3
ಮಾರಕಾಸ್ತ್ರ, ಹಣ, ಚಿನ್ನಾಭರಣ, ಮೊಬೈಲ್‌ ವಶ

9 ಮಂದಿ ಅಂತರರಾಜ್ಯ ಡಕಾಯಿತರ ಬಂಧನ

Published:
Updated:

ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿ– ಬೆಂಡಿಗೇರಿ ರಸ್ತೆಯ ಕುಕಡೊಳ್ಳಿ ಬಳಿ ಒಂಟಿ ಮನೆಗಳಲ್ಲಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 9 ಮಂದಿ ಅಂತರರಾಜ್ಯ ಡಕಾಯಿತರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಅವರಿಂದ ₹ 93ಸಾವಿರ ಮೌಲ್ಯದ ಚಿನ್ನಾಭರಣ, ₹ 17,350 ನಗದು, 7 ಮೊಬೈಲ್‌ ಫೋನ್‌, ಕ್ರೂಸರ್‌ ವಾಹನ, ಲಾಂಗ್‌ ಸೇರಿದಂತೆ ಮಾರಕಾಸ್ತ್ರಗಳು, ಬಡಿಗೆ, ಖಾರದಪುಡಿ ಪಾಕೆಟ್‌, ಕಟ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರದ ಬ್ರಾಹ್ಮಣ ಚಾಳ ಪಕ್ಕದ ಮರಗಮ್ಮ ಗುಡಿ ಸಮೀಪದ ನಿವಾಸಿ ಶಿವಾಜಿ ಅಲಿಯಾಸ್‌ ಸುರೇಶ (32), ಪುಣೆಯ ಇಂದಾಪುರದ ಸತೀಶ ಕಲ್ಲಪ್ಪ ಚವಾಣ (35), ಸೊಲ್ಲಾಪುರದ ಹಡಮಗಾಂವದ ಗೋವಿಂದ ಸಂಜು ಕಾಳೆ (19), ಅಶೋಕ ನಾಮದೇವ ಚವಾಣ (30), ಗೋಪಾಲ ಸಂಜು ಕಾಳೆ (19) ಅಹ್ಮದನಗಗರ ಅನಿಲ ಅಲಿಯಾಸ್‌ ಸೋನು (20), ಬಾಹುಸಾಬ ಅಲಿಯಾಸ್‌ ಅಪ್ಪಾಸಾಹೇಬ (28), ಅಶೋಕ ಚವಾಣ (30) ಸೊಲ್ಲಾಪುರದ ಸಮಾಧಾನನಗರದ ವಿರೂಪಾಕ್ಷಿ ಗಂಗಾಧರ ಪಾಟೀಲ (28)  ಬಂಧಿತ ಆರೋಪಿಗಳು. ಇವರು ಸೆಂಟ್ರಿಂಗ್‌, ಗಾರೆ ಕೆಲಸ, ಡ್ರೈವರ್‌, ಹೂಮಾರುವ ಕೆಲಸ ಮಾಡುತ್ತಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

ವಿವಿಧೆಡೆ ಕೃತ್ಯ: ‘ಇವರೆಲ್ಲರೂ ಆರು ಹಲ್ಲಿನ ಚೂರಿ, ಲಾಂಗ್‌ ಸೇರಿದಂತೆ ಮಾರಕಾಸ್ತ್ರಗಳು, ಬಡಿಗೆಗಳು, ಖಾರದಪುಡಿ ಪಾಕೆಟ್‌ಗಳನ್ನು ತೆಗೆದುಕೊಂಡು ದರೋಡೆ ಮಾಡುವ ತಯಾರಿಯಲ್ಲಿದ್ದರು. ಖಚಿತ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್‌ ಎಸ್‌.ಸಿ. ಪಾಟೀಲಗೆ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ’ ಎಂದು ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಮಾಹಿತಿ ನೀಡಿದ್ದಾರೆ.

‘ಆರೋಪಿಗಳು, ಇದೇ 26ರಂದು ಬೆಳಗಿನ ಜಾವ ಕೊಪ್ಪಳ ಸಮೀಪದ ಗಿಣಿಗೇರಾ ಗ್ರಾಮ ವ್ಯಾಪ್ತಿಯ ರಾಜ್ಯ ಹೆದ್ದಾರಿ ಪಕ್ಕದ ಒಂಟಿ ಮನೆಗಳಲ್ಲಿ ಕಳವು ಮಾಡಿದ್ದಾರೆ. ಬಾಗಿಲಿಗೆ ದೊಡ್ಡ ಬುನಾದಿ ಕಲ್ಲಿನಿಂದ ಗುದ್ದಿ, ಬಾಗಿಲು ಮುರಿದು ಮನೆಗೆ ನುಗ್ಗಿ ವ್ಯಕ್ತಿಯ ಕೈಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಅವರಿಂದ ₹ 7000 ನಗದು ಹಾಗೂ ಒಂದು ಮೊಬೈಲ್‌ ಫೋನ್‌ ಸುಲಿಗೆ ಮಾಡಿದ್ದಾರೆ. ಸಮೀಪದಲ್ಲಿದ್ದ ಇನ್ನೊಂದು ಮನೆಗೂ ನುಗ್ಗಿ ಕುಟುಂಬದವರಿಗೆ ಹಲ್ಲೆ ಮಾಡಿ ₹ 43ಸಾವಿರ ನಗದು, ಒಂದು ಜೊತೆ ಓಲೆ, ಬಂಗಾರದ ಸರ, ಫೋನ್‌ ಸುಲಿಗೆ ಮಾಡಿರುವುದನ್ನು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಕುರಿತು ಕೊಪ್ಪಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಹೇಳಿದ್ದಾರೆ.

ಇನ್ನೂ ಹಲವು ಪ್ರಕರಣಗಳಲ್ಲಿ: ‘ಇದೇ 28ರಂದು ಬೆಳಗಿನ ಜಾವ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮನೆಯವರನ್ನು ಬೆದರಿಸಿ, ಮಂಗಳಸೂತ್ರ, ಬಂಗಾರದ ಸರ, ಉಂಗುರ, ₹ 25ಸಾವಿರ ನಗದು, 2 ಮೊಬೈಲ್‌ ಫೋನ್ ಡಕಾಯಿತಿ ಮಾಡಿದ್ದಾರೆ. ಸಮೀಪದ ವೈನ್‌ಶಾಪ್‌ ಶೆಟರ್‌ನ ಬೀಗ ಮುರಿದು ಸಿಸಿಟಿವಿ ಕ್ಯಾಮೆರಾ ಜಖಂಗೊಳಿಸಿ, ₹ 2ಸಾವಿರ ನಗದು ಹಾಗೂ ಮದ್ಯದ ಬಾಟಲಿಗಳನ್ನು ಕಳವು ಮಾಡಿರುವ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

‘ಇವರು ಇನ್ನೂ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ. ದೇವಸ್ಥಾನ ಹಾಗೂ ಜಾತ್ರೆಗೆ ಗುಂಪಾಗಿ ಹೋಗುವವರ ಸೋಗಿನಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಾ, ರಾತ್ರಿ ವೇಳೆ ಸುಲಿಗೆ ಮತ್ತು ಡಕಾಯಿತಿ ಮಾಡುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದಾರೆ. ಹಿರೇಬಾಗೇವಾಡಿ ಠಾಣೆಯಲ್ಲಿ

ಪ್ರಕರಣ ದಾಖಲಾಗಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry