‘ಖುಷಿ ತಂದ ಗೊಂಬೆಯಾಟ ಉತ್ಸವ’

7
ಮ್ಯಾನ್ಮಾರ್‌ನಲ್ಲಿ ಮಾ. 25ರಂದು ನಡೆದ ಅಂತರ ರಾಷ್ಟ್ರೀಯ ಗೊಂಬೆಯಾಟ

‘ಖುಷಿ ತಂದ ಗೊಂಬೆಯಾಟ ಉತ್ಸವ’

Published:
Updated:
‘ಖುಷಿ ತಂದ ಗೊಂಬೆಯಾಟ ಉತ್ಸವ’

ಬಳ್ಳಾರಿ: ‘ಮ್ಯಾನ್ಮರ್‌ನಲ್ಲಿ ಮಾ.25ರಂದು ಜರುಗಿದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಗೊಂಬೆಯಾಟ ಉತ್ಸವದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದು ಅಸ್ಮರಣೀಯ’ ಎಂದು ಹಿರಿಯ ರಂಗಭೂಮಿ ಕಲಾವಿದ ಬೆಳಗಲ್ಲು ವೀರಣ್ಣ ನುಡಿದರು. ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾನ್ಮಾರ್ ಪ್ರವಾಸದ ಅನುಭವ ಹಂಚಿಕೊಂಡರು.

‘ಆಸ್ಟ್ರೇಲಿಯಾ, ಚೀನಾ, ಫ್ರಾನ್ಸ್‌, ಇಂಡೋನೇಷ್ಯಾ, ಇಸ್ರೇಲ್, ಥಾಯ್ಲೆಂಡ್‌, ಅಮೆರಿಕ, ಮ್ಯಾನ್ಮಾರ್‌ ರಾಷ್ಟ್ರಗಳ ಸುಮಾರು 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು’ ಎಂದರು.‘ಉತ್ಸವದಲ್ಲಿ ಪ್ರದರ್ಶನಗೊಂಡ ಮಹಾತ್ಮ ಗಾಂಧೀಜಿ ಜೀವನಾಧಾರಿತ ‘ಬಾಪೂಜಿ’ ರೂಪಕ ಮೆಚ್ಚುಗೆಗೆ ಪಾತ್ರವಾಯಿತು. ನಿರೂಪಣೆ ಮತ್ತು ಸಂಭಾಷಣೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಹಾಡುಗಳನ್ನು ಕನ್ನಡದಲ್ಲಿ ಪ್ರಸ್ತುತ ಪಡಿಸಲಾಯಿತು’ ಎಂದರು.

‘ಪ್ರವಾಸಕ್ಕೂ ಮುನ್ನವೇ  ಬಾಪೂಜಿ ರೂಪಕವನ್ನು ಕನ್ನಡ ಭಾಷೆಯಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಕಳಿಸಿಕೊಡಲಾಗಿತ್ತು. ಹೀಗಾಗಿ ‘ಬಾ‌ಪೂಜಿ’ ರೂಪಕ ಪ್ರಸ್ತುತ ಪಡಿಸುವಾಗ ವೇದಿಕೆಯ ಎಡ ಮತ್ತು ಬಲ ಭಾಗದ ಎಲ್‌ಇಡಿ ಪರದೆಯಲ್ಲಿ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ತಿಳಿಸಲಾಗುತ್ತಿತ್ತು. ಇದರಿಂದ ಅಲ್ಲಿನ ಜನರಿಗೆ ‘ಬಾಪೂಜಿ’ ತಲುಪಲು ಸಾಧ್ಯವಾಯಿತು’ ಎಂದು ವಿವರಿಸಿದರು.

‘1991ರಲ್ಲಿ ಗಾಂಧೀಜಿ ಅವರ ಜೀವನ ಆಧಾರಿತ ತೊಗಲು ಗೊಂಬೆಯಾಟ ರಚಿಸಲಾಯಿತು. ಈ ರೂಪಕ ಈಗಾಗಲೇ ದೇಶ ಮತ್ತು ವಿದೇಶಿಗಳಲ್ಲಿ ಪ್ರದರ್ಶನ ಕಂಡಿದೆ. ಈ ಮೊದಲು ಸ್ವಿಟ್ಜರ್‌ಲೆಂಡ್‌, ಜರ್ಮನಿ, ಇಂಡೋನೇಷ್ಯಾದಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ ಕಂಡಿದೆ.ಇದೇ ಫೆಬ್ರುವರಿಯಲ್ಲಿ ನವದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಶ್ರೀನಗರ ಸೇರಿದಂತೆ ಹಲವೆಡೆ ಪ್ರದರ್ಶಿಸಲಾಗಿತ್ತು. ಆದರೆ, ಭಾಷೆಯ ತೊಡಕು ಉಂಟಾಗಿತ್ತು. ಆದರೆ, ಮ್ಯಾನ್ಮಾರ್‌ಗೆ ಹೋಗುವ ಮುನ್ನ ಇಂಗ್ಲಿಷ್‌ ಭಾಷೆಗೆ ತರ್ಜುಮೆ ಮಾಡಿದ್ದರಿಂದ ಭಾಷೆಯ ತೊಡಕು ನಿವಾರಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

‘ಮ್ಯಾನ್ಮಾರ್‌ ಉತ್ಸವಕ್ಕೆ ಆಯ್ಕೆ ಮಾಡಿದ ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿಗೆ ನಾವು ಅಭಾರಿ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.‘ಮ್ಯಾನ್ಮಾರ್‌ನಲ್ಲಿರುವ ಭಾರತದ ರಾಯಭಾರಿ ತಪಶ್ ಕುಮಾರ್ ಚೆನ್ನಾಗಿ ಸ್ಪಂದಿಸಿದರು. ಬುದ್ಧ ಕಥೆಯನ್ನು ತೊಗಲುಗೊಂಬೆಯಾಟ ರೂಪಕ ಸಿದ್ಧಪಡಿಸಿ, ಇದನ್ನು ಮ್ಯಾನ್ಮಾರ್‌, ಥಾಯ್ಲೆಂಡ್‌, ವಿಯೆಟ್ನಾಂ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ  ಮಯನ್ಮಾರ್, ಥಾಯ್‌ಲ್ಯಾಂಡ್‌, ವಿಯೆಟ್ನಾಮ್ ಸೇರಿ ಮುಂತಾದ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಪ್ರದರ್ಶನ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಗಮನ ಹರಿಸಲಾಗುವುದು’ ಎಂದು ಹೇಳಿದರು.

ಕಲಾವಿದರಾದ ಬೆಳಗಲ್ಲು ಪ್ರಕಾಶ್, ಸಾಯಿಕುಮಾರ ಭಜಂತ್ರಿ, ಬಿ.ಎಂ.ಪವನ್, ಜಿ.ಪ್ರದೀಪ್‌ ಕುಮಾರ್, ಸುರೇಂದ್ರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.

**

ಬಳ್ಳಾರಿ ಜಿಲ್ಲೆಯಲ್ಲಿ ಅಂತರ ರಾಷ್ಟ್ರೀಯ ತೊಗಲುಗೊಂಬೆಯಾಟ ಏರ್ಪಡಿಸುವ ಆಲೋಚನೆ ಇದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು – ಬೆಳಗಲ್ಲು ವೀರಣ್ಣ, ರಂಗಭೂಮಿ ಕಲಾವಿದ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry