ಜನಾರ್ದನ ದ್ವಿವೇದಿ ಸ್ಥಾನಕ್ಕೆ ಗೆಹ್ಲೋಟ್‌

7

ಜನಾರ್ದನ ದ್ವಿವೇದಿ ಸ್ಥಾನಕ್ಕೆ ಗೆಹ್ಲೋಟ್‌

Published:
Updated:
ಜನಾರ್ದನ ದ್ವಿವೇದಿ ಸ್ಥಾನಕ್ಕೆ ಗೆಹ್ಲೋಟ್‌

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ)ಯ ಸಂಘಟನಾ ಉಸ್ತುವಾರಿ ಹುದ್ದೆಯಲ್ಲಿದ್ದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರ ಸ್ಥಾನಕ್ಕೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ನೇಮಿಸಲಾಗಿದೆ.

ಶುಕ್ರವಾರ ಈ ಕುರಿತ ಆದೇಶ ಹೊರಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಸಂಘಟನೆಯಲ್ಲಿ ಭಾರಿ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ಇದುವರೆಗೆ ಗುಜರಾತ್‌ನ ಉಸ್ತುವಾರಿಯಾಗಿದ್ದ ಗೆಹ್ಲೋಟ್‌ ಅವರನ್ನು ಮಹತ್ವದ ಹುದ್ದೆಗೆ ನೇಮಿಸುವ ಮೂಲಕ, ವರ್ಷಾಂತ್ಯಕ್ಕೆ ರಾಜಸ್ಥಾನ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಯುವ ಸಂಸದ ಸಚಿನ್‌ ಪೈಲಟ್‌ ಅವರ ಮುಂದಾಳತ್ವಕ್ಕೆ ಪರೋಕ್ಷವಾಗಿ ಹಸಿರು ನಿಶಾನೆ ತೋರಿದಂತಾಗಿದೆ.

ಈಗಾಗಲೇ ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಗೆಹ್ಲೋಟ್‌ ಅವರು, ರಾಜಸ್ಥಾನ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸಿದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗುವ ಸಾಧ್ಯತೆಯೂ ಇದೆ.

ಇತ್ತೀಚೆಗೆ ನಡೆದಿದ್ದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಗೆಹ್ಲೋಟ್‌ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದ ರಾಜೀವ್‌ ಸಾತವ್‌ ಅವರಿಗೆ ಗುಜರಾತ್‌ ಉಸ್ತುವಾರಿ ಹೊಣೆ ವಹಿಸಲಾಗಿದೆ.

ಅಖಿಲ ಭಾರತ ಕಾಂಗ್ರೆಸ್‌ ಸೇವಾದಳದ ಮುಖ್ಯ ಸಂಘಟಕ ಹುದ್ದೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಧ್ಯಪ್ರದೇಶದ ಮಹೇಂದ್ರ ಜೋಶಿ ಅವರ ಬದಲಿಗೆ, ಪಕ್ಷದ ಗುಜರಾತ್‌ ಮುಖಂಡ ಲಾಲ್‌ಜಿ ಭಾಯಿ ದೇಸಾಯಿ ಅವರನ್ನು ನೇಮಿಸಲಾಗಿದೆ.

ಹರಿಪ್ರಸಾದ್‌ ಬದಲು ಜಿತೇಂದ್ರ ಸಿಂಗ್‌

ನವದೆಹಲಿ: ಕಳೆದ 20 ವರ್ಷಗಳಿಂದ ಎಐಸಿಸಿ ಕಾರ್ಯದರ್ಶಿ, ಸೇವಾದಳದ ಮುಖ್ಯಸ್ಥ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದ ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್‌ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ.

ರಾಜ್ಯಸಭೆ ಸದಸ್ಯರೂ ಆಗಿರುವ ಹರಿಪ್ರಸಾದ್‌ ಪಕ್ಷದ ಒಡಿಶಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇದೀಗ ಅವರ ಸ್ಥಾನಕ್ಕೆ ರಾಹುಲ್‌ ಗಾಂಧಿಯವರ ಆಪ್ತ ಎಂದೇಗುರುತಿಸಿಕೊಂಡಿರುವ ಜಿತೇಂದ್ರ ಸಿಂಗ್‌ ಅವರನ್ನು ನೇಮಿಸಲಾಗಿದೆ.

2017ರ ಮಾರ್ಚ್‌ನಲ್ಲಿ ಒಡಿಶಾದಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇವರನ್ನು ತಕ್ಷಣಕ್ಕೆಜವಾಬ್ದಾರಿಯಿಂದ ಕೈಬಿಡದೆ ಮುಂದುವರಿಸಲಾಗಿತ್ತು.

ಸೀತಾರಾಂ ಕೇಸರಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಹರಿಪ್ರಸಾದ್‌, ಆ ನಂತರ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆದು, 15 ವರ್ಷಗಳ ಕಾಲ ಪಕ್ಷದ 17 ರಾಜ್ಯಗಳ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

‘ಭಯೋತ್ಪಾದನೆಯ ಬಿಗಿಹಿಡಿತದಿಂದ ಹೊರಬಂದ ಪಂಜಾಬ್‌ನಲ್ಲಿ ಪಕ್ಷವನ್ನು (2002) ಪುನಃ ಅಧಿಕಾರಕ್ಕೆ ತರುವಲ್ಲಿ ಸಕ್ರಿಯ

ಪಾತ್ರ ವಹಿಸಿದ್ದು ನನ್ನ ಉಸ್ತುವಾರಿ ಅವಧಿಯ ಸಂತೃಪ್ತಿ ನೀಡಿದ ಸಾಧನೆಯಾಗಿದೆ’ ಎಂದು ಹರಿಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೀವ್ರ ನಕ್ಸಲ್‌ಪೀಡಿತ ಛತ್ತೀಸ್‌ಗಡದ ಉಸ್ತುವಾರಿಯಲ್ಲಿದ್ದಾಗ, ಪಕ್ಷದ 27 ಜನ ಮುಖಂಡರು ನೆಲಬಾಂಬ್‌ಗೆ ಬಲಿಯಾಗಿದ್ದ ದುರ್ಘಟನೆಯಲ್ಲಿ ಕೂದಲೆಳೆಯಲ್ಲಿ ಪಾರಾಗಿದ್ದೆ’ ಎಂದು ಅವರು ಸ್ಮರಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವುದಾಗಿ ತಿಳಿಸಿದ ಹರಿಪ್ರಸಾದ್‌ ಅವರ ಹಾಲಿ ರಾಜ್ಯಸಭೆ ಸದಸ್ಯತ್ವದ ಅವಧಿಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry