‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜಕೀಯ ಸಲ್ಲ’

7
ಮಹದಾಯಿ ಧರಣಿ 989ನೇ ದಿನಕ್ಕೆ

‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜಕೀಯ ಸಲ್ಲ’

Published:
Updated:

ನರಗುಂದ: ‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ಸ್ಪಂದಿಸಬೇಕು’ ಎಂದು ಮಹದಾಯಿ ಹೋರಾಟ ಸಮಿತಿಯ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಹೇಳಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 989ನೇ ದಿನವಾದ ಶುಕ್ರವಾರ ಅವರು ಮಾತನಾಡಿದರು.‘ರಾಜಕಾರಣಿಗಳು ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಕುಡಿಯುವ ನೀರನ್ನು ಒದಗಿಸಬೇಕು. ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರು ಸಹನೆಯಿಂದ ಇದ್ದಾರೆ. ಅದನ್ನು ದುರ್ಬಲತೆ ಎಂದು ಭಾವಿಸಿದರೆ, ಅದರ ಪರಿಣಾಮ ಸರಿಯಾಗಿರುವುದಿಲ್ಲ. ರಾಜ್ಯ ಸರ್ಕಾರ ನ್ಯಾಯಮಂಡಳಿಯ ತೀರ್ಪು ಪ್ರಕಟವಾಗುವ ಮುನ್ನ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಮಹದಾಯಿ ನೀರನ್ನು ನಮ್ಮದಾಗಿಸಿಕೊಳ್ಳಬೇಕು’ ಎಂದರು.

‘ಈಗಾಗಲೇ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ರಾಜಕಾರಣಿಗಳು ಮತ ಕೇಳಲು ಬಂದರೆ, ಮಹದಾಯಿಗಾಗಿ ನಿಮ್ಮ ಕೊಡುಗೆ ಏನು ಎಂದು ಅವರನ್ನು ಕೇಳಬೇಕು. ಮರಳಿ ಈ ಪ್ರದೇಶದತ್ತ ಬರದಂತೆ ಮಾಡಬೇಕು. ಆಗ ಅವರಿಗೆ ಸರಿಯಾದ ಪಾಠ ಕಲಿಸಿದಂತಾಗುತ್ತದೆ. ಇದನ್ನು ಅರಿಯದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಈ ಭಾಗದಲ್ಲಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಇದರಿಂದ ಕೆಲವರು ರಾಜಕೀಯ ಲಾಭ ಪಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಮಹದಾಯಿ ನೀರು ನಮ್ಮ ಜನ್ಮ ಸಿದ್ಧ ಹಕ್ಕು. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮೂರು ವರ್ಷಗಳಿಂದ ಹೋರಾಟ ಮುಂದುವರಿದಿದೆ. ರೈತರ ಸಹನೆಯ ಕಟ್ಟೆ ಒಡೆಯುವ ಮೊದಲು ನಮ್ಮ ನೀರನ್ನು ನಮಗೆ ದೊರೆಯುವಂತೆ ಮಾಡಬೇಕಿದೆ’ ಎಂದು ಹೋರಾಟ ಸಮಿತಿ ಸದಸ್ಯ ಹನಮಂತ ಸರನಾಯ್ಕರ ಹೇಳಿದರು.

ಚಂದ್ರಗೌಡ ಪಾಟೀಲ, ಎಸ್‌.ಕೆ.ಗಿರಿಯಣ್ಣವರ, ವೆಂಕಪ್ಪ ಹುಜರತ್ತಿ, ಭರತಕುಮಾರ ಮೋರೆ, ವೀರಣ್ಣ ಸೊಪ್ಪಿನ, ಹನಮಂತ ಪಡೆಸೂರು ಧರಣಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry