ವಿಡಿಯೊಕಾನ್‌ ಹಗರಣ: ಸಿಬಿಐ ತನಿಖೆ ಆರಂಭ

7
ಐಸಿಐಸಿಐ ಬ್ಯಾಂಕ್‌ನಿಂದ ₹ 3,250 ಕೋಟಿ ಸಾಲ ನೀಡಿರುವ ಪ್ರಕರಣ

ವಿಡಿಯೊಕಾನ್‌ ಹಗರಣ: ಸಿಬಿಐ ತನಿಖೆ ಆರಂಭ

Published:
Updated:
ವಿಡಿಯೊಕಾನ್‌ ಹಗರಣ: ಸಿಬಿಐ ತನಿಖೆ ಆರಂಭ

ನವದೆಹಲಿ: ವಿಡಿಯೊಕಾನ್‌ ಸಮೂಹಕ್ಕೆ ಐಸಿಐಸಿಐ ಬ್ಯಾಂಕ್‌ ₹ 3,250 ಕೋಟಿ ಸಾಲ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದೆ.

ವಿಡಿಯೊಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್‌ ಅವರು ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಅವರಿಗೆ ಸೇರಿದ ಎನ್‌ಯುಪವರ್‌ ರಿನಿವೇಬಲ್ಸ್‌ ಸಂಸ್ಥೆಗೆ ₹ 64 ಕೋಟಿ ನೀಡಿದ್ದಾರೆ ಎನ್ನುವ ಆರೋಪ ಇದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ.

2012ರಲ್ಲಿ ವಿಡಿಯೊಕಾನ್‌ ಸಮೂಹವು ₹ 3,250 ಕೋಟಿ ಸಾಲ ಪಡೆದ ಆರು ತಿಂಗಳ ಬಳಿಕ ₹ 64 ಕೋಟಿ ವರ್ಗಾವಣೆ ಆಗಿದೆ. ಧೂತ್‌ ಅವರು ಬ್ಯಾಂಕ್‌ನಿಂದ ಸಾಲ ಪಡೆದ ನಂತರ ಎನ್‌ಯುಪವರ್ ರಿನಿವೇಬಲ್ಸ್‌ ಸಂಸ್ಥೆಯ ಒಡೆತನವನ್ನೂ ದೀಪಕ್‌ ಅವರಿಗೆ ₹ 9 ಲಕ್ಷಕ್ಕೆ ಹಸ್ತಾಂತರಿಸಿದ್ದಾರೆ ಎನ್ನುವ ಆರೋಪವೂ ಇದೆ.

ಸಾಲ ಮಂಜೂರು ಮಾಡುವಲ್ಲಿ ಭಾಗಿಯಾಗಿದ್ದ ಬ್ಯಾಂಕ್‌ನ ಕೆಲವು ಅಧಿಕಾರಿಗಳನ್ನು ಸಿಬಿಐ ಶನಿವಾರ ವಿಚಾರಣೆಗೆ ಒಳಪಡಿಸಿತು. ಇದರ ಆಧಾರದ ಮೇಲೆ ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿದೆ.

ಕಳೆದ ತಿಂಗಳು ಆರಂಭಿಸಿದ್ದ ಪ್ರಾಥಮಿಕ ತನಿಖೆಯಲ್ಲಿ, ವಿಡಿಯೊಕಾನ್ ಸಮೂಹದ ಪ್ರವರ್ತಕ ವೇಣುಗೋಪಾಲ್ ಧೂತ್‌, ದೀಪಕ್‌ ಕೊಚ್ಚರ್‌ ಮತ್ತು ಇತರರನ್ನು ಹೆಸರಿಸಲಾಗಿದೆ.

ವಹಿವಾಟು ನಡೆದಿರುವುದಕ್ಕೆ ಯಾವುದಾದರೂ ದಾಖಲೆಗಳಿವೆಯೇ ಎಂದು ಹಾಗೂ ತಪ್ಪು ನಡೆದಿರುವುದಕ್ಕೆ ಯಾವುದಾದರೂ ಸಾಕ್ಷ್ಯಗಳು ಸಿಗಬಹುದೇ ಎನ್ನುವುದನ್ನೂ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆಯಲ್ಲಿ ಸಿಗುವ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಚಂದಾ ಅವರನ್ನು ವಿಚಾರಣೆಗೆ ಕರೆಯುವ ನಿರ್ಧಾರಕ್ಕೆ ಬರಲಿದೆ. ಚಂದಾ ಪತಿ ದೀಪಕ್‌, ಧೂತ್‌ ಹಾಗೂ ಇನ್ನಿತರರನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.

ಆರೋಪ ಏನು?: ಪರಸ್ಪರ ನೆರವು ಪಡೆಯುವ ಉದ್ದೇಶದಿಂದ ವಿಡಿಯೊಕಾನ್‌ಗೆ ಸಾಲ ನೀಡಿಕೆಯಲ್ಲಿ ಕೊಚ್ಚರ್‌ ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ವಿಡಿಯೊಕಾನ್‌ ಮತ್ತು ಚಂದಾ ಅವರ ಪತಿ ದೀಪಕ್‌ ಕೊಚ್ಚರ್‌ ಅವರಿಗೆ ಸೇರಿದ ಎನ್‌ಯುಪವರ್‌ ರಿನಿವೇಬಲ್ಸ್‌ ಸಂಸ್ಥೆ ನಡುವಣ ಅನುಮಾನಾಸ್ಪದ ವಹಿವಾಟಿನ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಕೊಚ್ಚರ್‌ ಬೆಂಬಲಕ್ಕೆ ಮಂಡಳಿ: ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ಚಂದಾ ಕೊಚ್ಚರ್‌ ಅವರ ಬೆಂಬಲಕ್ಕೆ ನಿಂತಿದ್ದು, ಅವರಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry