₹52 ಲಕ್ಷ ಕದ್ದ ಕಸ್ಟೋಡಿಯನ್ ಸೆರೆ

7
ಎಟಿಎಂಗೆ ತುಂಬಬೇಕಿದ್ದ ಹಣದೊಂದಿಗೆ ಪರಾರಿ

₹52 ಲಕ್ಷ ಕದ್ದ ಕಸ್ಟೋಡಿಯನ್ ಸೆರೆ

Published:
Updated:
₹52 ಲಕ್ಷ ಕದ್ದ ಕಸ್ಟೋಡಿಯನ್ ಸೆರೆ

ಬೆಂಗಳೂರು: ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ₹52 ಲಕ್ಷ ಕದ್ದೊಯ್ದು ತನ್ನ ಮನೆಯ ಕೊಟ್ಟಿಗೆಯಲ್ಲಿ ಅವಿತಿಟ್ಟಿದ್ದ ‘ಸಿಎಂಎಸ್ ಸರ್ವಿಸ್ ಏಜೆನ್ಸಿ’ಯ ಕಸ್ಟೋಡಿಯನ್ ಪರಮೇಶ್ (24) ಮಾರತ್ತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಪರಮೇಶ್, ಮಾರ್ಚ್ 9ರಂದು ಹಣದೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಏಜೆನ್ಸಿ ವ್ಯವಸ್ಥಾಪಕ ಲೋಕೇಶ್ ಮಾರತ್ತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು. ಆರೋಪಿಯ ಮಾವ ಕೆಎಸ್‌ಆರ್‌ಪಿಯಲ್ಲಿ ಎಸ್‌ಐ ಆಗಿದ್ದು, ಅವರು ನೀಡಿದ ಸುಳಿವು ಆಧ

ರಿಸಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಎಟಿಎಂ ಕೆಟ್ಟಿದ್ದೇ ವರವಾಯ್ತು: ಸುಳ್ಯದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದ ಆರೋಪಿ, ವರ್ಷದ ಹಿಂದೆ ನಗರಕ್ಕೆ ಬಂದು ಸಿಎಂಎಸ್ ಸರ್ವಿಸ್ ಏಜೆನ್ಸಿಯಲ್ಲಿ ಕಸ್ಟೋಡಿಯನ್ (ಎಟಿಎಂಗೆ ಹಣ ತುಂಬುವ ಕೆಲಸ) ಆಗಿ ಕೆಲಸಕ್ಕೆ ಸೇರಿದ್ದ.

ಸಿಎಂಎಸ್ ಏಜೆನ್ಸಿಯು ಐಸಿಐಸಿಐ, ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಕರ್ಣಾಟಕ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದೆ. ಅಧಿಕಾರಿಗಳ ಸೂಚನೆಯಂತೆ ಮಾರ್ಚ್ 9ರ ಬೆಳಿಗ್ಗೆ ಆರೋಪಿ ಮಾರತ್ತಹಳ್ಳಿ ಮಾರ್ಗದಲ್ಲಿ ಕರ್ತವ್ಯಕ್ಕೆ ತೆರಳಿದ್ದ. ಐಸಿಐಸಿಐ ಬ್ಯಾಂಕ್‌ನಿಂದ ₹52 ಲಕ್ಷ ಸಂಗ್ರಹಿಸಿಕೊಂಡ ಆತ, ಮಾರತ್ತಹಳ್ಳಿ ತುಳಸಿ ಚಿತ್ರಮಂದಿರ ಸಮೀಪದ ಎಟಿಎಂಗೆ ಹಣ ತುಂಬಲು ಹೊರಟಿದ್ದ.

ಆದರೆ, ಆ ಘಟಕದ ಯಂತ್ರ ಕೆಟ್ಟಿದ್ದರಿಂದ ಹಣವನ್ನು ಗೊರಗುಂಟೆಪಾಳ್ಯದ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ. ಪರಮೇಶ್ ರಾತ್ರಿಯಾದರೂ ಕಚೇರಿಗೆ ಮರಳದಿದ್ದಾಗ ಅಧಿಕಾರಿಗಳು ಕರೆ ಮಾಡಿದ್ದರು. ಆಗ ಆತ, ‘ಎಟಿಎಂ ಘಟಕಕ್ಕೆ ಹಣ ತುಂಬಿದ್ದೇನೆ. ತಾಯಿಗೆ ಹುಷಾರಿಲ್ಲದ ಕಾರಣ ಮೈಸೂರಿಗೆ ಹೊರಟಿದ್ದೇನೆ. ನಾಳೆ ಮಧ್ಯಾಹ್ನ ಕೆಲಸಕ್ಕೆ ಬರುತ್ತೇನೆ’ ಎಂದಿದ್ದ.

ಅಂತೆಯೇ ಮರುದಿನ ಸಂಜೆ ಪರಮೇಶ್ ಕರ್ತವ್ಯಕ್ಕೆ ಹಾಜರಾಗಿದ್ದ. ಮಾರ್ಚ್ 12ರಂದು ಏಜೆನ್ಸಿಗೆ ಕರೆ ಮಾಡಿದ್ದ ಬ್ಯಾಂಕ್ ಅಧಿಕಾರಿಗಳು, ‘ತುಳಸಿ ಚಿತ್ರಮಂದಿರ ಸಮೀಪದ ಎಟಿಎಂ ಯಂತ್ರ ಕೆಟ್ಟು ಹೋಗಿದೆ. ಅದಕ್ಕೆ ಹಣ ತುಂಬಬೇಡಿ’ ಎಂದಿದ್ದರು. ಈಗಾಗಲೇ ಪರಮೇಶ್ ಹಣ ತುಂಬಿದ್ದಾನೆ ಎಂದು ಭಾವಿಸಿದ ಅಧಿಕಾರಿಗಳು, ತಕ್ಷಣ ಆತನನ್ನು ಕರೆದು ಹಣ ವಾಪಸ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು.

ಅಂತೆಯೇ ಕಚೇರಿಯಿಂದ ಹೊರಟ ಆರೋಪಿ, ನೇರವಾಗಿ ಗೊರಗುಂಟೆಪಾಳ್ಯದ ತನ್ನ ಮನೆಗೆ ತೆರಳಿದ್ದ. ಅಲ್ಲಿಂದ ಹಣದ ಬ್ಯಾಗ್ ತೆಗೆದುಕೊಂಡು ಸೋಮವಾರಪೇಟೆಗೆ ಬಸ್ ಹತ್ತಿದ್ದ. ಇತ್ತ ಅಧಿಕಾರಿಗಳು ಮೂರ್ನಾಲ್ಕು ದಿನಗಳಿಂದ ಕರೆ ಮಾಡಿದರೂ, ಪರಮೇಶ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.  ಇದರಿಂದ ಅನುಮಾನಗೊಂಡ ವ್ಯವಸ್ಥಾಪಕ ಲೋಕೇಶ್, ಮಾರ್ಚ್ 17ರಂದು ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಬಂಧನಕ್ಕೆ ಕಾರ್ಯಾಚರಣೆ ಶುರು ಮಾಡಿದ್ದರು.

ಪರಮೇಶ್‌ನ ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಪೊಲೀಸರು ಸೋಮವಾರಪೇಟೆಗೆ ತೆರಳಿದ್ದರು. ಅಷ್ಟರಲ್ಲಾಗಲೇ ಆರೋಪಿ, ತನ್ನ ಮನೆಯ ಕೊಟ್ಟಿಗೆಯಲ್ಲಿನ ಹಂಡೆಯಲ್ಲಿ ಹಣದ ಬ್ಯಾಗ್ ಇಟ್ಟು ಪರಾರಿಯಾಗಿದ್ದ.

ಪೊಲೀಸರು ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆರೋಪಿಯ ಮಾವ ಕೆಎಸ್‌ಆರ್‌ಪಿ ಎಸ್‌ಐ ಎಂಬ ವಿಚಾರ ತಿಳಿದ ಪೊಲೀಸರು, ತನಿಖೆಗೆ ಅವರ ಸಹಕಾರ ಕೋರಿದ್ದರು.

ಪರಮೇಶ್ ಮನೆಗೆ ಬಂದು ಹೋಗಿದ್ದ ವಿಚಾರವನ್ನು ಖಚಿತಪಡಿಸಿಕೊಂಡ ಅವರು, ಜಮೀನು ಹಂಚಿಕೆ ವಿಚಾರವಾಗಿ ಮಾತನಾಡಬೇಕಿದೆ ಎಂದು ಸುಳ್ಳು ಹೇಳಿ ಮಾರ್ಚ್ 26ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆತ ಬರುತ್ತಿದ್ದಂತೆಯೇ ಪೊಲೀಸರು ಸುತ್ತುವರಿದು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.

69 ಪ್ರಕರಣ, 48 ಬಂಧನ

ಮೂರು ತಿಂಗಳ ಅವಧಿಯಲ್ಲಿ 69 ಅಪರಾಧ ಪ್ರಕರಣಗಳನ್ನು ಭೇದಿಸಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, 48 ಆರೋಪಿಗಳನ್ನು ಬಂಧಿಸಿ ₹ 1.6 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

‘ಶಸ್ತ್ರಾಸ್ತ್ರ ಪರವಾನಗಿದಾರರು 800’

‘ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಸ್ತ್ರಾಸ್ತ್ರಗಳನ್ನು ಪೊಲೀಸರ ಸುಪರ್ದಿಗೆ ಒಪ್ಪಿಸುವಂತೆ ಬಳಕೆದಾರರಿಗೆ ಸೂಚಿಸಲಾಗಿದೆ. ನಗರದಲ್ಲಿ 800ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿದಾರರಿದ್ದು, ಆ ಪೈಕಿ ಈಗಾಗಲೇ ಶೇ 50ರಷ್ಟು ಮಂದಿ ಪಿಸ್ತೂಲ್, ರಿವಾಲ್ವರ್‌ಗಳನ್ನು ಮರಳಿಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

‘ಒಂದು ವೇಳೆ ಪರವಾನಗಿದಾರರು ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ವಿನಾಯಿತಿ ಬಯಸಿದಲ್ಲಿ, ಏ.10ರೊಳಗೆ ತಮ್ಮ ವ್ಯಾಪ್ತಿಯ ಡಿಸಿಪಿಗೆ ಅರ್ಜಿ ಸಲ್ಲಿಸಬೇಕು. ಶಸ್ತ್ರಾಸ್ತ್ರ ಏಕೆ ಬೇಕು ಎಂಬುದಕ್ಕೆ ವಿವರಣೆ ನೀಡಬೇಕು. ನಂತರ ಪರಿಶೀಲನಾ ಸಮಿತಿಯು ಅರ್ಜಿಯನ್ನು ಪರಿಶೀಲಿಸಿ ಅನುಮತಿ ನೀಡುವ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry