ನಿಯಮ ಉಲ್ಲಂಘಿಸಿದ ‘ಸುಪ್ರೀಂ’

7
ನ್ಯಾಯಾಂಗದಲ್ಲಿ ಸರ್ಕಾರದ ಹಸ್ತಕ್ಷೇಪ ಆರೋ‍ಪಕ್ಕೆ ಅಧಿಕಾರಿಯ ತಿರುಗೇಟು

ನಿಯಮ ಉಲ್ಲಂಘಿಸಿದ ‘ಸುಪ್ರೀಂ’

Published:
Updated:
ನಿಯಮ ಉಲ್ಲಂಘಿಸಿದ ‘ಸುಪ್ರೀಂ’

ನವದೆಹಲಿ: ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಚಲಮೇಶ್ವರ್‌ ಎತ್ತಿರುವ ಪ್ರಶ್ನೆಗೆ ಕೇಂದ್ರದ ಅಧಿಕಾರಿಯೊಬ್ಬರು ಅತ್ಯಂತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾ ಪ್ರಧಾನ ನ್ಯಾಯಾಧೀಶ ಕೃಷ್ಣಭಟ್‌ ವಿರುದ್ಧ ಅವರ ಕೈಕೆಳಗಿನ ಅಧಿಕಾರಿ ಸಲ್ಲಿಸಿದ್ದ ಲೈಂಗಿಕ ಕಿರುಕುಳ ದೂರನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕಡೆಗಣಿಸಿದೆ. ಕೃಷ್ಣಭಟ್‌ ಹೆಸರನ್ನು ಹೈಕೋರ್ಟ್‌ ನ್ಯಾಯಾಧೀಶ ಹುದ್ದೆಗೆ ಎರಡು ಬಾರಿ ಶಿಫಾರಸು ಮಾಡಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.‌

ಕೃಷ್ಣಭಟ್‌ ಅವರ ಬಡ್ತಿಯ ವಿಚಾರದಲ್ಲಿ ವಿಶಾಖಾ ಮಾರ್ಗಸೂಚಿಗಳನ್ನು (ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದ ನಿಯಮಗಳು) ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪಾಲಿಸಿಲ್ಲ ಎಂದು ಅಧಿಕಾರಿ ಆರೋಪಿಸಿದ್ದಾರೆ.

ನ್ಯಾಯಮೂರ್ತಿ ಹುದ್ದೆಗಳಿಗೆ ನೇಮಕಕ್ಕೆ ಸಂಬಂಧಿಸಿ ಕೊಲಿಜಿಯಂ ಶಿಫಾರಸುಗಳನ್ನು ಸರ್ಕಾರ ತಡೆ ಹಿಡಿಯುತ್ತಿದೆ ಎಂಬ ಚಲಮೇಶ್ವರ್‌ ಆರೋಪವನ್ನು ಅಧಿಕಾರಿ ಅಲ್ಲಗಳೆದಿದ್ದಾರೆ. ಕೊಲಿಜಿಯಂ ಶಿಫಾರಸಿನ ಅನ್ವಯ ಕೃಷ್ಣಭಟ್‌ ಅವರಿಗೆ ಬಡ್ತಿ ನೀಡಲು ಸರ್ಕಾರಕ್ಕೆ ತರಾತುರಿ ಇಲ್ಲ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ನ್ಯಾಯಮೂರ್ತಿ ಚಲಮೇಶ್ವರ್‌ ಅವರು ಪತ್ರ ಬರೆದು ಮಾಡಿದ ಆರೋಪಗಳಿಗೆ ಪ್ರತಿಯಾಗಿ ಈ ಹೇಳಿಕೆ ಬಂದಿದೆ. ನ್ಯಾಯಾಂಗದ ಮೇಲೆ ಸರ್ಕಾರದ ಹಸ್ತಕ್ಷೇಪ ತಡೆಯುವ ಬಗ್ಗೆ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಪತ್ರದಲ್ಲಿ ಚಲಮೇಶ್ವರ್‌ ಹೇಳಿದ್ದರು. ನ್ಯಾಯಾಂಗ ಮತ್ತು ಸರ್ಕಾರದ ನಡುವಣ ‘ಸೌಹಾರ್ದ ಸಂಬಂಧ ಪ್ರಜಾಪ್ರಭುತ್ವದ ಸಾವಿನ ಘಂಟಾನಾದ’ ಎಂದು ಅವರು ಹೇಳಿದ್ದರು.

‘ಕೃಷ್ಣಭಟ್‌ ಅವರ ಬಡ್ತಿಗೆ ಎರಡನೇ ಬಾರಿ ಶಿಫಾರಸು ಬರುವ ಹೊತ್ತಿಗೆ ದೂರುದಾರರು ರಾಷ್ಟ್ರಪತಿ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಹಾಗಾಗಿ, ಕೃಷ್ಣಭಟ್‌ ವಿರುದ್ಧದ ದೂರುಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಕಾನೂನು ಇಲಾಖೆಯು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಪತ್ರ ಬರೆದಿತ್ತು. ಇದು ನಿಯಮ ಪ್ರಕಾರವೇ ನಡೆದಿದೆ. ಪ್ರಕರಣದ ತನಿಖೆ ನಡೆಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಸೂಚಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದು ಅಧಿಕಾರಿ ವಿವರಿಸಿದ್ದಾರೆ.

ಕೃಷ್ಣಭಟ್‌ ವಿರುದ್ಧದ ದೂರು ಆಧಾರರಹಿತ ಎಂಬುದು ಗೋಪ್ಯ ತನಿಖೆಯಿಂದ ತಿಳಿದು ಬಂದಿದೆ ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ 2017ರ ಏಪ್ರಿಲ್‌ನಲ್ಲಿ ವರದಿ ನೀಡಿದ್ದರು. ಇದರ ಆಧಾರದಲ್ಲಿ ಕೃಷ್ಣಭಟ್‌ ಅವರ ಹೆಸರನ್ನು ಎರಡನೇ ಬಾರಿ ಬಡ್ತಿಗೆ ಶಿಫಾರಸು ಮಾಡಲಾಗಿತ್ತು. ಆದರೆ, ವಿಶಾಖಾ ಮಾರ್ಗದರ್ಶಿ ಸೂತ್ರ ಪ್ರಕಾರ ಗೋಪ್ಯ ವಿಚಾರಣೆ ನಡೆಸಿ ವರದಿ ನೀಡುವುದಕ್ಕೆ ಅವಕಾಶ ಇಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಚಲಮೇಶ್ವರ್‌ ಬಂಡಾಯ

ಎರಡು ಬಾರಿ ಬಡ್ತಿಗೆ ಶಿಫಾರಸಾದ ಕೃಷ್ಣಭಟ್‌ ವಿರುದ್ಧ ಕೇಂದ್ರ ಕಾನೂನು ಸಚಿವಾಲಯದ ಸೂಚನೆಯಂತೆ ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರು ತನಿಖೆ ನಡೆಸಿದ್ದನ್ನು ಆಕ್ಷೇಪಿಸಿ ಚಲಮೇಶ್ವರ್‌ ಅವರು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ಎಲ್ಲ 22 ನ್ಯಾಯಮೂರ್ತಿಗಳಿಗೆ ಕಳುಹಿಸಿದ್ದಾರೆ.

ಮುಖ್ಯನ್ಯಾಯಮೂರ್ತಿ ವಿರುದ್ಧ ಚಲಮೇಶ್ವರ್‌ ಅವರು ಪತ್ರಿಕಾಗೋಷ್ಠಿ ನಡೆಸಿದ ಅಭೂತಪೂರ್ವ ವಿದ್ಯಮಾನವೂ ಜನವರಿ 12ರಂದು ನಡೆದಿತ್ತು. ಮುಖ್ಯನ್ಯಾಯಮೂರ್ತಿ ಅವರು ಪ್ರಕರಣಗಳನ್ನು ಪೀಠಗಳಿಗೆ ಹಂಚಿಕೆ. ಮಾಡುವ ಕ್ರಮವನ್ನು ಪ್ರಶ್ನಿಸಿ ಈ ಪತ್ರಿಕಾಗೋಷ್ಠಿ ನಡೆದಿತ್ತು. ಇದು ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

*

ಶಿಫಾರಸುಗಳನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕೆ ಇದೆ. ನ್ಯಾಯಮೂರ್ತಿಗಳ ನೇಮಕ ನಿಯಮಾವಳಿಗಳಲ್ಲಿ ಶಿಫಾರಸು ಒಪ್ಪಿಕೊಳ್ಳಲು ಕಾಲಮಿತಿ ಇಲ್ಲ.

-ಕೇಂದ್ರದ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry