ಹೋರಾಟದ ನೆಲದಲ್ಲಿ ಬಂಡಾಯ ಬೇಗುದಿ

7
ಹಲವು ಬಂಡಾಯಗಳಿಗೆ ಸಾಕ್ಷಿಯಾದ ಹಾವೇರಿಯಲ್ಲಿ ಈಗ ‘ವಿಧಾನ ಸಭಾ ಚುನಾವಣಾ’ ಫೈಟ್

ಹೋರಾಟದ ನೆಲದಲ್ಲಿ ಬಂಡಾಯ ಬೇಗುದಿ

Published:
Updated:

ಹಾವೇರಿ: ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಚುನಾವಣೆ ಘೋಷಣೆಯಾಗಿದ್ದು, ಆಕಾಂಕ್ಷಿಗಳ ಜತೆ ಬಂಡಾಯದ ಕಾವೇರುತ್ತಿದೆ.ಶಿಗ್ಗಾವಿಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಕ್ಷೇತ್ರ ಬಿಟ್ಟು ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ದನಿ ಎತ್ತಿದ್ದರು. ಅದಕ್ಕೀಗ ಮಾಜಿ ಶಾಸಕ ರಾಜಶೇಖರ ಸಿಂಧೂರ ಮತ್ತಿತರರು ದನಿಗೂಡಿಸಿದ್ದು, ಬಂಡಾಯ ತಾರಕಕ್ಕೇರಿದೆ.ಅಜ್ಜಂಪೀರ್ ಖಾದ್ರಿ ಅಭ್ಯರ್ಥಿ ಎಂದುಸಿ.ಎಂ. ಸಿದ್ದರಾಮಯ್ಯ ಘೋಷಿಸಿದ್ದರೂ, ಮಾಜಿ ಸಂಸದ ಮಂಜುನಾಥ ಕುನ್ನೂರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ್ ಎಐಸಿಸಿ ಮೆಟ್ಟಿಲೇರಿದ್ದಾರೆ. ಒಮ್ಮತದ ಅಭ್ಯರ್ಥಿ ಸಂಜೀವಕುಮಾರ್ ನೀರಲಗಿ ಪ್ರಯತ್ನವೂ ಸಾಗಿದೆ.ಬ್ಯಾಡಗಿಯಲ್ಲಿ ಹಾಲಿ ಶಾಸಕ ಬಸವರಾಜ ಶಿವಣ್ಣ ವಿರುದ್ಧ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಬಂಡಾಯ ಸಾರಿದ್ದಾರೆ. ಬಿಜೆಪಿಯಲ್ಲಿ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಸುರೇಶ ಗೌಡ್ರ ಮಧ್ಯೆ ಟಿಕೆಟ್‌ ಪೈಪೋಟಿ ತೀವ್ರಗೊಂಡಿದೆ. ‘ಶತ್ರುವಿನ ಶತ್ರುವೇ ಮಿತ್ರ’ ಎಂಬಂತೆ ಯಾರು ಯಾರ ಜೊತೆ ಕೈ ಜೋಡಿಸುತ್ತಾರೆ ಎಂಬುದೇ ನಿಗೂಢ. ಸಚಿವ ರುದ್ರಪ್ಪ ಲಮಾಣಿ ಮತ್ತು ನೆಹರೂ ಓಲೇಕಾರ ಯಾರಿಗೆ ವರವಾಗುತ್ತಾರೆ? ಎಂಬುದೂ ಸದ್ಯದ ಚರ್ಚೆಯ ವಿಚಾರ.ರಾಣೆಬೆನ್ನೂರಿನಲ್ಲಿ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧಿಸಲು ಕಸರತ್ತು ನಡೆಸಿದ್ದರು. ಆದರೆ, ಸ್ಥಳೀಯ ಆಕಾಂಕ್ಷಿಗಳು ಸೇರಿ, ‘ಸ್ಥಳೀಯರಿಗೆ ಟಿಕೆಟ್‌ ನೀಡಿ’ ಎಂದು ಬೇಡಿಕೆ ಇಟ್ಟಿದ್ದರು. ಈಗ ರಾಘವೇಂದ್ರ ಹಿಂದೆ ಸರಿದಿದ್ದಾರೆ. ಪುತ್ರ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಕೊಡಿಸಲು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಯತ್ನಿಸಿದ್ದರು. ಆಗ,ಆರ್.ಶಂಕರ್ ಅವರನ್ನು ಕರೆ ತರಲು ಪಕ್ಷದೊಳಗಿನ ಗುಂಪೊಂದು ಪ್ರಯತ್ನನಡೆಸಿತ್ತು. ಕೊನೆಗೂ ಕೆ.ಬಿ.ಕೋಳಿವಾಡ ಅವರೇ ಅಭ್ಯರ್ಥಿ ಆಗಿದ್ದಾರೆ. ಆದರೂ, ಆರ್.ಶಂಕರ್‌ ಪರ ಕೆಲವರ ಮೃದು ಧೋರಣೆ ಹಾಗೂ ರುಕ್ಮಿಣಿ ಸಾವುಕಾರ ಅವರ ರಾಜಕೀಯ ಪ್ರಭಾವವನ್ನು ಕಾದು ನೋಡಬೇಕಾಗಿದೆ.

ಹಾನಗಲ್‌ನಲ್ಲಿ ಹಾಲಿ ಶಾಸಕ ಮನೋಹರ್ ತಹಸೀಲ್ದಾರ್‌ ಬದಲಾಗಿ,ನಮಗೆ ಟಿಕೆಟ್ ನೀಡಿ ಎಂದು ಕಾಂಗ್ರೆಸ್‌ನ ಎರಡನೇ ಹಂತದ ನಾಯಕರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಮಗ್ಗುಲಿನ ನಾಯಕರೇ ‘ಟಿಕೆಟ್ ಬಂಡಾಯ’ಸಾರಿದ್ದರು. ಮಾಜಿ ಸಚಿವ ಸಿ.ಎಂ.ಉದಾಸಿ ಅವರೇ ಬಿಜೆಪಿ ಅಭ್ಯರ್ಥಿ ಎಂದು ಬಿ.ಎಸ್.ಯಡಿಯೂರಪ್ಪ ಘೋಷಿ

ಸಿದ್ದರು. ಆದರೆ, ಕೆಜೆಪಿ–ಬಿಜೆಪಿ ಎಂಬ ಹಳೇ ಬೇಗುದಿಯೂ ಬಗೆಹರಿದಂತಿಲ್ಲ. ಕೃಷ್ಣ ಈಳಿಗೇರ ಅಬ್ಬರದ ಪ್ರಚಾರದ ಕಾರಣವೂ ಗುಟ್ಟಾಗಿ ಉಳಿದಿಲ್ಲ.

ಜಿಲ್ಲಾ ಕೇಂದ್ರ ಹಾವೇರಿಯ ಟಿಕೆಟ್ ವಿಚಾರದಲ್ಲಿ ಸಚಿವ ರುದ್ರಪ್ಪ ಲಮಾಣಿಗೆ ಪ್ರಬಲ ಪೈಪೋಟಿಗಳು ಕಡಿಮೆ. ಆದರೆ, ಸಚಿವರ ಜತೆಗಿನ ಎರಡನೇ ಹಂತದ ನಾಯಕರು ಅಧಿಕಾರ ಚಲಾಯಿಸಿರುವುದು ‘ಬಂಡಾಯ’ದ ಸ್ವರೂಪ ಪಡೆದರೂ ಅಚ್ಚರಿ ಇಲ್ಲ. ಮಾಜಿ ಶಾಸಕ ನೆಹರೂ ಓಲೇಕಾರ ಬಿಜೆಪಿ ಟಿಕೆಟ್ ಪೈಪೋಟಿ ಜೊತೆಗೆ, ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಬಿಜೆಪಿಯಲ್ಲಿ 16 ಆಕಾಂಕ್ಷಿಗಳಿದ್ದು, ‘ನೆಹರೂ ಓಲೇಕಾರ ಪರ–ವಿರೋಧ’ ಕುರಿತ ಚರ್ಚೆಗಳೇ ಹೆಚ್ಚಾಗಿವೆ.ಹಿರೇಕೆರೂರಿನಲ್ಲಿ ತೃತೀಯ ಶಕ್ತಿಯ ಸಾಮರ್ಥ್ಯ ತೋರಿಸಿಕೊಟ್ಟ ಪಕ್ಷಕ್ಕಿಂತ ವ್ಯಕ್ತಿ ನಾಯಕತ್ವವೇ ಪ್ರಬಲ. ಆದರೂ, ಸಾಂಬಾರು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ದನಿ ಎತ್ತಿದ್ದರು. ಈ ಹಿಂದಿನ ಕೆಜೆಪಿ–ಬಿಜೆಪಿ ಬಿಕ್ಕಟ್ಟು ಯು.ಬಿ.ಬಣಕಾರ ಮೇಲೆ ಯಾವ ಪ್ರಭಾವ ಬೀರುವುದು ಎಂಬ ಕೌತುಕವೂ ಜನರಲ್ಲಿ ಹೆಚ್ಚಿದೆ.ಒಟ್ಟಾರೆ ಆರೂ ಕ್ಷೇತ್ರಗಳಲ್ಲೂ ‘ಬಂಡಾಯ’ದ ಗುಪ್ತಗಾಮಿನಿಯೊಂದು ಹರಿಯುತ್ತಿದ್ದು, ಯಾರನ್ನು ದಡ ಸೇರಿಸುತ್ತದೆ? ಯಾರನ್ನು ಮುಳುಗಿಸುತ್ತದೆ? ಎಂಬ ಲೆಕ್ಕಾಚಾರ ‘ಮಟ್ಕಾ ಹಾವಳಿ’ಯಂತೆಯೇ ಹೆಚ್ಚಾಗುತ್ತಿದೆ. ಇದು, ಟಿಕೆಟ್ ಘೋಷಣೆ ಬಳಿಕ ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೂ, ಪಕ್ಷಗಳ ನಾಯಕರು ಮಾತ್ರ, ‘ಕಟ್ಟತೇವ ನಾವು ಕಟ್ಟತೇವ ನಾವು ಕಟ್ಟೇ ಕಟ್ಟತೇವ...’ ಎನ್ನುತ್ತಿದ್ದಾರೆ.

1939ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಹಾತ್ಮ ಗಾಂಧೀಜಿ ಬೆಂಬಲಿತ ಅಭ್ಯರ್ಥಿ ಪಟ್ಟಾಭಿ ಸೀತರಾಮಯ್ಯ ವಿರುದ್ಧ ಸುಭಾಸ್‌ ಚಂದ್ರ ಬೋಸ್ ಸ್ಪರ್ಧಿಸಿದ್ದರು. ಹಾವೇರಿಯ ಹೊಸಮನಿ ಸಿದ್ದಪ್ಪ ಬೋಸ್ ಅವರನ್ನು ಬೆಂಬಲಿಸಿದ್ದರು. ಹಾವೇರಿಯಲ್ಲಿ ಹೊಸಮನಿ ಸಿದ್ದಪ್ಪ ಅವರನ್ನು ಭೇಟಿಯಾಗಿದ್ದ, ಸುಭಾಷ್ ಚಂದ್ರ ಬೋಸ್ ಚುನಾವಣೆಯನ್ನೂ ಗೆದ್ದಿದ್ದರು.ಅಲ್ಲದೇ, ಇನ್ನೊಮ್ಮೆ ಸಮಯ ಪರಿಪಾಲಿಸದ ಮಾಜಿ ಪ್ರಧಾನಿ ಪಂಡಿತ ಜವಹಾರ ಲಾಲ್ ನೆಹರೂ ಧೋರಣೆಯನ್ನು ಹೊಸಮನಿ ಸಿದ್ದಪ್ಪ ಖಂಡಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಹಾವೇರಿ ನೆಲದಲ್ಲಿ ‘ಬಂಡಾಯ’ ದನಿಯ ರಾಜಕಾರಣ ಹೆಸರು ಮಾಡಿತ್ತು.ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭದಲ್ಲಿ ‘ಕಾಂಗ್ರೆಸ್‌ ಬೇಕೋ, ಕರ್ನಾಟಕ ಬೇಕೋ’ ಎಂದು ಮಹದೇವ ಬಣಕಾರರು ದನಿ ಎತ್ತಿದ್ದರು. ಆ ಬಳಿಕ, ‘ಕಾಂಗ್ರೆಸ್‌ ಕರ್ನಾಟಕದ ಪರವಾಗಿದೆ’ ಎಂಬ ನಿರ್ಣಯ ಬರುವಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಶ್ರಮ ವಹಿಸಿದ್ದರು ಎಂದು ಜಿಲ್ಲೆಯ ಸಾಹಿತಿಗಳು ಉಲ್ಲೇಖಿಸುತ್ತಾರೆ.

ಆ ಬಳಿಕ ಹಲವು ಹೋರಾಟಗಳು, ರೈತ ಚಳವಳಿಗಳಿಗೆ ಹಾವೇರಿ ಸಾಕ್ಷಿಯಾಗಿದೆ. ರಾಜ್ಯ ರಾಜಕಾರಣದಲ್ಲಿ ಹೊಸ ಗಾಳಿ ತಂದ ‘ಅಹಿಂದ’ ಹೋರಾಟದ ಹುಟ್ಟಿನ ಬೀಜ, ‘ಕರ್ನಾಟಕ ಜನತಾ ಪಕ್ಷ’ (ಕೆಜೆಪಿ) ಉದ್ಘಾಟನೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯ ಸಮಾವೇಶವು ಇಲ್ಲೇ ನಡೆದಿದೆ.ಅಷ್ಟು ಮಾತ್ರವಲ್ಲ, ಇಂದಿಗೂ ನೆಲದ ಪರ ದನಿ ಎತ್ತುತ್ತಿರುವ ಪಾಪು (ಪಾಟೀಲ ಪುಟ್ಟಪ್ಪ) ಮತ್ತು ಚಂಪಾ (ಚಂದ್ರಶೇಖರ ಪಾಟೀಲ) ಈ ನೆಲದವರು. ಬಂಡಾಯಕ್ಕೆ ಇಂದಿಗೂ ಚೈತನ್ಯ ಮೂಡಿಸುತ್ತಿರುವ ‘ಕಟ್ಟುತ್ತೇವಾ ನಾವು ಕಟ್ಟುತ್ತೇವಾ...’ ಹಾಡು ಬರೆದ ಸತೀಶ ಕುಲಕರ್ಣಿಯೂ ಇಲ್ಲಿಯವರೇ. ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ‘ಆಂತರಿಕ ಬಂಡಾಯ’ದಿಂದ ಕೈ ತಪ್ಪಿದೆ. ಹೀಗೆ ಹಾವೇರಿಯ ಸಂಸ್ಕೃತಿ, ರಾಜಕೀಯ, ಸಾಹಿತ್ಯ, ಕೃಷಿ, ಚಳವಳಿಗಳಲ್ಲಿ ‘ಬಂಡಾಯ’ ಹಾಸುಹೊಕ್ಕಾಗಿದೆ. ‘ಹಾವೇರಿ ಪಂಚಾಯ್ತಿ’ ರಾಜಕಾರಣದಲ್ಲೇ ಖ್ಯಾತಿ ಪಡೆದಿದೆ.

**

ದಿಟ್ಟವಾಗಿ ದನಿ ಎತ್ತುವ ಗುಣ ಹಾವೇರಿಯ ನೆಲ, ಭಾಷೆ, ಸಂಸ್ಕೃತಿಯಲ್ಲಿದೆ. ಇದನ್ನು, ನೀವು ‘ಬಂಡಾಯ’ ಎನ್ನಬಹುದು. ಇಲ್ಲವೇ ‘ನೆಲದ ದನಿ’ ಎಂದೂ ಕರೆಯಬಹುದು – ಸತೀಶ ಕುಲಕರ್ಣಿ, ಬಂಡಾಯ ಸಾಹಿತಿ.

 **

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry