ಹತ್ತಿದ ಏಣಿ ಒದ್ದ ಮಾಲೀಕಯ್ಯ

7
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಆರೋಪ

ಹತ್ತಿದ ಏಣಿ ಒದ್ದ ಮಾಲೀಕಯ್ಯ

Published:
Updated:

ಕಲಬುರ್ಗಿ: ‘ಮಾಲೀಕಯ್ಯ ಅವರ ತಂದೆ ವೆಂಕಯ್ಯ ಅವರ ಮೇಲಿನ ಪ್ರೀತಿಯಿಂದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಮಾಲೀಕಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು. ಪಕ್ಷದಿಂದ ಎಲ್ಲವನ್ನೂ ಅನುಭವಿಸಿದ ಮಾಲೀಕಯ್ಯ ಇದೀಗ ಹತ್ತಿದ ಏಣಿಯನ್ನೇ ಒದ್ದಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಆರೋಪಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣಪ್ರಕಾಶ ಪಾಟೀಲ ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಆರು ಬಾರಿ ಚುನಾಯಿತರಾದವರು ಹೀಗೆ ಮಾತನಾಡುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಷಯ. ಪಕ್ಷದಲ್ಲಿದ್ದಾಗ ಅವಕಾಶ ಬರುತ್ತವೆ, ಹೋಗುತ್ತವೆ. ಎಷ್ಟೋ ಜನ ಕೊನೆಯವರೆಗೂ ಕಾರ್ಯಕರ್ತರಾಗೇ ಉಳಿದ ನಿದರ್ಶನಗಳೂ ಇವೆ. ಹೀಗಿರುವಾಗ ಖರ್ಗೆ ಅವರನ್ನು ಬೈಯ್ಯುವುದು ಎಷ್ಟು ಸೂಕ್ತ’ ಎಂದು ಕೇಳಿದರು.‘ಮಾಲೀಕಯ್ಯ ಆರು ಬಾರಿ ಶಾಸಕರಾಗಿದ್ದರೂ ಕಾಂಗ್ರೆಸ್‌ನಿಂದಲೇ ಗೆದ್ದಿಲ್ಲ. ಪ್ರಿಯಾಂಕ್ ಖರ್ಗೆ 15 ವರ್ಷ ಎನ್‌ಎಸ್‌ಯುಐನಲ್ಲಿ ಕೆಲಸ ಮಾಡಿದ್ದಾರೆ. ಚಿತ್ತಾಪುರದಲ್ಲಿ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರೂ ಮುಂದೆ ಬಂದಿರಲಿಲ್ಲ. ಆಗ ಪ್ರಿಯಾಂಕ್ ಖರ್ಗೆ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಅವರು ಪರಾಭವಗೊಂಡರು. 2013ರಲ್ಲಿ ವಿಜೇತರಾದರು. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ’ ಎಂದರು.

‘ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿರುವ ಮಾಲೀಕಯ್ಯ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದರು. ಪಕ್ಷದಿಂದ ಎಲ್ಲವನ್ನೂ ಅನುಭವಿಸಿ ಈಗ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇನೆ ಎಂಬುದು ಸರಿಯಲ್ಲ. ಅವರು ಪಕ್ಷದ ಚಿಹ್ನೆಯಿಂದ ಗೆದ್ದಿದ್ದಾರೆಯೇ ಹೊರತು ಮಾಲೀಕಯ್ಯ ಎಂಬ ಕಾರಣಕ್ಕೆ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಕುಟುಕಿದರು.

ಮುಖಂಡರಾದ ಅಲ್ಲಮಪ್ರಭು ಪಾಟೀಲ, ಸಿ.ಬಿ.ಪಾಟೀಲ ಓಕಳಿ, ಶರಣಪ್ಪ ಝರಣಿ, ಮಾಪಣ್ಣ ಗಂಜಿಗೇರಿ ಇದ್ದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು ಏಕೆ?

‘ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ ಎನ್ನುವುದೇ ಒಂದು ಚಿಹ್ನೆ ಎಂದು ಹೇಳುವ ಮಾಲೀಕಯ್ಯ ಗುತ್ತೇದಾರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು ಏಕೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಖಾರವಾಗಿ ಪ್ರಶ್ನಿಸಿದರು.‘ಮಾಲೀಕಯ್ಯ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಿಸುವುದು, ಸೋಲಿಸುವುದು ಜನರ ಕೈಯಲ್ಲಿದೆಯೇ ಹೊರತು ಮಾಲೀಕಯ್ಯ ಅವರ ಕೈಯಲ್ಲಿ ಅಲ್ಲ’ ಎಂದು ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.‘ಮಾಲೀಕಯ್ಯ ಪಕ್ಷದಲ್ಲಿದ್ದಾಗಲೇ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗೇಕೆ ಗಂಭೀರವಾಗಿ ತೆಗೆದುಕೊಳ್ಳೋಣ’ ಎಂದು ಪ್ರಶ್ನಿಸಿದರು.

ಅಪ್ಪ–ಮಕ್ಕಳು ಮಾತ್ರೆ ಬೆಳೆಯಬೇಕು

‘ಹೈದರಾಬಾದ್ ಕರ್ನಾಟಕ ಮಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಪ್ಪ–ಮಕ್ಕಳು ಮಾತ್ರ ಬೆಳೆಯಬೇಕು. ಇತರರು ಬೆಳೆಯಬಾರದು ಎಂಬಂತಹ ಸ್ಥಿತಿ ಇದೆ’ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಸಂಸದ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು.ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾನು ಜೆಡಿಎಸ್‌ನಲ್ಲಿದ್ದಾಗ ಸಚಿವನಾಗಿದ್ದೆ. ಆಗ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದೆ. ಸಹೋದರರ ಮಾತಿಗೆ ಬೆಲೆಕೊಟ್ಟು ಪಕ್ಷದಲ್ಲೇ ಉಳಿದಿದ್ದೆ. ಆದರೆ ನನ್ನನ್ನು ಹಂತಹಂತವಾಗಿ ಮೂಲೆಗುಂಪು ಮಾಡಲಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಮ್ಮ ಹೃದಯದಿಂದ ಕಿತ್ತು ಒಗೆದಿದ್ದಾರೆ. ಹೀಗಾಗಿ ನಾನು ಕೂಡ ಕಾಂಗ್ರೆಸ್ ಮುಕ್ತ ಬಿಜೆಪಿ ಸಂಕಲ್ಪಕ್ಕೆ ಕೈಜೋಡಿಸುವ ಉದ್ದೇಶದಿಂದ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ’ ಎಂದು ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry