ಶುಕ್ರವಾರ, ಜೂನ್ 25, 2021
21 °C

ದಾಂಪತ್ಯಕ್ಕೆ ದೀಪಿಕೆಯಾದ ಹೇಬಿಯಸ್‌ ಕಾರ್ಪಸ್‌

ಕೆ.ಬಿ.ಕೆ. ಸ್ವಾಮಿ Updated:

ಅಕ್ಷರ ಗಾತ್ರ : | |

ದಾಂಪತ್ಯಕ್ಕೆ ದೀಪಿಕೆಯಾದ ಹೇಬಿಯಸ್‌ ಕಾರ್ಪಸ್‌

ಅದು 2010ರ ಅಕ್ಟೋಬರ್‌ ತಿಂಗಳ ಎರಡನೇ ಗುರುವಾರ. ಬೆಳಿಗ್ಗೆ 10 ಗಂಟೆಯ ಸಮಯವಿರಬಹುದು. ಹೈಕೋರ್ಟ್‌ ಸಮೀಪದ ರಾಜ್ಯ ಕೇಂದ್ರ ಗ್ರಂಥಾಲಯದ ಬಳಿ ಸ್ನೇಹಿತ ಅನಂತ ಮತ್ತು ಅವರ ಕಡೆಯವರು ನನಗಾಗಿ ಕಾಯುತ್ತಿದ್ದರು. ಸ್ಥಳಕ್ಕೆ ಹೋದ ನನಗೆ ಅನಂತನ ಗಾಬರಿ ಕಂಡು ಆತಂಕವಾಯಿತು. ಕಾರಿನಲ್ಲಿ ಕುಳಿತಿದ್ದ ಸುಮಾರು 24ರ ತರುಣಿಯನ್ನು ತೋರಿಸಿ, ‘ಈಕೆ ಮೇಘನಾ ಅಂತಾ. ಬೆಂಗಳೂರಿನವಳು. ಪದವೀಧರೆ. ಇವಳು ನನ್ನ ಗೆಳೆಯ ಪೃಥ್ವಿಯನ್ನು ಪ್ರೀತಿಸುತ್ತಿದ್ದು ಇಬ್ಬರೂ ಮೂರು ದಿನಗಳ ಹಿಂದೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಮೇಘನಾಳ ಮನೆಯಲ್ಲಿ ತೀವ್ರ ವಿರೋಧವಿತ್ತು. ಅದನ್ನೆಲ್ಲ ತಪ್ಪಿಸಿ ಮನೆಯವರಿಗೆ ತಿಳಿಸದೇ ಸ್ವಇಚ್ಛೆಯಿಂದ ವಿವಾಹವಾಗಿದ್ದಾರೆ. ಆದರೆ, ನಿನ್ನೆ ರಾತ್ರಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಪೊಲೀಸರು, ಪೃಥ್ವಿಯ ಸ್ವಂತ ಊರು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಹೋಗಿ ಅವನನ್ನು ಸರಿರಾತ್ರಿಯಲ್ಲಿ ಎಳೆದುಕೊಂಡು ಬಂದು ಠಾಣೆಯಲ್ಲಿ ಇರಿಸಿದ್ದಾರೆ. ಹುಡುಗಿ ತಪ್ಪಿಸಿಕೊಂಡು ನಮ್ಮ ಜೊತೆ ಇದ್ದಾಳೆ...’ ಎಂದು ಒಂದೇ ಉಸಿರಿನಲ್ಲಿ ಎಲ್ಲವನ್ನೂ ವಿವರಿಸಿದ. ‘ಈ ಕೂಡಲೇ ಪೃಥ್ವಿಯನ್ನು ಪೊಲೀಸರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಬೇಕು’ ಎಂದೂ ಅಲವತ್ತುಕೊಂಡ.

ಕಾರಿನಲ್ಲಿ ಕುಳಿತಿದ್ದ ಮೇಘನಾಳತ್ತ ದೃಷ್ಟಿ ಹರಿಸಿದ ನಾನು ಆಕೆಯನ್ನು ಕಾರಿನಿಂದ ಇಳಿಯುವಂತೆ ಸೂಚಿಸಿ ಮಾತಿಗೆ ಎಳೆದೆ. ಆಕೆ ಪೃಥ್ವಿಯನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿದ್ದಾಳೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಿದೆ. ತನ್ನ ನಡೆಯನ್ನು ಸಮರ್ಥಿಸಿಕೊಂಡ ಮೇಘನಾ, ‘ಜನ್ಮ ನೀಡಿದ ತಾಯಿ, ತಂದೆ, ಒಡಹುಟ್ಟಿದ ಸಹೋದರರನ್ನು ಬಿಟ್ಟರೂ ಸರಿ; ಪೃಥ್ವಿಯನ್ನು ಮಾತ್ರ ಬಿಟ್ಟಿರಲಾರೆ’ ಎಂಬ ದೃಢ ನಿಲುವನ್ನು ಅಳುಕಿಲ್ಲದೆ ಹೊರಹಾಕಿದಳು.

ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಆಕೆಯ ಬಲಗೈನಲ್ಲಿದ್ದ ಕಂಕಣ ಇನ್ನೂ ರಾರಾಜಿಸುತ್ತಿತ್ತು. ಎರಡೂ ಕೈಗಳ ತುಂಬಾ ಗಾಜಿನ ಬಳೆ. ಮಧ್ಯದಲ್ಲೊಂದು ಬಂಗಾರದ ಬಳೆ, ಎದೆಯ ಮಟ್ಟಕ್ಕೆ ನಿಂತ ಬಂಗಾರದ ಮಾಂಗಲ್ಯ ಸರ, ಮುಖದ ಮೇಲಿನ ಅರಿಸಿನ ಇನ್ನೂ ಮಾಸಿರಲಿಲ್ಲ. ಸ್ಫಟಿಕದ ಶಲಾಕೆಯಂತಹ ನುಡಿಗಳು ಅವಳ ಪ್ರೇಮದ ಉತ್ಕಟತೆಯನ್ನು ಪ್ರತಿಧ್ವನಿಸುತ್ತಿದ್ದವು.

ಮೇಘನಾಳ ಕುಟುಂಬದ ಹಿನ್ನೆಲೆಯ ಪ್ರಭಾವದಿಂದಲೇ ಪೊಲೀಸರು ಪೃಥ್ವಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವರೆಂದು ನನಗೆ ಮನವರಿಕೆ

ಯಾಯಿತು. ಆ ಕೂಡಲೇ ನನ್ನ ಸಹೋದ್ಯೋಗಿ ಶ್ರೀನಿವಾಸ್‌ಗೆ ಫೋನ್‌ ಮಾಡಿ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹೋಗಿ ಪೃಥ್ವಿಯ ವಿರುದ್ಧ ಪೊಲೀಸರು ಯಾವುದಾದರೂ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸುವಂತೆ ಸೂಚಿಸಿದೆ.

ಪೃಥ್ವಿಯನ್ನು ಅಕ್ರಮವಾಗಿ ಕರೆದೊಯ್ಯವ ಮೊದಲು ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂಬುದು ಖಚಿತವಾಗುವುದರೊಳಗೆ ಹೇಬಿಯಸ್ ಕಾರ್ಪಸ್ (Habeas corpus) ರಿಟ್ ಅರ್ಜಿ ತಯಾರಿಸಿ ಮೇಘನಾಳನ್ನು ಕಾನೂನು ಸಮರಕ್ಕೆ

ಸಜ್ಜುಗೂಳಿಸಿದೆ.

ಮೂಲಭೂತ ಹಕ್ಕುಗಳಿಂದ ವಂಚಿತನಾದ ಯಾವುದೇ ವ್ಯಕ್ತಿ ನೇರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿ ತನ್ನ ಹಕ್ಕುಗಳನ್ನು ಮರು ಸ್ಥಾಪಿಸಲು ನಮ್ಮ ಸಂವಿಧಾನದ 32ನೇ ವಿಧಿಯಲ್ಲಿ ಅನುವು ಮಾಡಿಕೊಡಲಾಗಿದೆ. ‘ಹೇಬಿಯಸ್ ಕಾರ್ಪಸ್’, ‘ಮ್ಯಾಂಡಮಸ್’, ‘ರಿಟ್ ಆಫ್ ಪ್ರಾಹಿಬಿಷನ್’, ‘ಸರ್ಷಿಯೊರಾರಿ’, ‘ಕೋ ವಾರಂಟೊ’ ಎಂಬ ಐದು ಬಗೆಯ ರಿಟ್‌ಗಳ ಕಾರಣದಿಂದ ಈ ವಿಧಿಯು ಅತ್ಯಂತ ಪರಿಣಾಮಕಾರಿಯಾಗಿದೆ. ಇದೇ ರೀತಿಯ ಅಧಿಕಾರವನ್ನು ಹೈಕೋರ್ಟ್‌ಗೆ ಸಂವಿಧಾನದ 226ನೇ ವಿಧಿಯಡಿ ನೀಡಲಾಗಿದೆ.

ಯಾವುದೇ ವ್ಯಕ್ತಿಯನ್ನು ಭದ್ರತಾ ಪಡೆಗಳು, ಅರೆ ಭದ್ರತಾ ಪಡೆಗಳು, ಪೊಲೀಸರು, ಯಾವುದೇ ವಿಧದ ತನಿಖಾ ಸಂಸ್ಥೆಗಳು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ ಎಂಬುದು ಕಂಡುಬಂದರೆ ಅಂಥವರನ್ನು ಕಾನೂನು ಬಾಹಿರ ಬಂಧನದಿಂದ ಮುಕ್ತಿಗೊಳಿಸುವ ಸಲುವಾಗಿಯೇ ‘ಹೇಬಿಯಸ್ ಕಾರ್ಪಸ್’ ರಿಟ್

ಅರ್ಜಿ ಬಳಸಲಾಗುತ್ತದೆ.

ಸಂವಿಧಾನದ 21ನೇ ವಿಧಿ ಅನುಸಾರ ನಾಗರಿಕರ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು (RIGHT TO LIFE AND LIBERTY) ಮೂಲಭೂತ ಹಕ್ಕುಗಳೆಂದು ಪರಿಗಣಿಸಲಾಗಿದ್ದು ಅಂತಹ ಹಕ್ಕುಗಳ ಹರಣವಾದಾಗ ತ್ವರಿತ ನ್ಯಾಯಾದಾನ ಮಾಡಬೇಕಾದ ಸವಾಲು ನ್ಯಾಯಾಂಗ ವ್ಯವಸ್ಥೆಯ ಮುಂದಿದೆ. ಹೀಗಾಗಿಯೇ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಆದಷ್ಟು ಕ್ಷಿಪ್ರವಾಗಿ ವಿಲೇವಾರಿ ಮಾಡಲಾಗುತ್ತದೆ. ಈ ಅಂಶಗಳನ್ನೆಲ್ಲಾ ಮೇಘನಾಳಿಗೆ ಸ್ಥೂಲವಾಗಿ ವಿವರಿಸಿದೆ.

ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದ ನಂತರ ನೀಡಿದ್ದ ವಿವಾಹ ಪ್ರಮಾಣ ಪತ್ರ, ನವ ಜೋಡಿಗಳ ವಿವಾಹದ ಛಾಯಾಚಿತ್ರ, ಇಬ್ಬರ ಮತದಾರರ ಗುರುತಿನ ಚೀಟಿ, ಪೃಥ್ವಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಒಳಗೊಂಡ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ತರಾತುರಿಯಲ್ಲಿ ಅಂದೇ ಮಧ್ಯಾಹ್ನ 1.30ಕ್ಕೆ ಕೋರ್ಟ್‌ಗೆ ಸಲ್ಲಿಸಿದೆ.

ಮೇಘನಾಳನ್ನು ಖುದ್ದಾಗಿ ಕೋರ್ಟ್‌ಗೆ ಹಾಜರುಪಡಿಸಿ, ‘ಈಕೆಯ ರಿಟ್ ಅರ್ಜಿಯನ್ನು ತುರ್ತಾಗಿ ನಾಳೆಯೇ ವಿಚಾರಣೆಗೆ ಎತ್ತಿಕೊಳ್ಳಬೇಕು’ ಎಂದು ವಿಭಾಗೀಯ ನ್ಯಾಯಪೀಠಕ್ಕೆ ಮನವಿ ಮಾಡಿದೆ. ನ್ಯಾಯಪೀಠದಲ್ಲಿದ್ದ ಹಿರಿಯ ನ್ಯಾಯಮೂರ್ತಿಗಳು ‘ತುರ್ತು ವಿಚಾರಣೆಯ ಅನಿವಾರ್ಯತೆ ಇಲ್ಲ. ಸರದಿ ಪ್ರಕಾರವೇ ವಿಚಾರಣೆಗೆ ಬರಲಿ’ ಎಂದರು.

ಇದಕ್ಕೆ ಒಪ್ಪದ ನಾನು, ‘ಸ್ವಾಮಿ, ನಾಳೆ ಪ್ರಕರಣವು ವಿಚಾರಣೆಗೆ ಬರದೇ ಹೋದರೆ ಮುಂದೆ ಮೂರು ದಿನ ರಜೆ ಇದೆ. ಈ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆ ಜರುಗಿದರೆ ಎರಡು ಅಮೂಲ್ಯ ಜೀವಗಳು ವ್ಯಥೆಪಡುವಂತಹ ಸ್ಥಿತಿ ಬಂದೊದಗಬಹುದು. ಹಾಗಾಗಿ ಇದೊಂದು ತುರ್ತು ವಿಚಾರಣೆಗೆ ಯೋಗ್ಯವಾದ ಪ್ರಕರಣ’ ಎಂದು ಮನವರಿಕೆ ಮಾಡಿಕೊಟ್ಟೆ. ನಮ್ಮ ಮನವಿಗೆ ಸ್ಪಂದಿಸಿದ ನ್ಯಾಯಪೀಠವು ಮರುದಿನದ ವಿಚಾರಣೆಯ ಕಡತಗಳ ಪಟ್ಟಿಗೆ ನಮ್ಮ ಪ್ರಕರಣವನ್ನೂ ಸೇರಿಸಲು ಆದೇಶಿಸಿತು. ಮೊದಲ ಹಂತದ ಜಯವೇನೊ ನಮಗೆ ಸಿಕ್ಕಿತ್ತು. ಆದರೆ, ಮುಂದಿನ ಸವಾಲನ್ನು ಗೆಲ್ಲುವುದು ಅಷ್ಟು ಸುಲಭವಾಗಿರಲಿಲ್ಲ.

ಮರುದಿನದ ವಿಚಾರಣೆಗೆ ಸನ್ನದ್ಧರಾಗುತ್ತಿದ್ದ ನಮಗೆ, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ಹೋಗಿ ಪೃಥ್ವಿಯನ್ನು ಕಂಡು ಅವನು ಹೇಗಿದ್ದಾನೆ ಎಂದು ನೋಡಿಕೊಂಡು ಬನ್ನಿ ಎಂದು ಮೇಘನಾ ಹಾಗೂ ಅನಂತ ದುಂಬಾಲು ಬಿದ್ದರು.

‘ನಾವು ಕಾನೂನಿನ ಮೊರೆ ಹೋಗಿದ್ದೇವೆ ಎಂಬುದನ್ನು ಈ ಹಂತದಲ್ಲಿ ಠಾಣೆಗೆ ತೆರಳಿ ತಿಳಿಸುವುದು ಸೂಕ್ತವಲ್ಲ’ ಎಂದು ಅವರಿಗೆ ಪರಿಪರಿಯಾಗಿ ತಿಳಿಸಿದರೂ ಅವರು ನನ್ನ ಸಲಹೆಯನ್ನು ಸ್ವೀಕರಿಸುವ ಸಮಚಿತ್ತವನ್ನು ಕಳೆದುಕೊಂಡಿದ್ದರು. ಗಳಿಗೆಗೊಮ್ಮೆ ಫೋನಾಯಿಸಿ ಪೃಥ್ವಿಯ ಭದ್ರತೆಯ ಕುರಿತು ತರಹೇವಾರಿ ಸಂಗತಿಗಳನ್ನು ತಿಳಿಸುತ್ತಿದ್ದರು.

ಒಮ್ಮೆ, ‘ಅವನನ್ನು ಚೆನ್ನಾಗಿ ಹೊಡೆದಿದ್ದಾರಂತೆ’ ಎಂದರೆ ಮತ್ತೊಮ್ಮೆ, ‘ಅವನನ್ನು ಹೊಡೆಯಲೆಂದೇ ಬೇರೆ ಠಾಣೆಗೆ ಕರೆದೊಯ್ದರಂತೆ, ಮೇಘನಾಳನ್ನು ತಂದೊಪ್ಪಿಸಿ ಪೃಥ್ವಿಯನ್ನು ಬಿಡುಗಡೆ ಮಾಡಿಸಿಕೊಳ್ಳಬೇಕಂತೆ...’ ಎಂದು ಬಗೆಬಗೆಯ ಮಾತನಾಡತೊಡಗಿದರು. ಸತ್ಯಾಸತ್ಯತೆ ಏನೆಂದು ತಿಳಿಯಲು ಸಹೋದ್ಯೋಗಿ ಮಹದೇವ್‌ಗೆ ಫೋನ್‌ ಮಾಡಿ ಠಾಣೆಗೆ ಖುದ್ದಾಗಿ ಭೇಟಿ ನೀಡಿ ಪೃಥ್ವಿಯನ್ನು ನೋಡಿಕೊಂಡು ಬರುವಂತೆ ತಿಳಿಸಿದೆ.

ಅದರಂತೆಯೇ ಸಂಜೆ ಸುಮಾರು 7ಗಂಟೆಗೆ ಠಾಣೆಗೆ ತೆರಳಿದ ವಕೀಲ ಮಹದೇವ್‌ಗೆ ಠಾಣಾಧಿಕಾರಿ ವಾಸುದೇವ ನಾಯಕ್, ‘ಹುಡುಗಿಯನ್ನು ತಂದೊಪ್ಪಿಸಿ’ ಎಂದು ಒತ್ತಡ ಹೇರಲು ಆರಂಭಿಸಿದ್ದು ತಿಳಿದು ಬಂತು. ‘ನೀವು ಹುಡುಗಿಯನ್ನು ಕರೆತಂದು ಇಲ್ಲೇ ಬಿಟ್ಟು ಹೋಗಿ. ಇಲ್ಲವೆಂದರೆ ಹುಡುಗಿಯ ಬಂಧುಗಳು ನಿಮ್ಮನ್ನು ಬಿಡುವುದಿಲ್ಲ’ ಎಂದು ತಮ್ಮ ಉದ್ಧಟತನ ಮೆರೆದಿದ್ದರು. ಇದರಿಂದ ವಿಚಲಿತರಾಗಿದ್ದ ಮಹದೇವ, ಕುಳಿತ ಜಾಗದಿಂದಲೇ ಯಾರಿಗೂ ಗೊತ್ತಾಗದಂತೆ ತಮ್ಮ ಮೊಬೈಲ್‌ ಫೋನ್‌ ಮೂಲಕ ನನಗೆ ಕರೆ ಮಾಡಿ ಫೋನ್ ಆನ್ ಮಾಡಿ ಇಟ್ಟರು. ಏರುಧ್ವನಿಯಲ್ಲಿ ಜರುಗುತ್ತಿದ್ದ ಸಂಭಾಷಣೆಯನ್ನು ಗ್ರಹಿಸಿದ ನಾನು, ಠಾಣೆಯಲ್ಲಿ ನನ್ನ ಸಹೋದ್ಯೋಗಿಯೇ ತೊಂದರೆಗೆ ಸಿಲುಕಿದ್ದಾನೆಂದು ಅರಿತು ಆ ಕೂಡಲೇ ನಾಲ್ಕೈದು ವಕೀಲ ಸಹೋದ್ಯೋಗಿ ಮಿತ್ರರೊಂದಿಗೆ ಠಾಣೆಗೆ ದೌಡಾಯಿಸಿದೆ.

ನಾವು ಅಲ್ಲಿಗೆ ತಲುಪುತ್ತಿದ್ದಂತೆಯೇ ಹೈಕೋರ್ಟ್‌ನ ರಾಜ್ಯ ಪ್ರಾಸಿಕ್ಯೂಷನ್‌ ಕಚೇರಿಯಿಂದ ತುರ್ತು ಟಪಾಲೊಂದು ಬಂತು. ನಮ್ಮೆಲ್ಲರ ಎದುರಿನಲ್ಲೇ ಟಪಾಲು ಮತ್ತದರ ಜೊತೆಗಿದ್ದ ರಿಟ್ ಅರ್ಜಿಯನ್ನು ನೋಡಿದ ಠಾಣಾಧಿಕಾರಿಯ ಅಟ್ಟಹಾಸ ಜರ‍್ರನೆ ಇಳಿಯಿತು. ಮೇಜಿನ ಮೇಲಿಟ್ಟಿದ್ದ ಒಂದು ಗ್ಲಾಸ್ ನೀರನ್ನು ಅಷ್ಟೇ ರಭಸದಲ್ಲಿ ಕುಡಿದು ಮುಗಿಸಿದರು. ಅಲ್ಲಿಯವರೆಗೂ ಇದ್ದ ತಮ್ಮ ಬಿಗಿ ಧೋರಣೆಯಿಂದ ನಿಧಾನವಾಗಿ ಸಡಿಲವಾದರು.

ಹುಡುಗಿಯ ಮನೆಯವರನ್ನು ಉದ್ದೇಶಿಸಿ, ‘ನಾನು ಏನು ಮಾಡಲೂ ಸಾಧ್ಯವಿಲ್ಲ. ಇವರು ಹೈಕೋರ್ಟ್‌ಗೆ ಹೋಗಿದ್ದಾರೆ’ ಎಂದು ನಮ್ಮತ್ತ ಬೆಟ್ಟುಮಾಡಿ ತೋರಿಸಿ, ನಮ್ಮನ್ನು ಹೊರಹೋಗುವಂತೆ ಸೂಚಿಸಿದರು. ಯಾವುದೇ ಅನಗತ್ಯ ಸಂಘರ್ಷ ಬೇಡವೆಂದು ನಾವೆಲ್ಲರೂ ಮನೆಗೆ ತೆರಳಿದೆವು.

ನಿರೀಕ್ಷೆಯಂತೆ ಮರುದಿನ ಪ್ರಕರಣದ ವಿಚಾರಣೆಯ ವೇಳೆಗೆ ಪೃಥ್ವಿಯನ್ನು ಪೊಲೀಸರು ತಮ್ಮ ಬೆಂಗಾವಲಿನಲ್ಲಿ ಹೈಕೋರ್ಟ್‌ಗೆ ಕರೆ ತಂದಿದ್ದರು. ಮೇಘನಾಳ ತಂದೆ, ತಾಯಿ, ಅಣ್ಣ ಮತ್ತು ಅವರ ಅನೇಕ ಬಂಧುಗಳೂ ಕೋರ್ಟ್‌ಗೆ ಬಂದಿದ್ದರು. ಕೋರ್ಟ್‌ ಹಾಲ್‌ ಒಳಗೆ ಠಾಣಾಧಿಕಾರಿ ಠೀವಿಯಿಂದ ಕೈಯಲ್ಲಿ ಕಡತವೊಂದನ್ನು ಹಿಡಿದು ನಿಂತಿದ್ದರು. ನ್ಯಾಯಪೀಠದ ಬಲಬದಿಯಲ್ಲಿ ನಾನು, ನನ್ನ ಸಹೋದ್ಯೋಗಿ ನಾಗಲಕ್ಷ್ಮಿ, ಮೇಘನಾ ಹಾಗೂ ಅನಂತ ಕುತೂಹಲ ಮತ್ತು ಆತಂಕದ ಛಾಯೆಯಿಂದಲೇ ನಿಂತಿದ್ದೆವು.

ನ್ಯಾಯಾಲಯದ ಕಲಾಪ ಆರಂಭವಾದ ಒಂದೈದು ನಿಮಿಷದಲ್ಲೇ ನಮ್ಮ ಪ್ರಕರಣವನ್ನು ಕೂಗಿಸಲಾಯಿತು. ಬಿಗಿಯಾದ ನಿಲುವಿನಿಂದಲೇ ಆರಂಭಗೊಂಡ ವಿಚಾರಣೆಯಲ್ಲಿ ಮೇಘನಾ ಮತ್ತು ಪೃಥ್ವಿಯ ಹಿನ್ನೆಲೆಯ ಕುರಿತು ನ್ಯಾಯಪೀಠವು ನನ್ನಿಂದ ಎಲ್ಲ ವಿವರ ತಿಳಿದುಕೊಂಡಿತು. ಆನಂತರ ನೇರವಾಗಿ ಮೇಘನಾಳನ್ನೇ ಪೀಠದ ಮುಂಭಾಗಕ್ಕೆ ಕರೆಸಿಯಿಸಿದ ನ್ಯಾಯಮೂರ್ತಿಗಳು, ‘ಜೀವನದ ಬಗ್ಗೆ ಹೊಂದಿರುವ ಆಲೋಚನೆ, ಜೀವನ ಸಂಗಾತಿಯ ಆಯ್ಕೆ ಕುರಿತು ನಿಮ್ಮ ನಿಲುವು ಏನು’ ಎಂದು ಕೇಳಿದರು.

ಮೇಘನಾ ಎಲ್ಲದಕ್ಕೂ ಸ್ಪಷ್ಟವಾಗಿ ಉತ್ತರಿಸುತ್ತಿದಳು. ಇದರಿಂದ ನ್ಯಾಯಮೂರ್ತಿ ‘ಈಕೆ ಯಾವುದೇ ಪ್ರಲೋಭನೆ, ಪ್ರಚೋದನೆ, ತಪ್ಪು ತಿಳಿವಳಿಕೆ ಇಲ್ಲದೇ ಸ್ವಇಚ್ಛೆಯಿಂದ ವಿವಾಹವಾಗಿದ್ದಾಳೆ’ ಎಂಬುದನ್ನು ಮನಗಂಡು ವಿಚಾರಣೆಯನ್ನು ಪೃಥ್ವಿಯೆಡೆಗೆ ತಿರುಗಿಸಿದರು. ಈತನ ಬಂಧನ ಯಾವ ಸಮಯದಲ್ಲಿ ಎಲ್ಲಿ ಆಯಿತು ಎಂದು ಕೇಳಿದರು. ಪೃಥ್ವಿಯನ್ನು ಬಂಧಿಸಿದ 24 ತಾಸುಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸದೇ ಹೋದ ಠಾಣಾಧಿಕಾರಿ ನಡೆಯನ್ನು ಪ್ರಾಸಿಕ್ಯೂಷನ್‌ ವಕೀಲರು ಸಮರ್ಥಿಸಿಕೊಂಡರು. ಆದರೆ, ಇದರಿಂದ ನ್ಯಾಯಮೂರ್ತಿ ತೃಪ್ತರಾಗಲಿಲ್ಲ.

‘ಪೃಥ್ವಿಯನ್ನು ಅಕ್ರಮವಾಗಿ ಬಂಧಿಸಿಲ್ಲ. ಮೇಘನಾಳ ಅಣ್ಣ ನೀಡಿದ ಅಪಹರಣದ ದೂರಿನ ಆಧಾರದಲ್ಲಿ ದಸ್ತಗಿರಿ ಮಾಡಿದ್ದೇನೆ’ ಎಂದು ಕಡತವನ್ನು ತೆಗೆದು ನ್ಯಾಯಪೀಠದ ಮುಂದಿರಿಸಿದರು. ಒಂದು ಕ್ಷಣ ಕಡತವನ್ನು ಅವಲೋಕಿಸಿದ ನ್ಯಾಯಪೀಠವು ಪೊಲೀಸ್ ಇನ್‌ಸ್ಪೆಕ್ಟರ್ ಅವರಿಗೆ ಪೃಥ್ವಿಯ ವಿರುದ್ಧ ಪ್ರಕರಣ ದಾಖಲಾದ ಸಮಯ ಮತ್ತು ದಿನ ಯಾವುದೆಂದು ಕೇಳಿತು.

ಹೇಬಿಯಸ್ ಕಾರ್ಪಸ್ ಅರ್ಜಿಯು ಠಾಣೆಗೆ ತಲುಪಿದ ಸುಮಾರು ಎರಡು ಗಂಟೆಗಳ ನಂತರ ಮೇಘನಾಳ ಅಣ್ಣನಿಂದ ಲಿಖಿತ ದೂರನ್ನು ಪಡೆದು ಪೃಥ್ವಿಯ ವಿರುದ್ಧ ಅಪಹರಣ ಪ್ರಕರಣದಡಿ ಎಫ್.ಐ.ಆರ್ ದಾಖಲಿಸಲಾಗಿತ್ತು. ಇದನ್ನು ಗ್ರಹಿಸಿದ ನ್ಯಾಯಮೂರ್ತಿಗಳು ಠಾಣಾಧಿಕಾರಿಯ ಅಕ್ರಮ ನಡೆಯನ್ನು ಪ್ರಶ್ನಿಸಿದರು.

ಕಡೆಗೆ, ಮೇಘನಾಳ ಕುಟುಂಬದ ಮುಲಾಜಿಗೆ ಒಳಗಾದಂತೆ ಕಂಡಿದ್ದ ಪೊಲೀಸರ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ‘ನಾಗರಿಕರ ವೈಯಕ್ತಿಕ ಮತ್ತು ಜೀವಿಸುವ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಕಠೋರ ಮಾತಿನಿಂದ ತಿವಿಯಿತು. ‘ನಾಗರಿಕರ ಜೀವಿಸುವ ಹಕ್ಕು (Right to Life and Liberty) ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಒಳಗೊಂಡಿದೆ. ಖಾಸಗಿತನದ (Right to Privacy) ಹಕ್ಕುಗಳ ಹರಣವಾಗದಂತೆ ಭದ್ರತೆಯನ್ನು ನೀಡಿದೆ’ ಎಂದು ವ್ಯಾಖ್ಯಾನಿಸಿದರು.

‘ಕಾನೂನು ಸಮ್ಮತವಾದ ವಿವಾಹಯೋಗ್ಯ ವಯಸ್ಸಿನ ವ್ಯಕ್ತಿಗಳ ಜೀವನ ಸಂಗಾತಿಯ ಆಯ್ಕೆಯ ಹಕ್ಕುಗಳನ್ನು ಸಕಾರಣವಿಲ್ಲದೇ ಮೊಟಕುಗೊಳಿಸುವ ಕಾರ್ಯವೈಖರಿ ಸಲ್ಲ’ ಎಂಬ ಅಭಿಪ್ರಾಯಕ್ಕೆ ಬಂದ ನ್ಯಾಯಪೀಠವು ಪೃಥ್ವಿಯ ವಿರುದ್ಧ ದಾಖಲಾಗಿದ್ದ ಎಫ್.ಐ.ಆರ್ ರದ್ದುಪಡಿಸಿತು. ಜೀವನ ಸಂಗಾತಿಯ ಆಯ್ಕೆಗೆ ಒಪ್ಪಿಗೆಯ ಮುದ್ರೆ ಒತ್ತಿತು. ಕಾನೂನಿನ ವ್ಯಾಪ್ತಿ ಮೀರಿ ನಡೆದಿದ್ದ ಇನ್‌ಸ್ಪೆಕ್ಟರ್‌ಗೆ ನ್ಯಾಯಪೀಠ ಮೌಖಿಕ ಎಚ್ಚರಿಕೆಯ ಆದೇಶ ನೀಡಿ ಈ ರೀತಿ ಮತ್ತೊಮ್ಮೆ ನಡೆದುಕೊಳ್ಳದಂತೆ ಎಚ್ಚರಿಸಿತು.

ಲೇಖಕ ಹೈಕೋರ್ಟ್‌ ವಕೀಲ

(ಹೆಸರುಗಳನ್ನು ಬದಲಾಯಿಸಲಾಗಿದೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.