ನುಡಿದಂತೆ ನಡೆಯದ ಕೇಂದ್ರ

7
ಕಾಂಗ್ರೆಸ್‌ ಸಭೆ; ಶಾಸಕ ನಾರಾಯಣಸ್ವಾಮಿ ಆರೋಪ

ನುಡಿದಂತೆ ನಡೆಯದ ಕೇಂದ್ರ

Published:
Updated:

ಬಂಗಾರಪೇಟೆ: ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 7 ರಂದು ಪಟ್ಟಣಕ್ಕೆ ಭೇಟಿ ನೀಡಲಿರುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ನುಡಿದಂತೆ ನಡೆದಿಲ್ಲ. ಬದಲಾಗಿ ಅದಕ್ಕೆ ವಿರುದ್ಧವಾಗಿ ನಡೆದಿದೆ. ಮಧ್ಯಮ ವರ್ಗದವರಲ್ಲಿ ಘಾಸಿ ಉಂಟುಮಾಡಿದೆ. ಬಿಜೆಪಿಗೆ ಅಧಿಕಾರ ನೀಡಿದ ಜನರು ಪಶ್ಚಾತಾಪ ಪಡುವಂತಾಗಿದೆ ಎಂದರು.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬದಲಾಯಿಸಿ ಮತ್ತೆ ಕಾಂಗ್ರೆಸ್‌ಗೆ ರಾಷ್ಟ್ರದ ಆಡಳಿತ ನೀಡಲು ಜನರು ಎದುರು ನೋಡುತ್ತಿದ್ದಾರೆ. ಬಿಜೆಪಿ ಸರ್ಕಾರ ಜಾತಿಗಳ ನಡುವೆ ಕಲಹ ಸೃಷ್ಟಿಸಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾಯಿಸಲಾಗುವುದು ಎಂಬ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೋಮುವಾದಿ ಬಿಜೆಪಿ ಪಕ್ಷ ಬೇರು ಸಮೇತ ಕಿತ್ತುಹಾಕಲು ಯುವಕರು ಪಣ ತೊಡಬೇಕು ಎಂದರು.

ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿನ ಬಹುತೇಕ ಅಂಶ ಈಡೇರಿಸಿದೆ. ಹಾಗೆಯೇ ಕ್ಷೇತ್ರದಲ್ಲಿ ಸಹ ಎಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ. ಜನರು ಗುರುತಿಸಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಅಧಿಕಾರ ಸಿಕ್ಕಾಗ ಬಿಜೆಪಿಯವರು ರಾಜ್ಯವನ್ನು ಅಭಿವೃದ್ಧಿ ಮಾಡಲಿಲ್ಲ. ಈಗ ಸಮೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಇದು ತಿರುಕನ ಕನಸಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಪುರಸಭೆ ಅಧ್ಯಕ್ಷ ಪಿ.ರಮೇಶ್, ಬ್ಲಾಕ್ ಅಧ್ಯಕ್ಷರಾದ ಪಾರ್ಥಸಾರಥಿ, ನಾಗರಾಜ್, ಕೆಪಿಸಿಸಿ ಕಾರ್ಯದರ್ಶಿ ರಾಮಚಂದ್ರ, ಮುಖಂಡರಾದ ಎಚ್.ಕೆ.ನಾರಾಯಣಸ್ವಾಮಿ, ನಂಜಪ್ಪ, ಪಿಚ್ಚಹಳ್ಳಿ ಗೋವಿಂದರಾಜು, ಶ್ರೀನಿವಾಸನಾಯ್ಡು, ಭಾಗ್ಯಮ್ಮ, ಗಂಗಮ್ಮ, ವೆಂಕಟೇಶಗೌಡ, ಶಫಿ, ಜಾಫರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry