ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಿಗೂ ಉಂಟು ಫ್ಯಾಷನ್‌

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗರ್ಭ ಧರಿಸಿದ ನಂತರ ಮಹಿಳೆಯ  ಜೀವನಶೈಲಿ ಸಾಕಷ್ಟು ಬದಲಾಗುತ್ತದೆ. ದೇಹ ಬೆಳೆಯುತ್ತಿದ್ದಂತೆ ಹಳೆಯ ಉಡುಪುಗಳು ಮೂಲೆಗುಂಪಾಗುತ್ತವೆ. ಹೊಸ ದಿರಿಸು ಕೊಳ್ಳುವ ಸಂಭ್ರಮದ ಜೊತೆಗೆ ಯಾವ ಬಗೆಯ ಉಡುಪುಗಳನ್ನು ಕೊಳ್ಳಬೇಕೆಂಬ ಗೊಂದಲ. ಹಿಂದೆಲ್ಲ ಹೊಟ್ಟೆ ಕಾಣಬಾರದು ಎಂಬ ಕಾರಣಕ್ಕೆ ದುಪಟ್ಟಾದಿಂದ ಮುಚ್ಚಿಕೊಂಡು ಹೊರಗೆ ಬರುತ್ತಿದ್ದರು. ಇಲ್ಲವೇ ಸೀರೆ ಉಡುವುದೇ ಹೆಚ್ಚಿತ್ತು. ಆದರೀಗ ಕಾಲ ಮೊದಲಿನಂತಿಲ್ಲ. ಗರ್ಭಿಣಿಯ ಉಡುಪಿನಲ್ಲಿ ಸಾಕಷ್ಟು ಆಯ್ಕೆಗಳಿವೆ. ಗರ್ಭಿಣಿಯರು ಹೀಗೂ ಫ್ಯಾಷನ್‌ ಮಾಡಬಹುದೇ ಎಂದು ಹುಬ್ಬೇರಿಸುವಂತೆ ‘ಮೆಟರ್ನಿಟಿ ಉಡುಪುಗಳು’ ಮಾರುಕಟ್ಟೆ ಪ್ರವೇಶಿಸಿವೆ.

ಬಾಲಿವುಡ್‌ ನಟಿಯರು ಗರ್ಭಿಣಿಯರಾಗಿದ್ದಾಗ ತೊಟ್ಟ ಉಡುಪುಗಳು ಫ್ಯಾಷನ್‌ ಕ್ಷೇತ್ರ ಎಷ್ಟು ಮುಂದುವರೆದಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಮೆಟರ್ನಿಟಿ ಫ್ಯಾಷನ್‌ ಷೋ ಈಗೀಗ ಹೆಚ್ಚಾಗುತ್ತಿದ್ದು, ಗರ್ಭಿಣಿಯರ ಫ್ಯಾಷನ್‌ ಪ್ರಜ್ಞೆ ವಿಸ್ತರಿಸಲು ನೆರವಾಗುತ್ತಿದೆ. ಅಂದಚೆಂದದ ಉಡುಪುಗಳನ್ನು ತೊಟ್ಟು ಮೆಟರ್ನಿಟಿ ಫೋಟೊಶೂಟ್‌ನಲ್ಲಿಯೂ ಗರ್ಭಿಣಿ ಧರಿಸುವ ಬಟ್ಟೆಗೆ ಪ್ರಾಮುಖ್ಯ ನೀಡಲಾಗುತ್ತದೆ. ಹೊಟ್ಟೆಯ ಭಾಗ ಸರಿಯಾಗಿ ಫೋಕಸ್‌ ಮಾಡಲಾಗುತ್ತದೆ.

ಕಣ್ಸೆಳೆಯುವ ವಿನ್ಯಾಸ, ಹಗುರ ಕಾಟನ್‌ ದಿರಿಸಿಗೆ ಈ ವೇಳೆ ಬೇಡಿಕೆ. ಮೊದಲ ಮೂರು ತಿಂಗಳು ಹೊಟ್ಟೆ ಅಷ್ಟಾಗಿ ಕಾಣದ ಕಾರಣ ಯಾವ ಬಗೆಯ ಉಡುಪನ್ನಾದರೂ ಹಾಕಿಕೊಳ್ಳಬಹುದು. ಆದರೆ ಹೊಟ್ಟೆ ಬಳಿ ಉಡುಪು ಬಿಗಿಯಾಗಿರಬಾರದು. ನಾಲ್ಕು ತಿಂಗಳಿನಿಂದ ಹೊಟ್ಟೆ ಕಾಣಲು ಪ್ರಾರಂಭ ವಾಗುತ್ತದೆ. ಈ ವೇಳೆ ಹೊಸ ಉಡುಪುಗಳನ್ನು ಕೊಳ್ಳುವುದು ಅಗತ್ಯ ವಾಗಿರುತ್ತದೆ. ಮ್ಯಾಕ್ಸಿ, ಫ್ಲೋರ್‌ ಲೆನ್ತ್‌ ಗೌನ್‌, ಜರ್ಸಿ ಟ್ರಾಂಕ್‌ಪ್ಯಾಂಟ್‌, ಪೋನ್ಚೊ ಶರ್ಟ್‌ ಖರೀದಿಗೆ ಆದ್ಯತೆ ನೀಡಿ. ಈ ಉಡುಪುಗಳು ನೋಡಲು ಸುಂದರವಾಗಿರುವುದರ ಜೊತೆಗೆ ಸಡಿಲವೂ ಆಗಿರುತ್ತದೆ. ಆದರೆ ದೊಗಲೆ ಎನಿಸುವುದಿಲ್ಲ.

ಋತುಮಾನಕ್ಕೆ ಹೊಂದುವಂತೆ ನಿಮ್ಮ ಫ್ಯಾಷನ್‌ ಕೂಡ ಬದಲಾಗಬೇಕು. ಹೆಚ್ಚು ಬಿಸಿಲಿದ್ದಾಗ ತೆಳುವಾದ, ತೋಳಿಲ್ಲದ ಉಡುಪುಗಳಿಗೆ ಆದ್ಯತೆ ನೀಡಿ. ಟೀ ಶರ್ಟ್, ಕುರ್ತಾದ ಜೊತೆ ಸ್ಕಾರ್ಪ್ ಹಾಕಿಕೊಳ್ಳಬಹುದು. ಪಲಾಜೊ ಅತ್ಯುತ್ತಮ ಉಡುಗೆ. ಕ್ಯಾಶುಯಲ್ ಲುಕ್‌ಗಾಗಿ ಜಂಪ್‌ಸೂಟ್‌ ಮೇಲೆ ಡೆನಿಮ್ ಜಾಕೆಟ್ ಸರಿ. ವೃತ್ತಿಪರ ನೋಟಕ್ಕಾಗಿ ಅದರ ಮೇಲೆ ಬ್ಲೇಜರ್ ತೊಡಿ. ಗಾಢ ಬಣ್ಣದ ಜಂಪ್‌ಸೂಟ್‌ಗೆ ಸೊಂಟದ ಮೇಲೆ ಬರುವ ಲೆದರ್‌ ಜಾಕೆಟ್‌ ಒಪ್ಪುತ್ತದೆ. ಬೆಲ್ಟ್‌ ಇರದ ಹಗುರವಾದ ಕಾಟನ್‌ ಫ್ಯಾಬ್ರಿಕ್‌ಗೆ ತೋಳಿಲ್ಲದ ದಿರಿಸು ಸೂಕ್ತ.

ಒಮ್ಮೆಲೆ ತುಂಬಾ ಬಟ್ಟೆಗಳನ್ನು ಕೊಳ್ಳದಿರಿ. ಹೆರಿಗೆಯಾದ ನಂತರ ಇವು ಉಪಯೋಗಕ್ಕೆ ಬರುವುದಿಲ್ಲ.

**

ವಿನ್ಯಾಸದ ಜೊತೆಗೆ ಬಣ್ಣವೂ ಮುಖ್ಯ

ಮೊದಲ ಮೂರು ತಿಂಗಳು ಹೊಟ್ಟೆ ಕಾಣಿಸುವುದಿಲ್ಲ. ಆಗ ಟೀ ಶರ್ಟ್‌, ಬೆಲ್ಲಿ ಬ್ಯಾಂಡ್‌ ಬಳಸಬಹುದು. ಹಳೆಯ ಜೀನ್ಸನ್ನು ಸೊಂಟದ ಬಳಿ ಕತ್ತರಿಸಿ, ಅದಕ್ಕೆ ಎಲೆಸ್ಟಿಕ್‌ ಹಾಕಿ ಮನೆಯಲ್ಲಿ ಹಾಕಿಕೊಳ್ಳಬಹುದು. ನಾಲ್ಕರಿಂದ ಆರು ತಿಂಗಳಿಗೆ ಹೊಟ್ಟೆ ಬೆಳೆಯಲು ಪ್ರಾರಂಭವಾಗುತ್ತದೆ. ಆಗ ಮ್ಯಾಕ್ಸಿ, ಫ್ಲೋರ್‌ ಲೆನ್ತ್‌ ಗೌನ್‌ ತೊಡುವುದು ಒಳಿತು. ಇವುಗಳು ಹಗುರವಾಗಿರುವುದರಿಂದ ಆರಾಮ ಎನಿಸುತ್ತದೆ.

ಉಸಿರಾಡುವುದು ಕಷ್ಟವಾಗುವುದಿಲ್ಲ. ಆರು ತಿಂಗಳ ನಂತರ ಟ್ಯೂನಿಕ್‌, ಕಫ್ತಾನ್‌, ಸ್ಟಗಿಟಿ ಟಾಪ್‌ ಹಾಕಿದರೆ ಒಪ್ಪುತ್ತದೆ. ರ‍್ಯಾಪ್‌ ಉಡುಪನ್ನು ಹಾಕಿಕೊಳ್ಳಬಹುದು. ಇವುಗಳು ಮೃದು ಮೆಟಿರಿಯಲ್‌ ಹೊಂದಿರುತ್ತವೆ. ಶೇಪ್‌ ಇರುವುದಿಲ್ಲ. ಹಾಗಾಗಿ ಎಂತಹ ದೇಹಾಕಾರಕ್ಕೂ ಹೊಂದಿಕೊಳ್ಳುತ್ತದೆ. ಎಂಟು ತಿಂಗಳ ನಂತರ ಗರ್ಭಿಯರಿಗೆ ಹೆಚ್ಚು ಸೆಕೆಯಾಗುತ್ತದೆ. ಆಗ ಸ್ಕರ್ಟ್‌ ಹಾಕಿಕೊಳ್ಳುವುದು ಒಳ್ಳೆಯದು. ಗಾಢ ಬಣ್ಣಗಳ ಉಡುಪು ಧರಿಸಿ ಎಂಬುದು ನನ್ನ ಸಲಹೆ. ಇದರಿಂದ ಹೆಚ್ಚು ದಪ್ಪ ಕಾಣಿಸುವುದಿಲ್ಲ. ಪಾರ್ಟಿಗಳಿಗೆ ಅನಾರ್ಕಲಿ ಸೂಟ್‌, ಎಲೈನ್‌ ಕುರ್ತಾ, ಸಲ್ವಾರ್‌ ಧರಿಸುವುದರಿಂದ ಹೊಟ್ಟೆ ಹೆಚ್ಚು ಕಾಣುವುದಿಲ್ಲ. ಹೀಲ್ಡ್ ಚಪ್ಪಲಿ ಹಾಕಲೇಬಾರದು.

–ಬೃಂದಾ ಗೌಡ, ವಸ್ತ್ರ ವಿನ್ಯಾಸಕಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT