ಬಿಜೆಪಿಯಿಂದ ಸಂವಿಧಾನ ಹೈಜಾಕ್: ಆತಂಕ

7
‘ಕೋಮುವಾದ ಅಳಿಸಿ, ಸಂವಿಧಾನ ಉಳಿಸಿ’ ವಿಚಾರ ಸಂಕಿರಣ

ಬಿಜೆಪಿಯಿಂದ ಸಂವಿಧಾನ ಹೈಜಾಕ್: ಆತಂಕ

Published:
Updated:
ಬಿಜೆಪಿಯಿಂದ ಸಂವಿಧಾನ ಹೈಜಾಕ್: ಆತಂಕ

ಕಲಬುರ್ಗಿ: ‘ದಲಿತರು ಸಂಘಟಿತರಾಗಿ ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿ ಸಂವಿಧಾನವನ್ನು ಹೈಜಾಕ್ ಮಾಡಿದರೂ ಆಶ್ಚರ್ಯವಿಲ್ಲ’ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ವಿಠ್ಠಲ ವಗ್ಗನ್ ಆತಂಕ ವ್ಯಕ್ತಪಡಿಸಿದರು.ನಗರದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಸಭಾಂಗಣದಲ್ಲಿ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಸಮಿತಿ ಶುಕ್ರವಾರ ಏರ್ಪಡಿಸಿದ್ದ ‘ಕೋಮುವಾದ ಅಳಿಸಿ, ಸಂವಿಧಾನ ಉಳಿಸಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದಾದ್ಯಂತ ದಲಿತರನ್ನು ಗುರಿಯಾಗಿಸಿಕೊಂಡು ಧರ್ಮದ ಹೆಸರಿನಲ್ಲಿ ದೌರ್ಜನ್ಯ ಎಸಗಲಾಗುತ್ತಿದೆ. ಆ ಮೂಲಕ ದಲಿತರ ಬದುಕುವ ಹಕ್ಕನ್ನೇ ಕಸಿಯುವ ವ್ಯವಸ್ಥಿತ ಹುನ್ನಾರ ನಡೆದಿದೆ. ಸಂವಿಧಾನ ಬದಲಿಸುವ ಮಾತು ಆಡುವವರು ನಾಳೆಯೇ ಬದಲಾಯಿಸಿದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಪುನರುಚ್ಚರಿಸಿದರು.‘ಬಡ್ತಿ ಮೀಸಲಾತಿ, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಬಿಜೆಪಿಯವರು ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ’ ಎಂದರು.

ದಲಿತ ಮುಖಂಡ ವಿಠ್ಠಲ ದೊಡ್ಡಮನಿ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಅನೇಕರು ಚಂದಾ ಎತ್ತಿ ಆಸ್ತಿ ಮಾಡಿದ್ದಾರೆ. ತಮ್ಮ ಪತ್ನಿಯರಿಗೆ ಸೀರೆ ಕೊಡಿಸಿದ್ದಾರೆ. ಒಂದೊಮ್ಮೆ ಅವರೆಲ್ಲರೂ ಸಮಾಜಕ್ಕೆ ಒಳ್ಳೆಯದನ್ನು ಮಾಡಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ಇರುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ಕಾಂಗ್ರೆಸ್ ಪಕ್ಷ ದಲಿತರಿಗೆ ಒಳ್ಳೆಯದನ್ನು ಮಾಡಿಲ್ಲ. ಅಂಬೇಡ್ಕರ್‌ ಅವರಿಗೇ ಮೋಸ ಮಾಡಿದೆ. ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳುವ ಬಿಜೆಪಿ ಜತೆ ನಾವು ಹೋಗಲು ಆಗುವುದಿಲ್ಲ. ಹೀಗಾಗಿ ಅನಿವಾರ್ಯತೆಯಿಂದ ಕಾಂಗ್ರೆಸ್‌ ಬೆಂಬಲಿಸಬೇಕಾಗಿದೆ’ ಎಂದು ವಿಷಾದಿಸಿದರು.

ರಾಜ್ಯ ಕೋಲಿ ಸಮಾಜದ ಗೌರವ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಅಂಬೇಡ್ಕರ್ ಕಷ್ಟ ಅನುಭವಿಸಿ ಸಂವಿಧಾನ ರಚಿಸಿದ್ದಾರೆ. ಅವರೊಬ್ಬ ಯುಗಪುರುಷ. ಯುವ ಪೀಳಿಗೆ ಬದ್ಧತೆಯಿಂದ ಕೆಲಸ ಮಾಡಬೇಕು. ಸಂಘಟಿತ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಹಿಂದುಳಿದವರು, ದಲಿತರು ಒಂದಾದರೆ ಸಂವಿಧಾನ ಬದಲಿಸುವವರು ನಾಪತ್ತೆಯಾಗುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.

ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಘಟಕದ ಅಧ್ಯಕ್ಷ ಮಲ್ಲಪ್ಪ ಹೊಸಮನಿ, ಪತ್ರಕರ್ತ ಭವಾನಿಸಿಂಗ್ ಠಾಕೂರ್, ಪ್ಯಾಂಥರ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಸಿ.ದಾನಪ್ಪ, ವಿಭಾಗೀಯ ಅಧ್ಯಕ್ಷ ಭೀಮರಾಯ ನಗನೂರ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಚಿಮ್ಮಾಇದಲಾಯಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಮಾಡಬೂಳ, ಉಮೇಶ ಸಜ್ಜನ, ಕಾಶಿನಾಥ ದಿವಂಟಗಿ, ಭಾಸ್ಕರ್ ವಿಟ್ಲ ಇದ್ದರು.

**

ನಮ್ಮ ಉದ್ಧಾರಕ್ಕೆ ಯಾರೂ ಬರುವುದಿಲ್ಲ. ದಲಿತ ಸಂಘಟನೆಗಳು ಒಗ್ಗಟ್ಟಾಗಬೇಕು. ಅಂಬೇಡ್ಕರ್ ಅವರೇ ನಮಗೆ ಗುರು, ಸಂವಿಧಾನವೇ ನಮಗೆ ರಕ್ಷಣೆ ಎಂಬುದನ್ನು ತಿಳಿದುಕೊಳ್ಳಬೇಕು – ವಿಠ್ಠಲ ದೊಡ್ಡಮನಿ, ದಲಿತ ಮುಖಂಡ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry