ಕಾಲುವೆಗೆ ನೀರು ಸ್ಥಗಿತ ಇಂದು ಮಧ್ಯರಾತ್ರಿಯಿಂದ

7

ಕಾಲುವೆಗೆ ನೀರು ಸ್ಥಗಿತ ಇಂದು ಮಧ್ಯರಾತ್ರಿಯಿಂದ

Published:
Updated:
ಕಾಲುವೆಗೆ ನೀರು ಸ್ಥಗಿತ ಇಂದು ಮಧ್ಯರಾತ್ರಿಯಿಂದ

ಆಲಮಟ್ಟಿ (ನಿಡಗುಂದಿ): ಹಿಂಗಾರು ಹಂಗಾಮಿನ ಕಾಲುವೆಗೆ ಹರಿಸುವ ನೀರಿನ ಅವಧಿ ಮುಗಿದ ಕಾರಣ ಇದೇ 31ರ ಮಧ್ಯರಾತ್ರಿಯಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸುವುದು ಸ್ಥಗಿತಗೊಳ್ಳಲಿದೆ.

ಕಳೆದ ನ 25ರಿಂದ ಹಿಂಗಾರು ಹಂಗಾಮಿಗೆ ಕಾಲುವೆಗೆ ವಾರಾಬಂಧಿ ಅನುಗುಣವಾಗಿ ಮಾರ್ಚ್ 25ರವರೆಗೆ ನೀರು ಹರಿಸಲು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಮಾರ್ಚ್ 24ರಂದು ನಡೆದ ಐಸಿಸಿಯ ತುರ್ತು ಸಭೆಯಲ್ಲಿ ಮಾರ್ಚ್ 31ರ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿತ್ತು. ಆ ಪ್ರಕಾರ ಮಾರ್ಚ್ 31ರ ಮಧ್ಯರಾತ್ರಿಯಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಕೆಬಿಜೆಎನ್‌ಎಲ್‌ ಪ್ರಭಾರ ಮುಖ್ಯ ಎಂಜಿನಿಯರ್‌ ಎಸ್‌.ಎಚ್. ಮಂಜಪ್ಪ ತಿಳಿಸಿದರು.

ಜಲಾಶಯದ ಮಟ್ಟ 508.50 ಮೀಟರ್ ಮೇಲಿನ ನೀರನ್ನು ಮಾತ್ರ ನಾರಾಯಣಪುರ ಜಲಾಶಯಕ್ಕೆ ಹರಿಸಲಾಗುವುದು. ಅದಕ್ಕೂ ಕೆಳಗಿನ ಡೆಡ್‌ಸ್ಟೋರೇಜ್‌ ಹಿಡಿದು (17.62 ಟಿಎಂಸಿ ಅಡಿ ಡೆಡ್‌ಸ್ಟೋರೇಜ್‌ ನೀರು) ಒಟ್ಟಾರೆ 23 ಟಿಎಂಸಿ ಅಡಿಯಷ್ಟು ನೀರನ್ನು ಜಲಾಶಯದಲ್ಲಿ ಹಿಡಿದಿಟ್ಟು ಕೊಳ್ಳಲಾಗುವುದು. ಇದರಿಂದ ಮುಂದಿನ ಜೂನ್‌ವರೆಗೆ ಕುಡಿಯುವ ನೀರು, ವಿದ್ಯುತ್ ಘಟಕಗಳಿಗೆ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

508.5 ಮೀ ಮಟ್ಟದಲ್ಲಿ ಲೈವ್‌ ಸ್ಟೋರೇಜ್ 5.5 ಟಿಎಂಸಿ ಅಡಿಯಷ್ಟು ಇರಲಿದ್ದು, ಇದರಲ್ಲಿಯೇ ಹೊಸ ನೀರಾವರಿ ಯೋಜನೆಯ ಕಾಲುವೆಗಳಿಗೂ ಪ್ರಾಯೋಗಿಕ ಪರೀಕ್ಷೆಗಾಗಿ ನೀರು ಅಗತ್ಯವಿದ್ದರೆ ಮಾತ್ರ ಹರಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಕಾಲುವೆ ಆಧುನೀಕರಣ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿಗೆ ₹65 ಕೋಟಿ ವೆಚ್ಚದಲ್ಲಿ ಟೆಂಡರ್‌ ಆಗಿದ್ದು, ಆ ಕಾಮಗಾರಿಯು ನೀರು ಸ್ಥಗಿತಗೊಂಡ ನಂತರ ಏಪ್ರಿಲ್ 15ರೊಳಗೆ ಆರಂಭಿಸಿ ಜುಲೈ ಅಂತ್ಯ ದೊಳಗೆ ಪೂರ್ಣಗೊಳಿ ಸಲಾಗುವುದು ಎಂದು ಎಎಲ್‌ಬಿಸಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಸಿ. ನಾಯ್ಕೋಡಿ ತಿಳಿಸಿದರು.

ಅನುಮತಿ: ನೀತಿ ಸಂಹಿತೆ ಇರುವುದರಿಂದ ಯಾವುದೇ ಟೆಂಡರ್ ಕರೆಯಲು ಬರುವುದಿಲ್ಲ. ಆದರೆ ಕಾಲುವೆಗಳ ದುರಸ್ತಿ ಕಾರ್ಯ ನೀರು ನಿಂತ ಇದೇ ಅವಧಿಯಲ್ಲಿಯೇ ನಡೆಯಬೇಕಿದೆ. ಹೊಸ ಟೆಂಡರ್ ಕರೆಯಲು ಚುನಾವಣಾ ಆಯೋಗದ ಅನುಮತಿ ಪಡೆಯುವುದು ಅನಿವಾರ್ಯ. ಅದಕ್ಕಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಪಡೆಯ ಲಾಗುವುದು ಎಂದು ಕೆಬಿಜೆಎನ್‌ಎಲ್‌ ಅಧಿಕಾರಿ ತಿಳಿಸಿದರು.

ಈಗಾಗಲೇ ಕಾಲುವೆಗಳ ದುರಸ್ತಿಯ ಅಂದಾಜು ಪತ್ರಿಕೆ ತಯಾರಿಸಲಾಗಿದೆ. ಅನುಮತಿ ಬಂದು ಟೆಂಡರ್ ಕರೆದ ಬಳಿಕ ಮೇ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಬಹುದು, ಜೂನ್ ವೇಳೆಗೆ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಅಲ್ಲದೇ ಆಲಮಟ್ಟಿ ಎಡದಂಡೆ ಕಾಲುವೆಯ ಮುಖ್ಯ ಕಾಲುವೆಯ ಆಧುನೀಕರಣ ಮಾತ್ರ ಆರಂಭಗೊಳ್ಳಲಿದೆ. ಉಪಕಾಲುವೆಗಳ ಅಧುನೀಕರಣಕ್ಕೂ ಟೆಂಡರ್ ಕರೆಯಬೇಕಿದ್ದು, ಅದಕ್ಕೂ ಆಯೋಗದ ಅನುಮತಿ ಪಡೆಯಲಾಗುವುದು ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry