ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟದಲ್ಲಿ ಚಾರಣಕ್ಕೆ ಅವಕಾಶ

Last Updated 30 ಮಾರ್ಚ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ಆನೆಗಳ ಬೀಡಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಬೇಸಿಗೆ ಮುಗಿದ ನಂತರ ಇದನ್ನು ಪ್ರಾರಂಭಿಸುವ ಆಲೋಚನೆಯನ್ನು ಇಲಾಖೆ ಹೊಂದಿದೆ. ಜೊತೆಗೆ, ಸ್ಥಗಿತಗೊಳಿಸಿರುವ ಹನ್ನೊಂದು ಬಗೆಯ ಇಕೊ ಟ್ರಯಲ್ಸ್‌ಗೆ ಚಾಲನೆ ದೊರೆಯಲಿದೆ.

ಇದಕ್ಕಾಗಿ ಇಲಾಖೆ ಹೊಸದಾಗಿ 1.7 ಕಿ.ಮೀ ಉದ್ದದ ನಡಿಗೆ ಪಥವನ್ನು ನಿರ್ಮಿಸಿದೆ. ನಗರಕ್ಕೆ ಹತ್ತಿರವಿರುವ ಕಲ್ಕರೆ ಭಾಗದಲ್ಲಿ ಚಾರಣಕ್ಕೆ ಪಥವನ್ನು ಗುರುತಿಸಲಾಗಿದೆ. ಕಾಡಿನ ಎಲ್ಲಾ ಸೌಂದರ್ಯವನ್ನು ಸವಿಯಲು ಸಾಧ್ಯವಾಗುವಂತಹ ಯೋಜನೆಯನ್ನು ಇಲಾಖೆ ರೂಪಿಸಿದೆ.

ಬನ್ನೇರುಘಟ್ಟದಿಂದ ಆನೇಕಲ್‌ಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ಹೋದರೆ, ಶಿವನಹಳ್ಳಿ ರಸ್ತೆ ಸಿಗುತ್ತದೆ. ಈ ಮಾರ್ಗದಲ್ಲಿಯೇ ಹೆಚ್ಚಿನ ಪ್ರವಾಸಿಗರು ಬನ್ನೇರುಘಟ್ಟ ಉದ್ಯಾನ ಪ್ರವೇಶಿಸುತ್ತಾರೆ. ಇಲ್ಲಿಂದ ಹಾಗೆಯೇ ಸ್ವಲ್ಪ ಮುಂದೆ ಹೋದರೆ ಕಲ್ಲುಬಂಡೆಗಳಿಂದ ಕೂಡಿದ ಒಂದು ಸ್ಥಳವೊಂದು ಸಿಗುತ್ತದೆ. ಇಲ್ಲಿಂದಲೇ ಬನ್ನೇರುಘಟ್ಟದ ವಹಿನಿಗಿರಿ ಬೆಟ್ಟದ ವಿಹಂಗಮ ನೋಟ ಕಾಣಸಿಗುತ್ತದೆ.

‘ಚಾರಣವು ಜಾಲರಿ ಕಣಿವೆಯಿಂದ ಪ್ರಾರಂಭಗೊಂಡು, ಗಂಧದ ಮರಗಳ ಪ್ರದೇಶ, ಕೆರೆ, ಅರಣ್ಯ ಪ್ರದೇಶ, ಹುಲ್ಲುಗಾವಲು ಮತ್ತು ಕಲ್ಲುಬಂಡೆಗಳತ್ತ ಸಾಗುತ್ತದೆ. ವಿರಮಿಸಿಕೊಳ್ಳಲು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.

‘ನಗರಕ್ಕೆ ಹತ್ತಿರವಿರುವುದರಿಂದ ಈ ಮಾರ್ಗವನ್ನು ಆಯ್ದುಕೊಂಡಿದ್ದೇವೆ. ನಗರದ ಜನರು ಬನ್ನೇರುಘಟ್ಟ ಉದ್ಯಾನದ ಬಗ್ಗೆ ಇನ್ನಷ್ಟು ಪ್ರೀತಿ ಬೆಳೆಸಿಕೊಂಡು ಅದನ್ನು ಸಂರಕ್ಷಿಸಲು ಈ ಚಾರಣ ನೆರವಾಗಲಿದೆ’ ಎಂದರು.

‘ಫೆಬ್ರುವರಿ ಮೊದಲ ವಾರದಲ್ಲಿ ಪರಿಸರ ಶಿಕ್ಷಣ ಕೇಂದ್ರದ ಸಂಶೋಧಕರು ಇದೇ ಮಾರ್ಗದಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಕೃತಿ ಶಿಕ್ಷಣದ ಭಾಗವಾಗಿ ಪ್ರೌಢಶಾಲಾ ಮಕ್ಕಳು ಇಲ್ಲಿ ಚಾರಣ ನಡೆಸಿದ್ದರು’ ಎಂದು ಮಾಹಿತಿ ತಿಳಿಸಿದರು.

ಈ ಚಾರಣ ಪಥಕ್ಕೂ ವಿವಿಧ ರೀತಿಯ 11 ಇಕೊ ಟ್ರಯಲ್‌ಗಳು ಭಿನ್ನವಾದವು. ಹವಾಮಾನ, ಭೌಗೋಳಿಕತೆ ಮತ್ತು ಆನೆ ಚಲನ
ಗಮನದಲ್ಲಿಟ್ಟುಕೊಂಡು ಈ ನಡಿಗೆಗಳನ್ನು ರೂಪಿಸಲಾಗುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT