ಮಮತಾ ಉತ್ಸಾಹಕ್ಕೆ ಸೋನಿಯಾ ತಣ್ಣೀರು

7

ಮಮತಾ ಉತ್ಸಾಹಕ್ಕೆ ಸೋನಿಯಾ ತಣ್ಣೀರು

Published:
Updated:
ಮಮತಾ ಉತ್ಸಾಹಕ್ಕೆ ಸೋನಿಯಾ ತಣ್ಣೀರು

ನವದೆಹಲಿ: ಒಕ್ಕೂಟ ರಂಗವೊಂದನ್ನು ಸ್ಥಾಪಿಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಬಿಜೆಪಿ ವಿರುದ್ಧ ಒಕ್ಕೂಟ ರಂಗವೊಂದನ್ನು ರಚಿಸಲು ಕಾಂಗ್ರೆಸ್‌ ಬೆಂಬಲ ಕೋರುವುದಕ್ಕಾಗಿ ಮಮತಾ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಭೇಟಿಯಾಗಿದ್ದರು.

ಮಮತಾ ಅವರು ಈ ಪ್ರಸ್ತಾವವನ್ನು ಸೋನಿಯಾ ಮುಂದಿಟ್ಟರು. ಆಗ, ಇಂತಹುದೊಂದು ಪ್ರಯತ್ನದ ನೇತೃತ್ವವನ್ನು ಕಾಂಗ್ರೆಸ್‌ ಪಕ್ಷವೇ ವಹಿಸಿಕೊಳ್ಳಬೇಕು ಎಂದು ಹೆಚ್ಚಿನ ಪಕ್ಷಗಳು ಬಯಸಿವೆ ಎಂಬುದಾಗಿ ಸೋನಿಯಾ ನೇರವಾಗಿಯೇ ಹೇಳಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

ಬಿಜೆಪಿಯ ವಿರುದ್ಧ ರೂಪುಗೊಳ್ಳುವ ರಂಗದ ರಚನೆಯಲ್ಲಿ ಕಾಂಗ್ರೆಸ್‌ ನೇತೃತ್ವವನ್ನು ಬಯಸುವ ‍ಪಕ್ಷಗಳ ಹೆಸರನ್ನು ಸೋನಿಯಾ ಹೇಳಿದರು. ಸೋನಿಯಾ ಹೆಸರಿಸಿದ ಪಕ್ಷಗಳಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಕೂಡ ಸೇರಿವೆ.

ಸೋನಿಯಾ ಅವರ ಈ ಪ್ರತಿಕ್ರಿಯೆ ಮಮತಾ ಅವರ ಉತ್ಸಾಹವನ್ನು ಕುಗ್ಗಿಸಿದೆ. ಸೋನಿಯಾ ಅವರು ಹೇಳಿದ್ದನ್ನು ಮಮತಾ ಅವರು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 40 ಸ್ಥಾನಗಳನ್ನು ಗೆದ್ದರೆ ವಿರೋಧ ಪಕ್ಷಗಳ ಒಕ್ಕೂಟ ರಂಗ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂಬುದು ಮಮತಾ ಅವರ ಯೋಜನೆಯಾಗಿದೆ. ಇದು ರಹಸ್ಯವೇನೂ ಅಲ್ಲ. 1996 ಮತ್ತು 1998ರಲ್ಲಿ 13 ಪಕ್ಷಗಳು ಜತೆಯಾಗಿ ಸಂಯುಕ್ತ ರಂಗ ರಚಿಸಿದ ರೀತಿಯಲ್ಲಿಯೇ ಒಕ್ಕೂಟ ರಂಗ ರಚನೆ ಮಮತಾ ಉದ್ದೇಶವಾಗಿತ್ತು ಎಂದು ತೃಣಮೂಲ ಮೂಲಗಳು ಹೇಳಿವೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಗಳು ಕಾಂಗ್ರೆಸ್‌ ನೇತೃತ್ವದ ರಂಗದ ಬಗ್ಗೆ ಒಲವು ಹೊಂದಿಲ್ಲ ಎಂಬುದನ್ನು ಮಮತಾ ಅವರು ಸೋನಿಯಾಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋನಿಯಾ ಅವರು ಈ ಮೂರೂ ಪಕ್ಷಗಳು ಬಿಜೆಪಿ ವಿರುದ್ಧದ ನಿಲುವಿನಲ್ಲಿ ಯಾವುದೇ ಸ್ಪಷ್ಟತೆ ಹೊಂದಿಲ್ಲ ಎಂದು ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಸೋಲಿಸುವ ಪಕ್ಷಕ್ಕೆ ಸಿಪಿಎಂ ಬೆಂಬಲ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ‘ಪ್ರಬಲ’ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಸಿಪಿಎಂ ಹೇಳಿದೆ.

224 ಸ್ಥಾನಗಳಲ್ಲಿ, 18–19 ಸ್ಥಾನಗಳಿಗೆ ಸಿಪಿಎಂ ಹಾಗೂ 11–12 ಸ್ಥಾನಗಳಿಗೆ ಎಡರಂಗದ ಇತರ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ಉಳಿದ ಬಹುತೇಕ ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗುವುದು ಎಂದು ಸಿಪಿಎಂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry