ನಗುವಿನ ಬೀಜಗಳು ಮಾರಾಟಕ್ಕಿವೆ

7

ನಗುವಿನ ಬೀಜಗಳು ಮಾರಾಟಕ್ಕಿವೆ

Published:
Updated:
ನಗುವಿನ ಬೀಜಗಳು ಮಾರಾಟಕ್ಕಿವೆ

ನಗುವಿನ ಬೀಜಗಳು ಅಲ್ಲಿ ಸಿಗುತ್ತವೆ

ಸುತ್ತ ಸಾಗರ ಏಳು ಬೆಟ್ಟ ಮೂರು ದಾರಿ

ನಾಲ್ಕೈದು ಕಿರುದಾರಿ ಹಿಡಿದು ಹೊರಟರೆ

ಅಲ್ಲೊಂದು ಮನೆ

ಮನೆಯೆಂದರೆ ಚಿಕ್ಕ ಮನೆ

ಒಬ್ಬ ಮಾತ್ರ ಇರುವಷ್ಟುನಗುವಿನ ಬೀಜಗಳನು ಮಾರಾಟ ಮಾಡುವವನು

ಎಂದೂ ನಕ್ಕೇ ಇಲ್ಲ

ಆದರೂ ಆತ ನಗುತ್ತಾನೆ

ನಕ್ಕರೂ ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ

ಅವನ ನಗು ಒಳಗೊಳಗೆ

ಪ್ರತಿನಿತ್ಯ ಕ್ಷಣಕ್ಷಣವೂ

ಆತ ನಗುವಿನಲ್ಲೇ ತೇಲುತ್ತಿರುತ್ತಾನೆ

ಗಂಭೀರ ವದನ ಸುಕ್ಕುಗಟ್ಟಿದ ಚರ್ಮ

ಕೆದರಿದ ಕೂದಲು ತೊಡುತ್ತಿದ್ದ ಹರಿದ ಬಟ್ಟೆಗಳ ರಾಶಿ

ನೋಡಲು ಭೈರಾಗಿ ಅವಧೂತನಂತೆ ಕಾಣುತಿರಲು

ತನ್ನ ನಗುವಿನ ಕಾರಣವ ಆತ ಹೇಳುವುದಿಲ್ಲ

ಮಾರಾಟ ಮಾಡುವ ಬೀಜಗಳು

ಅವನ ಬಾಯಿಂದ ಉದುರುತ್ತವೆ

ತನ್ನೊಳಗಿನ ಸಿದ್ಧಿಯನು

ತೋರ್ಪಡಿಸುವುದಿಲ್ಲ ಕಾಣಿಸುವುದಿಲ್ಲ

ಒಬ್ಬರಿಗೆ ಒಂದು ಬಾರಿ ಅವಕಾಶ

ಮತ್ತೊಮ್ಮೆ ಕೇಳಿದರೂ ಆತ ಕೊಡುವುದಿಲ್ಲ

ಅರೆರೆ ಆತನೇಕೆ ಹೀಗೆ

ಹೌದೌದು ಅವನು ಹಾಗೆಯೇ

ನಗುವಿನ ಬೀಜಗಳು ಇವನನ್ನು ಬಿಟ್ಟರೆ ಮತ್ತೆಲ್ಲೂ ಸಿಗುವುದಿಲ್ಲ

ಹಾಗಾಗಿ ಆತನಿಗೆ ಬೇಡಿಕೆ ಜಾಸ್ತಿ

ಅಷ್ಟು ದೂರ ಪ್ರಯಾಣ ಮಾಡಿ ಏಳು ಬೆಟ್ಟ ಇಳಿದು

ಅವನ ಮನೆಯ ಮುಂದೆ ನಿಂತವರಲ್ಲಿ

ಉಳ್ಳವರ ಸಂಖ್ಯೆಯೇ ಹೆಚ್ಚು

ಉಳ್ಳವನು ನಗುವಿನ ಬೀಜವನು ಕೊಳ್ಳದೇ

ಉಳುವವನು ಕೊಳ್ಳುವನೇ

ಅವನ ಬಾಯಿಂದ ಉದುರುವ ಒಂದೊಂದು ಬೀಜಕ್ಕೂ

ಮುತ್ತಿನಂತಹ ಬೆಲೆ; ಚಿನ್ನದಷ್ಟು ಬೇಡಿಕೆ

ಕಾನನದ ನಡುವಿನ ಅಂಗಳದಲ್ಲಿದ್ದ ಅವನ

ಮನೆಯ ಹೊರಗೆ ಸರದಿಸಾಲು ಉದ್ದುದ್ದ ಪ್ರತಿನಿತ್ಯ

ನಿಂತವರಲ್ಲಿ ನಗುವಿಲ್ಲ ಸಂತಸವಿಲ್ಲ

ನಗುವಿನ ಬೀಜ ಪಡೆಯುವ ಎಲ್ಲರಲ್ಲೂ

ಕುತೂಹಲದ ದೃಷ್ಟಿ

ನಗುವಿನ ಬೀಜಗಳು ಅಲ್ಲಿ ಮಾತ್ರ ಸಿಗುತ್ತವೆಕೇಳಿದಷ್ಟು ನಗನಾಣ್ಯ ಸಂಪತ್ತು

ಕೊಡುತ್ತೇವೆ ಅಂತ ಹೇಳಿದರು ಅನೇಕರು

ಯಾರಿಗೆ ಎಷ್ಟು ಬೀಜ ಕೊಡಬೇಕು ಅನ್ನುವುದು

ಅವನ ಇಂಗಿತ. ಪ್ರಶ್ನಿಸುವಂತಿಲ್ಲ

ಸಿಟ್ಟು ತೋರಿಸುವ ಹಾಗಿಲ್ಲ

ವಾದ ಮಾಡುವ ಅವಕಾಶವಿಲ್ಲ

ಅವನು ಕೊಟ್ಟಷ್ಟು ಬೀಜಗಳನು ಪಡೆದು ಬರಬೇಕಷ್ಟೇ

ಒಬ್ಬರಿಗೆ ಒಮ್ಮೆ ಮಾತ್ರ ಅವಕಾಶ

ಆತನ ದರುಶನ ಭಾಗ್ಯ ಬೀಜ ಸಿಕ್ಕಷ್ಟೇ ಖುಷಿ

ಏಕಾಂಗಿಯ ಆ ಮನೆಯಲ್ಲಿ ನಗದವರನ್ನು

ನಗಿಸಿ ಕಳುಹಿಸುತ್ತಾನೆ

ಹೋಗಿ ಬಂದವರಲ್ಲಿ ನಗು ಒಳಗೂ ಹೊರಗೂ

ಮನೆಯಿಂದ ಹೊರಬಂದವರ ಸಂತಸದ ಮುಖ

ಸರದಿ ಸಾಲಿನಲ್ಲಿ ನಿಂತವರ ಮನವನ್ನು ಅರಳಿಸುತ್ತಿತ್ತು

ನೋಡಿದವರ ಮನ

ನಮಗೂ ಅವಕಾಶವಿದೆ ಅಂತ ಕುಣಿಯುತ್ತಿತ್ತು

ಮನೆ ಒಳಗೆ ಒಬ್ಬೊಬ್ಬರಿಗೆ ಒಂದೊಂದು ಸಮಯ

ತಮ್ಮ ತಮ್ಮ ಕಷ್ಟಗಳನು ಹೇಳಿಕೊಳ್ಳಲು ಒಂದಿಷ್ಟು ಅವಧಿ

ಅವರ ಬದುಕ ಕಂಡು ಆತ ಒಳಗೊಳಗೆ ನಗುತ್ತಾನೆ

ಕಣ್ಣು ಮುಚ್ಚಿ ಬಾಯಿಂದ

ಆ ನಗುವಿನ ಬೀಜಗಳನು ಉಗುಳುತ್ತಾನೆ

ನೆಲಕ್ಕೆ ಬಿದ್ದ ಬೀಜಗಳನು ಆತನೇ ಆರಿಸಿ ಒರೆಸಿ

ಅವರ ಕೈಗೆ ಇಡುತ್ತಾನೆ

ಈ ಬೀಜ ಮಾಂತ್ರಿಕನ ವರ್ತನೆಯೇ ವಿಸ್ಮಯ

ನಗುವಿನ ಬೀಜಗಳು ಅವನ ಹತ್ತಿರ ಮಾತ್ರ ಸಿಗುತ್ತವೆ

ಬಂದವರು ಬರುವವರಿಗೆ ನಗುವ ಹಬ್ಬ

ನಗುವನ್ನು ಮರೆತವರಿಗೆ ಮತ್ತೆ ನಗುತ್ತೇವೆಂಬ ಹಂಬಲ

ಕೊಟ್ಟ ಬೀಜಗಳನು ಭೂಮಿಗೆ ಸೇರಿಸುವಂತಿಲ್ಲ

ಮನೆಯ ಸುತ್ತ ಉಳುವಂತಿಲ್ಲ

ಬೀಜ ಒಡೆದು ಮನೆಯವರಿಗೆ ಹಂಚಿಕೊಡುವಂತಿಲ್ಲ

ಯಾರಿಗೂ ಮಾರುವಂತಿಲ್ಲ

ನನ್ನಲ್ಲಿ ಇದೆ ಅಂತ ಹೇಳುವಂತಿಲ್ಲ

ಕೊಟ್ಟವರ ಚಹರೆಯನು ಬಣ್ಣಿಸುವಂತಿಲ್ಲ

ಒಂದೊಂದು ಬೀಜಕ್ಕೂ

ಅವನಂದುಕೊಂಡಷ್ಟು ಶಕ್ತಿ

ನಗದವರ ಸಮಸ್ಯೆಗೆ ಅವನ ಬೀಜಮಂತ್ರ

ಇಷ್ಟು ಪಾಲಿಸಿದರೆ ನಗಬಹುದು

ಇಲ್ಲವಾದರೆ ನಗು ಮತ್ತೆಂದಿಗೂ

ಅವರನು ಕಾಡಲಾರದೆಂದಿಗೂನಗುವಿನ ಬೀಜಗಳನು ಕೊಂಡು ತಂದು

ನುಂಗಿ ನೀರು ಕುಡಿದವರು ಅನೇಕರು

ನಗದವರು ನಕ್ಕರು

ಎಂದೂ ನಗದವರು ಜೋರಾಗಿ

ನಗತೊಡಗಿದರು

ನಗಬೇಕಾದ ಕಡೆ ಮಾತ್ರ ನಕ್ಕವರು

ಭೇಷ್ ಅನಿಸಿಕೊಂಡರು

ಉಳಿದವರು ಹುಚ್ಚರೆಂದು ಕರೆಸಿಕೊಂಡರು

ಜಗವ ನೋಡಿ ಕೆಲವರು ಗಹಗಹಿಸಿ ನಗುತ್ತಿದ್ದರು

ಅವರ ಅಪಹಾಸ್ಯದ ಕಾರಣನವರಿಯದೆ

ದೂರವಾದರು ಅನೇಕರು

ಗುಸು ಗುಸು ಪಿಸು ಪಿಸು ಒಳಗೊಳಗೆ

ನಗುವಿನ ಬೀಜಗಳು ಇಂದಿಗೂ ಮಾರಾಟಕ್ಕಿವೆ

ಆ ಹಳೆಯ ಬೀಜ ಮಾಂತ್ರಿಕ ಈಗ ಕಾಣುತ್ತಿಲ್ಲ

ಆತ ಎಲ್ಲಿ ಹೋದನೋ

ಯಾರು ಓಡಿಸಿದರೋ

ಬಿಟ್ಟುಹೋಗುವ ಕಾರಣವೇನಾಯಿತೋ

ಇಂದು ಬೀದಿ ಬೀದಿಗೂ ಸಂದಿ ಸಂದಿಗೂ

ನಗುವಿನ ಬೀಜಗಳು ಮಾರಾಟಕ್ಕಿವೆ

ಹೊಸ ಮಾಂತ್ರಿಕರು ಮಾರಾಟಗಾರರು

ದೂರ ದೂರ ದೇಶಗಳಿಂದ

ಬಂದಿಹರು ಬರುತಿಹರು

ಬಂದವರ ಸರದಿ ಸಾಲು ಇನ್ನೂ ನಿಂತಿಲ್ಲ

ಬಂದವರು ಬರುವವರು ಲೆಕ್ಕವಿಲ್ಲದಷ್ಟು

ಅಸಲಿ ನಕಲಿಯ ವ್ಯವಹಾರವೂ ಅಷ್ಟೇ ಜೋರು

ನಗದವರ ಸಂಖ್ಯೆ ಏರುತ್ತಲೇ ಇದೆ

ನಗಿಸುವ ಮಾಂತ್ರಿಕರ ಬೇಡಿಕೆ ಹಾಗೆಯೇ ಇದೆ

ನಗುವಿನ ಬೀಜಗಳು ಎಲ್ಲೆಲ್ಲೂ ಮಾರಾಟಕ್ಕಿವೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry