ಮೂರು ತಿಂಗಳಿಂದ ಇಲ್ಲ ವೇತನ!

7

ಮೂರು ತಿಂಗಳಿಂದ ಇಲ್ಲ ವೇತನ!

Published:
Updated:

ಬೆಂಗಳೂರು: ಮೂರು ತಿಂಗಳುಗಳಿಂದ ವೇತನ ಸಿಗದೆ ತೊಂದರೆಗೆ ಸಿಲುಕಿರುವ ಪೌರಕಾರ್ಮಿಕರಿಗೆ ತಕ್ಷಣ ವೇತನ ಪಾವತಿಸುವಂತೆ ವೈಟ್‌ಫೀಲ್ಡ್‌ ನಿವಾಸಿಗಳು ಗುರುವಾರ ಒತ್ತಾಯಿಸಿದ್ದಾರೆ.

ಸೇವೆ ಕಾಯಂಗೊಂಡಿರುವ ಪೌರಕಾರ್ಮಿಕರ ಬಯೋಮೆಟ್ರಿಕ್‌ ಪಡೆದು, ಅವರ ಖಾತೆಗೆ ನೇರವಾಗಿ ವೇತನ ಪಾವತಿಸುವ ವ್ಯವಸ್ಥೆಯನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ.

ಆದರೆ, ಕಸ ಗುಡಿಸುವ ಯಂತ್ರ ನಿರ್ವಹಿಸುವ ಮತ್ತು ಒಣ ಕಸ ಸಂಗ್ರಹ ಕೇಂದ್ರಗಳಲ್ಲಿ ಕೆಲಸ ಮಾಡುವ ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಪೌರಕಾರ್ಮಿಕರಿಗೆ ಬಿಬಿಎಂಪಿ ಮೂರು ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಇದರಿಂದಾಗಿ ಪೌರಕಾರ್ಮಿಕರು ಈ ಭಾಗದಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸರಿಯಾದ ನಿರ್ವಹಣೆ ಇಲ್ಲದೆ ಘನತ್ಯಾಜ್ಯ ಸಂಗ್ರಹ ಕೇಂದ್ರಗಳ ಸ್ಥಿತಿಯೂ ಶೋಚನೀಯವಾಗಿದೆ ಎಂದು ಘನತ್ಯಾಜ್ಯ ವಿಲೇವಾರಿ ಮಾಡುವ ಸ್ವಯಂಸ್ವೇವಕಿಯೊಬ್ಬರು ದೂರಿದರು.‌

‘ಬಿಬಿಎಂಪಿ ಎದುರು ಪ್ರತಿಭಟಿಸಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲು ಬಂದಿದ್ದೆವು. ಆದರೆ, ನಮ್ಮ ಮನವಿ ಆಲಿಸಲು ಯಾವೊಬ್ಬ ಅಧಿಕಾರಿಯೂ ಲಭಿಸಲಿಲ್ಲ’ ಎಂದು ಅವರು ತಿಳಿಸಿದರು.

ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನರಸಿಂಹರಾವ್‌, ‘ಸಿಬ್ಬಂದಿ ಕೊರತೆಯಿಂದ ವೇತನ ಪಾವತಿ ವಿಳಂಬವಾಗುತ್ತಿದೆ. ಮಹದೇವಪುರ ಮತ್ತು ಕೆ.ಆರ್‌.ಪುರ ಕ್ಷೇತ್ರಗಳಲ್ಲಿ ಈ ಸಮಸ್ಯೆ ಇದೆ. ಪೌರಕಾರ್ಮಿಕರ ಸೇವಾ ಹಿರಿತನದ ಮೇಲೆ ವೇತನ ಪಾವತಿಸುತ್ತಿದ್ದೇವೆ. ಪೌರಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲು ಬೇಕಾಗುವಷ್ಟು ಸಿಬ್ಬಂದಿ ನಮ್ಮಲ್ಲಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಕೇಂದ್ರ ಸ್ಥಾನದಲ್ಲಿರಲು ಸೂಚನೆ

ವಿಧಾನಸಭೆ ಚುನಾವಣೆ ಪೂರ್ಣಗೊಳ್ಳುವವರೆಗೆ ಸರ್ಕಾರಿ ರಜೆಗಳು ಹಾಗೂ ಎರಡನೇ ಶನಿವಾರ, ಭಾನುವಾರಗಳಂದು ಎಲ್ಲ ಅಧಿಕಾರಿಗಳು, ಸಿಬ್ಬಂದಿ ರಜೆ ಪಡೆಯದೆ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚುನಾವಣಾ ಕಾರ್ಯನಿರತ ಹಿರಿಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೊರ ಗುತ್ತಿಗೆ ಸಿಬ್ಬಂದಿ ಒಳಗೊಂಡಂತೆ ಎಲ್ಲರೂ ಸಹ ತಪ್ಪದೇ ಪಾಲಿಸಬೇಕು. ತಪ್ಪಿದಲ್ಲಿ ಮಾದರಿ ನೀತಿ ಸಂಹಿತೆಯಂತೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರಡಿ ಶಿಸ್ತು ಕ್ರಮ ಜರುಗಿಸಲಾಗುವುದು. ಅನಿವಾರ್ಯ ಸಂದರ್ಭ ಮಾತ್ರ ಆಯುಕ್ತರ ಅನುಮತಿ ಪಡೆದು ರಜೆ ತೆಗೆದುಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry