ನೈತಿಕತೆ ಉಳಿಸಿಕೊಂಡವರ ಬೆಂಬಲಿಸಿ

7
ರಾಂಪುರ: ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಜಗದೀಶ ಶೆಟ್ಟರ್ ಮನವಿ

ನೈತಿಕತೆ ಉಳಿಸಿಕೊಂಡವರ ಬೆಂಬಲಿಸಿ

Published:
Updated:
ನೈತಿಕತೆ ಉಳಿಸಿಕೊಂಡವರ ಬೆಂಬಲಿಸಿ

ರಾಂಪುರ (ಬಾಗಲಕೋಟೆ): ಸಾರ್ವಜನಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ನೈತಿಕತೆ ಉಳಿಸಿಕೊಂಡಿರುವ ವೀರಣ್ಣ ಚರಂತಿಮಠ ಅವರನ್ನು ಶಾಸಕರಾಗಿ ಆಯ್ಕೆ ಮಾಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮನವಿ ಮಾಡಿದರು.ತಾಲ್ಲೂಕಿನ ರಾಂಪುರದಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ನೈತಿಕತೆ ವಿಚಾರದಲ್ಲಿ ಹಾಲಿ ಶಾಸಕ ಮೇಟಿ ಅವರ ಬಗ್ಗೆ ಹೇಳುವುದು ಏನೂ ಉಳಿದಿಲ್ಲ ಎಂದು ಟೀಕಿಸಿದ ಶೆಟ್ಟರ್, ಚರಂತಿಮಠ ನಿಜವಾದ ಸ್ವಾಮಿ, ವೈಯಕ್ತಿಕ ಬದುಕಲ್ಲಿ ಪ್ರಾಮಾಣಿಕತೆ, ನೈತಿಕತೆ ಉಳಿಸಿಕೊಂಡಿದ್ದಾರೆ ಎಂದರು.

‘ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಕೋಮುಗಲಭೆ, ದುರಾಡಳಿತ, ಕೊಲೆ - ಸುಲಿಗೆಯಲ್ಲಿ ಕರ್ನಾಟಕ ದೇಶದಲ್ಲಿಯೇ ನಂ೧ ರಾಜ್ಯ ಎನಿಸಿದೆ. ಇಷ್ಟೊಂದು ದುರಾಡಳಿತ ನಡೆದರೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿವಿ ಹಿಂಡುವ ಕೆಲಸ ಮಾಡಲಿಲ್ಲ. ಬದಲಿಗೆ ಕಳೆದ ಐದು ವರ್ಷಗಳಲ್ಲಿ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಕರ್ನಾಟಕವನ್ನು ಎಟಿಎಂ ರೀತಿ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೀತಿ ರಾಜ್ಯದಲ್ಲೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಲಾಯಿತು. ಅದಕ್ಕೆ ಅವರು ಕಿವಿಗೊಡಲಿಲ್ಲ. ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ₹8 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾಗಿ ಬೆನ್ನು ತಟ್ಟಿಕೊಳ್ಳುತ್ತಿದೆ. ಆದರೆ ಸೊಸೈಟಿಗಳಿಗೆ ಕೇವಲ ₹2 ಸಾವಿರ ಕೋಟಿ ಮಾತ್ರ ತುಂಬಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ. ಈ ಬಾರಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ಸರ್ಕಾರ ಸಾಲ ತೀರಿಸಲಿದೆ’ ಎಂದು ಹೇಳಿದರು.

‘ನಾವು ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಕೊಡುವುದಾಗಿ ಚುನಾವಣೆಗೆ ಮುನ್ನ ಹೇಳಿದ್ದರು. ಅದಕ್ಕಾಗಿಯೇ ಕೃಷ್ಣೆಯ ಕಡೆಗೆ ಕಾಂಗ್ರೆಸ್‌ ನಡಿಗೆ ಆಯೋಜಿಸಿದ್ದರು. ಆದರೆ ಈಗ ಮಾತು ತಪ್ಪಿದ್ದಾರೆ. ಯೋಜನೆಗೆ ಸರಿಯಾಗಿ ಹಣ ಬಿಡುಗಡೆಯಾಗದ ಕಾರಣ ಸಂತ್ರಸ್ತರ ಗೋಳು ಹೇಳತೀರದಾಗಿದೆ ಎಂದರು.

ಕೊನೆಯ ಮುಖ್ಯಮಂತ್ರಿ: ‘ಮಾಲೀಕಯ್ಯ ಗುತ್ತೇದಾರ ಮೂಲಕ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಆರಂಭಿಸಿದ್ದಾರೆ. ಶನಿವಾರದಿಂದ ಇನ್ನಷ್ಟು ಮಂದಿ ಪಾಳಿ ಹಚ್ಚಲಿದ್ದಾರೆ. ಈಗ ರಾಜ್ಯ ಸರ್ಕಾರದ ಅಂತಿಮ ಯಾತ್ರೆ ಆರಂಭವಾಗಿದೆ. ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಶೆಟ್ಟರ್ ಹೇಳಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಕಾರ್ಯವೈಖರಿಯಿಂದಾಗಿ ಇಡೀ ವಿಶ್ವದಲ್ಲಿಯೇ ಭಾರತ ಅಭಿವೃದ್ಧಿಪಥದಲ್ಲಿ ಸಾಗುತ್ತಿರುವ ಏಕೈಕ ದೇಶವಾಗಿದೆ. ಬಡವರ ಕಲ್ಯಾಣಕ್ಕೆ ಬಹಳಷ್ಟು ಕಾರ್ಯಕ್ರಮ ನೀಡಿದ್ದಾರೆ’ ಎಂದರು. ಕೇಂದ್ರ ಸರ್ಕಾರದ ಯೋಜನೆ ಗಳನ್ನು ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬಿಡಲಿಲ್ಲ. ಫಸಲು ಬಿಮಾ ಯೋಜನೆಯನ್ನು ರೈತರಿಗೆ ಸರಿಯಾಗಿ ಮುಟ್ಟಿಸಲಿಲ್ಲ ಎಂದರು.ದೇಶದಲ್ಲಿ ಯೂರಿಯಾ ಕೊರತೆ ನೀಗಿಸಲು ಬೇವು ಲೇಪನ ಆರಂಭಿಸಿ ರೈತರಿಗೆ ಆಗುತ್ತಿರುವ ತೊಂದರೆ ಪ್ರಧಾನಿ ನರೇಂದ್ರ ಮೋದಿ ನಿವಾರಿಸಿದ್ದಾರೆ. ಜನರ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುವ ಜೊತೆಗೆ, ಬ್ಯಾಂಕಿಂಗ್ ಹಾಗೂ ವಿಮಾ ಕ್ಷೇತ್ರಗಳಲ್ಲಿ ಸುಧಾರಣೆ ತಂದಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ, ಜಿಲ್ಲಾ ಪಂಚಾಯ್ತಿ ಸದಸ್ಯ ವೀರೇಶ ಉಂಡೋಡಿ, ಮುಖಂಡರಾದ ರಾಜು ನಾಯ್ಕರ, ಅಶೋಕ ಲಾಗಲೋಟಿ, ಸವಿತಾ ಲೆಂಕಣ್ಣವರ, ರಾಧಾ ಆಕಳವಾಡಿ, ಬಸವರಾಜ ಮೇಟಿ, ಬಸವರಾಜ ಅವರಾದಿ ಇದ್ದರು.

‘ಅಭಿವೃದ್ಧಿ ಶೂನ್ಯ, ಬರೀ ದ್ವೇಷ ರಾಜಕಾರಣ’

‘ಬಾಗಲಕೋಟೆ ಹಾಗೂ ಹುನಗುಂದ ಕ್ಷೇತ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯ. ಬದಲಿಗೆ ದ್ವೇಷದ ರಾಜಕಾರಣವೇ ಮುನ್ನೆಲೆಯಾಗಿತ್ತು’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ವಾಗ್ದಾಳಿ ನಡೆಸಿದರು.’ರಾಜಕೀಯ ವಿರೋಧಿಗಳನ್ನು ಹಾಗೂ ದುರಾಡಳಿತ ಟೀಕಿಸಿದವರನ್ನು ಪೊಲೀಸರನ್ನು ಮುಂದಿಟ್ಟುಕೊಂಡು ಪ್ರಕರಣ ದಾಖಲಿಸಿದ್ದು, ದಲಿತ ದೌರ್ಜನ್ಯ ಕಾಯ್ದೆಯನ್ನು (ಅಟ್ರಾಸಿಟಿ) ದುರುಪಯೋಗಪಡಿಸಿಕೊಂಡಿರುವುದು ಈ ಕ್ಷೇತ್ರಗಳ ಶಾಸಕರ ಸಾಧನೆ’ ಎಂದು ಟೀಕಿಸಿದರು.

ಸುಳ್ಳು ಆರೋಪ: ‘ಚುನಾವಣೆ ನೀತಿ ಸಂಹಿತೆಯ ಕಾರಣ ಬೋಡನಾಯಕನದಿನ್ನಿಯಲ್ಲಿ ಸಾಮೂಹಿಕ ಲಗ್ನ, ಜಾತ್ರೆಗೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ. ಜಾತ್ರೆ, ಹಬ್ಬ–ಹರಿದಿನಗಳಿಗೆ ನಾವು ಹೆಚ್ಚು ಬೆಂಬಲ ನೀಡುತ್ತೇವೆ. ಆದರೂ ಕಾರ್ಯಕ್ರಮ ಸ್ಥಗಿತಗೊಳ್ಳಲು ನಾನೇ ಕಾರಣ ಎಂದು ಶಾಸಕ ಮೇಟಿ ಹಾಗೂ ಅವರ ಬೆಂಬಲಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸಾಮೂಹಿಕ ಲಗ್ನದ ವಿಚಾರವೇ ನನ್ನ ಗಮನಕ್ಕೆ ಬಂದಿರಲಿಲ್ಲ’ ಎಂದು ಚರಂತಿಮಠ ಸ್ಪಷ್ಟಪಡಿಸಿದರು.ಸಮಾರಂಭದಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry