7

ನಾಳೆಯಿಂದ ಮದ್ಯದ ದರ ಏರಿಕೆ

Published:
Updated:
ನಾಳೆಯಿಂದ ಮದ್ಯದ ದರ ಏರಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ‌‌‌‌‌ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಅಬಕಾರಿ ಸುಂಕ ಶೇ8ರಷ್ಟು ಹೆಚ್ಚಳವಾಗಲಿದ್ದು, ಏಪ್ರಿಲ್ 1ರಿಂದ ಮದ್ಯದ ದರವೂ ಏರಿಕೆಯಾಗಲಿದೆ.

2ರಿಂದ 18ನೇ ಸ್ಲ್ಯಾಬ್‌ಗಳಲ್ಲಿರುವ ಮದ್ಯದ ಬೆಲೆ ಮಾತ್ರ ಹೆಚ್ಚಳವಾಗಲಿದ್ದು, ಅಗ್ಗದ ದರದ ಮದ್ಯದ ಬೆಲೆಯಲ್ಲಿ ವ್ಯತ್ಯಾಸ ಆಗುವುದಿಲ್ಲ. ರಾಜಾ ವಿಸ್ಕಿ, ವಿಂಡ್ಸರ್, ಹೈವರ್ಡ್ಸ್, ಜಾಕಿಯಂಥ ಬ್ರ್ಯಾಂಡ್‌ಗಳು ಅಗ್ಗದ ದರದ ಮದ್ಯದ ಪಟ್ಟಿಯಲ್ಲಿವೆ.

ಸ್ಲ್ಯಾಬ್‌ ಬದಲಾವಣೆಗೆ ಮದ್ಯದ ಕಂಪೆನಿಗಳಿಗೆ ಅವಕಾಶ ಇದೆ. ಯಾವ ಸ್ಲ್ಯಾಬ್‌ನಲ್ಲಿ ತಮ್ಮ ಬ್ರ್ಯಾಂಡ್‌ ಇರಬೇಕು ಎಂಬುದನ್ನು ಆಯಾ ಕಂಪೆನಿಗಳೇ ನಿರ್ಧರಿಸಿ, ದರ ನಿಗದಿಪಡಿಸಿ ಅಬಕಾರಿ ಇಲಾಖೆಯ ಅನುಮೋದನೆ ಪಡೆಯಲಿವೆ. ಅದೇ ದರದಲ್ಲಿ ಪಾನೀಯ ನಿಗಮ ಮದ್ಯದ ಅಂಗಡಿಗಳಿಗೆ ಮದ್ಯ ಪೂರೈಸಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಕಡಿಮೆಯಾಗಿದ್ದ ವರದಮಾನ: 2017–18ನೇ ಸಾಲಿನಲ್ಲಿ ₹ 18,050 ಕೋಟಿ ವರಮಾನ ಸಂಗ್ರಹಿಸುವ ಗುರಿಯನ್ನು ಅಬಕಾರಿ ಇಲಾಖೆ ಹೊಂದಿತ್ತು. ಅಗ್ಗದ ದರದ ಮದ್ಯದ ಮೇಲೆ ಶೇ 6ರಷ್ಟು ಹಾಗೂ ದುಬಾರಿ ದರದ ಮದ್ಯಕ್ಕೆ ಶೇ 15ರಿಂದ ಶೇ 21ರಷ್ಟು ಸುಂಕ ಹೆಚ್ಚಳ ಮಾಡಿತ್ತು. ಹೀಗಾಗಿ ನಿಗದಿಗಿಂತ ಹೆಚ್ಚಿನ ವರಮಾನ ಸಂಗ್ರಹವಾಗುವ ನಿರೀಕ್ಷೆಯನ್ನು ಅಬಕಾರಿ ಇಲಾಖೆ ಹೊಂದಿತ್ತು. ಆದರೆ, ಸುಪ್ರೀಂ ಕೋರ್ಟ್‌ ಆದೇಶದಂತೆ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳು ಜುಲೈನಿಂದ ಮೂರು ತಿಂಗಳು ಮುಚ್ಚಿದ್ದರಿಂದ ಮದ್ಯ ಮಾರಾಟ ಕುಸಿತವಾಗಿ ವರಮಾನ ನಿಗದಿತ ಗುರಿಗಿಂತ ₹450 ಕೋಟಿ ಕಡಿಮೆ ಸಂಗ್ರಹವಾಯಿತು.

2018–19ನೇ ಸಾಲಿಗೆ ಶೇ 8ರಷ್ಟು ಸುಂಕ ಹೆಚ್ಚಿಸಿರುವ ಅಬಕಾರಿ ಇಲಾಖೆ, ₹18,750 ಕೋಟಿ ವರಮಾನ ಸಂಗ್ರಹಿಸುವ ಗುರಿ ಹೊಂದಿದೆ.

ಬಿಯರ್ ದರ ಹೆಚ್ಚಳ ಇಲ್ಲ

ಮದ್ಯದ ದರ ಮಾತ್ರ ಹೆಚ್ಚಳ ವಾಗಲಿದ್ದು, ಬಿಯರ್ ದರದಲ್ಲಿ ವ್ಯತ್ಯಾಸ ಆಗುವುದಿಲ್ಲ. ಬಜೆಟ್‌ನಲ್ಲಿ ಐಎಂಎಲ್‌(ಇಂಡಿಯನ್ ಮೇಡ್ ಲಿಕ್ಕರ್) ಸುಂಕ ಹೆಚ್ಚಳಕ್ಕೆ ಮಾತ್ರ ಪ್ರಸ್ತಾಪಿಸಲಾಗಿದೆ ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಎಸ್.ಎಲ್. ರಾಜೇಂದ್ರ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry