ಗರ್ಭಪಾತ ಮಾಡಿಸಿದ ಪ್ರಿಯಕರ ಪರಾರಿ

7

ಗರ್ಭಪಾತ ಮಾಡಿಸಿದ ಪ್ರಿಯಕರ ಪರಾರಿ

Published:
Updated:

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಮುಂಬೈನ 23 ವರ್ಷದ ಯುವತಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಲ್ಲದೆ, ಆಕೆಗೆ ಗರ್ಭಪಾತ ಮಾಡಿಸಿ ಪರಾರಿಯಾದ ಆರೋಪದಡಿ ಸಲ್ಮಾನ್ (28) ಎಂಬಾತನ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಟಿಪ್ಪುನಗರ ನಿವಾಸಿಯಾದ ಸಲ್ಮಾನ್, ಆಡುಗೋಡಿಯಲ್ಲಿ ಕಂಪ್ಯೂಟರ್ ರಿಪೇರಿ ಮಳಿಗೆ ಇಟ್ಟುಕೊಂಡಿದ್ದಾನೆ. ಮುಂಬೈನ ಖಾಸಗಿ ಕಂಪನಿ

ಯೊಂದರಲ್ಲಿ ಉದ್ಯೋಗಿಯಾಗಿದ್ದ ಸಂತ್ರಸ್ತೆಗೆ, ತನ್ನ ತಮ್ಮನ ಮುಖಾಂತರ ಸಲ್ಮಾನ್‌ನ ಪರಿಚಯವಾಗಿತ್ತು.

‘ತಮ್ಮನಿಂದ ಮೊಬೈಲ್ ಸಂಖ್ಯೆ ಪಡೆದು ನನಗೆ ಕರೆ ಮಾಡಿದ್ದ ಸಲ್ಮಾನ್, ‘ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ. ಆಗ ನೀವೂ ತಮ್ಮನ ಜತೆಗೇ ಇರಬಹುದು’ ಎಂದಿದ್ದ. ಅಂತೆಯೇ 2016ರಲ್ಲಿ ನಗರಕ್ಕೆ ಬಂದ ನನಗೆ, ಆತನೊಂದಿಗೆ ಸ್ನೇಹ ಶುರುವಾಯಿತು. ಕ್ರಮೇಣ ಅದು ಪ್ರೇಮಕ್ಕೆ ತಿರುಗಿತ್ತು’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

‘2016ರ ಡಿ.31ರಂದು ತಮ್ಮ ಊರಿಗೆ ಹೋಗಿದ್ದ. ಆ ದಿನ ರಾತ್ರಿ ಮನೆಗೆ ಬಂದಿದ್ದ ಸಲ್ಮಾನ್, ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಲು ಮುಂದಾದ. ನಾನು ಒಪ್ಪದಿದ್ದಾಗ ಅತ್ಯಾಚಾರ ಎಸಗಿ ಹೊರಟು ಹೋದ. ತಮ್ಮನಿಗೆ ವಿಷಯ ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂದು ನಾನೂ ಸುಮ್ಮನಿದ್ದೆ. ಮದುವೆ ಆಗುವುದಾಗಿ ಹೇಳಿದ್ದರಿಂದ ಆ ನಂತರ ಇಬ್ಬರೂ ಹಲವು ಸಲ ಲೈಂಗಿಕ ಕ್ರಿಯೆ ನಡೆಸಿದ್ದೆವು.’

‘ನಾನು ಗರ್ಭಿಣಿಯಾದ ನಂತರ ಸಲ್ಮಾನ್ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು. ನನ್ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಮೋಸ ಮಾಡಿದರೆ ಪೊಲೀಸರ ಮೊರೆ ಹೋಗುವುದಾಗಿ ಹೆದರಿಸಿದಾಗ, ಮತ್ತೆ ಸನಿಹ ಬಂದವನಂತೆ ನಾಟಕವಾಡಿದ್ದ. ಅಲ್ಲದೆ, ಮದುವೆಗೂ ಮುನ್ನವೇ ಮಗುವಾದರೆ ಸರಿ ಹೋಗುವುದಿಲ್ಲ ಎಂದು ಪುಸಲಾಯಿಸಿ, ಕೋರಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ.’

‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ನನ್ನಿಂದ ₹5 ಲಕ್ಷ ನಗದು ಹಾಗೂ ಚಿನ್ನಾಭರಣವನ್ನೂ ಪಡೆದುಕೊಂಡಿದ್ದಾನೆ. ಈಗ ಬೇರೊಂದು ಯುವತಿಯನ್ನು ಮದುವೆ ಆಗಿ ಆಕೆಗೂ ಮೋಸ ಮಾಡಲು ಹೊರಟಿದ್ದಾನೆ. ಹೀಗಾಗಿ, ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮೊಬೈಲ್ ಸ್ವಿಚ್ಡ್‌ಆಫ್: ‘ಸಲ್ಮಾನ್ ವಿರುದ್ಧ ಅತ್ಯಾಚಾರ (ಐಪಿಸಿ 376), ವಂಚನೆ (420), ಗರ್ಭಪಾತ (312), ಜೀವಬೆದರಿಕೆ (506) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆತ ಮಳಿಗೆ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾನೆ. ಮೊಬೈಲ್ ಸಹ ಸ್ವಿಚ್ಡ್‌ಆಫ್ ಆಗಿದೆ’ ಎಂದು ಆಡುಗೋಡಿ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry