ಗಣಿತ ಮರುಪರೀಕ್ಷೆ: ಇನ್ನೂ ನಿರ್ಧಾರ ಇಲ್ಲ

7
12ನೇ ತರಗತಿ ಅರ್ಥಶಾಸ್ತ್ರಕ್ಕೆ ಏಪ್ರಿಲ್‌ 25ರಂದು ಪರೀಕ್ಷೆ

ಗಣಿತ ಮರುಪರೀಕ್ಷೆ: ಇನ್ನೂ ನಿರ್ಧಾರ ಇಲ್ಲ

Published:
Updated:
ಗಣಿತ ಮರುಪರೀಕ್ಷೆ: ಇನ್ನೂ ನಿರ್ಧಾರ ಇಲ್ಲ

ನವದೆಹಲಿ: 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರುಪರೀಕ್ಷೆಯನ್ನು ದೇಶದಾದ್ಯಂತ ಏಪ್ರಿಲ್‌ 25ರಂದು ಸಿಬಿಎಸ್‌ಇ ನಡೆಸಲಿದೆ. ಆದರೆ ಹತ್ತನೇ ತರಗತಿಯ ಗಣಿತ ವಿಷಯದ ಮರುಪರೀಕ್ಷೆ ದೇಶದಾದ್ಯಂತ ನಡೆಯುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ವಿಭಾಗದ ಕಾರ್ಯದರ್ಶಿ ಅನಿಲ್‌ ಸ್ವರೂಪ್‌ ತಿಳಿಸಿದ್ದಾರೆ.

10ನೇ ತರಗತಿಯ ಗಣಿತ ವಿಷಯಕ್ಕೆ ಮರುಪರೀಕ್ಷೆ ನಡೆಸಬೇಕಾದ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ನಡೆಸಲೇಬೇಕೆಂದಿದ್ದರೆ ದೆಹಲಿ ಮತ್ತು ಹರಿಯಾಣಕ್ಕೆ ಮಾತ್ರ ಜುಲೈಯಲ್ಲಿ ಪರೀಕ್ಷೆ ನಡೆಸಲಾಗುವುದು. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಹರಿಯಾಣದಲ್ಲಿ ಪರೀಕ್ಷೆ ನಡೆಸಬೇಕೇ ಎಂಬ ಬಗ್ಗೆ ಪ್ರಕರಣದ ವಿವರವಾದ ತನಿಖೆಯ ಬಳಿಕ 15 ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿರುವುದರ ನಡುವೆಯೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಮುಂದುವರಿದ ಪ್ರತಿಭಟನೆ: ಸಿಬಿಎಸ್‌ಇಯ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ಯುವ ಕಾಂಗ್ರೆಸ್‌ ಕಾರ್ಯಕರ್ತರು ದೆಹಲಿಯ ವಿವಿಧ ಭಾಗಗಳಲ್ಲಿ ಶುಕ್ರವಾರವೂ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೆಲವು ವಿದ್ಯಾರ್ಥಿಗಳು ಪಾರ್ಲಿಮೆಂಟ್‌ ಸ್ಟ್ರೀಟ್‌ನಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಸಚಿವ ಪ್ರಕಾಶ್‌ ಜಾವಡೇಕರ್‌ ಅವರ ನಿವಾಸದತ್ತ ಜಾಥಾ ಹೊರಟ ಎನ್‌ಎಸ್‌ಯುಐ ಸದಸ್ಯರನ್ನು ಪೊಲೀಸರು ತಡೆದರು.

ಠಾಕ್ರೆ ಕರೆ: ಸಿಬಿಎಸ್‌ಇಯ ಪ್ರಶ್ನೆಪತ್ರಿಕೆಗಳ ಸೋರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್‌ ಠಾಕ್ರೆ ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ವ್ಯಂಗ್ಯ

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧದ ಟೀಕೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದುವರಿಸಿದ್ದಾರೆ.

ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಒತ್ತಡ ನಿವಾರಣೆಗಾಗಿ ಸಲಹೆಗಳನ್ನು ಒಳಗೊಂಡ ‘ಎಕ್ಸಾಂ ವಾರಿಯರ್ಸ್‌’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳ ಬದುಕೇ ನಾಶವಾದಾಗ ಒತ್ತಡ ನಿವಾರಣೆ ಹೇಗೆ ಎಂಬುದನ್ನು ತಿಳಿಸುವ ಎಕ್ಸಾಂ ವಾರಿಯರ್‌–2 ಎಂಬ ಪುಸ್ತಕವನ್ನು ಪ್ರಧಾನಿ ಈಗ ಬರೆಯಬೇಕು ಎಂದು ರಾಹುಲ್‌ ಹೇಳಿದ್ದಾರೆ.

ಹೀಗೆ ಟೀಕಿಸುವ ಟ್ವೀಟ್‌ನ ಜತೆಗೆ ಮೋದಿ ಅವರು ಮಕ್ಕಳ ಜತೆ ಆಡುವ ಚಿತ್ರವೊಂದನ್ನೂ ರಾಹುಲ್‌ ಲಗತ್ತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry