ವಿರೋಧಿ ಪಾಳೆಯದಲ್ಲೇ ಬಿರುಕು

7
ವಿಧಾನ ಪರಿಷತ್‌ ಸದಸ್ಯ ಯತ್ನಾಳ ಬಿಜೆಪಿಗೆ ಸೇರ್ಪಡೆ ವಿಚಾರದಲ್ಲಿ ಹಗ್ಗಜಗ್ಗಾಟ

ವಿರೋಧಿ ಪಾಳೆಯದಲ್ಲೇ ಬಿರುಕು

Published:
Updated:

ವಿಜಯಪುರ: ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ವರಿಷ್ಠರ ಹಂತದಲ್ಲಿ ಚರ್ಚೆ, ಮಾತುಕತೆ ಒಂದೆಡೆ ನಡೆದಿದ್ದರೆ; ಇನ್ನೊಂದೆಡೆ ಯತ್ನಾಳ ವಿರೋಧಿ ಪಾಳೆಯದಲ್ಲೇ ಬಿರುಕು ಉಲ್ಬಣಿಸಿದ್ದು, ಬಣ ರಾಜಕಾರಣ ಬಿರುಸುಗೊಂಡಿದೆ.

2015ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಆಯ್ಕೆ ಯಾದ ಬಳಿಕ, ಬಿಜೆಪಿಗೆ ಮರು ಸೇರ್ಪಡೆಯಾಗದಂತೆ ಸ್ಥಳೀಯವಾಗಿ ಒಗ್ಗಟ್ಟಿನ ಬಲ ಪ್ರದರ್ಶಿಸಿ, ತಡೆ ಹಾಕು ವಲ್ಲಿ ಯಶಸ್ವಿಯಾಗಿದ್ದ ವಿರೋಧಿ ಪಾಳೆಯದಲ್ಲೇ ಈಗ ಬಿರುಕು ಮೂಡಿದೆ.

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರ ಕವಟಗಿ, ಮಹಾನಗರ ಪಾಲಿಕೆ ಸದಸ್ಯ, ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜಶೇಖರ ಮಗಿಮಠ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಡಾ.ಪ್ರಶಾಂತ ಕಟಕೋಳ ನೇತೃತ್ವದ ತಂಡ ಬುಧವಾರ (ಮಾರ್ಚ್‌ 28) ಬೆಂಗಳೂರಿನಲ್ಲಿ ಬೀಡುಬಿಟ್ಟು, ಯತ್ನಾಳ ಸೇರ್ಪಡೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೊಡ ಬಾರದು ಎಂದು ಬಿಜೆಪಿ ವರಿಷ್ಠರು, ಆರ್‌ಎಸ್‌ಎಸ್‌ ಹಿರಿಯರ ಮುಂದೆ ತಮ್ಮ ಹಕ್ಕೊತ್ತಾಯ ಮಂಡಿಸಿದೆ ಎನ್ನಲಾಗಿದೆ.

ಇದರ ಬೆನ್ನಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗ, ದಲಿತ ಮುಖಂಡ, ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್‌ ಗೋಪಾಲ ಘಟಕಾಂಬಳೆ ನೇತೃತ್ವದಲ್ಲಿ ಪಾಲಿಕೆಯ ಒಂಬತ್ತು ಸದಸ್ಯರು ಗುರುವಾರ (ಮಾರ್ಚ್‌ 29) ಹುಬ್ಬಳ್ಳಿಗೆ ತೆರಳಿ ಬಿಜೆಪಿ ಮುಖಂಡರಾದ ಧಾರವಾಡ ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಜತೆ ಯತ್ನಾಳ ಸೇರ್ಪಡೆಗೆ ವಿರೋಧಕ್ಕೆ ಸಂಬಂಧಿ ಸಿದಂತೆ ಸುದೀರ್ಘ ಮಾತುಕತೆ ನಡೆಸಿ ದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

‘ನಾವು ಇಷ್ಟು ದಿನ ವಿರೋಧಿಸಿಯೇ ಇದ್ದೆವು. ನೀವು ಮನೆಯೊಳಗೆ ಕೂತರೆ ಹೆಂಗೆ ? ಅಕ್ಷರಶಃ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ ಹೊರ ಬನ್ನಿ. ಮುಖಂಡರನ್ನು ಭೇಟಿಯಾಗಿ ನಿಮ್ಮ ಅಳಲು ತೋಡಿಕೊಳ್ಳಿ. ಇದೀಗ ನಮ್ಮ ಕೈಯಲ್ಲಿ ಏನು ಇಲ್ಲ. ವರಿಷ್ಠರಿಗೆ ತಿಳಿಸಬೇಕಾಗಿದ್ದನ್ನು ಈಗಾಗಲೇ ಹೇಳಿ ಆಗಿದೆ ಎಂದು ಜೋಶಿ, ಶೆಟ್ಟರ್ ತಿಳಿಸಿದ್ದಾರೆ’ ಎನ್ನಲಾಗಿದೆ.

ಮುಖಂಡರಿಬ್ಬರ ಮಾತುಗಳಿಂದ ಆತಂಕಕ್ಕೊಳಗಾದ ಅಪ್ಪು ಬೆಂಬಲಿಗರು, ಯತ್ನಾಳ ಸೇರ್ಪಡೆ ವಿರೋಧಿಸಲು ಎಲ್ಲ ತಂತ್ರಗಾರಿಕೆ ಹೆಣೆದಿದ್ದಾರೆ. ವಾಹನಗಳಲ್ಲಿ ಶುಕ್ರವಾರ ರಾತ್ರಿ ವಿಜಯಪುರ ಬಿಟ್ಟಿದ್ದು, ಶನಿವಾರ ನಸುಕಿನಲ್ಲೇ ಬೆಂಗಳೂರು ಅಥವಾ ಮೈಸೂರು ತಲುಪಿ ಬಸನಗೌಡ ವಿರುದ್ಧ, ಅಪ್ಪು ಪರ ಲಾಬಿ ನಡೆಸಲಿದ್ದಾರೆ ಎಂಬುದು ತಿಳಿದು ಬಂದಿದೆ. ‘ಪಕ್ಷದ ಚುನಾವಣಾ ಉಸ್ತುವಾರಿಗಳಾದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ಎಂ.ಮುರಳೀಧರರಾವ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ತಮ್ಮ ಅಳಲು ಹೇಳಿಕೊಳ್ಳುತ್ತೇವೆ. ಸ್ಥಳೀಯ ವಿದ್ಯಮಾನಗಳನ್ನು ಮೂವರು ಮುಖಂಡರ ಗಮನಕ್ಕೆ ತರಲಿದ್ದೇವೆ’ ಎಂದು ನಿಯೋಗದ ನೇತೃತ್ವ ವಹಿಸಿರುವ ಮುಖಂಡರೊಬ್ಬರು ತಿಳಿಸಿದರು.

‘ಬೆಂಗಳೂರು–ಮೈಸೂರಿನಿಂದ ಮರಳಿದ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತದ ಸಹ ಸಂಘ ಚಾಲಕ ಅರವಿಂದರಾವ್‌ ದೇಶಪಾಂಡೆ, ಬೆಳಗಾವಿ ವಿಭಾಗದ ಪ್ರಮುಖ ನರೇಂದ್ರ, ದಾವಣಗೆರೆಯ ಶಂಕರಾನಂದ, ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಕಾರ್ಯದರ್ಶಿ ಗೋಪಾಲ ಅವರನ್ನು ಭೇಟಿಯಾಗಿ ಯತ್ನಾಳ ವಿರೋಧ ಲಾಬಿ ನಡೆಸಲಿದ್ದೇವೆ’ ಎಂದು ಹೇಳಿದರು.

**

ಸಂತ ಸಮಾವೇಶದ ಸುತ್ತ ಆಕಾಂಕ್ಷಿಗಳು..!

ವಿಜಯಪುರದ ಚಾಲುಕ್ಯ ನಗರದ ಮಹೇಶ್ವರಿ ಭವನದಲ್ಲಿ ಶುಕ್ರವಾರ ನಡೆದ ವಿಎಚ್‌ಪಿಯ ಸಂತರ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಆಕಾಂಕ್ಷಿತರು ಬೀಡು ಬಿಟ್ಟು, ಪ್ರಮುಖರ ಮನಗೆಲ್ಲುವ ಕಸರತ್ತು ನಡೆಸಿದರು.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಚಂದ್ರಶೇಖರ ಕವಟಗಿ, ರಾಜಶೇಖರ ಮಗಿಮಠ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರು, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಪ್ರಮುಖ ಆಕಾಂಕ್ಷಿಗಳಾದ ಎಸ್‌.ಕೆ.ಬೆಳ್ಳುಬ್ಬಿ, ಸಂಗರಾಜ ದೇಸಾಯಿ, ಇಂಡಿ ವಿಧಾನಸಭಾ ಕ್ಷೇತ್ರದ ಎಸ್‌.ಎ.ಪಾಟೀಲ, ಮುದ್ದೇಬಿಹಾಳದ ಕ್ಷೇತ್ರದ ಆರ್.ಎಸ್‌.ಪಾಟೀಲ ಕೂಚಬಾಳ ಸಮಾವೇಶದ ಸಭಾಂಗಣದಲ್ಲಿ ಗೋಚರಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಹ ಸಂತರ ಸಮಾವೇಶದಲ್ಲಿ ಹಾಜರಿದ್ದರು. ಸಮಾವೇಶ ಮುಗಿಯುತ್ತಿದ್ದಂತೆ ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಸೇರಿದಂತೆ ಅಪ್ಪು ಬೆಂಬಲಿಗರು ಕೇಂದ್ರ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ ಅವರನ್ನು ಭೇಟಿಯಾಗಿ ಯತ್ನಾಳ ವಿರುದ್ಧ ‘ಗೂಗ್ಲಿ’ ಪ್ರಯೋಗಿಸಲು ಮಾತುಕತೆ ನಡೆಸುವ ಯತ್ನಗಳು ಸಂತರ ಸಮಾವೇಶದಲ್ಲಿ ನಡೆದವಾದರೂ, ಫಲ ನೀಡಲಿಲ್ಲ.

**

ಸ್ಥಳೀಯ ಕಾರ್ಯಕರ್ತರನ್ನು ಪರಿಗಣಿಸದೆ ವರಿಷ್ಠರು ಏಕಾಏಕಿ ನಿರ್ಧಾರ ಕೈಗೊಳ್ಳಬಾರದು ಎಂಬ ಬೇಡಿಕೆ ಹೊತ್ತು ಬೆಂಗಳೂರಿಗೆ ದೌಡಾಯಿಸಿದ್ದೇವೆ.

–ಗೋಪಾಲ ಘಟಕಾಂಬಳೆ, ಪಾಲಿಕೆಯ ಬಿಜೆಪಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry