ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚುನಾವಣೆ ಬಳಿಕ ನಿರ್ಧಾರ: ಅಮಿತ್‌ ಶಾ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‌ಮೈಸೂರು: ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಬಗ್ಗೆ ವಿಧಾನಸಭಾ ಚುನಾವಣೆ ಬಳಿಕ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ಶನಿವಾರ ತಿಳಿಸಿದರು.

‘ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಗಳೊಂದಿಗೆ ನಾವು ಚೆಲ್ಲಾಟ ಆಡುವುದಿಲ್ಲ. ಅಷ್ಟಕ್ಕೂ ರಾಜ್ಯ ಸರ್ಕಾರದ ಶಿಫಾರಸು ಪತ್ರ ಇದುವರೆಗೆ ಕೇಂದ್ರ ತಲುಪಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಡಿಯೂರಪ್ಪ ಅವರನ್ನು ಮಖ್ಯಮಂತ್ರಿ ಆಗದಂತೆ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಂತ್ರ ರೂಪಿಸಿದ್ದಾರೆ. ಲಿಂಗಾಯತ ಮತಗಳನ್ನು ಧ್ರುವೀಕರಣಗೊಳಿಸುವ ಉದ್ದೇಶ ಹೊಂದಿದ್ದಾರೆ. ಈ ವಿಚಾರ ಸಮುದಾಯಕ್ಕೆ ಗೊತ್ತಿದೆ. ಇಷ್ಟು ವರ್ಷ ಸುಮ್ಮನಿದ್ದು, ಚುನಾವಣೆ ಸಮಯದಲ್ಲಿ ಏಕೆ ಈ ವಿಚಾರ ಎತ್ತಿಕೊಂಡರು’ ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಐದು ವರ್ಷ ಪೂರೈಸಲು ಯಡಿಯೂರಪ್ಪ ಅವರಿಗೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ, ‘ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ರೈತಪರ ಸರ್ಕಾರ ಮುನ್ನಡೆಸಲಿದ್ದಾರೆ’ ಎಂದರು.

‘ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ. ಹಿಂದುತ್ವದಿಂದಲೂ ಹಿಂದೆ ಸರಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಕರ್ನಾಟಕದ ಪರಿವರ್ತನೆ ಆ ಪಕ್ಷದಿಂದ ಅಸಾಧ್ಯ. ಸ್ವಂತಬಲದಿಂದ ಅಧಿಕಾರಕ್ಕೆ ಬರಲೂ ಅವರಿಗೆ ಸಾಧ್ಯವಿಲ್ಲ’ ಎಂದರು.

ರಾಜ್ಯದ ವಿಕಾಸಕ್ಕೆ ಸಿದ್ದರಾಮಯ್ಯ ಸ್ಪೀಡ್‌ ಬ್ರೇಕರ್‌ ಆಗಿದ್ದು, ಇದೇ ಸರ್ಕಾರ ಮುಂದುವರಿದರೆ ಭ್ರಷ್ಟಾಚಾರದ ಸುನಾಮಿಯೇ ಅಪ್ಪಳಿಸಲಿದೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭ್ರಷ್ಟಾಚಾರ ನಡೆದಿಲ್ಲವೇ, ನೀಲಿ ಚಿತ್ರ ನೋಡಿಲ್ಲವೇ, ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿಲ್ಲವೇ ಎಂಬ ಪ್ರಶ್ನೆಗೆ, ‘ಸಾರ್ವಜನಿಕ ಜೀವನದಲ್ಲಿ ಉತ್ತಮ ನಡವಳಿಕೆ, ಗುಣಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಬಾರಿ ಟಿಕೆಟ್ ನೀಡಲಾಗುವುದು’ ಎಂದು ಹೇಳಿದರು.

**

ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ಪಕ್ಷ ಸೇರ್ಪಡೆ ಕುರಿತು ನಾನೇನೂ ಹೇಳುವುದಿಲ್ಲ.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT