ಪೊಟ್ರೊಗೆ ಆಘಾತ ನೀಡಿದ ಇಸ್ನರ್‌

7

ಪೊಟ್ರೊಗೆ ಆಘಾತ ನೀಡಿದ ಇಸ್ನರ್‌

Published:
Updated:
ಪೊಟ್ರೊಗೆ ಆಘಾತ ನೀಡಿದ ಇಸ್ನರ್‌

ಮಿಯಾಮಿ: ದಿಟ್ಟ ಆಟ ಆಡಿದ ಅಮೆರಿಕದ ಜಾನ್‌ ಇಸ್ನರ್‌, ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ‍ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಇಸ್ನರ್‌ 6–1, 7–6ರ ನೇರ ಸೆಟ್‌ಗಳಿಂದ ಐದನೇ ಶ್ರೇಯಾಂಕಿತ ಆಟಗಾರ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊಗೆ ಆಘಾತ ನೀಡಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನ ಹೊಂದಿದ್ದ ಇಸ್ನರ್‌ ಮೊದಲ ಸೆಟ್‌ನಲ್ಲಿ ಮಿಂಚಿನ ಆಟ ಆಡಿದರು. ಬಿರುಗಾಳಿ ವೇಗದ ಸರ್ವ್‌ಗಳ ಜೊತೆಗೆ ಬಲಿಷ್ಠ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅರ್ಜೆಂಟೀನಾದ ಪೊಟ್ರೊ ಅವರನ್ನು ಕಂಗೆಡಿಸಿದರು.

ನಂತರವೂ ಸೊಗಸಾದ ಏಸ್‌ಗಳನ್ನು ಸಿಡಿಸಿದ ಇಸ್ನರ್‌ ಏಕಪಕ್ಷೀಯವಾಗಿ ಸೆಟ್‌ ಗೆದ್ದರು. ಆರಂಭಿಕ ನಿರಾಸೆಯಿಂದ ಪೊಟ್ರೊ ಎದೆಗುಂದಲಿಲ್ಲ.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಆಟಗಾರರ ಸವಾಲು ಮೀರಿ ನಿಂತಿದ್ದ ಅವರು ಎರಡನೇ ಸೆಟ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದರು. ಇಸ್ನರ್‌

ಕೂಡ ಗುಣಮಟ್ಟದ ಆಟದ ಮೂಲಕ ಗಮನ ಸೆಳೆದರು. ಹೀಗಾಗಿ ಶುರುವಿನಿಂದಲೇ ಸಮಬಲದ ಪೈಪೋಟಿ ಕಂಡುಬಂತು.

ಉಭಯ ಆಟಗಾರರೂ ಸರ್ವ್‌ ಕಾಪಾಡಿಕೊಂಡಿದ್ದರಿಂದ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಕಠಿಣ ಪರಿಸ್ಥಿತಿಯಲ್ಲಿ ಒತ್ತಡ ಮೀರಿ ನಿಂತ ಇಸ್ನರ್‌ ಗೆಲುವಿನ ತೋರಣ ಕಟ್ಟಿದರು. ಈ ಹೋರಾಟ ಒಂದು ಗಂಟೆ 23 ನಿಮಿಷ ನಡೆಯಿತು.

ಭಾನುವಾರ ನಡೆಯುವ ಫೈನಲ್‌ನಲ್ಲಿ ಇಸ್ನರ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಸೆಣಸಲಿದ್ದಾರೆ.

ದಿನದ ಇನ್ನೊಂದು ಸೆಮಿಫೈನಲ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಜ್ವೆರೆವ್‌ 7–6, 6–2ರಲ್ಲಿ ಸ್ಪೇನ್‌ನ ಪ್ಯಾಬ್ಲೊ ಕರೆನೊ ಬುಸ್ಟ ವಿರುದ್ಧ ಗೆದ್ದರು.

ಮೊದಲ ಸೆಟ್‌ನಲ್ಲಿ ಜ್ವೆರೆವ್‌ ಮತ್ತು ಪ್ಯಾಬ್ಲೊ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಆದರೆ ‘ಟೈ ಬ್ರೇಕರ್‌’ನಲ್ಲಿ ಜ್ವೆರೆವ್‌ ಎದುರಾಳಿಯ ಸವಾಲು ಮೀರಿದರು.

ಎರಡನೇ ಸೆಟ್‌ನ ಮೊದಲ ನಾಲ್ಕು ಗೇಮ್‌ಗಳಲ್ಲಿ ಎದುರಾಳಿಗೆ ಅಲ್ಪ ಪ್ರತಿರೋಧ ಒಡ್ಡಿದ ಬುಸ್ಟ ನಂತರ ಮಂಕಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry