುವ ಐದೂ ವಿಭಾಗದಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ನಮಗಿದೆ. ಉತ್ತಮ ಸಾಮರ್ಥ್ಯ ಒಡ್ಡಿದರೆ ಕನಿಷ್ಟ ನಾಲ್ಕು ಪದಕ ಗೆಲ್ಲಬಹುದು. ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರು ಇದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT